ಹೌದು ಕೆಲವರು ಎಡವಿ ತಮ್ಮ ಕಾಲ ಮೇಲೆ ತಾವೇ ಕಲ್ಲಾಕಿಕೊಂಡರೆ, ಮಂಡ್ಯದಲ್ಲಿ ಜೆಡಿಎಸ್‍ನವರು ತಮ್ಮ ತಲೆಯ ಮೇಲೆಯೇ ಕಲ್ಲಾಕಿಕೊಳ್ಳುತ್ತಿದ್ದಾರೆ. 8ಕ್ಕೆ 8 ತಮ್ಮದೇ ಪಕ್ಷದ ಎಂಎಲ್‍ಎಗಳನ್ನು ಹೊಂದಿದ್ದರೂ ಕೂಡ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಎದುರು ಗೆಲುವಿಗಾಗಿ ತಿಣುಕಾಡಬೇಕಾದ ಪರಿಸ್ಥಿತಿ ಬಂದಿರಲು ಸ್ವತಃ ಅವರೇ ಕಾರಣ. ದಿನಕ್ಕೊಂದರಂತೆ, ಬಾಯಿಗೆ ಬಂದಂತೆ ಅವರಾಡುತ್ತಿರುವ ಮಾತುಗಳು ಅವರನ್ನು ಸೋಲಿನ ದವಡೆಗೆ ನೂಕುತ್ತಿವೆ. ಇನ್ನೊಂದೆಡೆ ಹೆಚ್ಚಿಗೆ ಏನನ್ನೂ ಮಾತಾಡದೇ ಅನುಕಂಪದ ಅಲೆಯನ್ನು ವಿಸ್ತರಿಸಿಕೊಳ್ಳುತ್ತಿರುವ ಸುಮಲತಾರವರು ಗೆಲುವಿನೆಡೆಗೆ ಹೆಜ್ಜೆ ಹಾಕುತ್ತಿದ್ದಾರೆ.
ಸುಮಲತಾ ಆಂಧ್ರ ಗೌಡ್ತಿಯೇ ಹೊರತು ಒಕ್ಕಲಿಗರಲ್ಲ
ಇನ್ನೂ ಚುನಾವಣಾ ಕಾವು ಶುರುವಾಗಿರಲಿಲ್ಲ. ಸುಮಲತಾ ಅಂಬರೀಶ್ ಸ್ಪರ್ಧಿಸುವ ಬಯಕೆ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಮುಖಂಡರೊಂದಿಗೆ ಚರ್ಚೆ ನಡೆಸಿದ್ದರು. ಅಂತಹ ಸಂದರ್ಭದಲ್ಲಿ ಮಂಡ್ಯದ ವಿಧಾನ ಪರಿಷತ್ ಸದಸ್ಯ ಕೆ.ಟಿ ಶ್ರೀಕಂಠೇಗೌಡ ತಮ್ಮ ನಾಲಿಗೆ ಹರಿಬಿಟ್ಟರು. ಸುಮಲತಾ ಆಂಧ್ರ ಗೌಡ್ತಿಯೇ ಹೊರತು ಒಕ್ಕಲಿಗರಲ್ಲ ಎಂದು ಗುಡುಗಿಬಿಟ್ಟರು. ಅದಕ್ಕೆ ಜನ ತೀವ್ರ ವಿರೋಧ ವ್ಯಕ್ತಪಡಿಸಿದರು. ‘ಜಾತ್ಯಾತೀತ’ ಎಂದರೆ ಇದೇನಾ ಎಂದು ಪ್ರಶ್ನಿಸಿದರು. ಸುಮಲತಾ ಪ್ರತಿಕ್ರಿಯಿಸಲಿಲ್ಲವಾದರೂ ಅವರಿಗೆ ಒಳ್ಳೇಯದೆ ಆಯಿತು.
ಒಂದು ಲೋಟ ನೀರು ಸಹ ಕೊಡಲಿಲ್ಲ
ಕೆ.ಟಿ ಶ್ರೀಕಂಠೇಗೌಡ ಮಾಡಿದ್ದ ಎಡವಟ್ಟು ತಣ್ಣಗಾಗುವುದರೊಳಗೆ ಸಾರಿಗೆ ಸಚಿವ, ಮದ್ದೂರಿನ ಶಾಸಕ ಡಿ.ಸಿ ತಮ್ಮಣ್ಣ ಇನ್ನೊಂದು ಬಾಂಬ್ ಸಿಡಿಸಿದರು. ನಾವೆಲ್ಲರೂ ಅದೆಷ್ಟು ಬಾರಿ ಅಂಬರೀಶ್ ರವರ ಮನೆಗೆ ಹೋಗಿದ್ದೇವೆ. ನಮ್ಮನ್ನು ಮಾತಾಡಿಸುವುದಿರಲಿ ಒಂದು ಲೋಟ ನೀರು ಸಹ ಕೊಟ್ಟಿಲ್ಲ. ಇವರಿಗೆ ಮಂಡ್ಯದ ಜನರ ಬಗ್ಗೆ ಕಾಳಜಿ ಇದೆಯೇ? ಎಂದು ಹೇಳಿಕೆ ನೀಡಿದರು. ಇನ್ನೊಂದು ಸುತ್ತಿನ ಚರ್ಚೆ ಆರಂಭವಾಯಿತು. ಡಿಸಿ ತಮ್ಮಣ್ಣ ಮತ್ತು ಅಂಬರೀಶ್‍ರವರ ಜೊತೆಗೆ ಟೇಬಲ್ ನೀರಿನ ಬಾಟಲಿ ಇದ್ದ ಫೋಟೊ ಹಾಕಿ ತಮ್ಮಣ್ಣ ಸುಳ್ಳು ಹೇಳುತ್ತಿದ್ದಾರೆ ಎಂದು ಸುಮಲತಾ ಅಭಿಮಾನಿಗಳು ಟ್ರೋಲ್ ಮಾಡಿದರು.
ಗಂಡ ಸತ್ತು ತಿಂಗಳಾಗಿಲ್ಲ, ರಾಜಕೀಯ ಬೇಕಾ?
ಮಾರ್ಚ್ 08. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿನ ಸುಮಲತಾ ಅಂಬರೀಶ್ ಅನ್ನು ಟೀಕಿಸುವ ಭರದಲ್ಲಿ ಗಂಡ ಸತ್ತು ತಿಂಗಳಾಗಿಲ್ಲ ಆಗಲೇ ಚುನಾವಣೆಗೆ ಬೇಕಾಯ್ತಾ ಎಂದು ಜೆಡಿಎಸ್‍ನ ಎಚ್.ಡಿ.ರೇವಣ್ಣ ಹೇಳಿಬಿಟ್ಟರು. ಈ ಹಿಂದೆ ಗುಂಡ್ಲುಪೇಟೆ ಉಪಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯ ಪ್ರತಾಪ್ ಸಿಂಹ ‘ಇನ್ನು ಗಂಡ ಸತ್ತು ಒಂದು ವಾರ ಆಗಿಲ್ಲ, ಆಗಲೇ ಅವರಿಗೆ ಗೂಟದ ಕಾರಿನ ಮೇಲೆ ಆಸೆ’ ಎಂದಿದ್ದರು ಮತ್ತು ಆ ಹೇಳಿಕೆಯಿಂದಲೇ ಅಲ್ಲಿ ಬಿಜೆಪಿ ಸೋತಿದ್ದನ್ನು ರೇವಣ್ಣ ಮರೆತುಬಿಟ್ಟಿದ್ದರು. ಈ ಹೇಳಿಕೆಯ ನಂತರ ರೇವಣ್ಣ ಸರಿಯಾಗಿ ಛೀಮಾರಿ ಹಾಕಿಸಿಕೊಂಡರು. ಮಹಿಳಾ ದಿನವೇ ಮಹಿಳಾ ವಿರೋಧಿ ಹೇಳಿಕೆ ನೀಡಿದ್ದರಿಂದ ಭಾರೀ ಪ್ರತಿರೋಧ ವ್ಯಕ್ತವಾಗಿತ್ತು.
ನಿಖಿಲ್ ಎಲ್ಲಿದ್ದೀಯಪ್ಪ?
ಈ ವರ್ಷ ಕರ್ನಾಟಕದ ಸಾಮಾಜಿಕ ಜಾಲಾತಾಣದಲ್ಲಿ ಅತಿ ಹೆಚ್ಚು ವೈರಲ್ ಆದ, ಟ್ರೆಂಡ್ ಆದ ಮತ್ತು ಟ್ರೋಲ್ ಆದ ಹೇಳಿಕೆ ಎಂದರೆ ಅದು ‘ನಿಖಿಲ್ ಎಲ್ಲಿದ್ದೀಯಪ್ಪ’. ಜಾಗ್ವಾರ್ ಆಡಿಯೋ ಬಿಡುಗಡೆ ಸಂದರ್ಭದಲ್ಲಿ ನಡೆಸಿದ್ದ ಈ ಹೈಡ್ರಾಮಾದ ವಿಡಿಯೋ ತುಣುಕೊಂದನ್ನು ಮಾರ್ಚ್ ತಿಂಗಳಲ್ಲಿ ಹರಿಬಿಟ್ಟ ಕಾರಣ ಅದು ಜೆಡಿಎಸ್ ಮತ್ತು ಕುಮಾರಸ್ವಾಮಿಗೆ ಸರಿಯಾಗಿಯೇ ಉಲ್ಟಾ ಹೊಡೆಯಿತು. ಲೋಕಸಭಾ ಚುನಾವಣೆಯ ಮೇಲೆ ಕಣ್ಣಿಟ್ಟು ‘ಮಂಡ್ಯ ಜನರ ಮಧ್ಯೆ ಇದೀನಿ’ ಎಂದು ಹೇಳಿಸುವ ಕೆಲಸ ಹಿಂದೆಯೇ ಮಾಡಿದ್ದಾರೆಂದು ಅಪಹಾಸ್ಯಕ್ಕೊಳಗಾಯಿತು. ಇದರ ಕುರಿತಾಗಿ ಸಾವಿರಾರು ಮೀಮ್ಸ್‍ಗಳು, ಟ್ರೋಲ್ ವಿಡಿಯೋಗಳು ಹರಿದಾಡಿ ಜೆಡಿಎಸ್‍ಗೆ ದೊಡ್ಡ ಮುಜುಗರ ಉಂಟುಮಾಡಿತು.

ನಮ್ಮ ಕೈಯ್ಯಲ್ಲಿ ತನಿಖಾ ಸಂಸ್ಥೆಗಳಿವೆ, ಚಿತ್ರನಟರು ತೆಪ್ಪಗೆ ಮನೆಯಲ್ಲಿರಬೇಕು ಅಷ್ಟೆ.
ಕೆ.ಆರ್ ಪೇಟೆ ಶಾಸಕ ನಾರಾಯಣಗೌಡರ ಧಮಕಿ ಇದು. ಮಂಡ್ಯಗೆ ದರ್ಶನ್ ಮತ್ತು ಯಶ್ ಸುಮಲತಾ ಅಂಬರೀಶ್ ಪರವಾಗಿ ಪ್ರಚಾರಕ್ಕೆ ಬಂದಾಗ ನೀಡಿದ ಈ ಹೇಳಿಕೆಗೆ ನಾರಾಯಣಗೌಡರಿಗೆ ಜನ ಸರಿಯಾಗಿಯೇ ಉಗಿದು ಉಪ್ಪಿನ ಕಾಯಿ ಹಾಕಿದರು. ದರ್ಶನ್ ಅಭಿಮಾನಿಗಳು ಕಿಡಿಕಾರಿದರು.
ಕಳ್ಳೆತ್ತುಗಳು
ಇದು ಸಿಎಂ ಕುಮಾರಸ್ವಾಮಿ ಆಡಿದ ಅಣಿಮುತ್ತುಗಳು. ಜವಾಬ್ದಾರಿಯುತ ಸ್ಥಾನದಲ್ಲಿರುವ ಇವರು ದರ್ಶನ್ ಮತ್ತು ಯಶ್ ಬಗ್ಗೆ ನೀಡಿದ ಈ ಹೇಳಿಕೆ ಅವರಿಗೆ ದೊಡ್ಡ ಶಾಪವಾಗಿ ಪರಿಣಮಿಸಿತು. ಇದರ ವಿರುದ್ಧ ಜೋಡೆತ್ತುಗಳು ಎಂಬ ಇನ್ನೊಂದು ಟ್ರೋಲ್ ಸಹ ಬಂತು. ಒಟ್ಟಿನಲ್ಲಿ ಕುಮಾರಸ್ವಾಮಿಗೆ ಹಿನ್ನಡೆಯಾಯಿತು.
ಸುಮಲತಾ ಎದುರಿಸಲು ಮೂವರು ಸುಮಲತಾರು ಕಣಕ್ಕೆ
ಎಲ್ಲಾ ಕಡೆ ನಡೆಯುವಂತೆ ಇಲ್ಲಿಯೂ ಕೂಡ ಸುಮಲತಾ ಅಂಬರೀಶ್ ವಿರುದ್ಧ ಸುಮಲತಾ ಹೆಸರಿನ ಇನ್ನು ಮೂವರನ್ನು ಕಣಕ್ಕೆ ಇಳಿಸಲಾಗಿದೆ. ಅದಲ್ಲದೇ ಕ್ರಮ ಸಂಖ್ಯೆ 19 ಸುಮಲತಾ ಎಂಬ ಪಕ್ಷೇತರ ಅಭ್ಯರ್ಥಿಗೆ ನೀಡಿದರೆ ಕ್ರಮ ಸಂಖ್ಯೆ 20 ಅನ್ನು ಸುಮಲತಾ ಅಂಬರೀಶ್‍ರವರಿಗೆ ನೀಡಲಾಗಿದೆ. ಇದು ಕೂಡ ಚುನಾವಣಾ ಆಯೋಗ ಮತ್ತು ಡಿಸಿ ಜೆಡಿಎಸ್ ಪರ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪಕ್ಕೆ ತುತ್ತಾಗಿದೆ. ಚೀಪ್ ಪಾಲಿಟಿಕ್ಸ್ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಬಲ್ ಕಟ್ ಎಂಬ ಮಾಮೂಲಿ ಕತೆ
ಸುಮಲತಾ ಅಂಬರೀಶ್ ನಾಮಪತ್ರ ಸಲ್ಲಿಸುವ ದಿನ ಕೇಬಲ್ ಕಟ್ ಮಾಡಲಾಗಿತ್ತು. ಅದೇ ರೀತಿ ಇನ್ನೊಂದು ದೊಡ್ಡ ಸಮಾವೇಶ ಏರ್ಪಡಿಸಿದ ದಿನವೂ ಕೂಡ ಕೇಬಲ್ ಇರಲಿಲ್ಲ. ಮುಖ್ಯಮಂತ್ರಿಯವರ ಪ್ರಭಾವ ಬಳಸಿ ಜೆಡಿಎಸ್ ನಾಯಕರು ಈ ರೀತಿ ಕೇಬಲ್ ಕಟ್ ಮಾಡಿಸುವ ಮೂಲಕ ಸುಮಲತಾರವರ ಪ್ರಚಾರ ಜನರಿಗೆ ತಲುಪದಂತೆ ತಡೆಯುತ್ತಿದ್ದಾರೆ ಎಂದು ಸುಮಲತಾ ಅಭಿಮಾನಿಗಳು ಪದೇ ಪದೇ ಆರೋಪ ಮಾಡುತ್ತಿದ್ದಾರೆ.
ಸುಮಲತಾಗೆ ಯಶ್ ಹಿರಿಮಗನೊ, ಕಿರಿಮಗನೋ? ಬಾಡಿಗೆ ಕಟ್ಟಲಾಗದವನು
ಇನ್ನು ಮುಂದಿನ ಸರದಿ ಜೆಡಿಎಸ್ ಅಧಿಕೃತ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಯವರದ್ದು. ಯಶ್ ವಿರುದ್ಧ ಕಿಡಿಕಾರಿರುವ ಅವರು ಸುಮಲತಾಗೆ ಯಶ್ ಹಿರಿಮಗನೊ, ಕಿರಿಮಗನೋ? ಬಾಡಿಗೆ ಕಟ್ಟಲಾಗದವನು ನಮ್ಮ ತಂದೆಯ ವಿರುದ್ಧ ಮಾತಾಡುತ್ತಾನೆ ಎಂದು ವ್ಯಂಗ್ಯವಾಡಿದ್ದಾರೆ. ಬಾಡಿಗೆ ಮನೆಯಲ್ಲಿರುವವರು ನಿಖಿಲ್‍ಗೆ ಓಟು ಹಾಕಲ್ಲ ಎಂದು ಕೆಲವರು ತಿರುಗೇಟು ನೀಡಿದ್ದಾರೆ.
ಎಚ್.ವಿಶ್ವನಾಥ್‍ರ ಬುದ್ಧಿಮಾತು ಕೇಳುವ ಸಾಧ್ಯತೆಯಿಲ್ಲ
ಇಂತಹ ಮಾತುಗಳು ಇನ್ನೂ ಹೆಚ್ಚಾಗುವ ಸಾಧ್ಯತೆಯೇ ಇದೆ. ಜೆಡಿಎಸ್‍ನ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್‍ರು ಯಾವುದೇ ಕಾರಣಕ್ಕೂ ವಿರೋಧಿಗಳನ್ನು, ಅದರಲ್ಲೂ ಸುಮಲತಾರನ್ನು ಯಾರೂ ಟೀಕಿಸಬಾರದು ಎಂದು ಸೂಚಿಸಿದ್ದರು. ಅದಕ್ಕೆ ಯಾರೂ ಸೊಪ್ಪು ಹಾಕಿಲ್ಲ. ಇವೆಲ್ಲವೂ ಜೆಡಿಎಸ್‍ಗೆ ಕೌಂಟರ್ ಆಗುವ ಸಾಧ್ಯತೆಗಳಿವೆ. ತಮ್ಮ ಪಕ್ಷದ ಸಾಧನೆಗಳು, ಗೆದ್ದರೆ ನಾವು ಏನು ಮಾಡುತ್ತೇವೆ ಎಂಬುದನ್ನು ಮಾತಾಡಬೇಕು. ಆದರೆ ಅದನ್ನು ಬಿಟ್ಟು ಜೆಡಿಎಸ್‍ನವರು ಸುಖಾಸುಮ್ಮನೆ ವಿರೋಧಿಗಳನ್ನು ಟೀಕೆ ಮಾಡುವುದನ್ನೇ ಕಾಯಕ ಮಾಡಿಕೊಂಡರೆ ಈಗಾಗಲೇ ಅನುಕಂಪದ ಅಲೆಯಲ್ಲಿ ಸುಮಲತಾರ ಪರ ಮತ್ತಷ್ಟು ಅಲೆ ಬೀಸಲಿದೆ. ಜನರ ಕೋಪವನ್ನು ಮತ್ತಷ್ಟು ಹೆಚ್ಚಿಸಲಿದೆ ಅಷ್ಟೇ.
ಆದರೆ ಮತ್ತೊಂದು ಕಡೆ ಸುಮಲತಾ ಅಂಬರೀಶ್ ತಾನಾಗಿಯೇ ಯಾವುದೇ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿಲ್ಲ. ಪಕ್ಕಾ ರಾಜಕಾರಣಿಯ ಥರ ಅಳೆದು ತೂಗಿ ಮಾತಾಡುತ್ತಿದ್ದಾರೆ. ಇವೆಲ್ಲವೂ ಅವರಿಗೆ ಪ್ಲಸ್ ಪಾಯಿಂಟ್ ಆಗುತ್ತಿವೆ. ಜೆಡಿಎಸ್‍ನವರು ಹತಾಶೆಗೊಂಡವರ ಥರಹ ಹೇಳಿಕೆ ನೀಡುತ್ತಿರುವುದು ಸುಮಲತಾರವರಿಗೆ ಅನಾಯಸವಾಗಿ ಬೆಂಬಲ ತಂದುಕೊಡುತ್ತಿದೆ.
ಒಟ್ಟಿನಲ್ಲಿ ತಮ್ಮದೇ ಸಡಿಲ ಮಾತುಗಳಿಂದ, 8 ಎಂಎಲ್‍ಎಗಳು, ಮೂವರು ಎಂಎಲ್‍ಸಿಗಳು, ಜಿ.ಪಂ, ತಾಪಂಗಳು, ಪುರಸಭೆ ನಗರಸಭೆಗಳು ಎಲ್ಲವನ್ನೂ ತಮ್ಮದಾಗಿಸಿಕೊಂಡಿದ್ದರೂ ಎಂಪಿ ಗೆಲ್ಲಲಾಗದ ಅಪೂರ್ವ ಇತಿಹಾಸವನ್ನು ಮಂಡ್ಯದಲ್ಲಿ ಜೆಡಿಎಸ್ ಸೃಷ್ಟಿಸಲಿದೆ.


