ಬಿಜೆಪಿ ಮುಖಂಡ, ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ಶ್ರೀಮಂತ ಉದ್ಯಮಿ ಗೌತಮ್ ಅದಾನಿ ವಿರುದ್ಧ ಕಿಡಿಕಾರಿದ್ದಾರೆ. ಪ್ರತಿ ಎರಡು ವರ್ಷಕ್ಕೊಮ್ಮೆ ಆತನ ಸಂಪತ್ತು ಡಬಲ್ ಆಗುತ್ತಿದ್ದರೂ ಆತ ಬ್ಯಾಂಕುಗಳಿಂದ ಪಡೆದ ಹಲವು ಲಕ್ಷ ಕೋಟಿ ರೂ ಸಾಲವನ್ನು ಏಕೆ ಮರುಪಾವತಿ ಮಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಇಂದು ಟ್ವೀಟ್ ಮಾಡಿರುವ ಸುಬ್ರಮಣಿಯನ್ ಸ್ವಾಮಿ “ಟ್ರೆಪೆಜ್ ಕಲಾವಿದ ಅದಾನಿ ಈಗ ಬ್ಯಾಂಕ್‌ಗಳಿಗೆ ಎನ್‌ಪಿಎ ಆಗಿ (ವಸೂಲಿಯಾಗದ ಸಾಲ) 4.5 ಲಕ್ಷ ಕೋಟಿ ರೂ ಉಳಿಸಿಕೊಂಡಿದ್ದಾರೆ. ನನ್ನ ಲೆಕ್ಕ ತಪ್ಪಾಗಿದ್ದರೆ ನನ್ನನ್ನು ಸರಿಪಡಿಸಿ. ಆದರೂ ಅವರ ಸಂಪತ್ತು 2016 ರಿಂದ ಪ್ರತಿ ಎರಡು ವರ್ಷಗಳಿಗೊಮ್ಮೆ ದ್ವಿಗುಣಗೊಳ್ಳುತ್ತಿದೆ. ಆದರೆ ಬ್ಯಾಂಕುಗಳಿಗೆ ಸಾಲ ಮರುಪಾವತಿ ಮಾಡಲು ಸಾಧ್ಯವಿಲ್ಲವೇಕೆ? ಅವರು ಖರೀದಿಸಿದ ಆರು ವಿಮಾನ ನಿಲ್ದಾಣಗಳಂತೆಯೇ, ಅವರು ಶೀಘ್ರದಲ್ಲೇ ತಾನು ಪಾವತಿಸಬೇಕಾದ ಎಲ್ಲಾ ಬ್ಯಾಂಕುಗಳನ್ನು ಖರೀದಿಸಬಹುದು” ಎಂದು ವ್ಯಂಗ್ಯವಾಡಿದ್ದಾರೆ.
Trapeze Artist Adani now owes Rs. 4.5 lakh crores as NPA to banks. Correct me if I am wrong. Yet his wealth is doubling every two years since 2016. Why can’t he repay the banks? May be like with the six airports he has bought he might soon buy out all the banks he owes money.
— Subramanian Swamy (@Swamy39) January 15, 2021
2020ರಲ್ಲಿ ಭಾರತದ ಆರು ಪ್ರಮುಖ ವಿಮಾನ ನಿಲ್ದಾಣಗಳ ಉಸ್ತುವಾರಿ ಗುತ್ತಿಗೆಯನ್ನು ಗೌತಮ್ ಅದಾನಿ ನೇತೃತ್ವದ ಕಂಪನಿ ವಹಿಸಿಕೊಂಡಿದೆ. ಅಲ್ಲದೇ ಈ ವರ್ಷವೂ ಸಹ ದೇಶದ ಎರಡನೇ ಅತಿ ದೊಡ್ಡ ವಿಮಾನ ನಿಲ್ದಾಣವಾದ ಮುಂಬೈ ವಿಮಾನ ನಿಲ್ದಾಣದ ಗುತ್ತಿಗೆಯು ಅದಾನಿ ಪಾಲಾಗಿದೆ. ಇಂತಹ ಸಂದರ್ಭದಲ್ಲಿ ಬಿಜೆಪಿ ಮುಖಂಡ ಅದಾನಿ ವಿರುದ್ಧ ಗುರುತರ ಆಪಾದನೆ ಮಾಡಿದ್ದಾರೆ.
ಅದಾನಿ ದೇಶದ ಹಲವು ಬ್ಯಾಂಕುಗಳಿಗೆ 4.5 ಲಕ್ಷ ಕೋಟಿ ರೂ ಸಾಲ ತೀರಿಸಬೇಕಾಗಿದೆ. ಆದರೆ ಆದಾನಿಯೇನು ನಷ್ಟದಲ್ಲಿಲ್ಲ. ಬದಲಿಗೆ ಪ್ರತಿ ಎರಡು ವರ್ಷಕ್ಕೊಮ್ಮೆ ಅವರ ಆದಾಯ ಡಬಲ್ ಆಗುತ್ತಿದೆ. ಆದರೂ ಅವರು ಸಾಲ ತೀರಿಸುತ್ತಿಲ್ಲವೇಕೆ ಎಂದು ಪ್ರಶ್ನಿಸಿರುವ ಅವರು, ಮುದೊಂದು ದಿನ ಆ ಬ್ಯಾಂಕುಗಳನ್ನೇ ಅವರು ಕೊಂಡುಕೊಳ್ಳಬಹುದು ಎಂದು ಕಿಡಿಕಾರಿದ್ದಾರೆ.
ಇತ್ತೀಚೆಗೆ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾನೂನುಗಳು ಸಹ ಅದಾನಿ, ಅಂಬಾನಿ ಪರವಾಗಿವೆ ಎಂದು ಹೋರಾಟನಿರತ ರೈತರು ಆರೋಪಿಸಿದ್ದಾರೆ. ಹಾಗಾಗಿ ಅಂಬಾನಿ, ಅದಾನಿ ಉತ್ಪನ್ನಗಳನ್ನು ತಿರಸ್ಕರಿಸುವಂತೆ ಕರೆ ನೀಡಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶ: ಈ ಗ್ರಾಮಕ್ಕೆ ರೈತ ಹೋರಾಟ ಬೆಂಬಲಿಸದ ರಾಜಕಾರಣಿಗಳಿಗೆ ಪ್ರವೇಶವಿಲ್ಲ!



