ಪಶ್ಚಿಮ ಬಂಗಾಳದಲ್ಲಿ ಇನ್ನೇನು ವಿಧಾನಸಭೆ ಚುನಾವಣೆ ಘೋಷಣೆಯಾಗಲಿದ್ದು, ಕೆಲವೇ ತಿಂಗಳಿನಲ್ಲಿ ಮತದಾನ ನಡೆಯಲಿದೆ. ಇದರ ಪ್ರಯುಕ್ತ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಪಕ್ಷದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಪ್ರಚಾರದ ತಂತ್ರವಾಗಿ ದೆಹಲಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಬಳಸಿದ್ದ “ಅಭಿವೃದ್ಧಿ v/s ಹಿಂದುತ್ವ” ವಿಧಾನವನ್ನು ಬಳಸಿಕೊಳ್ಳುವುದಾಗಿ ತಿಳಿದುಬಂದಿದೆ.
ತೃಣಮೂಲ ಕಾಂಗ್ರೆಸ್ ಪಕ್ಷದ ಮಮತಾ ಬ್ಯಾನರ್ಜಿಯವರ ಸರ್ಕಾರ ಜಾರಿಗೆ ತಂದಿರುವ ಅಭಿವೃದ್ಧಿ ಯೋಜನೆಗಳನ್ನು ಎತ್ತಿತೋರಿಸುವ ಅಂಶಗಳನ್ನು 2021 ರ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಅಳವಡಿಸುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಪಕ್ಷದ ಕಾರ್ಯಕರ್ತರಿಗೆ ಮಮತಾ ಬ್ಯಾನರ್ಜಿ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಓವೈಸಿ ಬಿಜೆಪಿಗೆ ನೆರವಾಗಲಿದ್ದಾರೆ: ಸ್ಪೋಟಕ ಹೇಳಿಕೆ ನೀಡಿದ ಸಾಕ್ಷಿ ಮಹರಾಜ್
ಜೊತೆಗೆ ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನ ಪ್ರಣಾಳಿಕೆಯಲ್ಲಿರಬೇಕಾದ ನಿರ್ದಿಷ್ಟ ವಿಷಯಗಳ ಬಗ್ಗೆ ಗಮನಹರಿಸಲು ಮಮತಾ ಬ್ಯಾನರ್ಜಿ ತಮ್ಮ ಪಕ್ಷದ ಕಾರ್ಯಕರ್ತರು, ಸಂಸದರು ಮತ್ತು ಶಾಸಕರಿಂದ ಸಲಹೆಗಳನ್ನು ಕೋರಿದ್ದಾರೆ.
“ದೆಹಲಿ ಚುನಾವಣೆಯಲ್ಲಿ ಬಿಜೆಪಿಯ ‘ಹಿಂದುತ್ವ’ದ ಆಕ್ರಮಣಕಾರಿ ಅಭಿಯಾನದ ವಿರುದ್ಧ ಅತ್ಯಂತ ಪರಿಣಾಮಕಾರಿಯಾಗಿದ್ದ ಆಪ್ ಪಕ್ಷದ ಪ್ರಚಾರದ ಮಾದರಿಯನ್ನು ನಾವು ಅನುಸರಿಸುತ್ತೇವೆ. ನಮ್ಮ ಪ್ರಣಾಳಿಕೆಯಲ್ಲಿ ಕಳೆದ 10 ವರ್ಷಗಳಲ್ಲಿ ಜಾರಿಗೆ ತರಲಾದ ಅಭಿವೃದ್ಧಿ ಯೋಜನೆಗಳನ್ನು ಎತ್ತಿತೋರಿಸುತ್ತೇವೆ. 2016 ರ ಚುನಾವಣೆಯಲ್ಲಿ ನಮ್ಮ ಪಕ್ಷ ಏನೇನು ಭರವಸೆಗಳನ್ನು ನೀಡಿತ್ತು ಮತ್ತು ಅದನ್ನು ಹೇಗೆ ನೆರವೇರಿಸಲಾಗಿದೆ ಎಂಬುದನ್ನು ಉಲ್ಲೇಖಿಸಲಿದ್ದೇವೆ” ಎಂದು ಟಿಎಂಸಿಯ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ: ʼಬಿಜೆಪಿಗೆ ಮತ ನೀಡಬೇಡಿʼ ಅಭಿಯಾನ ಆರಂಭ
2016 ರ ಚುನಾವಣೆಗೆ ಮೊದಲು ಘೋಷಿಸಲಾದ ಸರ್ಕಾರಿ ಯೋಜನೆಗಳನ್ನು ಪೂರ್ಣಗೊಳಿಸಲು ತೆಗೆದುಕೊಂಡ ಕಾಲಾವಕಾಶವನ್ನು ಸಹ ಈ ಪ್ರಣಾಳಿಕೆ ಉಲ್ಲೇಖಿಸುತ್ತದೆ.
ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಮತ್ತು ಅವರ ತಂಡ ನಡೆಸಿದ ಸಮೀಕ್ಷೆಯ ಫಲಿತಾಂಶಗಳ ಆಧಾರದ ಮೇಲೆ ಪ್ರಣಾಳಿಕೆ ರೂಪುಗೊಳ್ಳಲಿದ್ದು, ಇದರ ಪ್ರಕಾರ “ಬಿಜೆಪಿಯನ್ನು ಪ್ರಮುಖ ಪ್ರತಿಸ್ಪರ್ಧಿ ಎಂದು ಪರಿಗಣಿಸಿ ಪ್ರಣಾಳಿಕೆಯನ್ನು ವಿನ್ಯಾಸಗೊಳಿಸಲಾಗುವುದು. ಮತ್ತು ಬಿಜೆಪಿಯ ಒಡೆದು ಆಳುವ ನೀತಿಯನ್ನೂ ಸಹ ಉಲ್ಲೇಖಿಸಲಾಗುವುದು” ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಕಾರ್ಯಕರ್ತರು ಮತ್ತು ಚುನಾಯಿತ ಪ್ರತಿನಿಧಿಗಳಿಂದ ಅಭಿಪ್ರಾಯವನ್ನು ಸಂಗ್ರಹಿಸಿದ ನಂತರ ಕರಡು ಪ್ರಣಾಳಿಕೆಯನ್ನು ಸಿದ್ಧಪಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ: ಪೊಲೀಸರಿಂದ ಬೂಟು ನೆಕ್ಕಿಸುತ್ತೇವೆ ಎಂದ ಬಿಜೆಪಿ ಮುಖಂಡ ರಾಜು ಬ್ಯಾನರ್ಜಿ!


