ಟಿಆರ್‌ಪಿ ಹಗರಣದ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರು ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಾಬ್ ಗೋಸ್ವಾಮಿ ಮತ್ತು BARC ಮಾಜಿ ಸಿಇಒ ಪಾರ್ಥೋ ದಾಸ್ ಗುಪ್ತಾ ನಡುವಿನ ವಾಟ್ಸಾಪ್ ಚಾಟ್‌ಗಳ ಸುಮಾರು 500 ಪುಟಗಳನ್ನು ಬಹಿರಂಗಗೊಳಿಸಿದ್ದಾರೆ ಎಂಬುದರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಅದರಲ್ಲಿ ಅರ್ನಾಬ್ ಗೋಸ್ವಾಮಿ ಬಾಲಿವುಡ್ ನಟಿ ಕಂಗನಾ ರಾಣಾವತ್ ಕುರಿತು ಅಶ್ಲೀಲವಾಗಿ ಮಾತನಾಡಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಒಬ್ಬ ಮಹಿಳೆಗೆ ತನ್ನದೇ ಖಾಸಗಿತನ ಹಕ್ಕಿದೆ, ತನಗನಿಸಿದ್ದನ್ನು ಮಾಡುವ ಅಧಿಕಾರವಿದೆ ಎಂಬುದನ್ನು ಮರೆತು ಅರ್ನಾಬ್ ಗೋಸ್ವಾಮಿ ಕೊಳಕಾಗಿ ಕಂಗನಾ ಕುರಿತು ಮಾತನಾಡಿದ್ದಾರೆ. ಒಂದು ಕಡೆ ತನ್ನ ಚಾನೆಲ್‌ಗೆ ಆಕೆಯನ್ನು ಕರೆಸಿ ದೇಶಪ್ರೇಮ, ರಾಷ್ಟ್ರಭಕ್ತಿಯ ಕುರಿತು ಉದ್ರೇಕಕಾರಿಯಾಗಿ ಮಾತನಾಡಿಸುವ ಅರ್ನಾಬ್ ಅದೇ ಸಮಯದಲ್ಲಿ ಆಕೆಯ ಕುರಿತು ಬಾರ್ಕ್ ಸಿಇಒ ಜೊತೆ ಅಶ್ಲೀಲವಾಗಿ ಮಾತನಾಡಿರುವುದು ನೆಟ್ಟಿಗರಲ್ಲಿ ಆಕ್ರೋಶ ಹುಟ್ಟಿಸಿದೆ.
BARC ಮಾಜಿ ಸಿಇಒ ಪಾರ್ಥೋ ದಾಸ್ ಗುಪ್ತಾ ಕಂಗಾನ ಕುರಿತು ಸಂಭಾಷಣೆ ಆರಂಭಿಸಿದ್ದು, ಆಕೆ ಬಾಲಿವುಡ್ ನಟ ಹೃತಿಕ್ ರೋಷನ್ ಕಡೆ ಆಕರ್ಷಿತಳಾಗುತ್ತಿದ್ದಾಳೆ ಎಂದರೆ ಅದಕ್ಕೆ ಹೌದೆಂದಿರುವ ಅರ್ನಾಬ್ ಅಶ್ಲೀಲವಾಗಿ ಮಾತಾಡಿದ್ದಾರೆ. ಮುಂದುವರೆದು ‘ಎಲ್ಲಾ ಮುಗಿದಿದೆ, ನನ್ನ ಪ್ರಕಾರ ಆಕೆ ಕೊನೆಯಾಗುತ್ತಾಳೆ’ ಎಂದು ದಾಸ್ ಗುಪ್ತಾ ಹೇಳಿದರೆ, ‘ಆಕೆ ತನ್ನ ಮಿತಿ ಮೀರಿ ತನ್ನ ಗೆರೆ ದಾಟುತ್ತಿದ್ದಾಳೆ’ ಎಂದು ಅರ್ನಾಬ್ ಹೇಳುತ್ತಾರೆ!. ‘ಜನಕ್ಕೆ ಆಕೆಯನ್ನು ಕಂಡರೆ ಭಯ’ ಎಂದು ದಾಸ್ ಗುಪ್ತಾ ಹೇಳಿದರೆ ‘ಆಕೆಯನ್ನು ಜನ ಬಾಯ್ಕಾಟ್ ಮಾಡುತ್ತಾರೆ’ ಎಂದು ಅರ್ನಾಬ್ ಹೇಳಿದ್ದಾರೆ!.
Arnab on Kangana and Hrithik. ??
"Seriously she has erotomania"
"What's that?"
"that she is sexually possessed with him"#ArnabGoswami #ArnabGate pic.twitter.com/Jxh6hyK3XS— Mohammed Zubair (@zoo_bear) January 15, 2021
ರಿಪಬ್ಲಿಕ್ ಟಿವಿಯ ಟಿಆರ್‌ಪಿಗಾಗಿ ಒಂದು ಕಡೆ ತನ್ನ ಪ್ರೈಮ್ ಡಿಬೇಟ್‌ಗಳಲ್ಲಿ ಕಂಗನಾರನ್ನು ಕೂರಿಸಿಕೊಂಡು ಗಂಟೆಗಟ್ಟಲೆ ಚರ್ಚಿಸುವ, ಆಕೆಯನ್ನು ವೈಭವೀಕರಿಸುವ ಅರ್ನಾಬ್, ತನ್ನ ಮನಸ್ಸಿನಲ್ಲಿ ಆಕೆಯ ಬಗ್ಗೆ ಕೆಟ್ಟ ಭಾವನೆ ಹೊಂದಿದ್ದಾರೆ. ಅಷ್ಟು ಮಾತ್ರವಲ್ಲ ಆಕೆಯನ್ನು ಜನ ಮುಗಿಸುತ್ತಾರೆ, ಬಾಯ್ಕಾಟ್ ಮಾಡುತ್ತಾರೆ ಎನ್ನುವ ಮೂಲಕ ಆಕೆ ತುಳಿತಕ್ಕೊಳಕ್ಕಾದರೆ ತನಗೇನು ತೊಂದರೆಯಿಲ್ಲ ಎನ್ನುವಂತೆ ವರ್ತಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಮತ್ತು ವ್ಯಂಗ್ಯ ವ್ಯಕ್ತವಾಗಿದೆ.
ಅಲ್ಲದೆ 2019ರ ಫೆಬ್ರವರಿ ತಿಂಗಳಿನಲ್ಲಿ ಕಾಶ್ಮೀರದ ಪುಲ್ವಾಮ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯನ್ನು ಪತ್ರಕರ್ತ ಅರ್ನಾಬ್ ಗೋಸ್ವಾಮಿ ಸಂಭ್ರಮಿಸಿದ್ದ ಎಂಬ ಆಘಾತಕಾರಿ ಸಂಗತಿ ಹೊರಬಿದ್ದಿದೆ. ಆ ದಾಳಿಯಲ್ಲಿ 40ಕ್ಕೂ ಹೆಚ್ಚು ಭಾರತೀಯ ಯೋಧರು ಹುತಾತ್ಮರಾಗಿದ್ದರು. ಅಲ್ಲದೇ ತದನಂತರ ಭಾರತದ ಸೈನಿಕರು ನಡೆಸಿದ ಬಾಲಾಕೋಟ್ ದಾಳಿಯ ಬಗ್ಗೆಯೂ ಮೂರು ದಿನಗಳ ಮೊದಲೇ ಅರ್ನಾಬ್‌ಗೆ ಗೊತ್ತಿತ್ತು ಎಂಬ ವಿಷಯ ಲೀಕ್ ಆಗಿರುವ ವಾಟ್ಸಾಪ್ ಚಾಟ್‌ಗಳಿಂದ ತಿಳಿದುಬಂದಿದೆ.
ಇದನ್ನೂ ಓದಿ: ಪುಲ್ವಾಮ ದಾಳಿಯನ್ನು ಸಂಭ್ರಮಿಸಿದ್ದ ಅರ್ನಾಬ್: ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ


