“ರೈತರ ಹೋರಾಟದ ಭಾಗವಾಗಿ ಗಣರಾಜ್ಯೋತ್ಸವ ದಿನದಂದು ನಡೆಯಲಿರುವ ಟ್ರ್ಯಾಕ್ಟರ್ ರ್‍ಯಾಲಿಯನ್ನು ನಡೆಸುವುದು ನಮ್ಮ ಸಾಂವಿಧಾನಿಕ ಹಕ್ಕು” ಎಂದು ರೈತ ನಾಯಕರು ಹೇಳಿದ್ದು, ಜನವರಿ 26 ರಂದು ನಡೆಯುವ ಈ ಬೃಹತ್ ರ್‍ಯಾಲಿಯಲ್ಲಿ ಸಾವಿರಾರು ಜನರು ಭಾಗವಹಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನಾ ನಿರತ ರೈತರು ಟ್ರ್ಯಾಕ್ಟರ್ ರ್‍ಯಾಲಿ ನಡೆಸಬಹುದೇ ಬೇಡವೇ? ಎಂಬುದನ್ನು ದೆಹಲಿ ಪೊಲೀಸರೇ ನಿರ್ಧರಿಸಲಿ ಎಂದು ಸೋಮವಾರ ಸುಪ್ರೀಂ ಕೋರ್ಟ್ ಹೇಳಿದೆ. ಈ ಹಿನ್ನೆಲೆಯಲ್ಲಿ ರೈತರ ಹೇಳಿಕೆ ಸುಪ್ರೀಂ ಕೋರ್ಟ್‌ಗೆ ನೀಡಿದ ಉತ್ತರದಂತಿದೆ.
ಭಾರತೀಯ ಕಿಸಾನ್ ಯೂನಿಯನ್‌ನ (ಲಖೋವಾಲ್) ಪಂಜಾಬ್ ಪ್ರಧಾನ ಕಾರ್ಯದರ್ಶಿ ಪರಮಜಿತ್ ಸಿಂಗ್ ಮಾತನಾಡಿ, “ನಾವು ರ್‍ಯಾಲಿಯನ್ನು ರಾಜ್‌ಪತ್ ಅಥವಾ ಇನ್ನಿತರ ಭದ್ರತಾ ಸೂಕ್ಷ್ಮ ಪ್ರದೇಶಗಳಲ್ಲಿ ನಡೆಸುವುದಿಲ್ಲ. ದೆಹಲಿಯ ಹೊರ ವರ್ತುಲ (Outer RingRoad) ರಸ್ತೆಯಲ್ಲಿ ಮಾತ್ರ ಈ ರ್‍ಯಾಲಿಯನ್ನು ನಡೆಸುತ್ತೇವೆ. ಜೊತೆಗೆ ಗಣರಾಜ್ಯೋತ್ಸವದ ಮೆರವಣಿಗೆಗೆ ಯಾವುದೇ ಅಡ್ಡಿಪಡಿಸುವುದಿಲ್ಲ” ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಜನವರಿ 26 ಕ್ಕೆ ಬೃಹತ್ ಟ್ರ್ಯಾಕ್ಟರ್ ರ್‍ಯಾಲಿ: ಬೆದರಿ ಸುಪ್ರೀಂ ಕೋರ್ಟ್ ಮೊರೆ ಹೋದ ಕೇಂದ್ರ ಸರ್ಕಾರ!
“ನಾವು ದೆಹಲಿ ಗಡಿಯಲ್ಲಿ ಸಿಕ್ಕಿಕೊಂಡಿದ್ದೇವೆ. ಇಲ್ಲಿ ಕುಳಿತುಕೊಳ್ಳಲು ನಾವು ನಿರ್ಧರಿಸಿಲ್ಲ. ಬದಲಿಗೆ ನಾವು ದೆಹಲಿಗೆ ಪ್ರವೇಶಿಸುವುದನ್ನು ತಡೆಯಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆಗೆ ಯಾವುದೇ ಅಡ್ಡಿಯಾಗದಂತೆ ನಾವು ರ್‍ಯಾಲಿಯನ್ನು ಶಾಂತಿಯುತವಾಗಿ ನಡೆಸುತ್ತೇವೆ. ನಾವು ನಮ್ಮ ಸಾಂವಿಧಾನಿಕ ಹಕ್ಕನ್ನು ಚಲಾಯಿಸುತ್ತೇವೆ. ಜೊತೆಗೆ ನಾವು ಖಂಡಿತವಾಗಿಯೂ ದೆಹಲಿಗೆ ಪ್ರವೇಶಿಸಲಿದ್ದೇವೆ” ಎಂದು ಪರಮಜಿತ್ ಸಿಂಗ್ ತಿಳಿಸಿದ್ದಾರೆ.
ಸ್ವರಾಜ್ ಇಂಡಿಯಾದ ಮುಖಂಡ ಯೋಗೇಂದ್ರ ಯಾದವ್ ಮಾತನಾಡಿ, “ಗಣರಾಜ್ಯೋತ್ಸವದಂದ ನಡೆಯಲಿರುವ ಶಾಂತಿಯುತ ರ್‍ಯಾಲಿಯಲ್ಲಿ ಪ್ರತಿಯೊಂದು ಟ್ರ್ಯಾಕ್ಟರ್ ಮೇಲೆ ಭಾರತದ ತ್ರಿವರ್ಣ ಧ್ವಜ ಹಾರಾಡಲಿದೆ” ಎಂದು ಹೇಳಿದ್ದರು.
ಇದನ್ನೂ ಓದಿ: ಟ್ರ್ಯಾಕ್ಟರ್ ರ್‍ಯಾಲಿ: ದಿಟ್ಟ ರೈತ ಹೋರಾಟದ ಗಮನಸೆಳೆದ 10 ಫೋಟೊಗಳು
ಇನ್ನು ಪ್ರತಿಭಟನೆ ಮಾಡುತ್ತಿರುವ ಎಲ್ಲಾ ರೈತ ಸಂಘಟನೆಗಳೂ ಸಹ ಇದೇ ಹೇಳಿಕೆಯನ್ನು ನೀಡುತ್ತಿದ್ದು, ರ್‍ಯಾಲಿ ಮಾಡುವುದು ನಮ್ಮ ಸಾಂವಿಧಾನಿಕ ಹಕ್ಕು ಎಂದು ಹೇಳುತ್ತಿದ್ದಾರೆ.
ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ಲಕ್ಷಾಂತರ ರೈತರು ದೆಹಲಿಯ ಗಡಿಗಳಲ್ಲಿ ಕಳೆದ ಎರಡು ತಿಂಗಳಿನಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಈ ಬಿಕ್ಕಟ್ಟಿನ ಕುರಿತು ಕೇಂದ್ರ ಸರ್ಕಾರ ಮತ್ತು ರೈತರ ನಡುವೆ 9 ಸುತ್ತಿನ ಮಾತುಕತೆಗಳು ನಡೆದಿದ್ದು, ಎಲ್ಲವೂ ವಿಫಲವಾಗಿವೆ. ಕಾಯ್ದೆಗಳನ್ನು ಹಿಂತೆಗೆದುಕೊಳ್ಳಬೆಕು ಎಂದು ರೈತರು ಒತ್ತಾಯಿಸುತ್ತಿದ್ದರೆ, ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯುತ್ತಿಲ್ಲ.
ಹಾಗಾಗಿ ರೈತರು ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸುತ್ತಲೇ ಇದ್ದಾರೆ. ಇದರ ಭಾಗವಾಗಿಯೇ ಈ ಟ್ರ್ಯಾಕ್ಟರ್ ರ್‍ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ.
ಇದನ್ನೂ ಓದಿ: ಟ್ರ್ಯಾಕ್ಟರ್ ಚಲಾಯಿಸಿಕೊಂಡು ದೆಹಲಿಯತ್ತ ದಾಪುಗಾಲಿಡುತ್ತಿರುವ ‘ರೈತ ಪುತ್ರಿಯರು’


