ಈ ವರ್ಷದ ಮೇ ತಿಂಗಳಿನಲ್ಲಿ ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಜಯಲಲಿತಾ ಮತ್ತು ಕರುಣಾನಿಧಿಯವರಿಲ್ಲದೆ ನಡೆಯುತ್ತಿರುವ ಮೊದಲ ಮಹಾ ಚುನಾವಣೆ ಇದಾಗಿದ್ದು ಆಡಳಿತರೂಡ AIMDMK ಒಕ್ಕೂಟವನ್ನು ಕಿತ್ತೊಗೆದು ಡಿಎಂಕೆ ಒಕ್ಕೂಟ ಸ್ಪಷ್ಟ ಬಹುಮತ ಗಳಿಸಲಿದೆ ಎಂದು ಚುನಾವಣಾ ಪೂರ್ವ ಸಮೀಕ್ಷೆಗಳು ಭವಿಷ್ಯ ನುಡಿದಿವೆ.
234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ಡಿಎಂಕೆ-ಕಾಂಗ್ರೆಸ್ ಒಕ್ಕೂಟವು (ಯುಪಿಎ) 162 ಕ್ಷೇತ್ರಗಳಲ್ಲಿ ಜಯಗಳಿಸಲಿದೆ ಎಂದು ABP-ಸಿ ವೋಟರ್ ಸಮೀಕ್ಷೆ ಹೇಳಿದೆ. ಆಡಳಿತರೂಡ AIMDMK-ಬಿಜೆಪಿ (ಎನ್‌ಡಿಎ) ಒಕ್ಕೂಟವೇ ಕೇವಲ 64 ಸ್ಥಾನಗಳಿಗೆ ಕುಸಿಯಲಿದೆ ಎನ್ನಲಾಗಿದೆ.
2016 ರ ಚುನಾವಣೆಯಲ್ಲಿ ಆಡಳಿತರೂಡ ಎನ್‌ಡಿಎ 136 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದ್ದರೆ ಯುಪಿಎ 98 ಕ್ಷೇತ್ರಗಳಿಗೆ ತೃಪ್ತಿಪಟ್ಟುಕೊಂಡಿತ್ತು. ಈ ಬಾರಿಯ ಒಟ್ಟು ಮತಗಳಿಕೆಯಲ್ಲಿ ಡಿಎಂಕೆ ಒಕ್ಕೂಟವು ಶೇ.1.7 ರಷ್ಟು ಮತಗಳಿಕೆಯನ್ನು ಹೆಚ್ಚಿಸಿಕೊಳ್ಳಲಿದೆ ಎಂದು ಸಮೀಕ್ಷೆ ಹೇಳಿದೆ. 2016ರಲ್ಲಿ ಶೇ. 39.4 ರಷ್ಟು ಮತ ಪಡೆದಿದ್ದ ಅದು ಈ ಬಾರಿ ಶೇ. 41.1 ಗಳಿಸಲಿದೆ ಎನ್ನಲಾಗಿದೆ.
AIMDMK ಒಕ್ಕೂಟವು ಐದು ವರ್ಷಗಳ ಆಡಳಿತ ಪೂರೈಸುತ್ತಿದೆ. ಈ ಐದು ವರ್ಷಗಳಲ್ಲಿ ಹೇಳಿಕೊಳ್ಳುವಂತಹ ಗಮನಾರ್ಹ ಸಾಧನೆ ಕಂಡುಬಂದಿಲ್ಲ. ಅಲ್ಲದೇ ಅದು ತನ್ನೊಳಗೆ ಓ ಪನ್ನೀರಸೆಲ್ವಂ ಮತ್ತು ಎಡಪ್ಪಾಡಿ ಪಳನಿಸ್ವಾಮಿ ಗುಂಪುಗಳಾಗಿ ಒಡೆದುಹೋಗಿದೆ. ಹಾಗಾಗಿ ವಿಭಜಿತ AIMDMK ಒಕ್ಕೂಟದ ಎದುರು ಬಲಿಷ್ಠ ಡಿಎಂಕೆಗೆ ಜಯ ಸುಲಭ ಎಂದು ಸಮೀಕ್ಷೆ ಹೇಳಿದೆ.
ಕಳೆದ ಚುನಾವಣೆಯಂತೆಯೇ ಈ ಬಾರಿಯು AIMDMK ಒಕ್ಕೂಟವು ಬಿಜೆಪಿ ಜೊತೆ ಮೈತ್ರಿ ಮುಂದುವರೆಸುದಾಗಿದೆ ಘೋಷಿಸಿದೆ. ವೆಟ್ರಿವೇಲ್ ಯಾತ್ರೆಯ ಸಂಬಂಧ ಈ ಎರಡೂ ಪಕ್ಷಗಳ ನಡುವೆ ಭಿನ್ನಾಭಿಪ್ರಾಯವೇರ್ಪಟ್ಟಿತ್ತು. ಅದನ್ನು ಬಗೆಹರಿಸಿಕೊಂಡು ಒಟ್ಟಿಗೆ ಚುನಾವಣೆ ಎದುರಿಸಲು ಅವು ನಿರ್ಧರಿಸಿವೆ. ಅದೇ ರೀತಿಯಲ್ಲಿ ಡಿಎಂಕೆ ಮತ್ತು ಕಾಂಗ್ರೆಸ್ ನಡುವಿನ ಮೈತ್ರಿ ಸಹ ಮುಂದುವರೆಯಲಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಈ ಮೈತ್ರಿಯೂ ಒಟ್ಟು 39 ಸ್ಥಾನಗಳಲ್ಲಿ 38 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.
ಇದನ್ನೂ ಓದಿ: ’ತಲೆಗಳನ್ನು ಕತ್ತರಿಸುವ ಸಮಯ’ – ಹಿಂಸಾಚಾರಕ್ಕೆ ಕರೆ ನೀಡಿದ ನಟಿ ಕಂಗನಾ


