ಗಣರಾಜ್ಯೋತ್ಸವ ದಿನದಂದು ಪ್ರತಿಭಟನಾನಿರತ ರೈತರು ನಡೆಸಲು ಉದ್ದೇಶಿಸಿರುವ ಟ್ಯ್ರಾಕ್ಟರ್ ರ‍್ಯಾಲಿಯನ್ನು ದೆಹಲಿ ಒಳಕ್ಕೆ ಬರುವ ರಿಂಗ್ ರೋಡ್ ಬದಲು ಹೊರವಲಯದಲ್ಲೇ ನಡೆಸಲು ದೆಹಲಿ ಪೊಲೀಸ್ ಉನ್ನತಾಧಿಕಾರಿಗಳು ರೈತರನ್ನು ಮನವೊಲಿಸಲು ಗುರುವಾರವೂ ಯತ್ನಿಸಿದರು. ಆದರೆ ಇದಕ್ಕೆ ರೈತರು ಒಪ್ಪದೆ ದೆಹಲಿ ಒಳಗೆ ಶಾಂತಿಯುತವಾಗಿ ಟ್ಯ್ರಾಕ್ಟರ್ ರ‍್ಯಾಲಿ ನಡೆಸಲು ನಿರ್ಧರಿಸಿದ್ದಾರೆ.
ಸಿಂಘು ಗಡಿ ಬಳಿಯ ರೆಸಾರ್ಟ್ ಒಂದರಲ್ಲಿ ನಿನ್ನೆ ದೆಹಲಿ ಉತ್ತರ ಭಾಗದ ಜಂಟಿ ಪೊಲೀಸ್ ಆಯುಕ್ತ ಎಸ್‌ಎಸ್ ಯಾದವ್ ಮತ್ತು ಪಶ್ಚಿಮ ವಲಯದ ವಿಶೇಷ ಪೊಲೀಸ್ ಆಯುಕ್ತ (ಶಾಂತಿ ಮತ್ತು ಸುವ್ಯವಸ್ಥೆ) ಸಂಜಯ್ ಸಿಂಗ್, ಗುಪ್ತಚಾರ ವಿಭಾಗದ ದೀಪೇಂದ್ರ ಪಟ್ನಾಯಕ್ ಮುಂತಾದ ಹಿರಿಯ ಪೊಲೀಸ್ ಅಧಿಕಾರಿಗಳು ರೈತ ಸಂಘಟನೆಗಳ ನಾಯಕರ ಮನವೊಲಿಕೆಗೆ ಯತ್ನಿಸಿದರು. ಯೋಗೇಂದ್ರ ಯಾದವ್ ಸೇರಿದಂತೆ ಹಲವು ರೈತ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಸಭೆ ಬಳಿಕ ಮಾತನಾಡಿದ ಯೋಗೇಂದ್ರ ಯಾದವ್, ಪೊಲೀಸರ ಸಲಹೆ ಒಪ್ಪದ ರೈತರು ದೆಹಲಿಯ ಭಾಗವಾಗಿರುವ ರಿಂಗ್ ರೋಡಿನಲ್ಲೇ ಶಾಂತಿಯುತ ರ‍್ಯಾಲಿ ನಡೆಸುವುದಾಗಿ ಸ್ಪಷ್ಟಪಡಿಸಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ದೆಹಲಿ ಪೊಲೀಸರು ಸೋಮವಾರದಿಂದಲೂ ರೈತ ಸಂಘಟನೆಗಳ ಮನವೊಲಿಕೆಗೆ ಯತ್ನಿಸುತ್ತಲೇ ಬಂದಿದ್ದಾರೆ. ರ‍್ಯಾಲಿ ರದ್ದಿಗೆ ಆಗ್ರಹಿಸಿದ ಪೊಲೀಸರ ಅರ್ಜಿಗೆ ಮಾನ್ಯತೆ ನೀಡದ ಸುಪ್ರೀಂಕೋರ್ಟ್, ಅದನ್ನು ನೀವೇ ನಿರ್ಧರಿಸಿ ಎಂದು ಬುಧವಾರ ಪೊಲೀಸರಿಗೆ ತಿಳಿಸಿತ್ತು. ಈ ಕಾರಣಕ್ಕೆ ಇಂದು ಗುರುವಾರ ಉನ್ನತ ಪೊಲೀಸ್ ಅಧಿಕಾರಿಗಳು ಮತ್ತೊಮ್ಮೆ ರ‍್ಯಾಲಿ ರೂಟ್ ಬದಲಿಸುವಮತೆ ರೈತ ನಾಯಕರ ಮನವೊಲಿಕೆಗೆ ಯತ್ನಿಸಿದರು.

ರಿಂಗ್ ರೋಡ್‌ನಲ್ಲಿ ರ‍್ಯಾಲಿ ಬೇಡ ಮತ್ತು ಕಿಸಾನ್ ಘಾಟ್‌ನತ್ತ ರ‍್ಯಾಲಿ ಮುಂದುವರೆಯುವುದು ಬೇಡ ಎಂದಿರುವ ಪೊಲೀಸರ ಸಲಹೆಯನ್ನು ರೈತ ಸಂಘಟನೆಗಳ ನಾಯಕರು ಒಪ್ಪಿಕೊಂಡಿಲ್ಲ. ಆದರೆ ಪೊಲೀಸರ ಷರತ್ತಿಗೆ ಒಪ್ಪದ ರೈತ ಸಂಘಟನೆಗಳು ಹೊರ ರಿಂಗ್ ರೋಡಿನಲ್ಲೇ ರ‍್ಯಾಲಿ ನಡೆಯಲಿದೆ ಮತ್ತು ಅದು ಕಿಸಾನ್ ಘಾಟ್‌ವರೆಗೂ ನಡೆಯಲಿದೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ರಿಂಗ್‌ರಸ್ತೆಯ ಬದಲು ಕೆಎಂಪಿ ಎಕ್ಸ್‌ಪ್ರೆಸ್ ವೇನಲ್ಲಿ ರ‍್ಯಾಲಿ ನಡೆಸಿ ಮತ್ತು ಬೇರೆ ರೂಟ್‌ನತ್ತ ರ‍್ಯಾಲಿ ಬರುವುದು ಬೇಡ, ಕಿಸಾನ್‌ಘಾಟ್‌ನತ್ತಲೂ ಬೇಡ ಎಂದು ರೈತ ನಾಯಕರಿಗೆ ಮನವರಿಕೆ ಮಾಡಿಕೊಡಲು ದೆಹಲಿ ಪೊಲೀಸ್ ಅಧಿಕಾರಿಗಳು ಯತ್ನಿಸಿದ್ದು, ಅದನ್ನು ರೈತ ಸಂಘಟನೆಗಳು ಒಪ್ಪಿಲ್ಲ.
‘ಸಂಪೂರ್ಣ ಹೊರವಲಯಕ್ಕೆ ರ‍್ಯಾಲಿ ಸಿಮೀತಗೊಳಿಸಲು ಪೊಲೀಸರು ಸೂಚಿಸುತ್ತಿದ್ದಾರೆ. ಆದರೆ, ನಾವು ದೆಹಲಿಯ ಹೊರ ರಿಂಗ್‌ರೋಡಿನಲ್ಲೇ (ಇದು ದೆಹಲಿಯ ಭಾಗವೇ ಆಗಿದ್ದು, ಸಂಚಾರ ದಟ್ಟಣೆಯ ರಸ್ತೆಯಾಗಿದೆ) ರ‍್ಯಾಲಿ ಮಾಡಲಿದ್ದೇವೆ ಮತ್ತು ಗಣರಾಜ್ಯೋತ್ಸವ ಪರೇಡ್‌ಗೆ ಮತ್ತು ಸಾರ್ವಜನಿಕರಿಗೆ ತೊಂದರೆ ಅಗದಂತೆ ಶಾಂತಿಯು ರ‍್ಯಾಲಿ ಮಾಡುತ್ತೇವೆ’ ಎಂದು ರೈತ ನಾಯಕರು ತಿಳಿಸಿದ್ದಾರೆ.
‘ನಮ್ಮ ಪರೇಡ್ ಕೂಡ ಗಣರಾಜ್ಯೋತ್ಸವದ ಪರೇಡ್‌ನಂತೆ ಇರಲಿದೆ. ಹೊಸ ಕೃಷಿ ಕಾಯ್ದೆಗಳ ಅಪಾಯಗಳನ್ನು ಬಿಂಬಿಸುವ ಟ್ಯಾಬ್ಲೊಗಳು, ಭಿತ್ತಿಪತ್ರಗಳನ್ನು ಟ್ಯ್ರಾಕ್ಟರ್‌ಗಳ ಮೇಲೆ ಪ್ರದರ್ಶಿಸಲಾಗುವುದು. ವಿವಿಧ ರಾಜ್ಯಗಳ ರೈತ ಸಂಘಟನೆಗಳು ಅಲ್ಲಿನ ರೈತರ ಸಂಕಷ್ಟಗಳನ್ನು ಬಿಂಬಿಸುವ ಭಿತ್ತಿಪತ್ರಗಳನ್ನು ಪ್ರದರ್ಶಿಸಲಿವೆ’ ಎಂದು ರೈತ ಸಂಘಟನೆಗಳು ಈ ಮೊದಲೇ ತಿಳಿಸಿದ್ದವು.
ಸಿಂಘು, ಟಿಕ್ರಿ ಮತ್ತು ಘಾಜಿಯಾಪುರ ಗಡಿಗಳಲ್ಲಿ ನಡೆಯುತ್ತಿರುವ ರೈತ ಹೋರಾಟದ ಸ್ಥಳಗಳಲ್ಲಿ ಹರಿಯಾಣ ಮತ್ತು ರಾಜಸ್ತಾನ್ ಪೊಲೀಸರು ಹೆಚ್ಚಿನ ಪೊಲೀಸರನ್ನು ಮತ್ತು ಆರ್‌ಎಎಫ್ ತುಕಡಿಗಳನ್ನು ನಿಯೋಜಿಸಿದ್ದಾರೆ. ಅಲ್ಲಲ್ಲಿ ತಾತ್ಕಾಲಿಕ ಬ್ಯಾರಿಕೇಡ್‌ಗಳನ್ನು ನಿರ್ಮಿಸಿದ್ದಾರೆ.
ಇದನ್ನೂ ಓದಿ: ಟ್ರ್ಯಾಕ್ಟರ್ ರ್‍ಯಾಲಿಗೆ ಪೊಲೀಸರ ಕೆಲವು ಷರತ್ತುಗಳು: ಒಪ್ಪದ ರೈತ ಸಂಘಟನೆಗಳು


