Homeಮುಖಪುಟವಿಶೇಷ ವರದಿ: ಪ್ರತಿರೋಧಕ್ಕೆ ಹೊಸ ಅರ್ಥ ಮತ್ತು ಹುರುಪು ಕೊಟ್ಟ ದೆಹಲಿ ರೈತ ಹೋರಾಟ..!

ವಿಶೇಷ ವರದಿ: ಪ್ರತಿರೋಧಕ್ಕೆ ಹೊಸ ಅರ್ಥ ಮತ್ತು ಹುರುಪು ಕೊಟ್ಟ ದೆಹಲಿ ರೈತ ಹೋರಾಟ..!

- Advertisement -
- Advertisement -

[ದೆಹಲಿ ರೈತ ಹೋರಾಟವನ್ನು ವರದಿ ಮಾಡಲು ತೆರಳಿದ್ದ ನಾನುಗೌರಿ-ನ್ಯಾಯಪಥ ತಂಡದ ಮಮತ, ಈ ಹೋರಾಟ ತಮಗೆ ಮೂಡಿಸಿದ ಬೆರಗಿನ ಬಗ್ಗೆ ಇಲ್ಲಿ ಬಣ್ಣಿಸಿದ್ದಾರೆ]

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಾದಿತ ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ಒತ್ತಾಯಿಸಿ ನಡೆಯುತ್ತಿರುವ ರೈತ ಹೋರಾಟಕ್ಕೆ 60 ದಿನಗಳು ತುಂಬುತ್ತಿವೆ. ಇಷ್ಟು ದಿನಗಳಿಂದ ನಡೆಯುತ್ತಿರುವ ಹೋರಾಟದಲ್ಲಿ ಮೊದಲ ದಿನವಿದ್ದ ಉತ್ಸಾಹ ಇನ್ನೂ ಹಾಗೆ ಉಳಿಸಿಕೊಂಡಿರುವುದಷ್ಟೇ ಅಲ್ಲ ಅದು ದಿನೇದಿನೇ ವೃದ್ಧಿಸುತ್ತಿರುವುದು, ಪ್ರತಿಭಟನಾನಿರತ ರೈತರ ಕುರಿತ ಆಸಕ್ತಿ ಇಮ್ಮಡಿಸುವಂತೆ ಮಾಡುತ್ತದೆ.

ಯಾವುದೇ ಸರ್ಕಾರದ ಅಥವಾ ಖಾಸಗಿ ಕಂಪನಿಗಳ ವಿರುದ್ಧ ಪ್ರತಿಭಟನೆ ನಡೆಸುವಾಗ, ಆ ಹೋರಾಟಕ್ಕೆ ಇಳಿಯಲು ಕಾರಣವೇನು ಎಂಬುದು ಪ್ರತಿಭಟನಾನಿರತ ಎಲ್ಲರಿಗೂ ತಿಳಿದಿದ್ದರೆ, ಆ ಹೋರಾಟಕ್ಕೆ ಗಟ್ಟಿ ಅಡಿಪಾಯವೊಂದು ದೊರೆತಂತೆ. ಹೋರಾಟಕ್ಕೆ ಅಣಿಯಾಗಲು ಅಂತಹ ಉದ್ದೇಶ, ತಿಳಿವಳಿಕೆ ಮತ್ತು ಆಲೋಚನೆ ಅಗತ್ಯವಾಗಿ ಬೇಕು. ಆಗ ಆ ಹೋರಾಟ ಎಷ್ಟು ಧೀರ್ಘವಾದರೂ ಜನರು ಅಂಜುವುದಿಲ್ಲ. ಅಂತಹ ಒಂದು ಭದ್ರ ಬುನಾದಿ ಈ ಐತಿಹಾಸಿಕ ರೈತ ಹೋರಾಟಕ್ಕಿದೆ ಎಂಬುದು ದೆಹಲಿ ಗಡಿಗೆ ಭೇಟಿ ನೀಡಿದ ಯಾರಿಗಾದರೂ ಸುಲಭವಾಗಿ ತಿಳಿಯುತ್ತದೆ.

PC : Free Press journal

ಈ ಹೋರಾಟದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರಿಗೂ ತಾವು ಯಾವುದಕ್ಕಾಗಿ, ಯಾರಿಗಾಗಿ, ಏಕೆ ಈ ದೆಹಲಿಯ ಗಡಿಗಳಲ್ಲಿ ಇದ್ದೇವೆ ಎಂಬ ತಿಳಿವಿದೆ. ಇಂತಹ ತಿಳಿವಿಲ್ಲದೆ ಪ್ರತಿಭಟನೆಗಿಳಿದು, ಪ್ರತಿಭಟಿಸುತ್ತಿರುವ ಸ್ಥಳಕ್ಕೆ ಬಂದ 2-3 ದಿನಗಳಲ್ಲೇ, ಕಾರಣಗಳನ್ನು ತಿಳಿಸುವ ಕೆಲಸವನ್ನು ಹೋರಾಟನಿರತ ರೈತರು, ರೈತ ಮುಖಂಡರು ಮಾಡುತ್ತಾರೆ. ಈ ಕೆಲಸಕ್ಕಾಗಿಯೇ ದೆಹಲಿಯ ಸಿಂಘು, ಟಿಕ್ರಿ, ಗಾಝಿಪುರ್, ಚಿಲ್ಲಾ, ಶಹಜಾನ್‌ಪುರ್, ದಾರೂಹೇರಾ ಗಡಿಗಳಲ್ಲಿ ಅನೇಕ ವೇದಿಕೆಗಳಿವೆ. ಕೃಷಿ ಕಾನೂನಿನ ಸಾಧಕ-ಬಾಧಕಗಳ ಕುರಿತು ಅನೇಕ ತಜ್ಞರು, ರೈತರು, ರೈತ ಮುಖಂಡರು ಇಲ್ಲಿ ಇಡೀ ದಿನ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಇನ್ನೂ ಅನೇಕ ಸಂಘ ಸಂಸ್ಥೆಗಳು ಕೃಷಿ ಕಾನೂನಿನ ಪ್ರತಿಗಳನ್ನು ವಿವಿಧ ಭಾಷೆಗಳಲ್ಲಿ ಅಚ್ಚು ಹಾಕಿಸಿ ಎಲ್ಲರಿಗೂ ಹಂಚುವ ಕೆಲಸ ಮಾಡುತ್ತಿವೆ.

ಒಂದು ಹೋರಾಟ ಇಷ್ಟು ದಿನಗಳ ಕಾಲ ಉಳಿಯಲು ಮತ್ತು ಯಾವುದೇ ಅಡ್ಡಿಆತಂಕಗಳು ಕಾಣಿಸಿಕೊಳ್ಳದಿರಲು, ಜನ ತಾವಾಗಿಯೇ ಇಲ್ಲಿ ಮತ್ತಷ್ಟು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳಲು, ಅಲ್ಲಿ ಆಹಾರ ಪೂರೈಕೆಯ ಅಚ್ಚುಕಟ್ಟುತನವೂ ಕಾರಣ. ಹೆಚ್ಚಾಗಿ ಪ್ರತಿಭಟನೆಯೆಂದರೆ ಹಸಿದುಕೊಂಡು, ಬಿಸಿಲಿನಲ್ಲಿ ಕುಳಿತು ಕಷ್ಟಪಟ್ಟು ಪ್ರತಿಭಟನೆ ನಡೆಸುವುದನ್ನು ನೋಡಿರುವ ನಮಗೆ ಈ ಹೋರಾಟ ತುಂಬಾ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತದೆ. ಇಡೀ ದಿನ ಸಿಖ್ಖರು ತಮ್ಮ ಲಂಗರ್‌ಗಳಲ್ಲಿ ಪ್ರತಿಭಟನಾ ನಿರತರಿಗೆ ಅನ್ನ-ಆಹಾರಗಳ ವ್ಯವಸ್ಥೆಯ ಸೇವೆ ಮಾಡುತ್ತಾರೆ. ಹಸಿವಿಗೆ ಇಲ್ಲಿ ಜಾಗವಿಲ್ಲ. ಯಾರೊಬ್ಬರೂ ಹಸಿವಿನಿಂದ ಇರಬಾರದು ಎಂಬ ರೈತರ ಈ ಪ್ರೀತಿಯ ಮತ್ತು ಕಾಳಜಿಯ ನಡೆ, ದೇಶದ ಹಲವು ಧರಣಿಗಳಲ್ಲಿ ಹಸಿವಿನಿಂದ, ಸುಸ್ತಿನಿಂದ ಬೀಳುವ ಪ್ರತಿಭಟನಾನಿರತರನ್ನು ಒಮ್ಮೆ ಕಣ್ಣ ಮುಂದೆ ಹಾಯುವಂತೆ ಮಾಡುತ್ತದೆ. ಸಿಖ್ ಸಮುದಾಯದ ಮತ್ತು ಪ್ರತಿಭಟನಾ ರೈತರ ಭ್ರಾತೃತ್ವ ನಿಜಕ್ಕೂ ಅನುಕರಣೀಯ ಅನ್ನಿಸದೆ ಇರದು.

ರೈತ ಹೋರಾಟ ಮೊದಮೊದಲು ಸುದ್ದಿಯಾಗಿದ್ದು ಅಲ್ಲಿನ ಊಟ ಉಪಚಾರದ ಕಾರಣಕ್ಕಾಗಿಯೇ ನಿಜ. ಏಕೆಂದರೆ ಪಂಜಾಬ್ ಮತ್ತು ಹರಿಯಾಣದ ರೈತರು ತಮ್ಮ ಲಂಗರ್‌ಗಳಲ್ಲಿ ಪ್ರತಿಭಟನಾನಿರತರಿಗೆ ನೀಡುವ ಆಹಾರ ಕೂಡ ಅಷ್ಟು ಉತ್ತಮವಾಗಿರುತ್ತದೆ. ಶುದ್ಧ ದೇಸಿ ತುಪ್ಪ, ಶಕ್ತಿವರ್ಧಕವಾಗಿರುವ ದ್ವಿದಳ ಧಾನ್ಯಗಳನ್ನು ಬಳಸಿ ಮಾಡುವ ಅವರ ಅಡುಗೆ ಅಂತಹ ಚಳಿಯಲ್ಲೂ ಶಕ್ತಿ ನೀಡಬಲ್ಲದು. ಜಿಲೇಬಿ, ರಸಗುಲ್ಲ, ಹಲ್ವಾ, ಖೀರು, ಪಿಜ್ಜಾ, ಬರ್ಗರ್‌ಗಳನ್ನು ನೀಡುವ ಲಂಗರ್‌ಗಳು, ಜ್ಯೂಸ್, ಹಾಲು, ಟೀ ನೀಡುವ ಲಂಗರ್‌ಗಳು, ಕಡಲೇಕಾಯಿ, ಮೊಸಂಬಿ, ಪೇರಲೆ ಹಣ್ಣುಗಳನ್ನು ಹಂಚಲು ಬರುವ ವಾಹನಗಳ ಸಂಖ್ಯೆ ಕೂಡ ಹೆಚ್ಚಾಗಿವೆ. ಮೊದಲು ಹೊಟ್ಟೆ ತುಂಬಾ ಊಟ ಮಾಡಿ ಆಮೇಲೆ ಪ್ರತಿಭಟನೆಗೆ ಕುಳಿತುಕೊಳ್ಳಿ ಎನ್ನುವ ಈ ಹೋರಾಟ ನಾವು ಓದಿರುವ, ನೋಡಿರುವ ಆಂದೋಲನಗಳಿಗಿಂತ ತುಂಬಾ ವಿಭಿನ್ನವಾದದ್ದು. ಇವರ ಆಹಾರದ ಬಗ್ಗೆ ಅಪಹಾಸ್ಯ ಮಾಡಿ ವಿಕೃತ ಮೆರೆದ ಜನರು ಇಲ್ಲಿಗೆ ತೆರಳಿ ಒಮ್ಮೆ ರೈತರ ಪ್ರೀತಿಯ ಆತಿಥ್ಯವನ್ನು ಸವಿದರೆ ಅವರ ಮನಸ್ಸು ಬದಲಾಗಬಹುದೇನೋ!

ರೈತ ಹೋರಾಟ
PC: Business Standard

ರೈತ ಹೋರಾಟದಲ್ಲಿ ಎಲ್ಲಾ ಗಡಿಗಳನ್ನು ಸುತ್ತಿದ ಮೇಲೂ ನಿಮಗೆ ಮತ್ತೆ ಮತ್ತೆ ಕಾಣಿಸುವುದು, ಮತ್ತೆ ಮತ್ತೆ ಕಾಡುವುದು ರೈತರ ಒಗ್ಗಟ್ಟು. ಇಲ್ಲಿ ಪಂಜಾಬ್, ಹರಿಯಾಣ, ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್, ಕರ್ನಾಟಕ, ಜಮ್ಮು-ಕಾಶ್ಮೀರ, ಕೇರಳ, ಮಹಾರಾಷ್ಟ್ರ, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳ, ವಿಭಿನ್ನ ಮನಸ್ಥಿತಿಯ ಜನರು ಇದ್ದಾರೆ. ಈ ವೈವಿಧ್ಯತೆಯ ಜನರ ಧ್ಯೇಯ ಮಾತ್ರ ಒಂದೇ ಅಗಿದೆ. ಆಂದೋಲನದಲ್ಲಿರುವ ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಾದ ವೃದ್ಧರವರೆಗೂ ಒಂದೇ ಮಾತು. ಕೇಂದ್ರ ಸರ್ಕಾರ ಕರಾಳ ಕೃಷಿ ಕಾನೂನುಗಳನ್ನು ವಾಪಾಸ್ ಪಡೆಯಬೇಕು ಎಂಬುದು. ಈ ವಿಚಾರದಲ್ಲಿ ಪ್ರತಿಭಟನೆ ನಡೆಯುತ್ತಿರುವ ಯಾವ ಗಡಿಯಲ್ಲಿ ಹೋಗಿ ಯಾರನ್ನು ಪ್ರಶ್ನಿಸಿದರೂ ಇದೇ ಉತ್ತರವಾಗಿರುತ್ತದೆ.

ಈ ಮೊದಲು ನಾವು ನೋಡಿರುವ ಹೋರಾಟಗಳ ಹಿಂದೆ ಒಂದು ಪಕ್ಷ ಅಥವಾ ಒಂದು ಸಂಘಟನೆ ಇರುವುದು ಸಾಮಾನ್ಯವಾಗಿತ್ತು. ಅವುಗಳು ಎಷ್ಟೇ ನೈಜವಾಗಿದ್ದರೂ, ನೈಜ ಕಾಳಜಿಗಳನ್ನು ಹೊಂದಿದ್ದರೂ ಅವರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಹೊರಿಸುವುದು ಆಳುವ ಸರ್ಕಾರಗಳಿಗೆ ಸುಲಭವಾಗಿರುತ್ತಿತ್ತು. ಆದರೆ ಈ ಬಾರಿ ಅದಕ್ಕೆ ಅವಕಾಶವೇ ಇಲ್ಲದಂತಾಗಿದೆ. ಇದು ಪೂರ್ತಿಯಾಗಿ ರೈತರೇ ಮುನ್ನಡೆಸುತ್ತಿರುವ ಆಂದೋಲನ ಎಂಬುದು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡುವವರ ಗಮನಕ್ಕೆ ಬಂದೆ ಬರುತ್ತದೆ.

ಸಿಖ್ ಸಮುದಾಯದ ಯುವಕರ ಸೇವಾ ಮನೋಭಾವ ಕೂಡ ರೈತ ಹೋರಾಟ ಇಲ್ಲಿಯವರೆಗೆ ಯಶಸ್ವಿಯಾಗಿರುವುದಕ್ಕೆ ಮತ್ತೊಂದು ಕಾರಣವಾಗಿದೆ. ಯಾವುದೇ ಇರಿಸು-ಮುರುಸು ಇಲ್ಲದೆ, ಎಂತಹ ಸಿರಿವಂತನಾದರೂ ಇನ್ನೊಬ್ಬರ ಬೂಟ್ ಪಾಲಿಶ್ ಮಾಡಲು ಮುಂದಾಗುವ ಇವರ ಹೃದಯ ಶ್ರೀಮಂತಿಕೆ ನಿಜಕ್ಕೂ ಅನುಕರಣೀಯ. ಅವಿಸ್ಮರಣೀಯ ಕೂಡ. ವಿದೇಶಿ ಕೆಲಸಗಳನ್ನು ಬಿಟ್ಟು ಬಂದು ಇಲ್ಲಿ ಹೊಲಿಗೆ ಸೇವೆ ನೀಡುವವರು, ಪಂಜಾಬ್‌ನಲ್ಲಿ ಲಕ್ಷಾಂತರ ರೂಪಾಯಿ ಸಂಬಳ ಪಡೆಯುವ ಯುವಕ ಇಲ್ಲಿ ರೈತರ ಬಟ್ಟೆ ತೊಳೆಯಲು, ಚಪ್ಪಲಿ ಜೋಡಿಸಲು, ಶೂ ಪಾಲಿಶ್ ಮಾಡಲು, ತಲೆಗೆ ಎಣ್ಣೆ ಹಚ್ಚಲು ಕೂರುವುದು ನಿಜಕ್ಕೂ ಎಂಥವರನ್ನೂ ಮೂಕ ವಿಸ್ಮಿತರನ್ನಾಗಿಸುತ್ತದೆ. ಇಂತಹ ವಿಚಾರಗಳನ್ನು ನೋಡಲು ಮತ್ತು ಚಿಂತಿಸಲು ನಮ್ಮಲ್ಲಿನ ಪೂರ್ವಾಗ್ರಹಪೀಡಿತ ಭಾವನೆಗಳನ್ನು ಬಿಟ್ಟು ಪ್ರತಿಭಟನಾ ಸ್ಥಳಕ್ಕೆ ಹೋಗಬೇಕಾಗುತ್ತದೆ ಎಂಬುದು ಅಷ್ಟೇ ಸತ್ಯ.

PC : Malyala Manorama

ದೆಹಲಿ ಒಂದು ನಗರ ಎಂದು ಎಲ್ಲರಿಗೂ ತಿಳಿದಿರುವುದೇ, ಆದರೆ ಈ ಗಡಿಗಳಲ್ಲಿ ಸೃಷ್ಟಿಯಾಗಿರುವ ನಗರಗಳದ್ದು ಬೇರೆಯೇ ಮಾದರಿ. ದೆಹಲಿ ಮತ್ತು ಸುತ್ತಮುತ್ತಲಿನ ಜನ ಇಲ್ಲಿಗೆ ಪ್ರವಾಸಿಗರಾಗಿ ಬರುತ್ತಿದ್ದಾರೆ. ಮಕ್ಕಳನ್ನು ಕರೆದುಕೊಂಡು ಕುಟುಂಬ ಸಮೇತ ಭೇಟಿ ನೀಡುವ ಜನ, ರೈತರ ಜೊತೆಗೆ ಹೋರಾಟದ ಬಗ್ಗೆ ಮಾತುಕತೆ ನಡೆಸುತ್ತಾರೆ. ಇಲ್ಲಿ ತಲೆಯೆತ್ತಿರುವ ಪುಸ್ತಕಭಂಡಾರಗಳಿಂದ ಪುಸ್ತಕಗಳನ್ನು ಖರೀದಿಸುತ್ತಾರೆ. ಅಲ್ಲಯೇ ನಡೆಯುವ ಚರ್ಚೆಗಳಲ್ಲಿ ಭಾಗವಹಿಸುತ್ತಾರೆ. ತಮ್ಮ ಮಕ್ಕಳ ಜನ್ಮ ದಿನವನ್ನೂ ಆಚರಿಸಲು ಇಲ್ಲಿಗೆ ಬರುವವರ ಸಂಖ್ಯೆ ಅಧಿಕವಾಗಿದೆ. ಚಳವಳಿಯಲ್ಲಿ ಮತ್ತಷ್ಟು ಹುಮ್ಮಸ್ಸು ತುಂಬುವ ಗೀತೆಗಳನ್ನು, ಕವಿತೆಗಳನ್ನು ವಾಚಿಸುತ್ತಾರೆ. ಇಂತಹ ಒಂದು ಐತಿಹಾಸಿಕ, ವಿಭಿನ್ನ ಪ್ರತಿಭಟನೆ ದೇಶದ ಇತಿಹಾಸದಲ್ಲಿ ಹೊಸ ಅಧ್ಯಾಯವಾಗಿ ಉಳಿದುಕೊಳ್ಳುತ್ತದೆ ಎಂಬ ಮಾತುಗಳು ಇಲ್ಲಿಗೆ ಭೇಟಿ ನೀಡುವವರು ಹೇಳುತ್ತಾರೆ.

ರೈತ ಹೋರಾಟದಲ್ಲಿ ಇನ್ನೂ ಹೆಚ್ಚು ಗಮನ ಸೆಳೆಯುವುದು ರಾಜಕೀಯ ನಾಯಕರಿಗೆ ನೀಡಿರುವ ಸ್ಥಾನಮಾನ. ಇಲ್ಲಿರುವ ವೇದಿಕೆಗಳನ್ನು ರಾಜಕೀಯ ಪಕ್ಷದ ಮುಖಂಡರು ಹತ್ತುವಂತಿಲ್ಲ. ಅಲ್ಲಿಯೇ ನಿಂತು ಮಾಧ್ಯಮಗಳಿಗೆ ಉತ್ತರ ಹೇಳುವಂತಿಲ್ಲ. ಮುಖ್ಯವಾಗಿ ತಮ್ಮ ಪಕ್ಷದ ಧ್ವಜ ತರುವಂತಿಲ್ಲ. ಹೋರಾಟಕ್ಕೆ ಬೆಂಬಲ ನೀಡುವವರು ಇಲ್ಲಿ ಬಂದು ಅವರ ಜೊತೆ ಕೂರಬಹುದು. ರಾಜಕೀಯ ಪಕ್ಷಗಳನ್ನು ತಮ್ಮ ಆಂದೋಲನದಿಂದ ದೂರವಿರಿಸಿರುವುದು ಈ ಹೋರಟದ ಮತ್ತೊಂದು ವಿಶೇಷ. ಯಾವುದೇ ಪ್ರತಿರೋಧಕ್ಕೆ ಯಾವ ರಾಜಕೀಯ ಮುಖಂಡನ ಅಗತ್ಯ ಇಲ್ಲ ಎಂಬುದನ್ನು ರೈತರು ಸಾಬೀತುಮಾಡಿದ್ದಾರಲ್ಲದೇ, ಜನರಿಂದಲೇ ನಿಜವಾದ ಪ್ರಜಾತಂತ್ರ ಎಂಬ ತತ್ವವನ್ನು ಎತ್ತಿಹಿಡಿದಿದ್ದಾರೆ.

ದೆಹಲಿ ಚಲೋ ಶುರುವಾಗಿ 60 ದಿನಗಳು ಆಗಿರಬಹುದು. ಆದರೆ ದೆಹಲಿ ಚಲೋ ಶುರುವಾಗಿ, ಇಂದು ಬೃಹತ್ ಮಟ್ಟದ ರೈತ ಹೋರಾಟಕ್ಕೆ ಕಾರಣವಾಗಿರುವ ಪಂಜಾಬ್‌ನಲ್ಲಿ ಈ ಆಂದೋಲನ ಪ್ರಾರಂಭವಾಗಿ ಐದು ತಿಂಗಳು ಸರಿದಿವೆ. ಇಂದಿಗೂ ಅಲ್ಲಿ ರೈಲ್ ರೋಖೋ ಚಳವಳಿ ನಡೆಯುತ್ತಲೆ ಇದೆ. ರೈತರೇ ಹೇಳುವಂತೆ ನಮ್ಮ ಹೋರಾಟ ಯಾವ ಪಕ್ಷದ ವಿರುದ್ಧವೂ ಅಲ್ಲ. ಕಾಯ್ದೆಗಳನ್ನು ಜಾರಿ ಮಾಡಿರುವ ಸರ್ಕಾರದ ವಿರುದ್ಧ. ಅಲ್ಲಿ ಯಾವ ಪಕ್ಷವಿದ್ದರೂ ನಾವು ಇದೇ ರೀತಿಯ ಪ್ರತಿಭಟನೆ ನಡೆಸುತ್ತಿದ್ದೆವು ಎನ್ನುತ್ತಾರೆ.

ಪ್ರತಿಭಟನೆಯೊಂದು ಇಷ್ಟೊಂದು ವಿಭಿನ್ನವಾಗಿ, ವಿಚಾರ ಕ್ರಾಂತಿಗೆ ಆಹ್ವಾನವಾಗಿಯೂ ನಡೆಸಬಹುದು ಎಂಬುದನ್ನು ದೇಶದ ರೈತರು ತೋರಿಸಿಕೊಟ್ಟಿದ್ದಾರೆ. ಈಗಾಗಲೇ ಲೋಹ್ರಿ ಹಬ್ಬವನ್ನು ಕಿಸಾನ್ ಲೋಹ್ರಿ ಎಂದು ರೈತರು ಆಚರಿಸಿದ್ದಾರೆ. ಆ ಹಬ್ಬಕ್ಕೆ ಹಾಕುವ ಸಾಂಪ್ರದಾಯಿಕ ಬೆಂಕಿ ಕೊಂಡದಲ್ಲಿ ಈ ರೈತವಿರೋಧಿ ಕಾಯ್ದೆಗಳ ಪ್ರತಿಗಳನ್ನು ಸಾಂಕೇತಿಕವಾಗಿ ಸುಟ್ಟಿದ್ದಾರೆ. ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವವನ್ನು ಕಿಸಾನ್ ಗಣರಾಜ್ಯೋತ್ಸವವನ್ನಾಗಿಸಿ, ಶಾಂತಿಯುತ ಬೃಹತ್ ಟ್ರ್ಯಾಕ್ಟರ್ ರ್‍ಯಾಲಿ ನಡೆಸಲು ಮುಂದಾಗಿದ್ದಾರೆ. ಅಂದು ದೆಹಲಿಯ ಗಡಿಗಳಲ್ಲಿರುವ ಟ್ರ್ಯಾಕ್ಟರ್‌ಗಳ ಜೊತೆಗೆ ಪಂಜಾಬ್, ರಾಜಸ್ಥಾನ, ಕೇರಳ, ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ ಮುಂತಾದ ರಾಜ್ಯಗಳಿಂದಲೂ ಟ್ರ್ಯಾಕ್ಟರ್‌ಗಳು ದೆಹಲಿಗೆ ಬಂದುಸೇರಲಿವೆ ಎಂದು ರೈತ ಮುಖಂಡರು ತಿಳಿಸಿದ್ದಾರೆ. ಒಟ್ಟಾರೆಯಾಗಿ, ಈ ಬಾರಿಯ ಗಣರಾಜ್ಯೋತ್ಸವದಂದು ಕಿಸಾನ್ ಗಣರಾಜ್ಯೋತ್ಸವ ನಡೆಯುವುದು ನಿಶ್ಚಿತ ಎನ್ನುವ ವಿಶ್ವಾಸ ಈ ದೇಶದ ರೈತರದ್ದು.


ಇದನ್ನೂ ಓದಿ: ಕಲೆಯಲ್ಲಿ ಅನುರಣನಗೊಂಡ ರೈತ ಪ್ರತಿಭಟನೆ – ಅಪ್ರತಿಮ ಹೋರಾಟಕ್ಕೆ ಸೃಜನಶೀಲತೆಯ ಸ್ಪರ್ಶ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರ ಸಚಿವ ಬಂಡಿ ಸಂಜಯ್ ಮಗನ ವಿರುದ್ಧ ಪೋಕ್ಸೋ ಕೇಸ್ : ಕ್ರಮ ಕೈಗೊಳ್ಳದೆ ಕಥೆ ಹೇಳುತ್ತಿರುವ ಪೊಲೀಸರು, ಅಂತರ ಕಾಯ್ದುಕೊಂಡ ಬಿಜೆಪಿ

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ, ತೆಲಂಗಾಣದ ಪ್ರಮುಖ ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ಅವರ ಮಗ ಬಂಡಿ ಸಾಯಿ ಭಗೀರತ್ ವಿರುದ್ಧ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೋ...

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...