ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನಿನ ವಿರುದ್ದ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ, ಗಣರಾಜ್ಯೋತ್ಸವದಂದು ಟ್ರ್ಯಾಕ್ಟರ್ ರ್‍ಯಾಲಿ ನಡೆಸಲು ದೆಹಲಿ ಪೊಲೀಸರು ಕೊನೆಗೂ ಅನುಮತಿ ನೀಡಿದ್ದಾರೆ. ರೈತರಿಗೆ ದೆಹಲಿಗೆ ಪ್ರವೇಶಿಸಲು ಮತ್ತು ಪ್ರತಿ ಮಾರ್ಗದಲ್ಲಿ 100 ಕಿ.ಮೀ ದೂರ ಪ್ರಯಾಣಿಸಲು ಅವಕಾಶ ನೀಡಲಾಗಿದೆ ಎಂದು ರೈತ ಮುಖಂಡ ದರ್ಶನ್ ಪಾಲ್ ಶನಿವಾರ ಹೇಳಿದ್ದಾರೆ.
ಪ್ರತಿಭಟನಾ ನಿರತ ರೈತರೊಂದಿಗೆ ಇದುವರೆಗೂ 11 ಸುತ್ತಿನ ಮಾತುಕತೆಯನ್ನು ಕೇಂದ್ರ ಸರ್ಕಾರ ನಡೆಸಿದೆ. ಆದರೆ ಈ ಮಾತುಕತೆಗಳಲ್ಲಿ ಕೇಂದ್ರ ಸರ್ಕಾರ ರೈತರ ಪ್ರಮುಖ ಬೇಡಿಕೆಗಳನ್ನು ಒಪ್ಪಿಕೊಂಡಿಲ್ಲ. ಕೇಂದ್ರ ಸರ್ಕಾರ ತಮ್ಮ ಬೇಡಿಕೆಗಳನ್ನು ಒಪ್ಪಿಕೊಂಡರಷ್ಟೇ ಹೋರಾಟ ಕೊನೆಗೊಳಿಸುವುದಾಗಿ ರೈತರು ಈಗಾಗಲೇ ಘೋಷಿಸಿದ್ದಾರೆ.
ಇದನ್ನೂ ಓದಿ: 11 ನೇ ಸುತ್ತಿನ ಮಾತುಕತೆಯೂ ವಿಫಲ: ಚಳವಳಿ ತೀವ್ರಗೊಳಿಸಲು ರೈತರ ನಿರ್ಧಾರ
ಒಂಬತ್ತನೇ ಸುತ್ತಿನ ಮಾತುಕತೆ ವಿಫಲವಾದಾಗ ರೈತರು ಗಣರಾಜ್ಯೋತ್ಸವ ದಿನದಂದು ಟ್ರಾಕ್ಟರ್ ರ್‍ಯಾಲಿ ಮುಖಾಂತರ ದೆಹಲಿ ಪ್ರವೇಶಿಸಲಿದ್ದೇವೆ ಎಂದು ಹೇಳಿದ್ದರು. ಈ ರ್‍ಯಾಲಿಯ ವಿರುದ್ದ ಕೇಂದ್ರ ಸರ್ಕಾರ ಮತ್ತು ದೆಹಲಿ ಪೊಲೀಸರು ಸುಪ್ರೀಂಕೋರ್ಟ್‌ಗೆ ತೆರಳಿ ರ್‍ಯಾಲಿಯನ್ನು ತಡೆಹಿಡಿಯುವಂತೆ ಮನವಿ ಸಲ್ಲಿಸಿದ್ದರು. ಅದರೆ ಕೋರ್ಟ್ ಈ ಮನವಿಯನ್ನು ತಿರಸ್ಕರಿಸಿ, ದೆಹಲಿಗೆ ಪ್ರವೇಶದ ಬಗ್ಗೆ ದೆಹಲಿ ಪೊಲೀಸರು ನಿರ್ಧರಿಸಬೇಕು, ನಮ್ಮ ಮಧ್ಯಪ್ರವೇಶ ಅಸಾಧ್ಯ ಎಂದು ಹೇಳಿತ್ತು.
ಇದಾದ ನಂತರ ದೆಹಲಿ ಪೊಲೀಸರು, ರ್‍ಯಾಲಿ ಮುಖಾಂತರ ದೆಹಲಿಗೆ ಪ್ರವೇಶಿಸದಿರಿ ಎಂದು ರೈತರನ್ನು ಮನವೊಲಿಸಲು ಪ್ರಯತ್ನಿಸಿದ್ದರಾದರೂ ರೈತರು ಮಾತ್ರ ನಾವು ದೆಹಲಿಗೆ ಪ್ರವೇಶಿಸಿಯೆ ಸಿದ್ದ ಎಂದು ಹೇಳಿದ್ದರು. ನಮ್ಮದು ಶಾಂತಿಯುತ ಪ್ರತಿಭಟನೆ, ಅದನ್ನು ನಡೆಸಿಯೆ ತೀರುತ್ತೇವೆ ಎಂದು ಘೋಷಿಸಿದ್ದರು. ಇದೀಗ ದೆಹಲಿ ಪೊಲೀಸರೆ ರ್‍ಯಾಲಿಗೆ ಅನುಮತಿ ನೀಡಿದ್ದಾರೆ.
ಇದನ್ನೂ ಓದಿ: ನಾನುಗೌರಿ.ಕಾಮ್ ವಿಶೇಷ ವರದಿ: ಪ್ರತಿರೋಧಕ್ಕೆ ಹೊಸ ಅರ್ಥ ಮತ್ತು ಹುರುಪು ಕೊಟ್ಟ ದೆಹಲಿ ರೈತ ಹೋರಾಟ..!


