ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕರಾಳ ಕೃಷಿ ಕಾನೂನನ್ನು ವಿರೋಧಿಸಿ ಜ.26 ರಂದು ಬೆಂಗಳೂರಿನಲ್ಲಿ ನಡೆಸಲು ಉದ್ದೇಶಿಸಿರುವ ರೈತರ ರ್‍ಯಾಲಿಗೆ ಟ್ರಾಕ್ಟರ್‌ಗಳನ್ನು ತರಬಾರದು ಎಂದು ಬೆಂಗಳೂರು ಪೊಲೀಸರು ಹೇಳಿದ್ದಾರೆ.
ಗಣರಾಜ್ಯೋತ್ಸವ ದಿನದಂದು ರೈತರು ಬೆಂಗಳೂರಿನಲ್ಲಿ ಬೃಹತ್ ರ್‍ಯಾಲಿಯನ್ನು ಈಗಾಗಲೇ ಆಯೋಜಿಸಿದ್ದಾರೆ. ಆದರೆ ಪೊಲೀಸರು, “ಪ್ರತಿಭಟನೆಯಲ್ಲಿ ಭಾಗವಹಿಸುವ ರೈತರು ಟ್ರಾಕ್ಟರ್‌ನಲ್ಲಿ ಬಂದರೆ ಟ್ರಾಫಿಕ್ ಜಾಂ ಆಗುತ್ತದೆ, ಆದ್ದರಿಂದ ಟ್ರ್ಯಾಕ್ಟರ್ ಮೂಲಕ ಬರುವ ಹಾಗಿಲ್ಲ. ಟ್ರಾಕ್ಟರ್ ಬಿಟ್ಟು ಬೇರೆ ಯಾವುದೇ ವಾಹನಗಳಲ್ಲಿ ಆಗಮಿಸಬಹುದು” ಎಂದು ಹೇಳಿದ್ದಾರೆ.
ಇದನ್ನೂ ಓದಿ: ರೈತ ಹೋರಾಟ ಬೆಂಬಲಿಸಿ ಜ. 26ರಂದು ಬೆಂಗಳೂರಿನಲ್ಲಿ ಟ್ರ್ಯಾಕ್ಟರ್ ಪರೇಡ್; ರಾಜಧಾನಿಯತ್ತ 5000 ವಾಹನಗಳು!
ಟ್ರಾಕ್ಟರ್‌ಗಳನ್ನು ನಗರದ ಒಳಗೆ ಬಿಡದಂತೆ ಪ್ರವೇಶದ ಸ್ಥಳದಲ್ಲೇ ತಡೆಯುವಂತೆ ಪೊಲೀಸರಿಗೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಆದರೆ ಇದನ್ನು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅವರು ವಿರೋಧಿಸಿದ್ದು, “ರಾಜ್ಯದಲ್ಲಿ ರೈತರು, ಕಾರ್ಮಿಕರು ದಲಿತರು ಸೇರಿ ಬೆಂಗಳೂರಲ್ಲಿ ಟ್ರಾಕ್ಟರ್ ಪೆರೇಡ್ ಮೂಲಕ ಗಣರಾಜ್ಯೋತ್ಸವ ಆಚರಣೆ ಮಾಡಲು ತೀರ್ಮಾನ ಮಾಡಿದ್ದೇವೆ. ಟ್ರಾಕ್ಟರ್ ರೈತರ ಸಂಕೇತ. ಈ ಕಾರ್ಯಕ್ರಮ ಟ್ರಾಕ್ಟರ್ ವರ್ಸರ್ಸ್ ಟ್ಯಾಂಕರ್ ಆಗಿದೆ. ಟ್ರಾಕ್ಟರ್‌ಗಳಿಗೆ ಅಡ್ಡಿಪಡಿಸಬೇಡಿ, ನಮ್ಮನ್ನು ಗೌರವಯುತವಾಗಿ ಬೆಂಗಳೂರಿಗೆ ಬರ ಮಾಡಿಕೊಂಡು ಅಷ್ಟೇ ಗೌರವವಾಗಿ ಬಿಳ್ಕೊಡಿ” ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಬೊಮ್ಮಯಿ ಅವರಿಗೆ ವಿನಂತಿ ಮಾಡಿದ್ದಾರೆ.
“ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಶಿಸ್ತಿನಿಂದ ಕಾರ್ಯಕ್ರಮ ನಡೆಸಿ, ಮತ್ತೆ ವಾಪಸ್ ಹಳ್ಳಿಗಳಿಗೆ ತೆರಳುತ್ತೇವೆ. ನೀವು ಟ್ರಾಕ್ಟರ್ ತಡೆದರೆ ಅಲ್ಲಿಯೇ ನಮ್ಮ ರೈತರು ಬೀದಿಯಲ್ಲಿ ಕುಳಿತುಕೊಳ್ಳುತ್ತಾರೆ. ಸಂಚಾರ ಅಸ್ತವ್ಯಸ್ತ ಮಾಡಬೇಕಾಗುತ್ತದೆ” ಎಂದು ಅವರು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಬಲವಂತವಾಗಿ ರೈತ ಜಾಥಾ ತಡೆದ ಪೊಲೀಸರು: ರೈತ ಮುಖಂಡರ ಆಕ್ಷೇಪ


