ಗಣರಾಜ್ಯೋತ್ಸವದಂದು ನಡೆಯುವ ಸ್ಥಬ್ಧಚಿತ್ರ ಪ್ರದರ್ಶನಕ್ಕೆ ಕರ್ನಾಟಕದಿಂದ ವಿಜಯನಗರ ಸಾಮ್ರಾಜ್ಯದ ವೈಭವ ಸಾರುವ ಟ್ಯಾಬ್ಲೊ ಆಯ್ಕೆಯಾಗಿರುವುದು ಸರಿಯಷ್ಟೇ. ಅದರ ಪೂರ್ವಭಾವಿ ಪ್ರದರ್ಶನ ಜನವರಿ 23 ರಂದು ಜರುಗಿದ್ದು ಕರ್ನಾಟಕ ಟ್ಯಾಬ್ಲೊದಲ್ಲಿ ಕನ್ನಡವಿಲ್ಲ, ಕನ್ನಡ ಬಾವುಟವಿಲ್ಲ, ಆದರೆ ಕೇಸರಿ ಧ್ವಜಗಳು ರಾರಾಜಿಸಿವೆ ಎಂಬ ಆರೋಪ ಕೇಳಿಬಂದಿದೆ. ಇದು ಕನ್ನಡಿಗರನ್ನು ಕೆರಳಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ಈ ಬಾರಿಯ ಗಣರಾಜ್ಯೋತ್ಸವ ಪಥಸಂಚಲನದಲ್ಲಿ, ಕರ್ನಾಟಕದ ಐತಿಹಾಸಿಕ, ಸಾಂಸ್ಕೃತಿಕ ಹಿರಿಮೆಯ ದ್ಯೋತಕವಾಗಿ ವಿಜಯನಗರ ಸಾಮ್ರಾಜ್ಯದ ವೈಭವದ ಸ್ಥಬ್ಧಚಿತ್ರ ರಾಜ್ಯವನ್ನು ಪ್ರತಿನಿಧಿಸಲಿದೆ.
Karnataka will showcase the glory of the Vijayanagara Empire at the #RepublicDay2021@CMofKarnataka pic.twitter.com/UbYGN5c1Ka
— DIPR Karnataka (@KarnatakaVarthe) January 24, 2021
‘ಈ ಬಾರಿಯ ಗಣರಾಜ್ಯೋತ್ಸವ ಪಥಸಂಚಲನದಲ್ಲಿ, ಕರ್ನಾಟಕದ ಐತಿಹಾಸಿಕ, ಸಾಂಸ್ಕೃತಿಕ ಹಿರಿಮೆಯ ದ್ಯೋತಕವಾಗಿ ವಿಜಯನಗರ ಸಾಮ್ರಾಜ್ಯದ ವೈಭವದ ಸ್ಥಬ್ಧಚಿತ್ರ ರಾಜ್ಯವನ್ನು ಪ್ರತಿನಿಧಿಸಲಿದೆ’ ಎಂದು ಪೂರ್ವಭಾವಿ ಮೆರವಣಿಗೆಯ ಚಿತ್ರವನ್ನು ಕರ್ನಾಟಕ ವಾರ್ತಾ ಇಲಾಖೆ ಪ್ರಕಟಿಸಿದೆ. ಟ್ಯಾಬ್ಲೊದ ಮುಂಭಾಗದಲ್ಲಿ ಕರ್ನಾಟಕ್ ಎಂದು ಹಿಂದಿಯಲ್ಲಿ ಬರೆದಿದ್ದು. ಟ್ಯಾಬ್ಲೊ ಅಕ್ಕ ಪಕ್ಕದ ಮೆರವಣಿಗೆಯಲ್ಲಿದ್ದವರು ಕೇಸರಿ ಧ್ವಜ ಹಿಡಿದಿರುವುದು ಕಂಡುಬಂದಿದೆ.
ಈ ಕುರಿತು ಕನ್ನಡಿಗರು ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಕಾರ್ಯಕರ್ತ ಸರೋವರ್ ಬೆಂಕಿಕೆರೆ “ಕನ್ನಡ ಬಾವುಟ ಎಲ್ಲಿ? ಇದೇನು ಒಕ್ಕೂಟ ದೇಶವೋ ಅಥವಾ ಏನು? ಗಣತಂತ್ರ ಅಂದ್ರೆ ಒಂದು ಧರ್ಮದ ಬಾವುಟ ಹಾಕುವುದೆ? ಎಂದು ಪ್ರಶ್ನಿಸಿದ್ದಾರೆ.
ಕನ್ನಡ ಗ್ರಾಹಕ ಒಕ್ಕೂಟದ ಅರುಣ್ ಜಾವಗಲ್ “ಗಣರಾಜ್ಯೋತ್ಸವದ ಪೆರೇಡ್ ನಲ್ಲಿ ರಾಜ್ಯಗಳ ಬಿತ್ತಿ ಚಿತ್ರಗಳ ಮುಂದೆ ಹಿಂದಿಯಲ್ಲಿ ಆ ರಾಜ್ಯದ ಹೆಸರು ಇರಬೇಕು ಇಲ್ಲದಿದ್ದರೆ ಬಿತ್ತಿಚಿತ್ರ ಪ್ರದರ್ಶನಕ್ಕೆ ಅವಕಾಶವೇ ಇರುವುದಿಲ್ಲಾ ಎನ್ನುವ ನಿಯಮವನ್ನು ಪ್ರತಿ ವರ್ಷ ಕೇಂದ್ರ ಸರಕಾರ ಹೊರಡಿಸುತ್ತದೆ. ಮುಂದುವರೆದು ರಾಜ್ಯದ ಭಾಷೆಯನ್ನು ಸ್ಥಬ್ಧಚಿತ್ರದ ಮುಂಭಾಗದಲ್ಲಿ ಹಾಕುವ ಅವಕಾಶವಿಲ್ಲ. ಬೇಕಿದ್ರೆ ಅಕ್ಕಪಕ್ಕದಲ್ಲಿ ಹಾಕಬಹುದು ಎನ್ನುವ ಅವಕಾಶವನ್ನು ದೆಹಲಿಯ ದೊರೆಗಳು ನೀಡಿದ್ದಾರೆ ಎನ್ನುವುದನ್ನು ಕಂಡು ಸಧ್ಯಕ್ಕೆ ಖುಷಿಪಡಬೇಕಷ್ಟೆ ಎಂದು ವ್ಯಂಗ್ಯವಾಡಿದ್ದಾರೆ.
ಕನ್ನಡ ಚಿತ್ರನಿರ್ದೇಶಕ ಮಂಸೋರೆ “ಭಾರತ ಎಂಬ ದೇಶ ವಿವಿಧ ಭಾಷೆಗಳ ರಾಜ್ಯಗಳ ಒಕ್ಕೂಟವೋ ಅಥವಾ ಹಿಂದಿ ಭಾಷೆಯ ರಾಜ್ಯಗಳ ಒಕ್ಕೂಟವೋ? ಇದೇನಾ ಗಣತಂತ್ರ? ನಮ್ಮ ರಾಜ್ಯವನ್ನು ಪ್ರತಿನಿಧಿಸುವ ಸ್ತಬ್ಧಚಿತ್ರದ ಮುಂದೆ ಕನ್ನಡ ಕಾಣುವುದಕ್ಕೆ ಈ ಒಕ್ಕೂಟ ದೇಶದಲ್ಲಿ ಅವಕಾಶವಿಲ್ಲವೇ? ಕನ್ನಡ ಡಿಂಡಿಮ ಬಾರಿಸಲು ಇನ್ನು ಎಷ್ಟು ವರ್ಷಗಳು ಕಾಯಬೇಕು?” ಎಂದು ಪ್ರಶ್ನಸಿದ್ದಾರೆ.
ಇನ್ಮೇಲೆ ರಿಪಬ್ಲಿಕ್ ಡೇ ಪರೇಡ್ ಗೆ ಟ್ಯಾಬ್ಲಾಯ್ಡ್ ಗಳು ನಮ್ಮ ನಾಡಿನಿಂದ ಹೋಗದಂತೆ ಮಾಡೋಣ. 3 ನುಡಿಗಳ ಪದ್ದತಿ ಪಾಲಿಸದೆ ಸಂವಿಧಾನವನ್ನ ಬದಲಾಯಿಸಿದ್ದಾರೆ. ಸಂವಿಧಾನ ಸಂವಿಧಾನ ಅನ್ನೋರು ಎಲ್ಲಿದ್ದೀರಿ? ನಾವುಗಳು ಎರಡು ನುಡಿಗಳ ಪದ್ದತಿ ಬೇಕು, ಸಂಸ್ಕೃತ, ಹಿಂದಿ ಹೇರಿಕೆ ಬೇಡ ಅಂದೊಡನೆ ಸಂವಿಧಾನ, ದೇಶ, ಒಗ್ಗಟ್ಟು, ಓಬ್ಬಟ್ಟು – ಬದನೆಕಾಯಿ ಅನ್ನುವವರು ಮಾತಾಡಿ ಇದರ ಬಗ್ಗೆ ಎಂದು ದ್ರಾವಿಡ ಹೋರಾಟಗಾರ ಅಭಿಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಟ್ರ್ಯಾಕ್ಟರ್‌ಗಳಿಗೆ ಡೀಸೆಲ್ ಹಾಕಬಾರದೆಂದು ಆದೇಶಿಸಿದ ಉತ್ತರ ಪ್ರದೇಶ ಸರ್ಕಾರ!