ಬಜೆಟ್ ಅಧಿವೇಶನ ಪ್ರಾರಂಭವಾಗುವ ಮುನ್ನ ಜನವರಿ 29 ರಂದು ರಾಷ್ಟ್ರಪತಿ ಸಂಸತ್ತಿನಲ್ಲಿ ಮಾಡುವ ಭಾಷಣವನ್ನು ಬಹಿಷ್ಕರಿಸುವುದಾಗಿ 16 ವಿರೋಧ ಪಕ್ಷಗಳ ನಾಯಕರು ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ತಮ್ಮ ಬೇಡಿಕೆಯನ್ನು ಈ ನಾಯಕರು ಪುನರುಚ್ಚರಿಸಿದ್ದು, ಪ್ರತಿಭಟನಾ ನಿರತ ರೈತರೊಂದಿಗೆ ತಾವು ಒಗ್ಗಟ್ಟಿನಲ್ಲಿ ನಿಂತಿದ್ದೇವೆ ಎಂದು ಹೇಳಿದ್ದಾರೆ.
ಕಾಂಗ್ರೆಸ್, ಎನ್‌ಸಿಪಿ, ಡಿಎಂಕೆ, ಟಿಎಂಸಿ, ಶಿವಸೇನೆ, ಸಮಾಜವಾದಿ ಪಕ್ಷ, ಆರ್‌ಜೆಡಿ, ಸಿಪಿಐ, ಸಿಪಿಐ (ಎಂ) ಮತ್ತು ಪಿಡಿಪಿ ಸೇರಿದಂತೆ 16 ಪ್ರಮುಖ ಪಕ್ಷಗಳ ನಾಯಕರು, ಈ ಕೃಷಿ ಕಾನೂನುಗಳು “ರಾಜ್ಯಗಳ ಹಕ್ಕುಗಳ ಮೇಲಿನ ಆಕ್ರಮಣ ಮಾಡಿದೆ ಮತ್ತು ಸಂವಿಧಾನಾತ್ಮಕ ಒಕ್ಕೂಟ ವ್ಯವಸ್ಥೆಯನ್ನು ಉಲ್ಲಂಘಿಸಿವೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಘಟನೆ ದುರದೃಷ್ಟಕರ ಆದರೆ ರೈತ ಹೋರಾಟ ಕೊನೆಗೊಳ್ಳುವುದಿಲ್ಲ: ಕೇಜ್ರಿವಾಲ್
ಈ ಕಾನೂನುಗಳನ್ನು ಯಾವುದೇ ಸಮಾಲೋಚನೆಗಳಿಲ್ಲದೆ ತರಲಾಗಿದ್ದು, ಕಾನೂನಿನಲ್ಲಿ ರಾಷ್ಟ್ರೀಯ ಒಮ್ಮತದ ಕೊರತೆಯಿದೆ. ಅಲ್ಲದೆ ಪ್ರತಿಪಕ್ಷವನ್ನು ಗೊಂದಲಗೊಳಿಸಿ, ಸಂಸತ್ತಿನ ಪರಿಶೀಲನೆಯಿಲ್ಲದೆ ಕಾನೂನನ್ನು ಬೈಪಾಸ್ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ಮಧ್ಯೆ ದೆಹಲಿ ರೈತರ ಗಣರಾಜ್ಯೋತ್ಸವದಲ್ಲಿ ಉಂಟಾದ ಅಹಿತಕರ ಘಟನೆಗೆ ಸಂಬಂಧಿಸಿದಂತೆ 25 ಎಫ್‌ಐಆರ್‌ಗಳು ದಾಖಲಾಗಿದೆ. ದೆಹಲಿ ಪೊಲೀಸರು ಗುರುವಾರ ರೈತ ಮುಖಂಡರ ವಿರುದ್ಧ ಸುತ್ತೋಲೆ ಹೊರಡಿಸಿದ್ದು, ಪಾಸ್‌ಪೋರ್ಟ್‌ಗಳನ್ನು ಒಪ್ಪಿಸುವಂತೆ ಕೇಳಿಕೊಂಡಿದ್ದಾರೆ. ಇನ್ನೊಂದೆಡೆ ಕೇಂದ್ರ ಗೃಹ ಸಚಿವ ಅಮಿತ್ ಶಾ ದೆಹಲಿಯ ಎರಡು ಆಸ್ಪತ್ರೆಗಳಿಗೆ ತೆರಳಿ, ಘಟನೆಯಲ್ಲಿ ಗಾಯಗೊಂಡ ಪೊಲೀಸ್ ಸಿಬ್ಬಂದಿಗಳನ್ನು ಭೇಟಿ ಮಾಡಿದರು.
ಇದನ್ನೂ ಓದಿ: ಕೆಂಪುಕೋಟೆ ಅಹಿತಕರ ಘಟನೆಯ ರೂವಾರಿ – ಯಾರು ಈ ದೀಪ್ ಸಿಧು?
ವಿಡಿಯೋ ನೋಡಿ►► ಗೋವಿಂದಣ್ಣ ಗೋವಿಂದ ರೈತರ ಬದುಕು ಗೋವಿಂದ.. ಕೃಷಿ ಕಾನೂನುಗಳ ಕುರಿತ ವೈರಲ್ ಹಾಡು


