ದೆಹಲಿಯಲ್ಲಿ ಮೂರು ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ರೈತ ಹೋರಾಟಕ್ಕೆ ಮತ್ತೊಂದು ಮಹತ್ವದ ತಿರುವು ದೊರಕುತ್ತಿದೆ. ಕೇಂದ್ರ ಸರ್ಕಾರ ದೆಹಲಿ ಪೊಲೀಸರನ್ನು ಬಳಸಿಕೊಂಡು ಹೋರಾಟ ಹತ್ತಿಕ್ಕಲು ಮುಂದಾಗಿದೆ ಎಂಬ ವರದಿಗಳ ಬಂದ ಹಿನ್ನೆಲೆಯಲ್ಲಿ ಹರಿಯಾಣದ ಬಹುತೇಕ ಹಳ್ಳಿಗಳಿಂದ ರೈತ ಹೋರಾಟದಲ್ಲಿ ಭಾಗಿಯಾಗಲು ಜನ ತಂಡೋಪತಂಡವಾಗಿ ಹೊರಟಿದ್ದಾರೆ. ದೆಹಲಿ ಗಡಿಗಳಿಗೆ ತೆರಳು ಬೆಂಬಲ ಸೂಚಿಸುವ ಮೂಲಕ ಹೋರಾಟ ನಿರಂತರವಾಗಿಡಲು ಮುಂದಾಗಿದ್ದಾರೆ.
ಗಣರಾಜ್ಯೋತ್ಸವದಂದು ಕೆಂಪು ಕೋಟೆಯಲ್ಲಿ ನಡೆದ ಅಹಿತಕರ ಬೆಳವಣಿಗೆಗಳನ್ನು ಬಳಸಿಕೊಂಡು ದೆಹಲಿ ಪೊಲೀಸರು ಗಾಜಿಪುರ ಗಡಿಯಲ್ಲಿ ರೈತರ ಮೇಲೆ ಲಾಠಿ ಚಾರ್ಜ್ ಮಾಡಿದ್ದರು. ಇಂದು ಇಪ್ಪತ್ತಕ್ಕೂ ಹೆಚ್ಚು ರೈತ ಮುಖಂಡರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಿದ್ದರು. ಅಲ್ಲದೆ ಟಿಕ್ರಿ ಮತ್ತು ಸಿಂಘು ಗಡಿಯಲ್ಲಿ ಸಾವಿರಾರು ಪೊಲೀಸರನ್ನು ನಿಯೋಜಿಸಿ ಲಾಠೀ ಚಾರ್ಜ್‌ಗೆ ಮುಂದಾಗಿದ್ದರು. ಇದನ್ನರಿತ ರೈತರು ದೆಹಲಿ ಗಡಿಗಳಿಗೆ ಹೋಗಿ ಬೆಂಬಲ ನೀಡಲು ಮುಂದಾಗಿದ್ದಾರೆ.
ಹರಿಯಾಣದ ಖಾಪ್ ಪಂಚಾಯಿತಿಗಳು ಸಭೆ ಸೇರಿ ತೀರ್ಮಾನ ತೆಗೆದುಕೊಂಡಿದ್ದು, ಇಂದು ರಾತ್ರಿ ಮತ್ತು ಬೆಳಗಿನ ಜಾವದಿಂದಲೇ ರೈತರು ಹೆಚ್ಚಿನ ಸಂಖ್ಯೆಯಲ್ಲಿ ದೆಹಲಿ ಗಡಿಗಳಿಗೆ ಮುಖ್ಯವಾಗಿ ಸಿಂಘು ಮತ್ತು ಟಿಕ್ರಿ ಗಡಿಗಳಿಗೆ ತೆರಳಲು ಸಿದ್ದತೆ ನಡೆಸಿದ್ದಾರೆ.
ಬಾಲಿಯಾನ್ ಖಾಪ್ ಪಂಚಾಯತ್‌ನಲ್ಲಿ ಸುತ್ತಮುತ್ತಲಿನ ಹತ್ತು ಸಾವಿರ ಟ್ರ್ಯಾಕ್ಟರ್‌ಗಳು ಗಡಿಗಳಿಗೆ ಹೋಗಬೇಕೆಂದು ತೀರ್ಮಾನಿಸಲಾಗಿದೆ. ಹಿಸಾರ್ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಖಾಪ್ ಪಂಚಾಯತ್, ಜನವರಿ 30 ರಂದು 100 ಟ್ರಾಕ್ಟರುಗಳು ರೈತರ ಬೆಂಗಾವಲು ಕಾಯಲು ಹೋಗಲಿದ್ದು, ಅದರಲ್ಲಿ 50 ಟ್ರಾಲಿಗಳು ಜೊತೆಯಾಗಲಿವೆ. ಜಿಂದ್ ಮಹಾಪಂಚಾಯತ್‌ನಲ್ಲಿ ಪ್ರತಿ ಮನೆಯಿಂದ ಒಬ್ಬರು ರೈತ ಚಳವಳಿಗೆ ಹೋಗಬೇಕು ಎಂದು ನಿರ್ಧರಿಸಲಾಗಿದೆ. ಭಿವಾನಿಯ ಕುಂಗಡ್ ಗ್ರಾಮದ ರೈತರು ರಾತ್ರಿಯಲ್ಲಿಯೇ ತೆರಳಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ದೆಹಲಿ ಹೋರಾಟದ ಕೆಲವು ಅಸಲೀ ಸಂಗತಿಗಳು, ಕಿಸಾನ್ ಮೋರ್ಚಾ ಏನು ಹೇಳುತ್ತಿದೆ?


