ಸ್ಟ್ಯಾಂಡ್ ಅಪ್ ಹಾಸ್ಯನಟ ಕುನಾಲ್ ಕಮ್ರಾ ಸುಪ್ರೀಂಕೋರ್ಟ್ ವಿರುದ್ಧ ಟ್ವೀಟ್ ಮಾಡಿದ್ದಕ್ಕಾಗಿ ಕ್ಷಮೆಯಾಚಿಸಲು ನಿರಾಕರಿಸಿದ್ದಾರೆ, ಇದಕ್ಕಾಗಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಲಾಗಿದೆ. ಶುಕ್ರವಾರ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ ಅಫಿಡವಿಟ್‌ನಲ್ಲಿ, “ನ್ಯಾಯಾಂಗದ ಮೇಲೆ ಸಾರ್ವಜನಿಕರ ನಂಬಿಕೆಯು ಅದರ ಕಾರ್ಯಗಳನ್ನು ಅವಲಂಬಿಸಿದೆ. ಅದರ ಬಗ್ಗೆ ಮಾಡಿರುವ ಟೀಕೆಗಳ ಮೇಲೆ ಅಲ್ಲ” ಎಂದು ಹೇಳಿದ್ದಾರೆ.
ತನ್ನ ಟ್ವೀಟ್‌ಗಳು ಹಾಗೂ ಹಾಸ್ಯಗಳು ವಿಶ್ವದ ಅತ್ಯಂತ ಶಕ್ತಿಶಾಲಿ ನ್ಯಾಯಾಲಯದ ಅಡಿಪಾಯವನ್ನು ಅಲುಗಾಡಿಸಬಹುದು ಎಂದು ಹೇಳುವ ಮೂಲಕ ತನ್ನ ಸಾಮರ್ಥ್ಯಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಕುನಾಲ್ ಕಮ್ರಾ ಸುಪ್ರೀಂಕೋರ್ಟ್‌ಗೆ ತಿಳಿಸಿದ್ದಾರೆ.
ಇದನ್ನೂ ಓದಿ: ನ್ಯಾಯಾಂಗ ನಿಂದನೆ: 6 ವಾರದಲ್ಲಿ ಪ್ರತಿಕ್ರಿಯೆ ನೀಡಲು ಕುನಾಲ್ ಕಮ್ರಾಗೆ ಸುಪ್ರೀಂ ನೋಟಿಸ್
“ಪ್ರಜಾಪ್ರಭುತ್ವದಲ್ಲಿ ಯಾವುದಾದರೂ ಸಂಸ್ಥೆಯ ಮೇಲೆ ಟೀಕೆ ಮಾಡಬಾರದು ಎಂದು ನಂಬುವುದು, ಅತ್ಯಂತ ಕೆಟ್ಟ ರಾಷ್ಟ್ರವ್ಯಾಪಿ ಲಾಕ್‌ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರು ಅವರ ಮನೆಗೆ ಹೋಗಲು ತಾವೆ ದಾರಿ ಹುಡುಕಬೇಕು ಎಂಬಂತಿದೆ; ಇದು ಅಸಂಬದ್ದ ಮತ್ತು ಪ್ರಜಾಪ್ರಭುತ್ವ ವಿರೋಧಿ” ಎಂದು ಅವರು ಹೇಳಿದ್ದಾರೆ.
ಕುನಾಲ್ ಕಮ್ರಾ ದೇಶದಲ್ಲಿ ಅಸಹಿಷ್ಣುತೆಯ ಸಂಸ್ಕೃತಿ ಬೆಳೆಯುತ್ತಿದೆ ಎಂದು ಹೇಳಿದ್ದಾರೆ. ಅಲ್ಲದೆ ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ಬಂಧನಕ್ಕೊಳಗಾದ ಮತ್ತೊಬ್ಬ ಹಾಸ್ಯನಟ ಮುನವಾರ್ ಫಾರೂಕಿ ಬಂಧನದ ಬಗ್ಗೆಯೂ ಅವರು ಧ್ವನಿ ಎತ್ತಿದ್ದಾರೆ.
ಇದನ್ನೂ ಓದಿ: ಅಲಾವುದ್ದೀನ್ ಮತ್ತು ಅದ್ಭುತ ದೀಪದ ’ಜಿನ್’: ಕುನಾಲ್ ಕಮ್ರಾ ಟ್ವೀಟ್ ವೈರಲ್!
“ಮುನ್ನಾವರ್ ಫಾರೂಕಿಯಂತಹ ಹಾಸ್ಯನಟರು ಅವರು ಮಾಡದ ಹಾಸ್ಯಕ್ಕಾಗಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಶಾಲಾ ವಿದ್ಯಾರ್ಥಿಗಳನ್ನು ದೇಶದ್ರೋಹ ಪ್ರಕರಣದಲ್ಲಿ ವಿಚಾರಣೆಗೊಳಪಡಿಸುವ ಮೂಲಕ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಆಕ್ರಮಣಕ್ಕೆ ಸಾಕ್ಷಿಯಾಗಿದ್ದೇವೆ. ಇಂತಹ ಸಮಯದಲ್ಲಿ ಈ ನ್ಯಾಯಾಲಯವು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸರ್ವೋಚ್ಛ ತತ್ವವೆಂದು ಹೇಳುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದು ಅವರು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಕುನಾಲ್ ಕಮ್ರಾಗೆ ನಿಷೇಧ ವಿರೋಧಿಸಿ, ಇಂಡಿಗೊ ವಿಮಾನದ ಒಳಗೆ ಪ್ರತಿಭಟಿಸಿದ ಜನ!


