ಗಾಜಿಪುರ್ ಗಡಿಯಲ್ಲಿ ರೈತ ಹೋರಾಟ ಮುನ್ನಡೆಸುತ್ತಿರುವ ಭಾರತೀಯ ಕಿಸಾನ್ ಯುನಿಯನ್‌ನ ರೈತ ಮುಖಂಡ ರಾಕೇಶ್ ಟಿಕಾಯತ್‌ಗೆ ಶಿವಸೇನೆ ಬೆಂಬಲ ವ್ಯಕ್ತಪಡಿಸಿದೆ. ಶಿವಸೇನೆ ವಕ್ತಾರ ಸಂಜತ್ ರಾವತ್ ಇಂದು ಅವರನ್ನು ಭೇಟಿಯಾಗಿ ಬೆಂಬಲ ಘೋಷಿಸಿದ್ದಾರೆ.
ಗಾಜಿಪುರ್ ಗಡಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಜಯ್ ರಾವತ್ “ರಾಕೇಶ್ ಟಿಕಾಯತ್ ಮತ್ತು ಹೋರಾಟ ನಿರತ ರೈತರನ್ನು ಭೇಟಿಯಾಗಿ ಬೆಂಬಲ ವ್ಯಕ್ತಪಡಿಸಲು ನನ್ನನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕಳಿಸಿದ್ದಾರೆ. ನಾವು ಟಿಕಾಯತ್ ಸಾಹಿಬ್ ಅವರೊಂದಿಗೆ ಮಾತನಾಡಿದ್ದೇವೆ, ನಮ್ಮ ಸಂದೇಶವನ್ನು ನೀಡಿದ್ದೇವೆ ಮತ್ತು ಒಗ್ಗಟ್ಟನ್ನು ವ್ಯಕ್ತಪಡಿಸಿದ್ದೇವೆ” ಎಂದು ತಿಳಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.
We spoke to Tikait sahib, gave our message & expressed solidarity. Govt should speak to farmers in a proper way. Ego would not help run the country: Shiv Sena MP Sanjay Raut at Ghazipur border pic.twitter.com/8pbPSH39js
— ANI (@ANI) February 2, 2021
ಸರ್ಕಾರ ರೈತರೊಂದಿಗೆ ಸರಿಯಾದ ರೀತಿಯಲ್ಲಿ ಮಾತನಾಡಬೇಕು. ದೇಶವನ್ನು ನಡೆಸಲು ಕೇಂದ್ರದ ಅಹಂ ಸಹಾಯ ಮಾಡುವುದಿಲ್ಲ ಎಂದು ಸಂಜಯ್ ರಾವತ್ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಈ ಸಂದರ್ಭದಲ್ಲಿ ಶಿವಸೇನೆ ಸಂಸದರಾದ ಅರವಿಂದ ಸಾವಂತ್ ಕೂಡ ಹಾಜರಿದ್ದರು.
ಕೃಷಿ ಕಾನೂನುಗಳ ವಿರುದ್ಧ ಹೋರಾಡುತ್ತಿರುವ ರೈತರನ್ನು ದಮನಿಸಲು ಮತ್ತು ಹೆಚ್ಚಿನ ರೈತರು ಪ್ರತಿಭಟನೆಗೆ ಬಂದು ಸೇರದಂತೆ ತಡೆಯಲು ಕೇಂದ್ರ ಸರ್ಕಾರವು ರಸ್ತೆಗಳನ್ನು ಅಗೆದು, ಚೂಪಾದ ಮೊಳೆಗಳನ್ನು ನೆಟ್ಟಿ, ದೊಡ್ಡ ದೊಡ್ಡ ಗೋಡೆಗಳು, ಮುಳ್ಳುತಂತಿಗಳು, ಬ್ಯಾರಿಕೇಡ್‌ಗಳನ್ನು ಹಾಕುತ್ತಿರುವುದಕ್ಕೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಿರೋಧ ವ್ಯಕ್ತಪಡಿಸಿದ್ದಾರೆ. ಸೇತುವೆಗಳನ್ನು ಕಟ್ಟಿ, ಗೋಡೆಗಳನ್ನಲ್ಲ ಎಂದು ಅವರು ಆಗ್ರಹಿಸಿದ್ದಾರೆ.
ಫೆಬ್ರವರಿ 6ರ ಶನಿವಾರ ಮಧ್ಯಾಹ್ನ 12 ರಿಂದ 3 ಗಂಟೆಯ ತನಕ ಅಂದರೆ ಒಟ್ಟು ಮೂರು ಗಂಟೆಗಳ ಕಾಲ ದೇಶಾದ್ಯಂತ ‘ಸಂಚಾರ ಸ್ಥಗಿತ ಚಳವಳಿ’ ನಡೆಸುವಂತೆ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದೆ.
ಇದನ್ನೂ ಓದಿ: ಸೇತುವೆಗಳನ್ನು ಕಟ್ಟಿ, ಗೋಡೆಗಳನ್ನಲ್ಲ: ರೈತ ಹೋರಾಟ ಹಣಿಯುವ ಕೇಂದ್ರದ ಕ್ರಮಕ್ಕೆ ರಾಹುಲ್ ವಿರೋಧ


