6 ದಿನಗಳ ಹಿಂದೆ ಮುಂಬೈನ ಮಕ್ಕಳ ಮೇಲಿನ ಹಿಂಸಾಚಾರದ ಕುರಿತ ವಿಶೇಷ ನ್ಯಾಯಾಲಯವು ಲೈಂಗಿಕ ಹಿಂಸಾಚಾರದ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿದ ತೀರ್ಪೊಂದು ದೇಶಾದ್ಯಂತ ಅಲ್ಲೋಲಕಲ್ಲೋಲ ಸೃಷ್ಟಿಸಿದೆ. ಈ ಪ್ರಕರಣ 2016ರ ಇಸವಿಯದ್ದು. ’ಬಂದು ರಾಗ್ಡೆ ವರ್ಸಸ್ ಸ್ಟೇಟ್ ಆಫ್ ಮಹಾರಾಷ್ಟ್ರ ಪ್ರಕರಣವು ಮುಂಬೈ ಹೈಕೋರ್ಟ್‌ನ ನಾಗಪುರ ವಿಶೇಷ ನ್ಯಾಯಪೀಠದಲ್ಲಿ ಕೆಲವು ದಿನಗಳ ಹಿಂದೆ ವಿಚಾರಣೆಗೆ ಬಂತು. ಆಗ ನ್ಯಾಯಾಧೀಶರ ಸ್ಥಾನದಲ್ಲಿದ್ದ ತಾತ್ಕಾಲಿಕ ಮಹಿಳಾ ನ್ಯಾಯಾಧೀಶೆ ನೀಡಿದ ತೀರ್ಪು ಈಗ ಸಕಾರಣವಾಗಿಯೇ ವಿವಾದಕ್ಕೊಳಗಾಗಿದೆ.
ಪ್ರಕರಣದ ಹಿನ್ನೆಲೆ ಹೀಗಿದೆ. ಈ ಘಟನೆ ನಡೆದಾಗ ಬಾಲಕಿಯ ವಯಸ್ಸು 12 ವರ್ಷ. ಬಾಲಕಿಯು ಸೀಬೆಹಣ್ಣು ಕೊಳ್ಳುವುದಾಗಿ ತಾಯಿಗೆ ತಿಳಿಸಿ ಹೊರಹೋಗಿ ಸಾಕಷ್ಟು ಸಮಯವಾದರೂ ವಾಪಾಸ್ ಬಂದಿಲ್ಲ. ಆತಂಕಕ್ಕೊಳಗಾದ ತಾಯಿ ಹುಡುಕಾಡಲಾರಂಭಿಸಿದಾಗ ನೆರೆಮನೆಯ ಮಹಿಳೆಯೊಬ್ಬರು, ಹತ್ತಿರದ ಮನೆಯ ಪುರುಷನೊಬ್ಬ ಮಗಳನ್ನು ಮನೆಯೊಳಕ್ಕೆ ಕರೆದೊಯ್ಯುವುದನ್ನು ಕಂಡಿದ್ದಾಗಿ ಹೇಳಿದ್ದಾರೆ. ಆಕೆ ನೀಡಿದ ಮಾಹಿತಿಯಂತೆ ಮೊದಲ ಮಹಡಿಯಲ್ಲಿದ್ದ ಆ ಮನೆಯೊಳಕ್ಕೆ ತಾಯಿ ಹೋಗಿದ್ದಾರೆ. ಮನೆಯ ಕೊಠಡಿಯ ಬಾಗಿಲು ಚಿಲಕ ಹಾಕಿದ್ದದ್ದು ಗಮನಕ್ಕೆ ಬಂದಿದೆ. ಸ್ವಲ್ಪ ಗದ್ದಲ ಮಾಡಿ ಬಾಗಿಲು ತೆಗೆಸಿದಾಗ ಆ ಮನೆಯ ವ್ಯಕ್ತಿ ತನ್ನ ಮಗಳನ್ನು ಅಲ್ಲಿ ಕೂಡಿ ಹಾಕಿಕೊಂಡಿರುವುದು ತಾಯಿಯ ಗಮನಕ್ಕೆ ಬಂದಿದೆ. ಮಗು ಅಳುತ್ತಿದ್ದು, ಆಘಾತಕ್ಕೊಳಗಾಗಿತ್ತು. ಅಲ್ಲಿಂದ ಹೊರಬಂದ ನಂತರ ಮಗು ಹೇಳಿದಂತೆ ತಿಳಿದುಬಂದ ವಿಚಾರವೇನೆಂದರೆ, ಆ ವ್ಯಕ್ತಿ ಸೀಬೆ ಹಣ್ಣು ಕೊಡುವುದಾಗಿ ನಂಬಿಸಿ ಮಗುವನ್ನು ಮನೆಯೊಳಕ್ಕೆ ಕರೆದೊಯ್ದಿದ್ದಾನೆ. ನಂತರ ಮಗುವಿನೊಂದಿಗೆ ದುರ್ವರ್ತನೆ ತೋರಿದ್ದಾನೆ. ಮಗುವಿನ ಎದೆಯನ್ನು ಒತ್ತಿದ್ದಾನೆ ಮತ್ತು ಸಲ್ವಾರ್ ಬಿಚ್ಚಲು ಪ್ರಯತ್ನಿಸಿದ್ದಾನೆ. ಈ ಪ್ರಕರಣದಲ್ಲಿ ಎಫ್‌ಐಆರ್ ದಾಖಲಾದಾಗ ಐಪಿಸಿ 354 (ಮಹಿಳೆಯ ಘನತೆಗೆ ಉದ್ದೇಶಪೂರ್ವಕವಾಗಿ ಕುಂದುಂಟುಮಾಡುವ ಉದ್ದೇಶದಿಂದ ತೋರಿದ ದುರ್ವರ್ತನೆ), 363 (ಅಪಹರಣ), 342 (ಅನಧಿಕೃತ ಬಂಧನ) ಕಲಂಗಳ ಕೆಳಗೆ ಹಾಗೆಯೇ 2012ರ ಪೋಕ್ಸೋ ಕಾಯ್ದೆಯ ಕಲಂ8 ರ (ಲೈಂಗಿಕ ಉದ್ದೇಶಗಳಿಗಾಗಿ ಮಗುವಿನ ಎದೆಯನ್ನು ಮುಟ್ಟಿದ ಪ್ರಕರಣ)ಪ್ರಕಾರ ಆರೋಪಿಯ ಮೇಲೆ ಮೊಕದ್ದಮೆ ದಾಖಲಾಯಿತು.
ಐಪಿಸಿ 354 ಮತ್ತು ಐಪಿಸಿ 342ರ ಕೆಳಗೆ ಈ ಅಪರಾಧಗಳಿಗೆ ಕನಿಷ್ಟ ಪ್ರಮಾಣದ ಶಿಕ್ಷೆ 1 ವರ್ಷ ಎಂದು ಕಾಯ್ದೆ ಹೇಳುತ್ತದೆ. 363ರಲ್ಲಿ ನಿರ್ದಿಷ್ಟ ಕನಿಷ್ಟ ಶಿಕ್ಷೆಯನ್ನು ಉಲ್ಲೇಖಿಸಲಾಗಿರುವುದಿಲ್ಲ. ಆದರೆ, ಪೋಕ್ಸೋನ ಕಲಂ 7ರಲ್ಲಿ ದಾಖಲಿಸಲಾಗಿರುವ ಅಪರಾಧ ಮತ್ತು ಅದಕ್ಕೆ ಕಲಂ 8ರಲ್ಲಿ ವಿವರಿಸಲಾಗಿರುವ ಶಿಕ್ಷೆಯ ಪ್ರಕಾರ ಈ ಅಪರಾಧಕ್ಕೆ ಕನಿಷ್ಟ ಶಿಕ್ಷೆಯು 3 ವರ್ಷಗಳಾಗಿರುತ್ತದೆ.
ಈ ಪ್ರಕರಣವು ಕೆಳಹಂತದ ಸೆಶನ್ಸ್ ಕೋರ್ಟ್ ವಿಚಾರಣೆಯ ನಂತರ ಹೈಕೋರ್ಟ್‌ನ ವಿಶೇಷ ನ್ಯಾಯಪೀಠಕ್ಕೆ ಬಂದಾಗ ಈ ಮೇಲೆ ಉಲ್ಲೇಖಿಸಲಾದ ತೀರ್ಪು ಬಂದಿದೆ. ಸೆಶನ್ಸ್ ನ್ಯಾಯಾಲಯವು ಈ ಪ್ರಕರಣವನ್ನು ಇತರ ಐಪಿಸಿ ಸೆಕ್ಷನ್‌ಗಳ ಜೊತೆಗೆ ಪೋಕ್ಸೋ ಅಡಿಯಲ್ಲೂ ಶಿಕ್ಷಾರ್ಹ ಎಂದು ಪರಿಗಣಿಸಿ 3 ವರ್ಷಗಳ ಶಿಕ್ಷೆಯ ತೀರ್ಪು ನೀಡಿತ್ತು. ಇದನ್ನು ತಿರುವು ಮುರುವು ಮಾಡಿದ ಮುಂಬೈ ಹೈಕೋರ್ಟ್‌ನ ವಿಶೇಷ ನ್ಯಾಯಪೀಠವು ಪೋಕ್ಸೋ ಅಡಿಯಲ್ಲಿ ಆರೋಪಿಯನ್ನು ದೋಷಮುಕ್ತಗೊಳಿಸಿದೆ. ಉಳಿದ ಮೂರರಲ್ಲಿ ಎರಡು ಸೆಕ್ಷನ್‌ಗಳಲ್ಲಿ ಹೇಳಲಾದ ಕನಿಷ್ಟ ಪ್ರಮಾಣದ ಶಿಕ್ಷೆಯನ್ನು ಮಾತ್ರ (1 ವರ್ಷ) ನೀಡಿ ತೀರ್ಪು ನೀಡಿದೆ.
ಈ ತೀರ್ಪಿನಲ್ಲಿ ಮುಖ್ಯವಾಗಿ ನಾವು ಗಮನಿಸಬೇಕಾದ ಮೂರು ವಿಚಾರಗಳಿವೆ.
ಮೊದಲನೆಯದ್ದಾಗಿ, ಈ ಪ್ರಕರಣದಲ್ಲಿ ಪೋಕ್ಸೋ ಹೊರತುಪಡಿಸಿ ಉಳಿದ ಮೂರು ಸೆಕ್ಷನ್‌ಗಳ ಅಡಿಯಲ್ಲಿ (ಮಹಿಳೆಯ ಘನತೆಗೆ ಕುಂದುಂಟುಮಾಡುವುದು, ಅಕ್ರಮ ಬಂಧನ ಮತ್ತು ಅಪಹರಣ) ನೀಡಬಹುದಾದ ಶಿಕ್ಷೆಯಲ್ಲೂ ಕನಿಷ್ಟ ಪ್ರಮಾಣವನ್ನು ಮಾತ್ರ ಪರಿಗಣಿಸಲಾಗಿದೆ. ಎರಡನೆಯದ್ದಾಗಿ ಆರೋಪಿಯನ್ನು ಪೋಕ್ಸೋ ಕಾಯ್ದೆಯ ಕಲಂ 8ರಿಂದ ದೋಷಮುಕ್ತನೆಂದು ಬಿಡುಗಡೆಗೊಳಿಸಲಾಗಿದೆ.
ಇವೆಲ್ಲಕ್ಕಿಂತ ಮುಖ್ಯವಾಗಿ ಹೀಗೆ ಬಿಡುಗಡೆ ಮಾಡುವುದಕ್ಕೆ ನೀಡಿರುವ ಕಾರಣ ಬಹಳ ಆಘಾತಕಾರಿಯಾಗಿದೆ. ತೀರ್ಪು ಈ ಬಗ್ಗೆ ಹೀಗೆ ಹೇಳುತ್ತದೆ:
* ಪ್ರಾಸಿಕ್ಯೂಷನ್‌ನ ವಾದದಲ್ಲಿ ಮಗುವಿನ ಎದೆಯನ್ನು ಒತ್ತುವಾಗ ಮಗುವಿನ ಬಟ್ಟೆಯನ್ನು ಕಳಚಿದ್ದನೋ ಇಲ್ಲವೋ ಎಂಬುದನ್ನು ನಿಖರವಾಗಿ ದಾಖಲಿಸಿಲ್ಲ. ಬಟ್ಟೆ ಕಳಚಿದ್ದ ಎಂದು ಹೇಳಿಲ್ಲದೆ ಇರುವುದರಿಂದ ಬಟ್ಟೆ ಕಳಚದೆ ಮುಟ್ಟಿದ್ದಾನೆಂದು ನಂಬಬೇಕಾಗುತ್ತದೆ. ಅಂದರೆ ಅಲ್ಲಿ ದೇಹ ಸಂಪರ್ಕ ಇಲ್ಲ (ಸ್ಕಿನ್ ಟು ಸ್ಕಿನ್ ಟಚ್). ಹಾಗಿದ್ದರೆ ಪ್ರಕರಣದ ಗಂಭೀರತೆಯೂ ವ್ಯತ್ಯಾಸವಾಗುತ್ತದೆ.
* ಪ್ರಕರಣದ ಗಂಭೀರತೆಯ ಬಗ್ಗೆ ಅನುಮಾನಗಳಿರುವುದರಿಂದ ಪೋಕ್ಸೋ ಕಲಂಗಳು ಹೇಳುವ ಹೆಚ್ಚಿನ ಶಿಕ್ಷೆಯನ್ನು ನೀಡಲು ಬರುವುದಿಲ್ಲ, ಬದಲಿಗೆ ಇತರ ಸೆಕ್ಷನ್‌ಗಳ ಅಡಿಯಲ್ಲಿರುವ ಕನಿಷ್ಟ ಶಿಕ್ಷೆಯೇ ಎರಡನ್ನೂ ಹೋಲಿಸಿದಾಗ ಕಡಿಮೆ ಪ್ರಮಾಣದ್ದಾಗಿರುವುದರಿಂದ ಕನಿಷ್ಟ ಶಿಕ್ಷೆ ನೀಡಬೇಕಾಗುತ್ತದೆ.
* ಭಾರತೀಯ ಅಪರಾಧ ನ್ಯಾಯದಾನ ಪದ್ಧತಿಯು (ಕ್ರಿಮಿನಲ್ ಜ್ಯುರಿಸ್ಪ್ರುಡೆನ್ಸ್) ಪ್ರಕಾರ ಶಿಕ್ಷೆಯ ಪ್ರಮಾಣವು ಅಪರಾಧದ ಪ್ರಮಾಣಕ್ಕೆ ಸೂಕ್ತವಾಗಿರಬೇಕು.

ಹೀಗೆ ಕಾಯ್ದೆಯ ಆಶಯಗಳನ್ನು ಸೀಮಿತವಾದ ಕ್ರಮದಲ್ಲಿ ಓದಿಕೊಳ್ಳುವುದು ಈ ತೀರ್ಪಿಗಷ್ಟೇ ಸೀಮಿತವೇ? ಇದೇನು ಹೊಸ ಸಂಗತಿಯೇ? ಖಂಡಿತ ಅಲ್ಲ. ಹಲವು ಸಂದರ್ಭಗಳಲ್ಲಿ ಹೀಗೆ ಕಾಯ್ದೆಗಳ ಅರ್ಥವನ್ನು ಪರಿಮಿತಿಗೊಳಿಸಿ ಓದಿಕೊಂಡಿರುವುದು ನಡೆದಿದೆ. 2014ರಲ್ಲಿ ಬಿಜೆಂದರ್ ವರ್ಸಸ್ ಸ್ಟೇಟ್ ಆಫ್ ಡೆಲ್ಲಿ ಪ್ರಕರಣದಲ್ಲಿ ಅಪರಾಧಿ 12 ವರ್ಷದ ಬಾಲಕಿಯನ್ನು ಬಚ್ಚಲುಮನೆಗೆ ಬಲಾತ್ಕಾರವಾಗಿ ಎಳೆದುಕೊಂಡು ಹೋಗಿ ಆಕೆಯ ಜೀನ್ಸ್ ಪ್ಯಾಂಟನ್ನು ಹರಿದಿದ್ದ. ಇದನ್ನು ಬಾಲಕಿ ನ್ಯಾಯಾಲಯದಲ್ಲಿ ಖಚಿತಪಡಿಸಿದ್ದಳು. ಆದರೆ ತೀರ್ಪು ನೀಡುವ ಸಂದರ್ಭದಲ್ಲಿ ಬಟ್ಟೆ ಹರಿಯುವುದು ಕಾಯ್ದೆಯ ಪ್ರಕಾರ ಅಪರಾಧದ ಪಟ್ಟಿಯಲ್ಲಿ ಬರುವುದಿಲ್ಲ, ಆದ್ದರಿಂದ ಆರೋಪಿಯನ್ನು ದೋಷಿಯೆಂದು ಹೇಳಲು ಬರುವುದಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದರು.
ಕರ್ನಾಟಕದ್ದೇ ಆದ ಮತ್ತೊಂದು ಪ್ರಕರಣದಲ್ಲಿ (ಮಂಡ್ಯ ಜಿಲ್ಲೆಯ 7 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ) ಅಪರಾಧಿಯು ಮಗುವನ್ನು ಅತ್ಯಾಚಾರ ಮಾಡುವಾಗ ಧರಿಸಿದ್ದ ಬಟ್ಟೆಯ ಮೇಲೆ ಮತ್ತು ಮಗುವಿನ ಬಟ್ಟೆ ಹಾಗೂ ದೇಹದ ಮೇಲೆ ದೊರೆತ ವೀರ್ಯದ ಮಾದರಿ ಒಂದೇ ಎಂದು ಸಾಬೀತಾಗಿದ್ದಾಗಲೂ, ಆ ಬಟ್ಟೆ ಅದೇ ವ್ಯಕ್ತಿಯದ್ದು ಮತ್ತು ಘಟನೆ ನಡೆದ ದಿನ ಆತ ಅದೇ ಬಟ್ಟೆ ಧರಿಸಿದ್ದ ಮತ್ತು ಮಗು ಕಾಣದಾದಾಗ ಜನರು ಹುಡುಕಾಡಲಾರಂಭಿಸಿದ ತಕ್ಷಣ ಬಟ್ಟೆ ಕಳಚಿಟ್ಟ ಎಂಬುದು ನಿರ್ವಿವಾದವಾಗಿ ಸಾಬೀತಾಗಿದ್ದಾಗಲೂ ಮತ್ತು ಎಲ್ಲ ಸಾಂದರ್ಭಿಕ ಸಾಕ್ಷ್ಯಗಳಿದ್ದಾಗಲೂ, ಆರೋಪಿಯ ದೇಹದಿಂದ ವೀರ್ಯದ ಮಾದರಿ ತೆಗೆದು ಹೊಂದಿಸದಿದ್ದ ತನಿಖಾಧಿಕಾರಿಯ ಒಂದು ತಪ್ಪಿನ ಕಾರಣಕ್ಕೆ ಆರೋಪಿಯನ್ನು ಪೂರ್ಣವಾಗಿ ದೋಷಮುಕ್ತನನ್ನಾಗಿ ಮಾಡಿ ಸ್ವತಂತ್ರವಾಗಿ ತಿರುಗಾಡಿಕೊಂಡಿರಲು ಬಿಡಲಾಗಿದೆ.
ವಾಸ್ತವದಲ್ಲಿ ಪೋಕ್ಸೋ ಕಾಯ್ದೆಯ ಕಲಂ 7 ಹೇಳುತ್ತದೆ “ಯಾರೇ ಒಬ್ಬರು ಲೈಂಗಿಕ ಉದ್ದೇಶಗಳಿಗಾಗಿ ಮಗುವಿನ ಮರ್ಮಾಂಗವನ್ನು ಅಥವಾ ಎದೆಯನ್ನು ಮುಟ್ಟುವುದು; ತನ್ನ ಮರ್ಮಾಂಗವನ್ನು ಮತ್ತು ಎದೆಯನ್ನು ಮಗುವಿನಿಂದ ಮುಟ್ಟಿಸುವುದು, ಬೇರಾವುದೇ ವ್ಯಕ್ತಿಯೊಂದಿಗೆ ಹಾಗೆ ನಡೆದುಕೊಳ್ಳುವುದು, ಅಥವಾ ಲೈಂಗಿಕ ಉದ್ದೇಶದಿಂದ ಬೆರಾವುದೇ ಬಗೆಯ ವರ್ತನೆ ತೋರುವುದು ಶಿಕ್ಷಾರ್ಹ ಅಪರಾಧ” (Whoever, with sexual intent touches the vagina, penis, anus or breast of the child or makes the child touch the vagina, penis, anus or breast of such person or any other person or does any other act with sexual intent…) ಎಂದು. ಅಷ್ಟಾದರೂ ಕಾನೂನನ್ನು ಅದರ ಇಡೀ ಆಶಯದೊಂದಿಗೆ ಮತ್ತು ಸಾಮಾಜಿಕ ಸಂದರ್ಭದೊಂದಿಗೆ ಜೊತೆಯಾಗಿಟ್ಟು ಸಮಗ್ರವಾಗಿ ಅರ್ಥಮಾಡಿಕೊಳ್ಳುವುದರಲ್ಲಿರುವ ಕೊರತೆಯಿಂದಾಗಿ ಇಂತಹ ಆಘಾತಕಾರಿ ಸನ್ನಿವೇಶಗಳು ಸೃಷ್ಟಿಯಾಗುತ್ತವೆ.

ಇದೇ ಪ್ರಕರಣದಲ್ಲಿ ನೋಡುವುದಾದರೆ, ಭಾರತದಲ್ಲಿ ಗಂಡಭೇರುಂಡ ಪಕ್ಷಿಯನ್ನು ಸುಲಭವಾಗಿ ನೋಡಿಬಿಡಬಹುದು; ಲೈಂಗಿಕ ಉದ್ದೇಶಗಳಿಂದ ಮೈಮುಟ್ಟಿಸಿಕೊಳ್ಳದ, ದುರ್ವರ್ತನೆಗೆ ಗುರಿಯಾಗದ ಮಹಿಳೆಯರನ್ನು-ಮಕ್ಕಳನ್ನು ಭೇಟಿಯಾಗುವುದು ಕಷ್ಟ (ಭಾರತದಲ್ಲೇ ಏಕೆ ಇಡೀ ಜಗತ್ತಿನಲ್ಲೂ ಇದೇ ಸತ್ಯ). ರಸ್ತೆಗಳಲ್ಲಿ ನಡೆದಾಡುವಾಗ, ಬಸ್ಸುಗಳಲ್ಲಿ ರೈಲುಗಳಲ್ಲಿ ಪ್ರಯಾಣಿಸುವಾಗ, ಶೌಚಾಲಯಗಳನ್ನು ಬಳಸುವಾಗ, ಶಾಲೆ-ಕಾಲೇಜುಗಳಲ್ಲಿ ತರಗತಿಗಳಲ್ಲಿರುವಾಗ, ಮನೆಪಾಠ ಹೇಳಿಸಿಕೊಳ್ಳುವಾಗ, ಮದುವೆ, ಹಬ್ಬ, ಸಂಭ್ರಮಾಚರಣೆಗಳನ್ನು ಮಾಡುವಾಗ, ದೇವಸ್ಥಾನಗಳಿಗೆ-ಪೂಜಾಸ್ಥಾನಗಳಿಗೆ ಹೋದಾಗ, ಸಿನೆಮಾ ಥಿಯೇಟರುಗಳಿಗಾಗಿ ಹೋದಾಗ…….ಎಲ್ಲೆಂದರಲ್ಲಿ, ಅಷ್ಟೇಕೆ ಸುಮ್ಮನೆ ಮನೆಯಲ್ಲಿದ್ದಾಗಲೂ ಯಾರಾದರೊಬ್ಬರಿಂದ ಅಥವಾ ಹಲವರಿಂದ ಕಿರುಕುಳಕ್ಕೆ ಒಳಗಾಗುವುದು ಸತತವಾಗಿ ನಡೆಯುತ್ತಲೇ ಇರುವ ವಿಚಾರ. ಮತ್ತು ಇದೇನು ರಹಸ್ಯವೂ ಅಲ್ಲ. ಇಂತಹ ಹಲವು ಘಟನೆಗಳು ಸಾರ್ವಜನಿಕವಾಗಿ, ಹಾಡುಹಗಲಿನಲ್ಲಿ, ಎಲ್ಲರೂ ನೋಡುತ್ತಿರುವಾಗಲೇ ನಡೆಯುತ್ತವೆ. ಆದರೂ ಎಂದೂ ಇವು ಅಪರಾಧಗಳೆಂದು ಅನಿಸುವುದೇ ಇಲ್ಲ.
ಇಲ್ಲಿ ಬಟ್ಟೆಯ ಮೇಲಿನಿಂದ ಮಗುವಿನ ಅಥವಾ ಮಹಿಳೆಯ ಸೂಕ್ಷ್ಮ ಅಂಗಗಳನ್ನು ಮುಟ್ಟಲಾಯಿತೋ ಅಥವಾ ಬಟ್ಟೆ ತೆಗೆದೋ ಎಂಬುದರಿಂದ ಅದರಿಂದುಂಟಾಗುವ ಆಘಾತ, ಆತಂಕ ಮತ್ತು ತೀವ್ರರೂಪದ ಮಾನಸಿಕ ಕ್ಲೇಷದಲ್ಲಿ ಯಾವ ಬಗೆಯಲ್ಲಿ ವ್ಯತ್ಯಾಸವಾಗಲು ಸಾಧ್ಯ? ಭಾರತೀಯ ನ್ಯಾಯದಾನ ಪದ್ಧತಿಯಲ್ಲಿ ಪ್ರಕರಣದ ತೀವ್ರತೆಯೆಂಬ ಕೂದಲು ಸೀಳುವ ವ್ಯಾಖ್ಯಾನಕ್ಕೆ ಪೂರಕವಾಗಿಯೇ ಶಿಕ್ಷೆಯ ತೀವ್ರತೆ ಇರಬೇಕೆಂಬ ಬಗ್ಗೆ ಅಷ್ಟೆಲ್ಲ ಕಾಳಜಿ ವಹಿಸಿದ ನ್ಯಾಯಾಧೀಶರಿಗೆ ಘಟನೆಯಿಂದ ಮಗುವಿಗುಂಟಾಗಿರಬಹುದಾದ ಘಾಸಿಗೂ ಶಿಕ್ಷೆಯ ಪ್ರಮಾಣಕ್ಕೂ ಹೊಂದಿಕೆಯಿರಬೇಕೆಂಬುದೇಕೆ ಮುಖ್ಯವಾಗುವುದಿಲ್ಲ?
ಇದು ಸಾಮಾಜಿಕ ದೃಷ್ಟಿಕೋನ ಮತ್ತು ದೇಶದಲ್ಲಿ ಈಗಲೂ ಚಾಲ್ತಿಯಲ್ಲಿರುವ ಮೌಲ್ಯವ್ಯವಸ್ಥೆಯ ಸಮಸ್ಯೆ. ಈ ಮೌಲ್ಯವ್ಯವಸ್ಥೆಯ ಮೇಲೆ ನಿರ್ಣಾಯಕವಾದ ಯುದ್ಧ ಸಾರದಿದ್ದರೆ ಸಣ್ಣ-ದೊಡ್ಡ ಇಂತಹ ಅನ್ಯಾಯಗಳನ್ನು ಸಹಿಸಿಕೊಳ್ಳುತ್ತಲೇ ಹೋಗಬೇಕಾಗುತ್ತದೆ. ಅದೃಷ್ಟವಶಾತ್ ಈ ತೀರ್ಪನ್ನು ಅಟಾರ್ನಿ ಜನರಲ್ ಅವರ ಮನವಿಯ ಮೇರೆಗೆ ಸುಪ್ರೀಂ ಕೋರ್ಟ್ ತಡೆಹಿಡಿದಿದೆ (ಇತ್ತೀಚೆಗೆ ಸುಪ್ರೀಂ ಕೋರ್ಟ್ ಮಾಡಿರಬಹುದಾದ ಒಂದೇ ಜನಪರ ಕೆಲಸ ಇದಾಗಿರಬಹುದು). ಅಟಾರ್ನಿ ಜನರಲ್‌ರವರು ಈ ತೀರ್ಪಿನ ದೂರಗಾಮಿ ಪರಿಣಾಮಗಳು ’ಮಕ್ಕಳ ಮೇಲಿನ ಲೈಂಗಿಕ ಹಿಂಸಾಚಾರ ತಡೆ ಕಾಯ್ದೆ’ಯನ್ನು ತಂದ ಉದ್ದೇಶವನ್ನೇ ಸೋಲಿಸಬಹುದೆಂಬ ಗಂಭೀರವಾದ ಆತಂಕವನ್ನು ಸುಪ್ರೀಂ ಕೋರ್ಟಿನಲ್ಲಿ ವ್ಯಕ್ತಪಡಿಸಿರುವುದು ಮತ್ತು ಅದನ್ನು ಮಾನ್ಯ ಮಾಡಿದ ಸುಪ್ರೀಂ ಕೋರ್ಟ್‌ನ ವಿಶೇಷ ಪೀಠವು ಬಾಂಬೆ ಹೈಕೋರ್ಟ್ ತೀರ್ಪಿಗೆ ತಡೆ ನೀಡಿದ್ದು ಮಾತ್ರವಲ್ಲದೆ, ವಿವಾದಾಸ್ಪದ ತೀರ್ಪು ನೀಡಿದ ನ್ಯಾಯಾಧೀಶೆಯನ್ನು ಅಲ್ಲಿಂದ ವರ್ಗ ಮಾಡಿ ಆದೇಶ ಹೊರಡಿಸಿದೆ. ಆದಕಾರಣ, ಈ ಪ್ರಕರಣದಲ್ಲಿ ಮುಂದೆ ಬರಬಹುದಾದ ತೀರ್ಪು ಇನ್ನಷ್ಟು ಸಕಾರಾತ್ಮಕವಾಗಿರುತ್ತದೆಂದು ಆಶಿಸಬಹುದು. ಒಂದು ಸಣ್ಣ ನೆಮ್ಮದಿ, ಒಂದು ನಿಟ್ಟುಸಿರು.
ಆದರೇನು ಮಾಡುವುದು? ಈ ಲೇಖನ ಬರೆದು ಮುಗಿಸುವುದರೊಳಗೆ ಶಿಗ್ಗಾಂವ್ ಮೂಲದ ಅಪ್ರಾಪ್ತ ಬಾಲಕಿಯು ಶೃಂಗೇರಿಯಲ್ಲಿ ಹತ್ತಾರು ಜನರಿಂದ ಅತ್ಯಾಚಾರಕ್ಕೊಳಗಾದ ಭೀಕರವಾದ ಸುದ್ದಿ ಬಂದೆರಗಿದೆ…….. ಅತ್ಯಾಚಾರಿಗಳಲ್ಲಿ ಹೆಚ್ಚಿನವರು ಸಂಘಪರಿವಾರದ ಪ್ರಭಾವಿಗಳ ಬಂಟರಾಗಿದ್ದಾರೆ. ಇದು ಮಾನವ ಸಾಗಾಣಿಕೆಯ ಜಾಲದ ಭಾಗವೂ ಆಗಿರಬಹುದೆಂಬ ಆತಂಕವೂ ಸ್ಥಳೀಯರಿಂದ ವ್ಯಕ್ತವಾಗಿದೆ. ಮನುಷ್ಯಕುಲಕ್ಕೆ ಶಾಪವಾಗಿರುವ ಲೈಂಗಿಕ ಹಿಂಸಾಚಾರಗಳೆಂಬ ಘೋರ ವ್ಯಾಧಿಯಿಂದ ತಪ್ಪಿಸಿಕೊಳ್ಳುವ ಮಾರ್ಗವನ್ನು ’ನಾಗರಿಕ’ವೆನ್ನಿಸಿಕೊಂಡ ಸಮಾಜ ಕಂಡುಕೊಳ್ಳುವುದು ಕಷ್ಟಸಾಧ್ಯವೆನಿಸುತ್ತಿದೆ!!

ಮಲ್ಲಿಗೆ
ಸಾಮಾಜಿಕ ಕಾರ್ಯಕರ್ತೆ, ಕರ್ನಾಟಕ ಜನಶಕ್ತಿಯ ಸಕ್ರಿಯ ಸದಸ್ಯರು.


