Homeಮುಖಪುಟನೇಷನ್ ವಾಂಟ್ಸ್ ಟು ಸೀ ಅರ್ನಬ್ಸ್ ಚಾಟ್ ಅಕೌಂಟ್!

ನೇಷನ್ ವಾಂಟ್ಸ್ ಟು ಸೀ ಅರ್ನಬ್ಸ್ ಚಾಟ್ ಅಕೌಂಟ್!

ಬಹಿರಂಗಗೊಂಡಿರುವ ವಾಟ್ಸಾಪ್ ಚಾಟ್ ಹಾಳೆಗಳು ಕಳೆದೊಂದು ವಾರದಿಂದ ಸೃಷ್ಟಿಸಿರುವ ತಮಾಷೆ, ಮೀಮ್, ಚರ್ಚೆಗಳ ಹೊರತಾಗಿ ಕೆಲವು ಗಂಭೀರ ಸಂಗತಿಗಳನ್ನು ಪರಿಗಣಿಸುವುದು ಮತ್ತು ಒಬ್ಬ ಪ್ರೊಪಗಾಂಡೋದ್ಯಮಿಯನ್ನು ಸರ್ಕಾರ ಬಳಸಿಕೊಂಡ ಬಗೆಯನ್ನು ಗಮನಿಸುವುದು ಬಹಳ ಮುಖ್ಯ. ಈ ಬಗ್ಗೆ ಮಾತನಾಡಿದವರ ಮೇಲೆಲ್ಲ ಮಾನನಷ್ಟ ಮೊಕದ್ದಮೆ ಹೂಡುತ್ತಿರುವ ಅರ್ನಬ್, ಈ ಹೊತ್ತಿನ ತನಕವೂ ಈ ವಾಟ್ಸಾಪ್ ಚಾಟ್‌ಗಳನ್ನು ನಿರಾಕರಿಸಿಲ್ಲ!

- Advertisement -
- Advertisement -

ನಿಮಗೆ ನೆನಪಿದೆಯೊ ಗೊತ್ತಿಲ್ಲ, ಪ್ರಧಾನಮಂತ್ರಿಯಾಗಿ ನರೇಂದ್ರಮೋದಿ ಅವರು ಕೈಗೊಂಡ ಕೆಲವು ಆರಂಭಿಕ ಕ್ರಮಗಳಲ್ಲಿ ಒಂದು ಗಮನಾರ್ಹವಾದ ಕ್ರಮ ಎಂದರೆ ಸೌತ್ ಬ್ಲಾಕ್ ಕಚೇರಿಗಳಿಗೆ ಮಾಧ್ಯಮ ಪ್ರವೇಶವನ್ನು ನಿರ್ಬಂಧಿಸಿದ್ದು. ಸೌತ್ ಬ್ಲಾಕ್ ಎಂದರೆ ಪ್ರಧಾನಮಂತ್ರಿಗಳ ಕಚೇರಿ, ರಕ್ಷಣಾ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಇರುವ ಜಾಗ. ಅದಕ್ಕೆ ಆಗ ಕೊಟ್ಟಿದ್ದ ಕಾರಣ, ದಲ್ಲಾಳಿಗಿರಿಗಳಲ್ಲಿ ತೊಡಗಿದ್ದ “ಲ್ಯುಟೆನ್ಸ್” ಮಾಧ್ಯಮವನ್ನು ಅಧಿಕಾರ ಕೇಂದ್ರದಿಂದ ದೂರ ಇರಿಸುವುದು.

ಇದರ ಪರಿಣಾಮ? ಕಳೆದ ಏಳು ವರ್ಷಗಳಲ್ಲಿ ರಕ್ಷಣಾ ಇಲಾಖೆಯ ವ್ಯವಹಾರಗಳ ಬಗ್ಗೆ ಅಧಿಕೃತ ಪತ್ರಿಕಾಹೇಳಿಕೆ ಬಿಟ್ಟರೆ ಬೇರೆ ಸುದ್ದಿಗಳು ಬಹುತೇಕ ಇಲ್ಲವಾದದ್ದು; ಪ್ರಧಾನಮಂತ್ರಿಗಳ ಸಂದರ್ಶನ ಪೂರ್ವ ನಿರ್ಧರಿತ ವ್ಯಕ್ತಿಗಳಿಗೆ ಸೀಮಿತವಾದದ್ದು. ಮತ್ತು ಮುಂದೆ ನಾರ್ತ್ ಬ್ಲಾಕ್‌ಗೂ ಇದೇ ನಿಯಮ ಅಳವಡಿಸಿದ ಬಳಿಕವಂತೂ ಕೇಂದ್ರ ಸಚಿವ ಸಂಪುಟದ ಪತ್ರಿಕಾಗೋಷ್ಠಿಗಳೆಂದರೆ ಶಾಲೆ ಮಕ್ಕಳ ಮಗ್ಗಿ ಬಾಯಿಪಾಠದ ಮಟ್ಟಕ್ಕೆ ಬಂದು ನಿಂತದ್ದು. ಈ ಅಧಿಕಾರಿಗಳ ಉದ್ಧಟತನ ಈಗ ಯಾವ ಮಟ್ಟಕ್ಕೆ ತಲುಪಿದೆ ಎಂದರೆ, ಇದೇ ಜನವರಿ ಕಡೆಯ ವಾರದಲ್ಲಿ ಹಣಕಾಸು ಸಮೀಕ್ಷೆಯ ಪತ್ರಿಕಾಗೋಷ್ಠಿ ನಡೆದಿತ್ತು. ಒಬ್ಬರು ಪತ್ರಕರ್ತೆ ಎರಡು ಪ್ರಶ್ನೆಗಳನ್ನು ಕೇಳಿದಾಗ, ಮೊದಲ ಪ್ರಶ್ನೆಗೆ ಉತ್ತರ ತಮ್ಮ ಇಲಾಖೆಗೆ ಸಂಬಂಧಿಸಿದ್ದಲ್ಲ ಎಂದು ಹೇಳಿದ ಅಧಿಕಾರಿಗಳು ಆಕೆ ಎರಡನೇ ಪ್ರಶ್ನೆ ಕೇಳಿದಾಗ, ನಿಯಮ ಪ್ರಕಾರ ಒಂದೇ ಪ್ರಶ್ನೆಗೆ ಅವಕಾಶ ಎಂದರು. ಮೊದಲ ಪ್ರಶ್ನೆಗೆ ನೀವು ನಿಮಗೆ ಸಂಬಂಧಿಸಿದ್ದಲ್ಲ ಎಂದಿದ್ದಿರಿ ಎರಡನೆಯ ಪ್ರಶ್ನೆಯನ್ನು ಪರಿಗಣಿಸಿ ಎಂದು ಆಕೆ ಕೋರಿದಾಗ, ನಿಮ್ಮ ಮೊದಲ ಪ್ರಶ್ನೆಯ ಅವಕಾಶವನ್ನು ನೀವು ವ್ಯರ್ಥ ಮಾಡಿಕೊಂಡಿದ್ದೀರಿ ಎಂದು ಗದರಿ, ಬೇರೊಬ್ಬ ಪತ್ರಕರ್ತರಿಗೆ ಪ್ರಶ್ನೆ ಕೇಳಲು ಸೂಚಿಸಿದರು! ಆದರೆ ಅಲ್ಲಿ ನೆರೆದ ಪತ್ರಕರ್ತರಾರಿಗೂ ಏನೂ ಅನ್ನಿಸಲೇ ಇಲ್ಲ!!

ಮಾಧ್ಯಮಗಳ ಒಟ್ಟು ಸ್ಥಿತಿ ಇಲ್ಲಿಗೆ ತಲುಪಿರುವಾಗ, ಕೆಲವೊಮ್ಮೆ ಪವಾಡಗಳು ಸಂಭವಿಸಿದ್ದಿದೆ. ಬಾಲಾಕೋಟ್ ದಾಳಿಯಂತಹ “ಸರ್ಜಿಕಲ್ ಸ್ಟ್ರೈಕ್”ಗಳು ಸಂಭವಿಸಿದಾಗ ಕೆಲವು ನಿರ್ದಿಷ್ಟ ಖಾಸಗಿ ಮಾಧ್ಯಮಗಳಲ್ಲಿ (ಗಮನಿಸಿ ಸರ್ಕಾರಿ ದೂರದರ್ಶನ ಅಲ್ಲ!) ಸೇನಾ ಕಾರ್ಯಾಚರಣೆಯ ಕ್ಲಿಪ್ಪಿಂಗ್‌ಗಳು ಕಾಣಿಸಿಕೊಳ್ಳತೊಡಗಿದವು. ಇದು ಅಭೂತಪೂರ್ವ ವಿದ್ಯಮಾನ. ಸ್ವತಂತ್ರ ಭಾರತದಲ್ಲಿ ಇಲ್ಲಿಯತನಕ ರಕ್ಷಣಾಪಡೆಗಳು ಮಾಧ್ಯಮಗಳ ಮೂಲಕ ತಮ್ಮ ಕಾರ್ಯಾಚರಣೆಗಳನ್ನು “ಪ್ರಚಾರ” ಮಾಡಿದ್ದಿಲ್ಲ. ಈ ರೀತಿಯ “ಸರ್ಜಿಕಲ್ ಸ್ಟ್ರೈಕ್”ಗಳು ಮರುಕಳಿಸತೊಡಗಿದಾಗ ಮತ್ತು ಆ ಎಲ್ಲ ಸಂದರ್ಭಗಳಲ್ಲಿಯೂ ಅವೇ ನಿರ್ದಿಷ್ಟವಾದ ಮಾಧ್ಯಮಗಳಲ್ಲಿ ಮಾತ್ರ ಅಂತಹ ಎಕ್ಸ್‌ಕ್ಲೂಸಿವ್ ಕ್ಲಿಪ್ಪಿಂಗ್‌ಗಳು ಪ್ರಸಾರವಾಗತೊಡಗಿದಾಗ ದೇಶಕ್ಕೆ ಒಂದು ವಿಚಾರ ಸ್ಪಷ್ಟ ಆಗಿದೆ. ಅದೇನೆಂದರೆ: ಸೌತ್ ಬ್ಲಾಕ್‌ಗೆ ಮಾಧ್ಯಮಗಳ ಪ್ರವೇಶವನ್ನು ನಿರ್ಬಂಧಿಸಿದ್ದರ ಹಿಂದಿರುವ ಹುನ್ನಾರ, ಆಯ್ದ #ಡಿಯರ್_ಮೀಡಿಯಾಗಳನ್ನು ಮಾತ್ರ ಒಳಬಿಟ್ಟುಕೊಳ್ಳುವುದು.

ಸುಪ್ರೀಂಕೋರ್ಟ್

ಪ್ರೊಪಗಾಂಡೋದ್ಯಮ

ಹಾಲೀ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ, ಅವರ ಖಾಸಗೀಕರಣ ನೀತಿಯ ಭಾಗವೊ ಎಂಬಂತೆ, ಇಲ್ಲಿಯ ತನಕ ಸರ್ಕಾರಿ ಪ್ರಚಾರ ಮಾಧ್ಯಮವಾಗಿದ್ದ ದೂರದರ್ಶನ ಮಾಡುತ್ತಿದ್ದ ಅಧಿಕೃತ ಸರ್ಕಾರಿ ಸುದ್ದಿಗಳ ಪ್ರಚಾರದ ಕಾರ್ಯವನ್ನು ಖಾಸಗಿ ಟೆಲಿ ಚಾನೆಲ್‌ಗಳು ನಾಮುಂದು ತಾಮುಂದು ಎಂದು ಸ್ಪರ್ಧೆಗೆ ಬಿದ್ದು ಮಾಡಲಾರಂಭಿಸಿವೆ. ರಿಪಬ್ಲಿಕ್ ಟಿ.ವಿ ಚಾನೆಲ್ 2017ರಲ್ಲಿ ಆರಂಭಗೊಂಡ ಬಳಿಕವಂತೂ ಭಾರತೀಯ ಮಾಧ್ಯಮ ಪ್ರಪಂಚದಲ್ಲಿ ಹೊಸದೊಂದು ಸಂಚಲನ ಆರಂಭಗೊಂಡಿದೆ. ಸರ್ಕಾರ ನಡೆಸುವವರ ಪರವಿದ್ದ ಮಾಧ್ಯಮಗಳು ಅದನ್ನು ತೋರಿಸಿಕೊಳ್ಳಲು ಹಿಂಜರಿಕೆ, ಚಡಪಡಿಕೆ ಹೊಂದಿ, “ಬ್ಯಾಲೆನ್ಸ್” ಆಟದಲ್ಲಿರುವಾಗ ರಂಗ ಪ್ರವೇಶ ಮಾಡಿದ ರಿಪಬ್ಲಿಕ್ ಚಾನೆಲ್, ನೇರಾನೇರ ಆಳುವವರ ಸಿದ್ಧಾಂತಗಳ ಪ್ರಚಾರ, ಆಳುವವರ ವಿರೋಧಿಗಳ ಮಟ್ಟಹಾಕುವಿಕೆಯ ಗುತ್ತಿಗೆ ಪಡೆದಂತೆ ವರ್ತಿಸುತ್ತಿದೆ. ಇದು ಯಾವ ಕೋನದಿಂದಲೂ ಪತ್ರಿಕೋದ್ಯಮದಂತೆ ಕಾಣದಿರುವುದರಿಂದ ಮತ್ತು ಅದರ ಏಕಮಾತ್ರ ಮುಖವಾಣಿಯಾಗಿರುವ ಅರ್ನಬ್ ರಂಜನ್ ಗೋಸ್ವಾಮಿ ಯಾವ ಕೋನದಿಂದಲೂ ಪತ್ರಕರ್ತರಾಗಿ ಕಾಣಿಸದಿರುವುದರಿಂದ ಈ ಬ್ರ್ಯಾಂಡಿನ ಚಟುವಟಿಕೆಯನ್ನು “ಪ್ರೊಪಗಾಂಡೋದ್ಯಮ” ಎಂದು ಕರೆಯುವುದೇ ಉಚಿತವೆನ್ನಿಸುತ್ತದೆ.

ಬಿಸ್ಕೂಟು ಲೆಕ್ಕ

ಒಂದು ಖಾಸಗಿ ಚಾನೆಲ್‌ನ ಲೀಡ್ ಆಂಕರ್ ಉದ್ಯೋಗದಲ್ಲಿದ್ದ ವ್ಯಕ್ತಿಯೊಬ್ಬರು, ನಾಲ್ಕೇ ವರ್ಷದಲ್ಲಿ ಏಕಾಏಕಿ ನೂರಾರು ಕೋಟಿಗಳ ಹೂಡಿಕೆ ಮಾಡುವುದು/ಮಾಡಿಸುವುದು ಸಹಜವಾಗಿಯೇ ಎಲ್ಲರ ಹುಬ್ಬೇರಿಸಿದೆ ಮತ್ತು ನಾಲ್ಕು ವರ್ಷಗಳ ಅವಧಿಯೊಳಗೆ, ಬೇರೆಲ್ಲ ವೃತ್ತಿಪರ ಮಾಧ್ಯಮಗಳನ್ನು ರಿಪಬ್ಲಿಕ್ ಬುಲ್ಡೋಜ್ ಮಾಡಿದ ರೀತಿ ಎಲ್ಲವೂ ಊಹಿಸಿದಷ್ಟು ಸರಳವಾಗಿಲ್ಲ ಎಂಬುದನ್ನು ಸಾಬೀತುಮಾಡಿದೆ. ಹಾಗಾಗಿ, ಅರ್ನಬ್ ಬ್ರ್ಯಾಂಡಿನ ಪ್ರೊಪಗಾಂಡೋದ್ಯಮದ ಬಿಸ್ಕೂಟು ಲೆಕ್ಕ ಸುಲಭವಾಗಿ ಸಿಕ್ಕಿಹಾಕಿಕೊಂಡಂತಿದೆ.

ತನ್ನ ಬ್ರ್ಯಾಂಡಿನ ಪತ್ರಿಕೋದ್ಯಮದ ವಿರುದ್ಧ ನೂರಾರು ಪ್ರಕರಣಗಳನ್ನು ದಾಖಲಿಸಲಾಗಿದ್ದರೂ (ಶಶಿ ತರೂರ್‌ರಿಂದ ಆರಂಭಿಸಿ ಇತ್ತೀಚೆಗಿನ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣದ ತನಕ) ಅದನ್ನೆಲ್ಲ ತನ್ನ ಸಾಧನೆಯ ಬ್ಯಾಡ್ಜ್‌ಗಳೆಂದು ಸಿಕ್ಕಿಸಿಕೊಳ್ಳುತ್ತಿದ್ದ ಅರ್ನಬ್ ರಂಜನ್ ಗೋಸ್ವಾಮಿಗೆ ಈಗ ಎರಡು ಸಂಗತಿಗಳಲ್ಲಿ ತಾನು ನುಂಗಿದ ತುತ್ತಿನ ಗಾತ್ರ ಹೆಚ್ಚಾಗಿ, ಅದು ಗಂಟಲಿನಲ್ಲಿ ಸಿಕ್ಕಿಹಾಕಿಕೊಂಡಿರಬಹುದೆಂಬ ಶಂಕೆ ಉಂಟಾಗಿದೆ. ಅಂತಹ ಎರಡು ಪ್ರಕರಣಗಳಿವೆ.

ಏನಿದು Dish Fta ಹಗರಣ?

ಸರ್ಕಾರಿ ದೂರದರ್ಶನದ ಫ್ರೀ ಡಿಷ್‌ನಲ್ಲಿ ಖಾಸಗಿ ಚಾನೆಲ್‌ಗಳಿಗೆ ಅವಕಾಶ ಸಿಗಲು ಅವು ಟೆಂಡರಿಗೆ ನಿಂತು ಸುಮಾರು 8-12 ಕೋಟಿ ಪಾವತಿಸಿ ಸ್ಲಾಟ್ ಖರೀದಿ ಮಾಡಬೇಕಿರುತ್ತದೆ. ಆದರೆ ರಿಪಬ್ಲಿಕ್ ಟಿವಿ ಅದೇನನ್ನೂ ಮಾಡದೆ ನೇರವಾಗಿ ಆ ವ್ಯವಸ್ಥೆಯ ಮೂಲಕ 2.2ಕೋಟಿ ವೀಕ್ಷಕರನ್ನು ತಲುಪಿದ್ದು, ಸರ್ಕಾರದ ಬೊಕ್ಕಸಕ್ಕೆ ಸುಮಾರು 52ಕೋಟಿ ರೂ.ಗಳ ನಷ್ಟವಾಗಿದೆ ಎಂದು ಪತ್ರಿಕಾ ವರದಿಗಳು ಹೇಳುತ್ತಿವೆ. ಈ ಪ್ರಕರಣ ಬೆಳಕಿಗೆ ಬಂದಾಗ ಅದನ್ನು ಲಾಜಿಕಲ್ ಅಂತ್ಯಕ್ಕೆ ತಲುಪದಂತೆ ನೆನೆಗುದಿಗೆ ಹಾಕಲು ಕೇಂದ್ರ ಸರ್ಕಾರದ ಸಚಿವರೊಬ್ಬರು ಸಹಾಯ ಮಾಡಿದ್ದಾರೆ ಎಂಬುದು ಈಗ ಬಹಿರಂಗಗೊಂಡಿರುವ ವಾಟ್ಸಾಪ್ ಸಂದೇಶಗಳ ಕಡತದಿಂದ ಬಹಿರಂಗಗೊಂಡಿದೆ.

TRP ತಿರುಚಿದ ಪ್ರಕರಣ

ಪಾಲ್ಗಾರ್ ಲಿಂಚಿಂಗ್ ಪ್ರಕರಣದ ಬಳಿಕ ತನ್ನ ಜೊತೆ ಜಿದ್ದಾಜಿದ್ದಿಗೆ ಇಳಿದಿರುವ ಅರ್ನಬ್ ಗೋಸ್ವಾಮಿಯ ಬೆನ್ನು ಹತ್ತಿರುವ ಮಹಾರಾಷ್ಟ್ರ ಸರ್ಕಾರ, ಅನ್ವಯ್ ನಾಯಕ್ ಆತ್ಮಹತ್ಯೆಗೆ ಪ್ರಚೋದನೆ ಆಪಾದನೆಯ ಮೇಲೆ ಅರ್ನಬ್‌ರನ್ನು ಬಂಧಿಸಿದ್ದು ಮತ್ತು ಆ ಬಳಿಕ ಅರ್ನಬ್ ಅವರಿಗೆ ಬಹಿರಂಗ ಸವಾಲು ಹಾಕಿ ಹೊತ್ತಿಸಿದ ಕಿಡಿ ಈಗ ಹೊತ್ತಿ ಉರಿಯತೊಡಗಿದಂತಿದೆ.

PC : Twitter

ಟೆಲಿವಿಷನ್ ಚಾನೆಲ್‌ಗಳ ವೀಕ್ಷಕ ಜನಪ್ರಿಯತೆಯನ್ನು ಅಳೆಯುವ ಮತ್ತು ಆ ಮೂಲಕ ಜಾಹೀರಾತು ಆದಾಯ ಗಳಿಸಲು ಸಹಾಯ ಮಾಡುವ ವ್ಯವಸ್ಥೆಯೇ ಟಿಆರ್‌ಪಿ (ಟೆಲಿವಿಶನ್ ರೇಟಿಂಗ್ ಪಾಯಿಂಟ್). ಆಯ್ದ ಕೆಲವು ಮನೆಗಳಲ್ಲಿ ಇರಿಸಲಾಗಿರುವ ವೀಕ್ಷಕ ಮೀಟರ್‌ಗಳ ಮೂಲಕ ಇದನ್ನು ಅಳೆಯಲಾಗುತ್ತದೆ. ಕಳೆದ ಅಕ್ಟೋಬರ್‌ನಲ್ಲಿ, ಇಂತಹ ಮಾಪನಗಳನ್ನು ನಡೆಸುವ ಹಂಸಾ ರಿಸರ್ಚ್ ಗ್ರೂಪ್ ಪೊಲೀಸರಿಗೆ ದೂರು ನೀಡಿ, ಈ ಮೀಟರ್‌ಗಳನ್ನಿರಿಸಿರುವ ಮನೆಗಳವರಿಗೆ ಲಂಚ ನೀಡಿ ಟಿಆರ್‌ಪಿ ತಿರುಚುವ ಕೆಲಸವನ್ನು ಕೆಲವು ಟೆಲಿವಿಷನ್ ಚಾನೆಲ್‌ಗಳು ಮಾಡುತ್ತಿವೆ ಎಂದಿತ್ತು. ಅದರಲ್ಲಿ ರಿಪಬ್ಲಿಕ್ ಟಿವಿಯ ಹೆಸರು ಢಾಳಾಗಿ ಕೇಳಿಬಂದಿತ್ತು.

ಇದಾದ ಬಳಿಕ ತನಿಖೆ ಆರಂಭಗೊಂಡು, ಡಿಸೆಂಬರಿನಲ್ಲಿ ಬ್ರಾಡ್ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (BARC) ಮಾಜಿ ಮುಖ್ಯಸ್ಥ ಪಾರ್ಥೊ ದಾಸ್‌ಗುಪ್ತಾ ಅವರನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದರು. ಅವರ ತನಿಖೆಯ ಸಂದರ್ಭದಲ್ಲಿ ಸಿಕ್ಕಿದ ವಾಟ್ಸಾಪ್ ಚಾಟ್ ಸಂದೇಶಗಳಲ್ಲಿ ಅರ್ನಬ್ ಗೋಸ್ವಾಮಿ ಮತ್ತು ಪಾರ್ಥೋ ದಾಸ್‌ಗುಪ್ತಾ ನಡುವೆ ನಡೆದ ಮಾತುಕತೆಗಳು ಈಗ ಭಾರೀ ಗದ್ದಲ ಸೃಷ್ಟಿಸಿವೆ. ಮೊನ್ನೆ ಮಹಾರಾಷ್ಟ್ರ ಪೊಲೀಸರು ನ್ಯಾಯಾಲಯಕ್ಕೆ ಹೆಚ್ಚುವರಿ ಚಾರ್ಜ್‌ಶೀಟ್ ಸಲ್ಲಿಸಿದಾಗ ಅದರ ಭಾಗವಾಗಿ ಪಾರ್ಥೋ ದಾಸ್‌ಗುಪ್ತಾ ಅವರ ಚಾಟ್‌ಗಳ ಸಾವಿರಾರು ಪುಟಗಳನ್ನು ಸಲ್ಲಿಸಿದ್ದರು. ಅವೀಗ ಮಾಧ್ಯಮಗಳ ಮೂಲಕ ಲೋಕಮುಖಕ್ಕೆ ಕಾಣಿಸಿಕೊಂಡಿವೆ.

ಅರ್ನಬ್ ಪಾತ್ರ

ಬಹಿರಂಗಗೊಂಡಿರುವ ವಾಟ್ಸಾಪ್ ಚಾಟ್ ಹಾಳೆಗಳು ಕಳೆದೊಂದು ವಾರದಿಂದ ಸೃಷ್ಟಿಸಿರುವ ತಮಾಷೆ, ಮೀಮ್, ಚರ್ಚೆಗಳ ಹೊರತಾಗಿ ಕೆಲವು ಗಂಭೀರ ಸಂಗತಿಗಳನ್ನು ಪರಿಗಣಿಸುವುದು ಮತ್ತು ಒಬ್ಬ ಪ್ರೊಪಗಾಂಡೋದ್ಯಮಿಯನ್ನು ಸರ್ಕಾರ ಬಳಸಿಕೊಂಡ ಬಗೆಯನ್ನು ಗಮನಿಸುವುದು ಬಹಳ ಮುಖ್ಯ. ಈ ಬಗ್ಗೆ ಮಾತನಾಡಿದವರ ಮೇಲೆಲ್ಲ ಮಾನನಷ್ಟ ಮೊಕದ್ದಮೆ ಹೂಡುತ್ತಿರುವ ಅರ್ನಬ್, ಈ ಹೊತ್ತಿನ ತನಕವೂ ಈ ವಾಟ್ಸಾಪ್ ಚಾಟ್‌ಗಳನ್ನು ನಿರಾಕರಿಸಿಲ್ಲ!

>> 26-02-2019ರಂದು ನಡೆದ ಬಾಲಾಕೋಟ್ ವೈಮಾನಿಕ ದಾಳಿಯ ಬಗ್ಗೆ ಅದಕ್ಕಿಂತ ಮೂರು ದಿನಗಳ ಮೊದಲೇ ಅರ್ನಬ್ ಗೋಸ್ವಾಮಿ ತನ್ನ ವಾಟ್ಸಾಪ್ ಚಾಟ್‌ನಲ್ಲಿ ಚರ್ಚಿಸಿದ್ದು ಇವುಗಳಲ್ಲಿ ಬಹಳ ಗಮನಾರ್ಹವಾದುದು. ರಕ್ಷಣಾ ಇಲಾಖೆಯ ಉನ್ನತ ಹಂತ ಮತ್ತು ಪ್ರಧಾನಮಂತ್ರಿಗಳನ್ನು ಬಿಟ್ಟರೆ ಬೇರಾರಿಗೂ ಗೊತ್ತಿರದ ಸಂಗತಿಯೊಂದು ಆ ಹಂತದಲ್ಲಿ ಯಕಶ್ಚಿತ್ ವ್ಯಕ್ತಿಯ ಕೈಗೆ ಸಿಗುವುದು “ಸರ್ಕಾರಿ ಗೌಪ್ಯತೆ ಕಾಯಿದೆ(OSA), 1923ರ ಸೆಕ್ಷನ್ 3(1)(ಎ)ರ” ಗಂಭೀರ ಉಲ್ಲಂಘನೆಯೆನ್ನಿಸುತ್ತದೆ. ಆದರೆ, ಈ ವರದಿ ಮಾಡಿದ ಟೈಮ್ಸ್ ನೌ ಚಾನೆಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿರುವ ಅರ್ನಬ್, ತಾನು ವಿಶೇಷವಾದುದೇನನ್ನೂ ಹೇಳಿಲ್ಲ. ಬೇರೆ ಪತ್ರಿಕೆಗಳೂ ದಾಳಿಯ ಸಂಭಾವ್ಯತೆಯನ್ನು ವರದಿ ಮಾಡಿದ್ದವು ಎಂದು ಸಮರ್ಥಿಸಿಕೊಂಡಿದ್ದಾರೆ.

>> ಚಾಟ್ ಉದ್ದಕ್ಕೂ ಹಲವೆಡೆ ಕೇಂದ್ರ ಸರ್ಕಾರದ ಉನ್ನತ ಮತ್ತು ಆಯಕಟ್ಟಿನ ಹುದ್ದೆಗಳಲ್ಲಿರುವವರು ತನ್ನ ಬಗಲಿಗಿದ್ದಾರೆ ಎಂಬುದನ್ನು ಅರ್ನಬ್ ವ್ಯಕ್ತಪಡಿಸುತ್ತಾರೆ. “ಲ್ಯುಟೆನ್ಸ್ ಮಿಡೀಯಾ” ಎಂದು ತಾನೇ ಗೇಲಿಮಾಡಿದ್ದು ಸ್ವತಃ ತನ್ನ ವಿರುದ್ಧವೇ ತಿರುಗಿಬಂದಾಗ, ದೇಶಭಕ್ತಿಯ ಹೆಸರಲ್ಲಿ ಸಮರ್ಥಿಸಿಕೊಳ್ಳುವುದು ಮತ್ತು ಈ ನಾಲ್ಕು ವರ್ಷಗಳಲ್ಲಿ ರಿಪಬ್ಲಿಕ್ ಟಿವಿ ಬ್ರೇಕ್ ಮಾಡಿದ ಸುದ್ದಿಗಳನ್ನು ಗಮನಿಸಿದರೆ, ಸರ್ಕಾರ ಇದನ್ನು ತನ್ನ ವಿರೋಧಿಗಳತ್ತ ಗುಂಡೆಸೆಯುವ ಹೆಗಲಾಗಿ ಬಳಸಿಕೊಂಡದ್ದು ಸ್ಪಷ್ಟವಾಗಿ ಕಾಣಿಸುತ್ತದೆ.

>> 2010ರಲ್ಲಿ ನೀರಾ ರಾಡಿಯಾ ಎಂಬ ಅಧಿಕಾರದ ದಳ್ಳಾಲಿ ಮಹಿಳೆ ನಡೆಸಿದ ಮಾತುಕತೆಗಳನ್ನು ಆದಾಯ ತೆರಿಗೆ ಇಲಾಖೆ ರೆಕಾರ್ಡ್ ಮಾಡಿಕೊಂಡದ್ದನ್ನು ಮಾಧ್ಯಮಗಳು ಹೇಗೆ ವರದಿ ಮಾಡಿದವು ಮತ್ತು ಅಂದಿನ ಸರ್ಕಾರದ ಪತನಕ್ಕೆ ಈ ಸಂಗತಿಯ ಕೊಡುಗೆ ಎಷ್ಟಿತ್ತು ಎಂಬುದನ್ನು ಗಮನಿಸಿದರೆ, ಇಂದು ಬಹುತೇಕ ಮಾಧ್ಯಮಗಳು “ವಾಟ್ಸಾಪ್ ಚಾಟ್‌ಗಳು” ಎಂಡ್-ಟು-ಎಂಡ್ ಎನ್ಕ್ರಿಪ್ಟ್ ಆಗಿರುವಾಗ ಆ ಖಾಸಗಿತನ ಬಹಿರಂಗಗೊಂಡದ್ದು ಹೇಗೆ ಎಂದು ತಲೆಕೆಡಿಸಿಕೊಂಡಿರುವುದು ಕಂಡರೆ, ವಾಟ್ಸಾಪ್ ಬಳಕೆಗೆ ಸಹಿ ಮಾಡುವಾಗ, ಸರ್ಕಾರದ ಸಂಸ್ಥೆಗಳು ತನಿಖೆಗಾಗಿ ಬಯಸಿದಲ್ಲಿ ವಾಟ್ಸಾಪ್ ತನ್ನ ಎನ್ಕ್ರಿಪ್ಟೆಡ್ ಸಂವಹನಗಳನ್ನು ಅವರಿಗೆ ಒದಗಿಸಲು ಬದ್ಧ ಎಂದು ಹೇಳಿರುವುದನ್ನು ಅವರು ಓದಿರುವಂತಿಲ್ಲ.

ಈ ಹಂತದಲ್ಲಿ, ಸ್ವತಃ ಆಳುವ ಬಿಜೆಪಿಯಲ್ಲಿ ವ್ಯಕ್ತವಾಗುತ್ತಿರುವ ಮುಜುಗರ, ಕಿರಿಕಿರಿ ಮತ್ತು ವಿಚಿತ್ರ ಮೌನಗಳನ್ನು ಗಮನಿಸಿದರೆ, ಸ್ವತಃ ಅರ್ನಬ್ ರಂಜನ್ ಗೋಸ್ವಾಮಿಯ ಚಾಟ್ ಅಕೌಂಟ್ ಬಹಿರಂಗಗೊಂಡರೆ, ಹಾಲೀ ಕೇಂದ್ರ ಸರ್ಕಾರದ “ಚಾಟ್‌ಗೇಟ್” ಎಲ್ಲಿಗೆ ತೆರೆದುಕೊಳ್ಳಲಿದೆಯೆಂಬುದನ್ನು ಊಹಿಸುವುದೂ ಕಷ್ಟ. ಆದರೆ ದೇಶದ ಹಿತದೃಷ್ಟಿಯಿಂದ ನೇಷನ್ ವಾಂಟ್ಸ್ ಟು ಸೀ ಅರ್ನಬ್ಸ್ ಚಾಟ್ ಅಕೌಂಟ್!

ಇದೆಲ್ಲದರಿಂದ ಕಂಗೆಟ್ಟಂತೆ ಕಾಣಿಸುತ್ತಿರುವ ಅರ್ನಬ್, ತಾನು ರಾಷ್ಟ್ರಭಕ್ತರ “ನ್ಯಾಷನಲ್ ಕಲೆಕ್ಟಿವ್ ಒಂದನ್ನು ಸ್ಥಾಪಿಸುವ ಮೂಲಕ ತನ್ನ ಸಿದ್ಧಾಂತಗಳ ವಿರೋಧಿಗಳನ್ನು ಮತ್ತು ಷಡ್ಯಂತ್ರಗಾರರನ್ನು ಮಟ್ಟಹಾಕಲು ನೇರ ಕಾರ್ಯಾಚರಣೆಗೆ ಇಳಿಯುವುದಾಗಿ ಪ್ರಕಟಿಸಿದ್ದಾರೆ ಎಂಬುದು ಲೇಟೆಸ್ಟ್ ಬೆಳವಣಿಗೆ.

ರಾಜಾರಾಂ ತಲ್ಲೂರು

ರಾಜಾರಾಂ ತಲ್ಲೂರು
ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರು ಉಡುಪಿಯ ನಿವಾಸಿ. ಉದಯವಾಣಿ ದಿನಪತ್ರಿಕೆಯ ಆರೋಗ್ಯ ಪುರವಣಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಅವರು ನಂತರ ಅದರಿಂದ ಹೊರಬಂದು ಸ್ವಂತ ಉದ್ಯಮ ಆರಂಭಿಸಿದ್ದಾರೆ. ನುಣ್ಣನ್ನ ಬೆಟ್ಟ ಅವರ ಮೊದಲ ಪ್ರಕಟಿತ ಕೃತಿ.


ಇದನ್ನೂ ಓದಿ: ಪ್ರಭುತ್ವದ ಬೇಟೆಯಾಗುತ್ತಿರುವುದೇ ಪತ್ರಿಕೋದ್ಯಮ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...

ಅಮೆರಿಕ ಓದಿಗೆ ಎಲ್ಲಿಂದ ಬಂತು ಹಣ? CJP ಸ್ಥಾಪಕ ಅಭಿಜೀತ್ ದೀಪ್ಕೆ ತಂದೆಯ ಆಸ್ತಿ ತನಿಖೆಗೆ RTI ಕಾರ್ಯಕರ್ತ ಆಗ್ರಹ

ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದೀಪ್ಕೆ ಅವರ ತಂದೆ, ಮಹಾರಾಷ್ಟ್ರ ಸರ್ಕಾರದ ನಿವೃತ್ತ ಉದ್ಯೋಗಿ ಭಗವಾನ್‌ರಾವ್ ದೀಪ್ಕೆ ಅವರ ಆದಾಯ ಮತ್ತು ಅಕ್ರಮ ಆಸ್ತಿ ಗಳಿಕೆ ಕುರಿತು ಸಮಗ್ರ ತನಿಖೆ...

ಕಾವೇರಿ ವಿಚಾರದಲ್ಲಿ ರಾಜಕೀಯ ಪಕ್ಕಕ್ಕಿಟ್ಟು ರಾಜ್ಯದ ಹಿತ ಕಾಯೋಣ: ಸರ್ವಪಕ್ಷ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಕರೆ

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಂಡುಬರುತ್ತಿದ್ದು, ನದಿ ನೀರಿನ ಹಂಚಿಕೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ನಿವಾರಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಾವೇರಿ...

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...