ಡಿ.ಎನ್ ಝಾ ಎಂದೇ ಖ್ಯಾತರಾಗಿದ್ದ ಇತಿಹಾಸಕಾರ ದ್ವಿಜೇಂದ್ರ ನಾರಾಯಣ್ ಝಾ ಗುರುವಾರ ತಮ್ಮ 81 ವಯಸ್ಸಿನಲ್ಲಿ ನಿಧನರಾಗಿದ್ದಾರೆ.
ಅವರು ತಮ್ಮ ಜೀವಮಾನವಿಡೀ ಭಾರತೀಯ ಸಮಾಜದಲ್ಲಿನ ಅವೈಚಾರಿಕತೆ ಮತ್ತು ಅವಿವೇಕದ ಪ್ರಭಾವವನ್ನು ಹೊರಹಾಕಲು ಯತ್ನಿಸಿದರು. ಎಷ್ಟರಮಟ್ಟಿಗೆಂದರೆ, ಅವರ ಪುಸ್ತಕಗಳು, ಅಸಂಖ್ಯಾತ ಸಂಶೋಧನಾ ಪ್ರಬಂಧಗಳು ಮತ್ತು ರಾಜಕೀಯ ವಿವಾದಗಳಲ್ಲಿ ವಿದ್ವತ್ಪೂರ್ಣ ಹಸ್ತಕ್ಷೇಪಗಳು ಶೈಕ್ಷಣಿಕ ಸಮುದಾಯದಿಂದ ಅಪಾರ ಪ್ರಶಂಸೆ ಗಳಿಸಿದವು. ಹಾಗೆಯೇ ಬಲಪಂಥೀಯ ಶಕ್ತಿಗಳ ಕೆಂಗಣ್ಣಿಗೆ ಗುರಿಯಾದವು.
ಅಯೋಧ್ಯೆಯಲ್ಲಿನ ವಿವಾದಿತ ಭೂಮಿಯನ್ನು ಹಿಂದೂ ಪಕ್ಷಗಳಿಗೆ ಹಸ್ತಾಂತರಿಸಿದ 2019 ರ ಸುಪ್ರೀಂ ಕೋರ್ಟ್ ತೀರ್ಪಿನ ಮುಂಚೆಯೇ ದಿ ವೈರ್‌ಗೆ ತಮ್ಮ ಕೊನೆಯ ಸಂದರ್ಶನವೊಂದನ್ನು ನೀಡಿದ್ದರು. ಅದರಲ್ಲಿ, ಅವರು ದೇವಾಲಯವನ್ನು ನೆಲಸಮಗೊಳಿಸಿದ ನಂತರ ಬಾಬರಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂಬ ಅವರ ಪ್ರತಿಪಾದನೆಯನ್ನು ಪುನರುಚ್ಛರಿಸಿದ್ದರು. ಈ ಸಿದ್ಧಾಂತವನ್ನು ಸಂಘ ಪರಿವಾರವು ತನ್ನದೇ ಆದ ರಾಜಕೀಯ ಹಿತಾಸಕ್ತಿಗಳಿಗಾಗಿ ನಿರ್ಮಿಸಿದೆ ಎಂದು ಆರೋಪಿಸಿದ್ದರು.
ಅವರ ಪ್ರಸಿದ್ಧ ಕೃತಿ, ‘ರಾಮ್‌ಜನ್ಮಭೂಮಿ-ಬಾಬರಿ ಮಸೀದಿ: ಎ ಹಿಸ್ಟೋರಿಯನ್ಸ್ ರಿಪೋರ್ಟ್ ಆಫ್ ದಿ ನೇಷನ್’ನಲ್ಲಿ ಅಯೋಧ್ಯೆಯಲ್ಲಿರುವ ವಿವಾದಿತ ಸ್ಥಳದ ಬಗ್ಗೆ ಅವರು ಮೊದಲು ತಮ್ಮ ತೀರ್ಮಾನಗಳನ್ನು ಪ್ರಕಟಿಸಿದರು. ಪ್ರಮುಖ ಇತಿಹಾಸಕಾರರಾದ ಸೂರಜ್ ಭಾನ್, ಅಥರ್ ಅಲಿ ಮತ್ತು ಆರ್.ಎಸ್. ಶರ್ಮಾ ಜೊತೆ ಸೇರಿಕೊಂಡು ಸಂಶೋದನೆ ಮಾಡಿದರು. ಮೇ 1991 ರಲ್ಲಿ, (ಮಸೀದಿಯನ್ನು ಹಿಂದೂ ಬಲಪಂಥೀಯ ಕಾರ್ಯಕರ್ತರು ನೆಲಸಮಗೊಳಿಸುವ ಒಂದು ವರ್ಷದ ಮೊದಲು) ಲಭ್ಯವಿರುವ ಎಲ್ಲಾ ಪಠ್ಯ ಮತ್ತು ಪುರಾತತ್ವ ಪುರಾವೆಗಳನ್ನು ಪರಿಶೀಲಿಸಿದ ನಂತರ ಈ ಸ್ವತಂತ್ರ ಇತಿಹಾಸಕಾರರ ತಂಡವು ವರದಿಯನ್ನು ಬರೆದಿದೆ.
ಅಯೋಧ್ಯೆಯಲ್ಲಿ ಮೊದಲು ಉತ್ಖನನ ಮಾಡಿದ ಎಎಸ್‌ಐನ (ಭಾರತೀಯ ಪುರಾತತ್ವ ಇಲಾಖೆ) ಮಾಜಿ ಮಹಾನಿರ್ದೇಶಕ ಬಿ.ಬಿ ಲಾಲ್ 1990 ರಲ್ಲಿ ಮಸೀದಿಯ ಕೆಳಗಿರುವ ಸಂಭವನೀಯ ದೇವಾಲಯದ ಬಗ್ಗೆ ತನ್ನ ಮೊದಲಿನ ನಿಲುವನ್ನು ಬದಲಾಯಿಸಿದ್ದು ಮಹಾನ್‌ದ್ರೋಹ ಎಂದು ಝಾ ಟೀಕಿಸಿದ್ದರು. ಆ ಮೂಲಕ ಲಾಲ್ ಸಂಘ ಪರಿವಾರಕ್ಕೆ ಸಹಾಯ ಮಾಡಿದರು ಎಂದು ಝಾ ಆಕ್ರೋಶ ವ್ಯಕ್ತಪಡಿಸುತ್ತಲೇ ಬಂದಿದ್ದರು.
ಹಿಂದೂ ಬಲಪಂಥಿಯತೆಯು ದೇಶವನ್ನು ಅನೇಕ ಯುಗಗಳಷ್ಟು ಹಿಂದಕ್ಕೆ ಒಯ್ಯುತ್ತಿದೆ ಎನ್ನುತ್ತಿದ್ದ ಝಾ ಅವರ ಜೀವನವು, ಹಿಂದೂ ಬಲಪಂಥೀಯ ಶಕ್ತಿಗಳ ವಿರುದ್ಧದ ಹೋರಾಟಕ್ಕೆ ಮಾತ್ರ ಸಿಮೀತವಾಗಿರಲಿಲ್ಲ. ಸ್ವತಂತ್ರ ಭಾರತದಲ್ಲಿ ಇತಿಹಾಸ ಬರೆಯುವ ಕಾರ್ಯದಲ್ಲಿ ತಮ್ಮನ್ನು ತಾವು ವಹಿಸಿಕೊಂಡ ಮೊದಲ ಕೆಲವು ತಲೆಮಾರುಗಳ ಭಾರತೀಯ ಇತಿಹಾಸಕಾರರಲ್ಲಿ ಅವರು ಒಬ್ಬರಾಗಿದ್ದರು. ಅನೇಕ ಭಾರತೀಯ ಇತಿಹಾಸಕಾರರು ವಿಭಿನ್ನ ರಾಜಮನೆತನಗಳು, ಯುದ್ಧಗಳ ಸುತ್ತಲಷ್ಟೇ ತಮ್ಮ ಸಂಶೋಧನೆ ಮಾಡುತ್ತಿದ್ದಾಗ ಝಾ ತರಹದ ಹಲವರು ಆ ಇತಿಹಾಸವನ್ನು ಸಮಾಜೋ-ಆರ್ಥಿಕ ದೃಷ್ಟಿಕೋನದಲ್ಲಿ ಕಟ್ಟಿಕೊಟ್ಟರು.
ಭಾರತದಲ್ಲಿ ಇತಿಹಾಸ ಬರವಣಿಗೆಯಲ್ಲಿ ಸಾಮಾಜಿಕ-ಆರ್ಥಿಕ ವಿಶ್ಲೇಷಣೆಗಳಲ್ಲಿ ತೊಡಗಿದವರಲ್ಲಿ ಮೊದಲಿಗರು ಎನಿಸಿರುವ ಆರ್.ಎಸ್. ಶರ್ಮಾ ಅವರ ಮಾರ್ಗದರ್ಶನದಲ್ಲಿ ಝಾ ತರಬೇತಿ ಪಡೆದಿದ್ದರು.
ಝಾ ಅವರ ‘ದಿ ಮಿಥ್ ಆಫ್ ದಿ ಹೋಲಿ ಕೌ’ ಅವರ ಅತ್ಯಂತ ಉಲ್ಲೇಖಿತ ಕೃತಿಗಳಲ್ಲಿ ಒಂದಾಗಿದೆ. ಇದರಲ್ಲಿ ಪ್ರಾಚೀನ ಭಾರತದ ಆಹಾರ ಪದ್ಧತಿಯಲ್ಲಿ ಬ್ರಾಹ್ಮಣರು ಸೇರಿ ಹಿಂದೂಗಳು ಗೋಮಾಂಸ ತಿನ್ನುವ ಸಂಸ್ಕೃತಿಯಿತ್ತು ಎಂಬುದನ್ನು ನಿರ್ಣಾಯಕವಾಗಿ ಸಾಬೀತುಪಡಿಸಿದರು. ಇದನ್ನು ಕನ್ನಡದಲ್ಲಿ ಗೌರಿ ಲಂಕೇಶ್ ಗೋವು ಮಿಥ್ಯೆ ಎಂಬ ಹೆಸರಿನಲ್ಲಿ ಪ್ರಕಟಿಸಿದ್ದರು.
ಇದನ್ನೂ ಓದಿ: ರಿಹಾನ್ನಾಳ ಕೃಪೆ: ಮೋದಿ ಸರ್ಕಾರದ ಅಹಂ, ಭ್ರಮೆ, ಭಯ ಬಯಲಿಗೆ! -ರಾಮಚಂದ್ರ ಗುಹಾ


