ಕಳೆದ 13 ತಿಂಗಳುಗಳಿಂದ ಬಿಡುಗಡೆಯಾಗದಿರುವ ಪಿಹೆಚ್.ಡಿ. ಸಂಶೋಧನಾ ಫೆಲೋಶಿಪ್ ಬಿಡುಗಡೆ ಮಾಡಲು ಕೋರಿ ರಾಜ್ಯದ ವಿವಿಧ ವಿವಿಗಳ ಸಂಶೋಧನಾರ್ಥಿಗಳು ಬೆಂಗಳೂರಿನ ಹಿಂದುಳಿದ ವರ್ಗಗಳ ಇಲಾಖೆಗೆ ಪತ್ರ ಅಭಿಯಾನ ಕೈಗೊಂಡಿದ್ದಾರೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಅನೇಕರಿಗೆ ಮನವಿ ಪತ್ರಗಳನ್ನು ಬರೆದಿದ್ದಾರೆ.
ರಾಜ್ಯದ 11 ವಿವಿಗಳು ಮತ್ತು 4 ಕೃಷಿ ವಿಶ್ವವಿದ್ಯಾಲಯಗಳಲ್ಲಿ ಪಿಹೆಚ್.ಡಿ. ಅಧ್ಯಯನ ಕೈಗೊಂಡಿರುವ 700 ಕ್ಕೂ ಅಧಿಕ OBC (ಇತರೆ ಹಿಂದುಳಿದ ವರ್ಗಗಳ) ವಿದ್ಯಾರ್ಥಿಗಳಿಗೆ ಕಳೆದ 13 ತಿಂಗಳುಗಳಿಂದ ಮಾಸಿಕ ಶಿಷ್ಯವೇತನ ದೊರೆಯದಿರುವುದನ್ನು ಪ್ರತಿಭಟಿಸಿ ಪತ್ರ ಅಭಿಯಾನ ಆರಂಭಿಸಲಾಗಿದೆ.
ಇದನ್ನೂ ಓದಿ: ನಾವು ರೈತರನ್ನು ಬೆಂಬಲಿಸಬೇಕು, ಏಕೆಂದರೆ… – ನಿರ್ದೇಶಕ ಪ. ರಂಜಿತ್ ಟ್ವೀಟ್
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ , ಹಿಂದುಳಿಗ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಇಲಾಖೆಯ ಆಯುಕ್ತರಿಗೆ ಶಿಷ್ಯವೇತನ ಬಿಡುಗಡೆಗೆ ಕೋರಿ ಪ್ರತಿಯೊಬ್ಬರಿಗೂ 200 ಕ್ಕೂ ಅಧಿಕ ಮನವಿ ಪತ್ರಗಳನ್ನು ಗುರುವಾರ ಪೋಸ್ಟ್‌ಮಾಡಿದ್ದಾರೆ.

“ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಪಿಹೆಚ್.ಡಿ. ಅಧ್ಯಯನ ಕೈಗೊಳ್ಳುವ ಬಡ OBC ವಿದ್ಯಾರ್ಥಿಗಳಿಗೆ ಸಹಾಯವಾಗಲೆಂದು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ 2015-16 ನೇ ಸಾಲಿನಿಂದ ಮಾಸಿಕ ರೂ. 5000/- ವ್ಯಾಸಂಗ ವೇತನವನ್ನು (3 ವರ್ಷಗಳ ಅವಧಿಗೆ) ನೀಡಲು ಆರಂಭಿಸಿತ್ತು. 2018 ನೇ ಸಾಲಿನಲ್ಲಿ ಈ ಮೊತ್ತವನ್ನು 10,000/- ರೂಗಳಿಗೆ ಹೆಚ್ಚಿಸಿ ಆದೇಶ ಹೊರಡಿಸಲಾಗಿತ್ತು. ಆದರೆ ವಿದ್ಯಾರ್ಥಿಗಳಿಗೆ 2019 ರ ಡಿಸೆಂಬರ್ ತಿಂಗಳಿನಿಂದ ಶಿಷ್ಯವೇತನ ದೊರೆತಿರುವುದಿಲ್ಲ ಹಾಗೂ 2020-21 ನೇ ಶೈಕ್ಷಣಿಕ ವರ್ಷದಲ್ಲಿ ಶಿಷ್ಯವೇತನಕ್ಕೆ ಅರ್ಜಿಹಾಕಲು ಮತ್ತು ಹಳೇ ವಿದ್ಯಾರ್ಥಿಗಳು ನವೀಕರಣ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿಲ್ಲ. ಹೀಗಾಗಿ ಒಟ್ಟು 13 ತಿಂಗಳಿನಿಂದ ಒಂದು ಲಕ್ಷಕ್ಕೂ ಅಧಿಕ ಶಿಷ್ಯವೇತನವನ್ನೇ ವಿದ್ಯಾರ್ಥಿಗಳಿಗೆ ಒದಗಿಸಿಲ್ಲ. ಆರ್ಥಿಕ ಮುಗ್ಗಟ್ಟಿನಿಂದಾಗಿ ಬಡವರು ಮತ್ತು ಕೃಷಿಕುಟುಂಬದಿಂದ ಬಂದಂತಹ ವಿದ್ಯಾರ್ಥಿಗಳಿಗೆ ಭಾರೀ ತೊಂದರೆಯಾಗುತ್ತಿದೆ” ಎಂದು ಸಂಶೋಧನಾರ್ಥಿಗಳು ಆರೋಪಿಸಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಲಸಿಕೆಯ ತುರ್ತು ಬಳಕೆಗೆ ಸಲ್ಲಿಸಿದ್ದ ಅರ್ಜಿ ಹಿಂಪಡೆಯಲು ನಿರ್ಧಾರ- ಫೈಜರ್ ಫಾರ್ಮಾ
ಫೆಲೋಷಿಪ್ ಹಣವಿಲ್ಲದೆ ಪ್ರತೀ ತಿಂಗಳು ಹಾಸ್ಟೆಲ್‌ನ ಮೆಸ್ ಬಿಲ್, ಕೊಠಡಿ ಬಾಡಿಗೆ, ಅರ್ಧವಾರ್ಷಿಕ ವರದಿಗಳ ಶುಲ್ಕ ಪಾವತಿ, ಸಂಶೋಧನಾ ಸಂಬಂಧ ಕ್ಷೇತ್ರಕಾರ್ಯ ನಡೆಸಲು, ಪ್ರಯೋಗಾಲಯದ ಪರಿಕರಗಳು – ರಾಸಾಯನಿಕಗಳನ್ನು ಕೊಳ್ಳಲು ಪರದಾಡುವಂತಾಗಿದೆ. ಇದು ಒಟ್ಟಾರೆ ಸಂಶೋಧನಾ ಗುಣಮಟ್ಟ ಮತ್ತು ಪ್ರಗತಿ ಮೇಲೆ ಭಾರೀ ಪರಿಣಾಮ ಬೀರುತ್ತಿದೆ ಎಂದು ವಿದ್ಯಾರ್ಥಿಗಳು ಮನವಿ ಪತ್ರಗಳಲ್ಲಿ ತಿಳಿಸಿದ್ದಾರೆ.
ಇಂತಹ ಅನೇಕ ಸಮಸ್ಯೆಗಳಿಂದ 2017, 2018, 2019, 2020 ರ ಬ್ಯಾಚ್‌ನ ವಿದ್ಯಾರ್ಥಿಗಳು ತೀವ್ರವಾಗಿ ತೊಂದರೆಗೀಡಾಗಿದ್ದಾರೆ, ಈ ಸಲುವಾಗಿ ಧಾರವಾಡದ ಕೃಷಿ ಮತ್ತು ಕರ್ನಾಟಕ ವಿಶ್ವವಿದ್ಯಾಲಯ, ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ, ಬಳ್ಳಾರಿಯ ವಿ.ಎಸ್.ಕೆ. ವಿವಿ, ತುಮಕೂರು ಮತ್ತು ದಾವಣಗೆರೆ ವಿವಿಗಳ 200 ಕ್ಕೂ ಅಧಿಕ ವಿದ್ಯಾರ್ಥಿಗಳು ಪತ್ರ ಬರೆದು ತುರ್ತಾಗಿ ಶಿಷ್ಯವೇತನ ಬಿಡುಗಡೆ ಮಾಡಬೇಕೆಂದು ಕೋರಿಕೊಂಡಿದ್ದಾರೆ. ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸದಿದ್ದಲ್ಲಿ ಮುಂದಿನ ಹೋರಾಟವನ್ನು ಬೆಂಗಳೂರಿನಲ್ಲಿ ಕೈಗೊಳ್ಳಲು ಯೋಜಿಸುತ್ತಿರುವುದಾಗಿಯೂ ತಿಳಿಸಿದ್ದಾರೆ.
ಇದನ್ನೂ ಓದಿ: ಮುಂದಿನ ರಿಹಾನ್ನಾ ವಿಡಿಯೋದಲ್ಲಿ ನೀವಿರುತ್ತೀರಿ: ಸ್ವರ, ತಾಪ್ಸಿ ಶ್ಲಾಘಿಸಿದ ಅಭಯ್ ಡಿಯೋಲ್


