ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಕೃಷಿ ಕಾನೂನುಗಳ ವಿರುದ್ಧ ದೆಹಲಿಯ ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಭಾಗವಾಗಿ “ಟ್ರಾಕ್ಟರ್ ಕ್ರಾಂತಿ”ಯಲ್ಲಿ ಭಾಗವಹಿಸಲು ರೈತ ಮುಖಂಡ ರಾಕೇಶ್ ಟಿಕಾಯತ್ ಶನಿವಾರ ಕರೆ ನೀಡಿದ್ದಾರೆ.
ರೈತರು ಪ್ರತಿಭಟನೆ ನಡೆಸುತ್ತಿರುವ ಗಾಜಿಪುರ ಗಡಿಯಲ್ಲಿ ಹೋರಾಟಗಾರರನ್ನು ಉದ್ದೇಶಿಸಿ ಮಾತನಾಡಿದ ಟಿಕಾಯತ್, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ 10 ವರ್ಷಕ್ಕೂ ಹಳೆಯವಾದ ಟ್ರಾಕ್ಟರ್ ಸೇರಿದಂತೆ ಡಿಸೇಲ್ ವಾಹನಗಳನ್ನು ನಿಷೇಧಿಸಿರುವುದನ್ನು ಖಂಡಿಸಿದರು.
ಇದನ್ನೂ ಓದಿ: ’ದೆಹಲಿಯ ರಾಜ ಬಂಧಿಯಾಗಿದ್ದಾರೆ’-ಮೋದಿಯನ್ನು ಉಲ್ಲೇಖಿಸಿ ರೈತ ಮುಖಂಡ ಟಿಕಾಯತ್
“ಇತ್ತೀಚಿನವರೆಗೂ, ಯಾವ ವಾಹನಗಳು 10 ವರ್ಷ ಹಳೆಯದು ಎಂದು ಅವರು ಕೇಳಲಿಲ್ಲ. ಅವರ ಯೋಜನೆಯೇನು? 10 ವರ್ಷಕ್ಕೂ ಹಳೆಯದಾದ ಟ್ರಾಕ್ಟರ್ಗಳನ್ನು ನಿಷೇಧಿಸಿ ಕಾರ್ಪೋರೇಟ್‌ಗಳಿಗೆ ಸಹಾಯ ಮಾಡಲು ಬಯಸುತ್ತಾರೆಯೇ? ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವ ಅಂದೋಲನದಲ್ಲಿ 10 ವರ್ಷಕ್ಕೂ ಹಳೆಯದಾದ ಟ್ರಾಕ್ಟರ್‌ಗಳು ಸಹ ಓಡಾಡಲಿದ್ದು, ಪ್ರತಿಭಟನೆಯು ಮತ್ತಷ್ಟು ತೀವ್ರಗೊಳ್ಳಲಿದೆ” ಎಂದು ಅವರು ಎಚ್ಚರಿಸಿದ್ದಾರೆ.
ವಿವಾದಾತ್ಮಕ ಕಾನೂನುಗಳ ವಿರುದ್ದ ನಡೆಯುತ್ತಿರುವ ರೈತರ ಹೋರಾಟದಲ್ಲಿ ದೇಶಾದ್ಯಂತ ಹೆಚ್ಚು ಹೆಚ್ಚು ರೈತರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ. ಇತ್ತೀಚೆಗೆ 20,000 ಟ್ರಾಕ್ಟರುಗಳು ದೆಹಲಿಯಲ್ಲಿದ್ದವು, ನಮ್ಮ ಮುಂದಿನ ಗುರಿ 40 ಲಕ್ಷ ಟ್ರಾಕ್ಟರ್‌ಗಳು ಎಂದು ಟಿಕಾಯತ್ ಹೇಳಿದ್ದಾರೆ.
“ನಿಮ್ಮ ಟ್ರಾಕ್ಟರುಗಳಲ್ಲಿ ‘ಟ್ರಾಕ್ಟರ್ ಕ್ರಾಂತಿ 2021, ಜನವರಿ 26’ ಎಂದು ಬರೆಯಿರಿ. ನೀವು ಎಲ್ಲಿಗೆ ಹೋದರೂ ನಿಮ್ಮನ್ನು ಗೌರವಿಸಲಾಗುತ್ತದೆ. ನಮ್ಮ ಬಳಿ 40 ಲಕ್ಷ ಟ್ರಾಕ್ಟರುಗಳ ಗುರಿ ಇದೆ” ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಪೊಲೀಸರು ಮುಳ್ಳು ನೆಟ್ಟ ಜಾಗದಲ್ಲಿಯೇ ಹೂವಿನ ಗಿಡ ನೆಟ್ಟ ರೈತನಾಯಕ ರಾಕೇಶ್ ಟಿಕಾಯತ್!


