Homeಮುಖಪುಟಒಂದೊಳ್ಳೆ ಅವಕಾಶ ಕಳೆದುಕೊಂಡ ಒಕ್ಕೂಟ ಬಜೆಟ್ 2021: ಪ್ರೊ. ಅಮಿತ್ ಬಾಸೋಲೆ

ಒಂದೊಳ್ಳೆ ಅವಕಾಶ ಕಳೆದುಕೊಂಡ ಒಕ್ಕೂಟ ಬಜೆಟ್ 2021: ಪ್ರೊ. ಅಮಿತ್ ಬಾಸೋಲೆ

- Advertisement -
- Advertisement -

ಭಾರತೀಯ ಕಾರ್ಮಿಕರ ಮೇಲೆ ಕೊರೊನಾ ಸಾಂಕ್ರಾಮಿಕ ತಂದ ಅತ್ಯಂತ ಸಂಕಷ್ಟಕರ ದಿನಗಳ ನಂತರ ಬಂದ ಈ ಬಜೆಟ್ ಮೇಲೆ ಅನೇಕರಿಗೆ ಅನೇಕ ನಿರೀಕ್ಷೆಗಳಿದ್ದವು. ಈ ಬಜೆಟ್‌ನಿಂದ ಇದ್ದ ಕೆಲವು ನಿರೀಕ್ಷೆಗಳು; ನರೇಗಾ (ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ)ಗೆ ಹೆಚ್ಚಿನ ಬೆಂಬಲವನ್ನು ಮುಂದುವರೆಸುವುದು, ಕನಿಷ್ಠ ಇನ್ನೊಂದು ವರ್ಷದ ತನಕ ಹೆಚ್ಚುವರಿ ಆಹಾರ ಸಬ್ಸಿಡಿಗಳನ್ನು ಮುಂದುವರೆಸುವುದು, ಇನ್ನೊಂದು ಸುತ್ತಿನ ಹಣ ವರ್ಗಾವಣೆ ಹಾಗೂ ಹೊಸ ನಗರಪ್ರದೇಶಗಳಿಗೆ ಅನ್ವಯಿಸುವ ಒಂದು ಉದ್ಯೋಗ ಖಾತ್ರಿ ಯೋಜನೆಯನ್ನು ಪ್ರಾರಂಭಿಸುವ ಸಾಧ್ಯತೆ. ಇವೆಲ್ಲವುಗಳನ್ನು ಅಥವಾ ಇವುಗಳಲ್ಲಿ ಕೆಲವನ್ನಾದರೂ ಮಾಡಿದ್ದರೆ, ಅದರಿಂದ ಎರಡು ಅತ್ಯಂತ ಮಹತ್ವಪೂರ್ಣ ಪರಿಣಾಮಗಳು ಆಗುತ್ತಿದ್ದವು- ಮೊದಲನೆಯದಾಗಿ, ಯಾರೆಲ್ಲ ಹಲವಾರು ತಿಂಗಳುಗಳ ಕಾಲ ಕೆಲಸ ಮತ್ತು ಆದಾಯವನ್ನು ಕಳೆದುಕೊಂಡಿದ್ದಾರೋ, ಅವರಿಗೆ ಪರಿಹಾರ ನೀಡುವಲ್ಲಿ ಇವುಗಳು ನೇರವಾಗಿ ಸಹಕಾರಿಯಾಗುತ್ತಿದ್ದವು ಹಾಗೂ ಎರಡನೆಯದು ಪರೋಕ್ಷವಾದದ್ದು – ಮೇಲಿನ ಎಲ್ಲವನ್ನು ಒಳಗೊಳ್ಳುವ ಒಂದು ರೀತಿಯಲ್ಲಿ, ಇವುಗಳಿಂದ ಬೇಡಿಕೆ ಹೆಚ್ಚಿಸಬಹುದಾಗಿತ್ತು.

ಆದರೆ, ಈ ನಿರೀಕ್ಷೆಗಳು ಹುಸಿಯಾಗಿವೆ. ಈ ಸಾಲಿನ ಬಜೆಟ್, ಬೆಳವಣಿಗೆಯನ್ನು ಪುನರುಜ್ಜೀವನಗೊಳಿಸುವ ಸವಾಲನ್ನು ಒಪ್ಪಿಕೊಂಡಿದೆ ಆದರೆ ಈ ಸಾಂಕ್ರಾಮಿಕದ ಸಮಯದಲ್ಲಿ ಹೆಚ್ಚಿದ ಅಸಮಾನತೆ ಮತ್ತು ಕ್ಷೀಣಿಸುತ್ತಿರುವ ಕಲ್ಯಾಣ ಪರಿಹಾರವನ್ನು ಉದ್ದೇಶಿಸಲು ವಿಫಲವಾಗಿದೆ. ಅನೇಕ ಸಮೀಕ್ಷೆಗಳು ಸೂಚಿಸಿದಂತೆ, ಲಾಕ್‌ಡೌನ್ ಸಮಯದಲ್ಲಿ ಅಗತ್ಯ ಉದ್ಯೋಗ ಭದ್ರತೆ ಇಲ್ಲದ ಅಸಂಘಟಿಕ ವಲಯದ ಕಾರ್ಮಿಕರು ಮತ್ತು ವೇತನ ಪಡೆಯುತ್ತಿದ್ದ ನೌಕರರು ಉದ್ಯೋಗ ಕಳೆದುಕೊಂಡಿದ್ದರು. ಹಾಗೂ ಇವೇ ವರದಿಗಳ ಪ್ರಕಾರ ಕಳೆದ ನವೆಂಬರ್ 2020ರ ತನಕ ಇದರಲ್ಲಿ ಹೆಚ್ಚಿನವರು ಇನ್ನೂ ಚೇತರಿಸಿಕೊಂಡಿಲ್ಲ. ರಾಷ್ಟ್ರೀಯ ಪ್ರಾತಿನಿಧ್ಯ ಹೊಂದಿದ ಸಿಎಮ್‌ಐಇಯ (ಸೆಂಟರ್ ಫಾರ್ ಮೊನಿಟರಿಂಗ್ ಇಂಡಿಯನ್ ಎಕಾನಮಿ) ಅಂಕಿಅಂಶಗಳೂ ಕೂಡ ಹೇಳುವುದೂ ಇದೆ ಆಗಿದೆ; ಬೃಹತ್ ಸಂಖ್ಯೆಯಲ್ಲಿ ಜೀವನೋಪಾಯದ ನಷ್ಟ ಮತ್ತು ದಿಢೀರನೆ ಹೆಚ್ಚಿದ ಅಸಮಾನತೆ. ಈ ಬಜೆಟ್‌ನಲ್ಲಿ ಈ ಕಾರ್ಮಿಕರಿಗೆ ಮತ್ತು ಅವರ ಕುಟುಂಬಗಳಿಗೆ ಯಾವುದೇ ಪರಿಣಾಮಕಾರಿಯಾದ ಪರಿಹಾರ ಕಾಣುತ್ತಿಲ್ಲ.

ನರೇಗ
PC: PTI

ಈ ಬಿಕ್ಕಟ್ಟಿನಲ್ಲಿ ನರೇಗಾ ಯೋಜನೆಯು ನಿರ್ಣಾಯಕವಾದ ಒಂದು ಸುರಕ್ಷಾ ಜಾಲವಾಗಿತ್ತು ಆದರೆ ಅದಕ್ಕಿರುವ ಹಂಚಿಕೆಯನ್ನು 1.1 ಲಕ್ಷ ಕೋಟಿಯಿಂದ 73 ಸಾವಿರ ಕೋಟಿ ರೂಪಾಯಿಗಳಿಗೆ ಇಳಿಸಲಾಗಿದೆ. ಅದೇ ರೀತಿಯಲ್ಲಿ, ಈ ಸಾಂಕ್ರಾಮಿಕದ ಅವಧಿಯಲ್ಲಿ 42 ಸಾವಿರ ಕೋಟಿ ರೂಪಾಯಿಗಳನ್ನು ವಿತರಿಸಿದ ರಾಷ್ಟ್ರೀಯ ಸಾಮಾಜಿಕ ಸಹಾಯ ಕಾರ್ಯಕ್ರಮಕ್ಕೆ, (National Social Assistance Programme) (ಇದು ಹಿರಿಯ ನಾಗರಿಕರ, ವಿಕಲಚೇತನರ ಮತ್ತು ವಿಧವೆಯರ ಪಿಂಚಣಿ ಒಳಗೊಂಡಿದೆ.), ಹಂಚಿಕೆಯನ್ನು ಈ ಮುಂಚೆ ಇದ್ದ 9 ಸಾವಿರ ಕೋಟಿಗೆ ಮರುಕಳಿಸಲಾಗಿದೆ. ಪಡಿತರ ವ್ಯವಸ್ಥೆಗೆ ಹಂಚಿಕೆಯು 2019-20 ರಲ್ಲಿ 75 ಸಾವಿರ ಕೋಟಿ ಇತ್ತು, ಅದು ಗಣನೀಯವಾಗಿ ಹೆಚ್ಚಳವಾಗಿ ಮರುವರ್ಷ 2 ಲಕ್ಷ ಕೋಟಿ ಆಯಿತು ಹಾಗೂ 20-21ರಲ್ಲಿ 3.4 ಲಕ್ಷ ಕೋಟಿ ತಲುಪಿತು. ಆದರೆ ಇದು, ಪಡಿತರವನ್ನು ವಿಸ್ತರಿಸಿದ್ದರ ಪರಿಣಾಮವಾಗಿ ಆಗಿಲ್ಲ, ಇದು ಆಗಿದ್ದು ಏಕೆಂದರೆ ಸರಕಾರವು ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾಗೆ ಮಾಡುತ್ತಿದ್ದ ಪೇಮೆಂಟ್‌ಅನ್ನು ಕೊನೆಗೂ ಪಾವತಿಸಿದ್ದರಿಂದ. ಮುಂಚಿನಂತೆ ಕಡಿಮೆ ಮೊತ್ತದ ವಿತ್ತೀಯ ಕೊರತೆಯ ಸಂಖ್ಯೆಗಳನ್ನು ಬಿಂಬಿಸಲು ಅದನ್ನು ಉಳಿಸಿಕೊಂಡಿಲ್ಲ. ಇದು ಒಳ್ಳೆಯ ವಿಷಯವೇ ಆದರೆ, ಇದರರ್ಥ ಹೆಚ್ಚುವರಿ ಆಹಾರ ಪರಿಹಾರ ಎಂತಲ್ಲ.

ಒಟ್ಟಾರೆಯಾಗಿ, ಈ ಬಜೆಟ್ ಬಹಿರಂಗಪಡಿಸುವುದೇನೆಂದರೆ, ಕಳೆದ ವರ್ಷ ಕೇಂದ್ರ ಸರಕಾರ ನೀಡಿದ ವಿತ್ತೀಯ ಬೆಂಬಲದ ನಿಜವಾದ ವ್ಯಾಪ್ತಿಯು ಈ ಮುಂಚೆ ಏನು ಬಿಂಬಿಸಿಕೊಂಡಿತ್ತೋ, ಅದಕ್ಕಿಂತಲೂ ತುಂಬಾ ಕಡಿಮೆ ಇದೆ ಹಾಗೂ ನಾವು ಹೋಲಿಸಬಹುದಾದ ಇತರ ರಾಷ್ಟ್ರಗಳಿಗಿಂತಲೂ ತುಂಬಾ ಕಡಿಮೆ ಇದೆ. ವಿತ್ತೀಯ ಕೊರೆತೆ- ಜಿಡಿಪಿಗೆ ಇರುವ ಅನುಪಾತ 9.5%ಗೆ ಜಿಗಿದಿದ್ದರೂ, ಇದನ್ನು ಒಂದು ಸ್ಟಿಮ್ಯುಲಸ್ ಅಥವಾ ಉತ್ತೇಜನದ ಅಂಶ ಎಂದು ಎರಡು ಕಾರಣಗಳಿಂದ ಪರಿಗಣಿಸಬಾರದು; ಒಂದು, ಈ ಹೆಚ್ಚುವರ ಖರ್ಚಿನ ದೊಡ್ಡ ಭಾಗ ವಾಸ್ತವದಲ್ಲಿ ಒಂದು ರೀತಿಯ ಕ್ಲೀನ್ ಅಪ್ ಕಸರತ್ತಾಗಿದೆ. ಅಂದರೆ ಈ ಮುಂಚೆ ಪುಸ್ತಕದ ಹೊರಗೆ ಇಟ್ಟಿದ್ದ ಲೆಕ್ಕಗಳನ್ನು ಅಧಿಕೃತವಾಗಿ ಪುಸ್ತಕದಲ್ಲಿ ತರುವುದರಿಂದ ಆಗಿರುವುದು, ಉದಾಹರಣೆಗೆ ಮೇಲೆ ಹೇಳಿದಂತೆ ಎಫ್‌ಸಿಐಗೆ ಪಾವತಿ ಮಾಡಿದ್ದು.

ಎರಡನೆಯದಾಗಿ, ವಿತ್ತೀಯ ಕೊರತೆಯಲ್ಲಿ ಆದ ಹೆಚ್ಚಳಕ್ಕೆ ಕಾರಣ ಖರ್ಚು ಮಾಡುವಲ್ಲಿ ಆಗುವ ಹೆಚ್ಚಳದ ಜೊತೆಗೆ ಆದಾಯದಲ್ಲಿ (ರೆವೆನ್ಯೂ)ನಲ್ಲಿ ಆದ ಕುಸಿತವೂ ಕಾರಣವಾಗಿವೆ. 2019-20ರಲ್ಲಿ ಇದ್ದ 10.2 ಲಕ್ಷ ಕೋಟಿಯ ವಿತ್ತೀಯ ಕೊರತೆಯು ಹೆಚ್ಚಳವಾಗಿ 2020-21ರಲ್ಲಿ 18.9 ಲಕ್ಷ ಕೋಟಿಯಾಗಿದೆ. ಇದರಲ್ಲಿ 4.6 ಲಕ್ಷ ಕೋಟಿ ಕೊರತೆ, ಆರ್ಥಿಕ ಚಟುವಟಿಕೆಗಳು ನಿಧಾನಗೊಂಡಿದ್ದರಿಂದ ಆದಾಯದಲ್ಲಿ ಆದ ಕೊರತೆಯಿಂದ ಆದದ್ದು ಹಾಗೂ ಇನ್ನೂ 4.1 ಲಕ್ಷ ಕೋಟಿ ಕೊರತೆ ಆಗಿದ್ದು ಬಜೆಟ್ ಅಂದಾಜಿನ ಮೇಲಿನ ಖರ್ಚಿನಲ್ಲಿ ಆದ ಹೆಚ್ಚಳದಿಂದ.

ಹಾಗಾಗಿ, ನಿಜವಾದ ವಿತ್ತೀಯ ಉತ್ತೇಜನ ಅಂಶ, ಅಂದರೆ 2020-21ರ ಬಜೆಟ್‌ಗೆ ಇರುವುದಕ್ಕಿಂತ ಹೆಚ್ಚಿನ ಖರ್ಚು ಕೇವಲ ಜಿಡಿಪಿಯ 2% ರಷ್ಟು ಮಾತ್ರ, ಇದು ಸರಕಾರ ತನ್ನ ಜಾಹಿರಾತಿನಲ್ಲಿ ಹೇಳಿದ 10% ಹೆಡ್‌ಲೈನ್ ಸಂಖ್ಯೆಗಿಂತ ತುಂಬಾ ಕಡಿಮೆಯಾಗಿದೆ. ಇನ್ನು ಮಿಕ್ಕಿದ್ದು, ಮೊದಲೇ ಒಪ್ಪಿಕೊಂಡ ಖರ್ಚುಗಳು (ಉದಾ, ಪಿಎಂ ಕಿಸಾನ್ ಪಾವತಿಗಾಗಿ) ಹಾಗೂ ಎಂಎಸ್‌ಎಂಇಗಳಿಗೆ ತುರ್ತು ಸಾಲದ ಯೋಜನೆಯಂತಹ ವಿತ್ತೀಯ ಕ್ರಮಗಳಿಗಾಗಿ.

ಇದಲ್ಲದೆ, 2020-21ರ ಪರಿಷ್ಕೃತ ಅಂದಾಜನ್ನು ಹೋಲಿಸಿದರೆ 2021-22ರಲ್ಲಿ ಪ್ರಸ್ತಾಪಿಸಿದ ಹೆಚ್ಚುವರಿ ಖರ್ಚು ಕೇವಲ 33 ಸಾವಿರ ಕೋಟಿಯಾಗಿದೆ, ಅಂದರೆ, ಮುಂದಿನ ವರ್ಷಕ್ಕೆ ಪ್ರಸ್ತಾಪಿಸಲಾದ ಖರ್ಚು, ಈ ವರ್ಷದ ಖರ್ಚಿನಷ್ಟೇ ಇದೆ ಎಂದು ಹೇಳಬಹುದು.

ಒಂದು ವೇಳೆ ಇದನ್ನು ನಾವು, ಬಂಡವಾಳ ವೆಚ್ಚ ಅಥವಾ ಮೂಲಸೌಕರ್ಯದಲ್ಲಿ ಸೂಚಿಸಿದ ಖರ್ಚಿನಲ್ಲಿ ದೊಡ್ಡ ಏರಿಕೆಯಾಗಿದ್ದನ್ನು ಸೇರಿಸಿ ನೋಡಿದರೆ, ಈ ಹೆಚ್ಚಳ ಬಂಡವಾಳೇತರ ಯೋಜನೆಗಳಲ್ಲಿ ಆಗಬೇಕಾದ ಖರ್ಚಿನ ಬದಲಿಗೆ ಆಗಿದ್ದು ಎಂಬುದು ತಿಳಿಯುತ್ತದೆ, ಹಾಗೂ ಇದರ ಸರಾಸರಿ ಖರ್ಚು ಹೆಚ್ಚಳವಾಗದೇ, ಅಷ್ಟೇ ಇದೆ ಎಂಬುದೂ ತಿಳಿಯುತ್ತದೆ. ಈ ಬದಲಾವಣೆ ಸಾಮಾನ್ಯ ಸಂದರ್ಭದಲ್ಲಿ ಸ್ವಾಗತಾರ್ಹ ಎನಿಸಬಹುದು. ಏಕೆಂದರೆ, ಇದರರ್ಥ ಸರಕಾರವು ಕೇವಲ ವೇತನ ಪಾವತಿಸಲು ಅಥವಾ ಇತರ ಮರುಕಳಿಸುವ ವೆಚ್ಚಗಳಿಗೆ ಹೂಡಿಕೆ ಮಾಡದೇ ಆರ್ಥಿಕತೆಯಲ್ಲಿ ಹೂಡಿಕೆ ಮಾಡಲಾಗುತ್ತಿದೆ ಎಂದಾಗುತ್ತದೆ. ಆದರೆ, ಈಗ ನಾವಿರುವುದು ಅಸಾಧಾರಣ ಸಮಯದಲ್ಲಿ ಮತ್ತು ಈಗ ತಮ್ಮ ಆದಾಯವನ್ನು ಕಳೆದುಕೊಂಡ ಕುಟುಂಬಗಳಿಗೆ ನಷ್ಟ ಭರ್ತಿ ಮಾಡಲು ಅನೇಕ ಕ್ರಮಗಳು ಅಗತ್ಯವಿದ್ದವು ಹಾಗೂ ಅವರ ಸಾಲದ ಹೊರೆಯನ್ನು ಕಡಿಮೆ ಮಾಡಲೂ ಹೆಚ್ಚಿನದನ್ನು ಮಾಡಬಹುದಾಗಿತ್ತು. ಈ ಬಜೆಟ್ ಜೀವನೋಪಾಯದ ಒಂದು ಬೃಹತ್ ಬಿಕ್ಕಟ್ಟನ್ನು ಉದ್ದೇಶಿಸದೆ ಕೈಬಿಟ್ಟಿದೆ.

ಅಮಿತ್ ಬಾಸೋಲೆ

ಅಮಿತ್ ಬಾಸೋಲೆ
ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ, ಸ್ಕೂಲ್ ಆಫ್ ಆರ್ಟ್ಸ್ ಅಂಡ್ ಸೈನ್ಸಸ್‌ನ ಪ್ರಾಧ್ಯಾಪಕರು. ಬಡತನ, ಅಸಮಾನತೆ, ಅಸಂಘಟಿತ ಕಾರ್ಮಿಕ ವಲಯದ ಬಗ್ಗೆ ವಿಶೇಷ ಅಧ್ಯಯನ ನಡೆಸಿರುವ ಅಮಿತ್ ಅವರು ಈ ವಿಷಯಗಳ ಬಗ್ಗೆ ಹಲವು ವರದಿಗಳನ್ನು ಪ್ರಕಟಿಸಿದ್ದಾರೆ.


ಇದನ್ನೂ ಓದಿ: ಬಿಚ್ಚಿಟ್ಟಿದ್ದಕ್ಕಿಂತ ಮುಚ್ಚಿಟ್ಟಿದ್ದೇ ಹೆಚ್ಚು – ಬಜೆಟ್ ವಿಶ್ಲೇಷಣೆ ಮಾಡಿದ ಸಿದ್ದರಾಮಯ್ಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರತ್ಯೇಕ ರಾಜ್ಯದ ಬೇಡಿಕೆ: ನಾಗಾಲ್ಯಾಂಡ್‌ನ 6 ಜಿಲ್ಲೆಗಳಲ್ಲಿ ಶೂನ್ಯ ಮತದಾನ

0
ನಾಗಾಲ್ಯಾಂಡ್‌ನ ಏಕೈಕ ಲೋಕಸಭಾ ಸ್ಥಾನಕ್ಕೆ ಶುಕ್ರವಾರ ಒಂದೇ ಹಂತದಲ್ಲಿ ಮತದಾನ ನಡೆದಿದೆ. ಆದರೆ, ಈಶಾನ್ಯ ರಾಜ್ಯದ ಆರು ಜಿಲ್ಲೆಗಳಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆ ಮುಂದಿಟ್ಟುಕೊಂಡು ಜನರು ಮತದಾನದಿಂದ ದೂರ ಉಳಿದಿದ್ದಾರೆ ಎಂದು 'ಇಂಡಿಯಾ...