ರೈತ ಹೋರಾಟದ ವಿಷಯದಲ್ಲಿ ಕೇಂದ್ರ ಸರ್ಕಾರವನ್ನು ಬೆಂಬಲಿಸಿ ಟ್ವೀಟ್ ಮಾಡಿದ ಸೆಲೆಬ್ರಿಟಿಗಳ ಒಂದೇ ಥರದ ಟ್ವೀಟ್ ಕುರಿತು ತನಿಖೆ ನಡೆಸುವಂತೆ ಮಹಾರಾಷ್ಟ್ರದ ಗೃಹ ಮಂತ್ರಿ ಅನಿಲ್ ದೇಶ್ಮುಖ್ ಆದೇಶಿಸಿದ್ದಾರೆ.
ಕೇಂದ್ರ ಸರ್ಕಾರದ ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ 74 ದಿನಗಳಿಂದ ರೈತರು ದೆಹಲಿಯ ಗಡಿಗಳಲ್ಲಿ ಹೋರಾಟ ನಡೆಸುತ್ತಿದ್ದಾರೆ. ಆದರೆ ಸರ್ಕಾರ ರೈತರ ಹೋರಾಟ ತಡೆಯಲು ಇಂಟರ್ನೆಟ್ ಕಡಿತ, ರಸ್ತೆಗಳಲ್ಲಿ ಮುಳ್ಳು ನೆಡುವುದು ಮಾಡಿತ್ತು. ಇದನ್ನು ವಿರೋಧಿಸಿ ಅಮೆರಿಕದ ಪಾಪ್ ತಾರೆ ರಿಹಾನ್ನ ಕೇವಲ ಆರು ಪದಗಳಲ್ಲಿ ಟ್ವೀಟ್ ಮಾಡಿದ್ದರು. ಪರಿಸರ ಕಾರ್ಯಕರ್ತೆ ಗ್ರೆಟಾ ಥನ್‌ಬರ್ಗ್ ಕೂಡ ರೈತ ಹೋರಾಟ ಬೆಂಬಲಿಸಿ ಟ್ವೀಟ್ ಮಾಡಿದ್ದರು. ಇದು ಇಡೀ ವಿಶ್ವಾದಾದ್ಯಂತ ವೈರಲ್ ಆಗಿ ಭಾರತ ಸರ್ಕಾರಕ್ಕೆ ಮುಜುಗರ ತಂದಿತ್ತು.
ಆನಂತರ ವಿದೇಶಾಂಗ ಸಚಿವಾಲಯವು ಇದು ಭಾರತದ ಆಂತರಿಕ ವಿಷಯ ವಿದೇಶಿಗರು ತಲೆಹಾಕಬಾರದು ಎಂದು ಹೇಳಿಕೆ ನೀಡಿತ್ತು. ಅಲ್ಲದೆ ‘ಪ್ರೊಪಗಂಡಾ ವಿರುದ್ದ ಭಾರತ’ ಎಂಬ ಹ್ಯಾಷ್‌ಟ್ಯಾಗ್ ನೀಡಿತ್ತು. ನಂತರ ಒಂದೇ ರೀತಿಯ ಹೇಳಿಕೆ ಮತ್ತು ಹ್ಯಾಷ್‌ಟ್ಯಾಗ್ ಬಳಸಿ ಸಚಿನ್, ಲತಾ ಮಂಗೇಶ್ಕರ್, ಅಕ್ಷಯ್ ಕುಮಾರ್, ವಿರಾಟ್ ಕೊಹ್ಲಿ, ಸೈನಾ ನೆಹವಾಲ್, ಅಜಯ್ ದೇವಗನ್ ಸೇರಿ ಹಲವರು ಟ್ವೀಟ್ ಮಾಡಿದ್ದರು.

ಈ ಕುರಿತು ಕಾಂಗ್ರೆಸ್ ಮುಖಂಡ ಸಚಿನ್ ಸಾವಂತ್ “ಈ ಸೆಲೆಬ್ರಿಟಿಗಳು ಈ ರೀತಿ ಒಂದೇ ಥರನಾಗಿ, ಒಂದೇ ಹ್ಯಾಷ್‌ಟ್ಯಾಗ್ ಬಳಸಿ ಟ್ವೀಟ್ ಮಾಡುವಂತೆ ಸರ್ಕಾರ ಅವರ ಮೇಲೆ ಒತ್ತಡ ಹೇರಲಾಗಿತ್ತೆ” ಎಂಬುದರ ಕುರಿತು ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದರು. ಮಹಾರಾಷ್ಟ್ರದ ಗೃಹ ಮಂತ್ರಿ ಅನಿಲ್ ದೇಶ್ಮುಖ್ ಕೊರೊನಾ ಸೋಂಕಿನ ಕಾರಣಕ್ಕಾಗಿ ಕ್ವಾರಂಟೈನ್‌ನಲ್ಲಿದ್ದು ಜೂಮ್ ಮೂಲಕ ನಡೆದ ಮಾತುಕತೆಯಲ್ಲಿ ತನಿಖೆಗೆ ಆದೇಶಿಸಿದ್ದಾರೆ.
ನೀವು ಎತ್ತಿರುವ ಆಕ್ಷೇಪಗಳಿಗೆ ನಮ್ಮ ಗುಪ್ತಚರ ಇಲಾಖೆಯ ಮೂಲಕ ತನಿಖೆ ನಡೆಸುತ್ತೇವೆ ಎಂದು ದೇಶ್ಮುಖ್ ಹೇಳಿದ್ದಾರೆ. ಆ ಟ್ವೀಟ್‌ಗಳಲ್ಲಿ ಯಾವುದೇ ಪದಗಳ ವ್ಯತ್ಯಾಸವಿರಲಿಲ್ಲ. ಎಲ್ಲರ ವಾಕ್ಯಗಳು ಒಂದೇ ರೀತಿ ಇದ್ದವು. ಒಂದೇ ಸಮಯದಲ್ಲಿ ಟ್ವೀಟ್ ಮಾಡಲಾಗಿದೆ. ಇದು ಗಂಭೀರ ವಿಷಯ ಎಂದು ಅವರು ಹೇಳಿದ್ದಾರೆ.
ಸಚಿನ್ ಸಾವಂತ್ ಮಾತನಾಡಿ amicable ಎಂಬ ಪದವನ್ನು ಈ ಎಲ್ಲಾ ಸೆಲೆಬ್ರಿಟಿಗಳು ಸಹ ಬಳಸಿದ್ದಾರೆ. ಬಿಜೆಪಿ ಅವರ ಮೇಲೆ ಈ ರೀತಿ ಮಾಡುವಂತೆ ಒತ್ತಡ ಹೇರಿತ್ತೆ? ಅವರೆಲ್ಲರಿಗೂ ಈಗ ರಕ್ಷಣೆ ನೀಡಬೇಕಾಗಿದೆ ಎಂದು ತಿಳಿಸಿದ್ದಾರೆ.
ರೈತರ ಹೋರಾಟದ ವಿಷಯದಲ್ಲಿ ಸರ್ಕಾರವನ್ನು ಬೆಂಬಲಿಸಿ ಟ್ವೀಟ್ ಮಾಡುವಂತೆ ಕೇಳುವ ಮೂಲಕ ಕೇಂದ್ರ ಸರ್ಕಾರವು ಲತಾ ಮಂಗೇಶ್ಕರ್ ಮತ್ತು ಸಚಿನ್ ತೆಂಡೂಲ್ಕರ್ ಅವರ ಪ್ರತಿಷ್ಠೆಯನ್ನು ಕಸಿದುಕೊಳ್ಳಬಾರದಿತ್ತು ಎಂದು ಮಹಾರಾಷ್ಟ್ರ ನವನಿರ್ಮಾಣ್ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ ಹೇಳಿದ್ದರು. ಇವರೆಲ್ಲರೂ ದೊಡ್ಡ ವ್ಯಕ್ತಿಗಳು. ಆದರೆ ಅವರೀಗ ಕೇಂದ್ರ ಹೇಳಿದಂತೆ ಟ್ವೀಟ್ ಮಾಡಿದ್ದರಿಂದ ಸಾಕಷ್ಟು ಟ್ರೋಲ್‌ಗೊಳಗಾಗುತ್ತಿದ್ದಾರೆ, ಇದಕ್ಕೆ ಕೇಂದ್ರ ಸರ್ಕಾರವೇ ನೇರ ಕಾರಣ ಎಂದು ಅವರು ಶನಿವಾರ ದೂರಿದ್ದರು.
ಭಾನುವಾರ ಮಾತನಾಡಿದ್ದ ಎನ್‌ಸಿಪಿ ನಾಯಕ ಶರದ್ ಪವಾರ್ ಕೂಡ ‘ಮಾತನಾಡುವ ಮುನ್ನ ಅದರ ಪರಿಣಾಮದ ಬಗ್ಗೆ ಎಚ್ಚರಿಕೆ ವಹಿಸುವಂತೆ ಸಚಿನ್‌ಗೆ ಸಲಹೆ ನೀಡುತ್ತೇನೆ’ ಎಂದು ತಿಳಿಸಿದ್ದರು.
ಇದನ್ನೂ ಓದಿ: ಸಚಿನ್, ಲತಾ ಮಂಗೇಶ್ಕರ್ ಟ್ರೋಲ್‌ಗೊಳಗಾಗಲು ಕೇಂದ್ರ ಸರ್ಕಾರವೇ ಕಾರಣ: ರಾಜ್ ಠಾಕ್ರೆ


