ಕಳೆದ ಎರಡು ವಾರಗಳಿಂದ ದೇಶಿ ಕ್ರಿಕೆಟ್‌ನಲ್ಲಿ ಅಕ್ಷರಶಃ ಮಿಂಚು ಹರಿಸಿದ್ದ ಸೈಯದ್ ಮುಷ್ತಾಕ್ ಅಲಿ ಕ್ರಿಕೆಟ್ ಟೂರ್ನಿ ಕೊನೆಗೂ ಅಂತ್ಯವಾಗಿದ್ದು, ಟೂರ್ನಿಯ ಫೇವರಿಟ್ ತಂಡಗಳಲ್ಲಿ ಒಂದಾಗಿದ್ದ ದಿನೇಶ್ ಕಾರ್ತಿಕ್ ನೇತೃತ್ವದ ತಮಿಳುನಾಡು ತಂಡ ಎರಡನೇ ಬಾರಿಗೆ ಭಾರತೀಯ ಕ್ರಿಕೆಟ್‌ನ ಪ್ರತಿಷ್ಠಿತ ಕಪ್‌ಗೆ ಮುತ್ತಿಕ್ಕಿದೆ. ಈ ಟೂರ್ನಿ ಆರಂಭವಾದದ್ದೇ 2006-07ರ ಸಾಲಿನಲ್ಲಿ. ಚೊಚ್ಚಲ ಟೂರ್ನಿಯನ್ನು ತಮಿಳುನಾಡು ತಂಡ ಇದೇ ದಿನೇಶ್ ಕಾರ್ತಿಕ್ ಅವರ ನಾಯಕತ್ವದಲ್ಲಿ ಗೆದ್ದಿತ್ತು. ಈಗಲೂ ಸಹ ಮತ್ತೆ ಅವರದ್ದೇ ನಾಯಕತ್ವದಲ್ಲಿ ತಮಿಳುನಾಡು ತಂಡ ಎರಡನೇ ಭಾರಿ ಟ್ರೋಫಿಯನ್ನು ಗೆದ್ದುಕೊಂಡಿದೆ ಎಂಬುದು ಉಲ್ಲೇಖಾರ್ಹ.

ಹಾಗೆ ನೋಡಿದರೆ ಈ ವರ್ಷದ ಸೈಯದ್ ಮುಷ್ತಾಕ್ ಅಲಿ ಟೂರ್ನಿಯನ್ನು ಕರ್ನಾಟಕ ಗೆಲ್ಲಲಿದೆ ಎಂಬ ನಿರೀಕ್ಷೆ ಭಾರಿ ಮಟ್ಟದಲ್ಲಿತ್ತು. ಟೂರ್ನಿ ಆರಂಭಕ್ಕೂ ಮುನ್ನವೇ ಗೆಲ್ಲುವ ಫೇವರಿಟ್ ತಂಡಗಳ ಪಟ್ಟಿಯಲ್ಲಿ ಕರ್ನಾಟಕ ಅಗ್ರ ಸ್ಥಾನದಲ್ಲಿತ್ತು. ಏಕೆಂದರೆ, ಕರ್ನಾಟಕ 2018-19 ಮತ್ತು 2019-20ರ ಸಾಲಿನಲ್ಲಿ ಸತತ ಎರಡು ಬಾರಿ ಈ ಕಪ್ ಗೆದ್ದಿತ್ತು. ಈ ಮೂಲಕ ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಸತತ ಎರಡು ಬಾರಿ ಕಪ್ ಜಯಿಸಿದ ತಂಡ ಎಂಬ ಅಪರೂಪದ ಶ್ರೇಯಕ್ಕೆ ಪಾತ್ರವಾಗಿತ್ತು. ಅದಕ್ಕೆ ತಕ್ಕಂತೆ ನಾಯಕ ಕರುಣ್ ನಾಯರ್ ನೇತೃತ್ವದಲ್ಲಿ ಬಲಿಷ್ಠವಾದ ತಂಡವನ್ನೇ ಆಯ್ಕೆ ಮಾಡಲಾಗಿತ್ತು.

ಇತ್ತೀಚೆಗೆ ಐಪಿಎಲ್‌ನಲ್ಲಿ ಸದ್ದು ಮಾಡಿದ್ದ ದೇವದತ್ ಪಡಿಕ್ಕಲ್, ಅನುಭವಿ ಆಟಗಾರ ಅನಿರುದ್ಧ ಜೋಶಿ ಜೊತೆಗೆ ನಾಯಕ ಕರುಣ್ ನಾಯರ್ ಬ್ಯಾಟಿಂಗ್ ಬಲ ತಂಡಕ್ಕಿದ್ದರೆ, ಅಭಿಮನ್ಯು ಮಿಥುನ್, ಮ್ಯಾಜಿಕ್ ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಸೇರಿದಂತೆ ಅನುಭವಿ ಬೌಲಿಂಗ್ ಪಡೆಯ ಬಲವೂ ಇತ್ತು. ಆದರೂ, ಕರ್ನಾಟಕ ಪಂಜಾಬ್ ವಿರುದ್ಧ ಕ್ವಾರ್ಟರ್ ಫೈನಲ್‌ನಲ್ಲಿ ದಯನೀಯವಾಗಿ ಸೋಲನುಭವಿಸಿ ಕೂಟದಿಂದ ಹೊರ ಬಿದ್ದಿತ್ತು.

ಕರ್ನಾಟಕ ಎಡವಿದ್ದೆಲ್ಲಿ?

ಈ ಋತುವಿನ ಸೈಯದ್ ಮುಷ್ತಾಕ್ ಅಲಿ ಟೂರ್ನಿಯನ್ನು ಕರ್ನಾಟಕ ತಂಡ ಉತ್ತಮವಾಗಿಯೇ ಆರಂಭಿಸಿತ್ತು. ಎಲೈಟ್ ’ಎ’ ಗ್ರೂಪ್‌ನಲ್ಲಿ ಪಂಜಾಬ್ ತಂಡ ಜೊತೆಗೆ ಸ್ಥಾನ ಪಡೆದಿದ್ದ ಕರ್ನಾಟಕ ತಾನು ಆಡಿದ 5 ಪಂದ್ಯಗಳಲ್ಲಿ ಪೈಕಿ 4ರಲ್ಲಿ ಅದ್ಭುತ ಗೆಲುವು ಸಾಧಿಸುವ ಮೂಲಕ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿತ್ತು. ಗ್ರೂಪ್ ಹಂತದಲ್ಲೇ ಕರ್ನಾಟಕ ಪಂಜಾಬ್ ಎದುರು ಸೋತಿತ್ತು. ಆದರೂ ಪಾಠ ಕಲಿಯಲಿಲ್ಲ.

ಸಾಮಾನ್ಯವಾಗಿ ಎಲ್ಲಾ ತಂಡಗಳ ಎದುರು ಉತ್ತಮವಾಗಿಯೇ ಬ್ಯಾಟಿಂಗ್ ಪ್ರದರ್ಶಿಸಿದ್ದ ಕರ್ನಾಟಕದ ಅನುಭವಿ ಬ್ಯಾಟಿಂಗ್ ಪಡೆ ಪಂಜಾಬ್ ಎದುರು ಮಾತ್ರ ಎರಡೂ ಪಂದ್ಯದಲ್ಲೂ ಮುಗ್ಗರಿಸಿತ್ತು. ಐಪಿಎಲ್ ಸ್ಟಾರ್ ಬೌಲರ್‌ಗಳಾದ ಸಂದೀಪ್ ಶರ್ಮ, ಹರ್ಷದೀಪ್ ಸಿಂಗ್, ಸಿದ್ದಾರ್ಥ್ ಕೌಲ್ ಹಾಗೂ ಮಾಯಾಂಕ್ ಮಾರ್ಕಂಡೆ ಪಂಜಾಬ್ ತಂಡದ ಬೌಲಿಂಗ್ ಬಲವಾಗಿ ಮುನ್ನುಗ್ಗಿದ್ದರು.

ಈ ನಾಲ್ವರೂ ಆಟಗಾರರು ತಮ್ಮ ಸಾಮರ್ಥ್ಯವೇನು ಎಂಬುದನ್ನು ಐಪಿಎಲ್‌ನಲ್ಲಿ ಈಗಾಗಲೇ ಸಾಬೀತುಪಡಿಸಿದ್ದಾರೆ. ಅದರಲ್ಲೂ ಸಂದೀಪ್ ಶರ್ಮಾ ಮತ್ತು ಹರ್ಷದೀಪ್ ಸಿಂಗ್ ತೀರಾ ಎಕಾನಮಿ ಬೌಲರ್‌ಗಳು. ಇವರ ಬೌಲಿಂಗ್‌ನಲ್ಲಿ ರನ್ ಗಳಿಸುವುದು ಅಷ್ಟು ಸುಲಭವಲ್ಲ. ಈ ಬೌಲರ್‌ಗಳು ಕರ್ನಾಟಕದ ಬ್ಯಾಟ್ಸ್‌ಮನ್‌ಗಳಿಗೆ ಕಬ್ಬಿಣದ ಕಡಲೆಯಾಗಲಿದ್ದಾರೆ ಎಂಬ ವಿಚಾರ ಕರುಣ್ ನಾಯರ್ ಪಡೆಗೆ ತಿಳಿಯದ ವಿಚಾರ ಏನಲ್ಲ.

PC: InsideSport

ಹೀಗಾಗಿ ಪಂದ್ಯದ ಆರಂಭಕ್ಕೂ ಮುನ್ನವೇ ನಾಯರ್ ಪಡೆ ಈ ಬೌಲರ್‌ಗಳನ್ನು ಎದುರಿಸುವುದು ಹೇಗೆ ಎಂದು ಗೇಮ್ ಪ್ಲ್ಯಾನ್ ಮಾಡಬೇಕಿತ್ತು. ಇವರ ಎಸೆತಗಳನ್ನು ದಿಟ್ಟವಾಗಿ ಎದುರಿಸಿ ರನ್ ಪೇರಿಸಬೇಕಿತ್ತು. ಆದರೆ, ಅಂತಹ ಕೆಲಸ ಮಾಡುವಲ್ಲಿ ಕರ್ನಾಟಕ ತಂಡ ಎಡವಿದೆ ಎಂಬುದನ್ನು ಪಂದ್ಯ ವೀಕ್ಷಿಸಿದ ಯಾರಾದರೂ ತಿಳಿದುಕೊಳ್ಳಬಹುದು.

ಏಕೆಂದರೆ ಇಡೀ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಕರ್ನಾಟಕ ಬ್ಯಾಟಿಂಗ್ ಪಡೆ ಪಂಜಾಬ್ ಎದುರು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕೇವಲ 87 ರನ್‌ಗಳಿಗೆ ಸರ್ವಪತನ ಅನುಭವಿಸಿತ್ತು. 20 ಓವರ್‌ಗಳ ಪೈಕಿ ಕರ್ನಾಟಕದ ದಾಂಡಿಗರು ಆಡಿದ್ದು ಕೇವಲ 17.2 ಓವರ್‌ಗಳು ಮಾತ್ರ.

ಕಾಡಿದ ಮನೀಶ್-ರಾಹುಲ್ ಅಲಭ್ಯತೆ

ಕಳೆದ ಎರಡು ಋತುಗಳಲ್ಲಿ ಕರ್ನಾಟಕ ಸತತವಾಗಿ ಮುಷ್ತಾಕ್ ಅಲಿ ಟ್ರೋಫಿಯನ್ನು ಗೆಲ್ಲುವಲ್ಲಿ ಮನೀಶ್ ಪಾಂಡೆ ಹಾಗೂ ಕೆ.ಎಲ್. ರಾಹುಲ್ ಪ್ರಮುಖ ಪಾತ್ರವಹಿಸಿದ್ದರು. ಈ ಇಬ್ಬರೂ ದಾಂಡಿಗರು ಕರ್ನಾಟಕದ ಬ್ಯಾಟಿಂಗ್ ಬೆನ್ನೆಲುಬು ಎಂದರೆ ತಪ್ಪಾಗಲಾರದು. ಆದರೆ, ಈ ಇಬ್ಬರೂ ಆಟಗಾರರನ್ನು ಆಸ್ಟ್ರೇಲಿಯಾ ಎದುರಿನ ಸರಣಿಗೆ ಆಯ್ಕೆ ಮಾಡಲಾಗಿತ್ತು.

ಇದನ್ನೂ ಓದಿ: ಮೊಹಮ್ಮದ್ ಸಿರಾಜ್: ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಛಾಪು

 

ಹೀಗಾಗಿ ಈ ಆಟಗಾರರು ಕಳೆದ ಡಿಸೆಂಬರ್‌ನಲ್ಲೇ ಆಸ್ಟ್ರೇಲಿಯಾಗೆ ತೆರಳಿದ್ದರು, ಅಲ್ಲದೆ, ಗವಾಸ್ಕರ್-ಬಾರ್ಡರ್ ಟೂರ್ನಿಯಲ್ಲೂ ಅದ್ಭುತ ಪ್ರದರ್ಶನ ನೀಡಿದ್ದರು. ಇದೇ ಕಾರಣಕ್ಕೆ ಈ ಆಟಗಾರರು ಸೈಯದ್ ಮುಷ್ತಾಕ್ ಅಲಿ ಟೂರ್ನಿಗೆ ಅಲಭ್ಯರಾಗಿದ್ದರು. ಇವರ ಅಲಭ್ಯತೆ ಇಡೀ ಟೂರ್ನಿಯ ಉದ್ದಕ್ಕೂ ಕರ್ನಾಟಕವನ್ನು ಕಾಡಿದೆ ಎಂದರೆ ತಪ್ಪಾಗಲಾರದು. ಕರ್ನಾಟಕದ ಬ್ಯಾಟಿಂಗ್ ಈ ಟೂರ್ನಿಯಲ್ಲಿ ಸೊರಗಲೂ ಸಹ ಇವರ ಅಲಭ್ಯತೆಯೇ ಕಾರಣ ಎಂದು ಕ್ರಿಕೆಟ್ ಪಂಡಿತರು ವಿಶ್ಲೇಷಿಸುತ್ತಿದ್ದಾರೆ.

ಇಲ್ಲಿದೆ ಈ ವರ್ಷದ ದಾಖಲೆ ಪಟ್ಟಿ

ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಪ್ರತಿ ವರ್ಷ ಒಂದಲ್ಲಾ ಒಂದು ದಾಖಲೆಗಳು ನಿರ್ಮಾಣವಾಗುತ್ತಲೇ ಇರುತ್ತದೆ. ಅಷ್ಟೇ ಅಲ್ಲ ಪ್ರತಿ ವರ್ಷ ಉದಯೋನ್ಮುಖ ಆಟಗಾರರ ಸಾಮರ್ಥ್ಯವೂ ಈ ಟೂರ್ನಿ ಮೂಲಕ ಅನಾವರಣ ಆಗುತ್ತಲೇ ಇರುತ್ತದೆ.

ಆ ನಿಟ್ಟಿನಲ್ಲಿ ಈ ವರ್ಷ ಬ್ಯಾಟಿಂಗ್‌ನಲ್ಲಿ ಮಿಂಚು ಹರಿಸಿದ ಆಟಗಾರ ಎಂದರೆ, ಅದು ತಮಿಳುನಾಡಿನ ಎನ್. ಜಗದೀಶನ್. ಈ ವರ್ಷ ಒಟ್ಟು 8 ಪಂದ್ಯಗಳಲ್ಲಿ ಕಣಕ್ಕಿಳಿದ ಜಗದೀಶನ್ 72.80 ಸರಾಸರಿಯಲ್ಲಿ 4 ಅರ್ಧ ಶತಕಗಳೊಂದಿಗೆ ಬರೋಬ್ಬರಿ 364 ರನ್‌ಗಳನ್ನು ಕಲೆಹಾಕಿದ್ದಾರೆ. ಈ ಮೂಲಕ ಈ ವರ್ಷದ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಅಸಲಿಗೆ ಜಗದೀಶನ್ ಅವರನ್ನು ಕಳೆದ ವರ್ಷ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಬಿಡ್ಡಿಂಗ್‌ನಲ್ಲಿ ಆಯ್ಕೆ ಮಾಡಿತ್ತು. ಆದರೆ, ಕೇವಲ ಒಂದು ಪಂದ್ಯದಲ್ಲಿ ಮಾತ್ರ ಅವಕಾಶ ನೀಡಲಾಗಿತ್ತು. ದುರಾದೃಷ್ಟವಶಾತ್ ಜಗದೀಶ್ ಆ ಪಂದ್ಯದಲ್ಲಿ ಮೊದಲ ಎಸೆತದಲ್ಲೇ ಶೂನ್ಯಕ್ಕೆ ಔಟ್ ಆಗಿದ್ದರು. ಹೀಗಾಗಿ ಅವರಿಗೆ ನಂತರ ಪಂದ್ಯಗಳಲ್ಲಿ ಅವಕಾಶ ನೀಡಲಾಗಿರಲಿಲ್ಲ. ಆದರೆ, ಈ ಋತುವಿನ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ತನ್ನ ಬ್ಯಾಟಿಂಗ್ ಸಾಮರ್ಥ್ಯ ಏನು ಎಂಬುದನ್ನು ಅವರು ತಮ್ಮ ಫ್ರಾಂಚೈಸಿಗೆ ತೋರಿಸಿಕೊಟ್ಟಿದ್ದಾರೆ. ಹೀಗಾಗಿ ಮುಂದಿನ ಐಪಿಎಲ್ ಟೂರ್ನಿಯಲ್ಲಿ ಇವರ ಬ್ಯಾಟಿಂಗ್‌ನಿಂದ ಎಷ್ಟು ರನ್ ಹರಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಟೂರ್ನಿಯಲ್ಲಿ ಅತ್ಯಧಿಕ ರನ್ ಗಳಿಸಿದವರ ಪಟ್ಟಿಯಲ್ಲಿ ಬರೋಡಾದ ಕೆ.ಹೆಚ್. ದೇವದರ್ (349 ರನ್), ಪಂಜಾಬ್ ರಾಜ್ಯದ ಪ್ರಬ್ ಸಿಮ್ರಾನ್ ಸಿಂಗ್ (341 ರನ್) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.
ಇನ್ನು ಬೌಲಿಂಗ್‌ನಲ್ಲಿ ಕೈಚಳಕ ತೋರಿಸಿದ ಬಿಹಾರದ ಅಶುತೋಷ್ ಆಮನ್ 6 ಪಂದ್ಯಗಳಲ್ಲಿ 16 ವಿಕೆಟ್ ಗಳಿಸುವ ಮೂಲಕ ಅತ್ಯಧಿಕ ವಿಕೆಟ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಬರೋಡಾದ ಮೇರೀವಾಲಾ (15 ವಿಕೆಟ್) ಮತ್ತು ಮಧ್ಯಪ್ರದೇಶದ ಅವೀಶ್ ಖಾನ್ (14 ವಿಕೆಟ್) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.

ಸೈಯದ್ ಮುಷ್ತಾಕ್ ಅಲಿ ಟೂರ್ನಿ

ಭಾರತೀಯ ದೇಶಿ ಕ್ರಿಕೆಟ್‌ನಲ್ಲಿ ಸೈಯದ್ ಮುಷ್ತಾಕ್ ಅಲಿ ಕ್ರಿಕೆಟ್ ಟ್ರೋಫಿಗೆ ಎಲ್ಲಿಲ್ಲದ ಮಹತ್ವವಿದೆ. ಅಸಲಿಗೆ ಇಂದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉತ್ತುಂಗದಲ್ಲಿರುವ ಪಾಂಡ್ಯ ಸಹೋದರರಾದ ಹಾರ್ದಿಕ್ ಪಾಂಡ್ಯ, ಕುನ್ರಾಲ್ ಪಾಂಡ್ಯ ಹಾಗೂ ಯೂಸುಫ್ ಪಠಾಣ್ ಸೇರಿದಂತೆ ಅನೇಕ ಸ್ಫೋಟಕ ಆಟ ಆಡುವ ಆಟಗಾರರನ್ನು ಐಪಿಎಲ್ ಮತ್ತು ರಾಷ್ಟ್ರೀಯ ತಂಡಕ್ಕೆ ಪರಿಚಯಿಸಿದ್ದೇ ಈ ಸೈಯದ್ ಮುಷ್ತಾಕ್ ಅಲಿ ಟೂರ್ನಿ.

ಈ ಟೂರ್ನಿಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಕಾರಣಕ್ಕೆ ಈ ಎಲ್ಲಾ ಆಟಗಾರರನ್ನು ಐಪಿಎಲ್ ಫ್ರಾಂಚೈಸಿಗಳು ಆಯ್ಕೆ ಮಾಡಿದ್ದವು. ಆನಂತರವೇ ಇವರೆಲ್ಲರೂ ಅಂತಾರಾಷ್ಟ್ರೀಯ ತಂಡದದಲ್ಲಿ ಸ್ಥಾನ ಪಡೆದು ಮಿಂಚು ಹರಿಸಿದ್ದರು ಎಂಬುದು ಉಲ್ಲೇಖಾರ್ಹ.


ಇದನ್ನೂ ಓದಿ: 2020: ಕ್ರೀಡಾ ಕ್ಷೇತ್ರಕ್ಕೆ ಅತಿ ಹೆಚ್ಚು ಮುಳ್ಳಾದ ಕೊರೊನಾ, ಇನ್ನೂ ಸರಿಯದ ಕರಿಛಾಯೆ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಬಿ ಎ ತೇಜಸ್ವಿ
+ posts

LEAVE A REPLY

Please enter your comment!
Please enter your name here