2019ರ ಅಂತ್ಯದಲ್ಲಿ ಚೀನಾದಲ್ಲಿ ಕೊರೊನಾ ಎಂಬ ವೈರಸ್ ಮೊದಲು ಪತ್ತೆಯಾಗಿತ್ತು. ಸಾವಿರಾರು ಜನ ಈ ಸೋಂಕಿಗೆ ತುತ್ತಾಗಿದ್ದರು. ಒಂದಷ್ಟು ಜನ ಮೃತಪಟ್ಟಿದ್ದ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಆದರೆ, ಚೀನಾದ ವುಹಾನ್ ನಗರದಲ್ಲಿ ಪತ್ತೆಯಾಗಿದ್ದ ಈ ವೈರಸ್ ಕೆಲವೇ ದಿನಗಳಲ್ಲಿ ಇಡೀ ವಿಶ್ವವನ್ನು ಆಕ್ರಮಿಸಲಿದೆ ಮತ್ತು ತನ್ನ ಕಬಂಧಬಾಹುಗಳ ಮೂಲಕ ಎಲ್ಲಾ ಕ್ಷೇತ್ರಗಳನ್ನೂ ಅಂಗವಿಕಲಗೊಳಿಸಲಿದೆ ಎಂದು ಹೆಚ್ಚು ಜನ ಊಹಿಸಿರಲಿಲ್ಲ. ಹೀಗೆ ಕೊರೊನಾದಿಂದ ಸಂಕಷ್ಟಕ್ಕೆ ಒಳಗಾದ ಹಲವಾರು ಕ್ಷೇತ್ರಗಳ ಪೈಕಿ ಕ್ರೀಡಾಕ್ಷೇತ್ರ ಬಹುಮುಖ್ಯವಾದದ್ದು. ಕಳೆದ ಒಂದು ವರ್ಷದ ಕರಾಳ ಅನುಭವವನ್ನು ವಿಶ್ವದ ಕ್ರೀಡಾಕ್ಷೇತ್ರ ಎಂದಿಗೂ ಮರೆಯಲು ಸಾಧ್ಯವೇ ಇಲ್ಲ ಎಂದರೂ ತಪ್ಪಾಗಲಾರದು.

ಆಗಿನ್ನು ಜನವರಿ ಆರಂಭವಾಗಿತ್ತು. ಕೊರೊನಾ ಭಾರತಕ್ಕೆ ಕಾಲಿಟ್ಟ ಸುದ್ದಿ ಅಲ್ಲೊಮ್ಮೆ ಇಲ್ಲೊಮ್ಮೆ ಬಿತ್ತರವಾಗಿ ಮರೆಯಾಗುತ್ತಿತ್ತು. ಹೀಗಾಗಿ ಭಾರತೀಯರು ಕೊರೊನಾ ಕುರಿತು ಅಷ್ಟಾಗಿ ತಲೆ ಕೆಡಿಸಿಕೊಂಡಿರಲಿಲ್ಲ. ಅದೇ ಸಮಯದಲ್ಲಿ ಭಾರತದಲ್ಲಿ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ಆರಂಭವಾಗಿ ವಿಶ್ವ ಬ್ಯಾಡ್ಮಿಂಟನ್ ತಾರೆಯರು ಈ ಕ್ರೀಡಾಕೂಟಕ್ಕೆ ಮೆರುಗು ನೀಡಿದ್ದರು. ಭಾರತದ ಸೈನಾ ನೆಹ್ವಾಲ್, ಪಿ.ವಿ. ಸಿಂಧು, ಪಾರುಪಳ್ಳಿ ಕಶ್ಯಪ್, ಕಿಡಂಭಿ ಶ್ರೀಕಾಂತ್ ಈ ಕ್ರೀಡಾಕೂಟದ ಸ್ಟಾರ್ ಪ್ಲೇಯರ್ಸ್.

ನಿರೀಕ್ಷೆಯಂತೆ ಈ ಕೂಟ ಫೆಬ್ರವರಿಯಲ್ಲಿ ಯಶಸ್ವಿಯಾಗಿ ಮುಕ್ತಾಯವಾಗಿತ್ತು. ಭಾಗಶಃ ಈ ವರ್ಷ ವಿಶ್ವದಲ್ಲೇ ಯಶಸ್ವಿಯಾಗಿ ಮುಕ್ತಾಯವಾದ ಏಕೈಕ ಪ್ರೀಮಿಯರ್ ಲೀಗ್ ಇದೇ ಇರಬೇಕೇನೋ? ಆನಂತರ ಆರಂಭವಾಗಬೇಕಿದ್ದ ಕಬಡ್ಡಿ, ಕ್ರಿಕೆಟ್, ಹಾಕಿ, ಫುಟ್ಬಾಲ್, ಟೆನ್ನಿಸ್ ಹೀಗೆ ಎಲ್ಲಾ ಕ್ರೀಡೆಗಳಿಗೂ ಕಾಡಿದ ಕೊರೊನಾ ಇನ್ನೂ ಬೆಂಬಿಡದೆ ಕಾಡುತ್ತಿದೆ.

ದುಬೈಗೆ ಹಾರಿಬಿಟ್ಟಿತು ಐಪಿಎಲ್

ಬಹುತೇಕ ಭಾರತೀಯರ ಪಾಲಿಗೆ ಕ್ರಿಕೆಟ್ ಎಂಬುದು ಧರ್ಮದಂತೆ ಬೆಸೆದುಕೊಂಡು ಅನೇಕ ವರ್ಷಗಳು ಕಳೆದಿವೆ. ಇನ್ನೂ ಐಪಿಎಲ್ ಮಾದರಿ ಚುಟುಕು ಕ್ರಿಕೆಟ್‌ಗೆ ಭಾರತ ಮಾತ್ರವಲ್ಲದೆ ವಿಶ್ವದೆಲ್ಲೆಡೆ ದೊಡ್ಡ ಮಟ್ಟದ ಅಭಿಮಾನಿ ಬಳಗವಿದೆ. ಈ ಜನಪ್ರಿಯ ಕ್ರಿಕೆಟ್ ಮಾದರಿಯ ಸುತ್ತ ದೊಡ್ಡ ಮಾರುಕಟ್ಟೆಯೂ ಬೆಳೆದುನಿಂತಿದೆ. ಭಾರತದ ಬಿಸಿಸಿಐ ಕ್ರೀಡಾ ಸಂಸ್ಥೆ ವಿಶ್ವದಲ್ಲೇ ಅತ್ಯಂತ ಶ್ರೀಮಂತ ಕ್ರೀಡಾ ಸಂಸ್ಥೆಯಾಗಿ ಉಳಿಯಲು ಐಪಿಎಲ್ ಅತಿಮುಖ್ಯ ಕಾರಣ. ಒಂದು ಅಂದಾಜಿನ ಪ್ರಕಾರ ಐಪಿಎಲ್ ಪ್ರಸಾರದ ಹಕ್ಕಿನಿಂದಲೇ ಬಿಸಿಸಿಐಗೆ 2600 ಕೋಟಿಗೂ ಅಧಿಕ ಹಣ ಹರಿದುಬರುತ್ತದೆ ಎಂದರೆ ಐಪಿಎಲ್ ಹುಟ್ಟುಹಾಕಿರುವ ಮಾರುಕಟ್ಟೆ ಮೌಲ್ಯದ ಅಂದಾಜು ಸಿಗುತ್ತದೆ.

PC : myKhel

ಆದರೆ, ಏಪ್ರಿಲ್ ವೇಳೆಗೆ ಭರ್ಜರಿಯಾಗಿ ಆರಂಭವಾಗಬೇಕಿದ್ದ ಐಪಿಎಲ್ ಕೊರೊನಾ ಕಾರಣದಿಂದಾಗಿ ಈ ವರ್ಷ ನಡೆಯುವುದೇ ಅನುಮಾನವಾಗಿತ್ತು. ಕೊನೆಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನೇತೃತ್ವದಲ್ಲಿ ಐಪಿಎಲ್ ಸಭೆ ಈ ವರ್ಷ ಟೂರ್ನಿಯನ್ನು ದುಬೈಗೆ ಶಿಫ್ಟ್ ಮಾಡುವ ಹಾಗೂ ಪ್ರೇಕ್ಷಕರಿಲ್ಲದ ಖಾಲಿ ಕ್ರೀಡಾಂಗಣದಲ್ಲಿ ಆಯೋಜಿಸುವ ಕುರಿತು ಅಂತಿಮ ತೀರ್ಮಾನ ತೆಗೆದುಕೊಂಡಿತ್ತು. ಅಂದುಕೊಂಡ ಹಾಗೆ ದುಬೈನಲ್ಲಿ ಅಕ್ಟೋಬರ್ ತಿಂಗಳಲ್ಲಿ ಐಪಿಎಲ್ ಯಶಸ್ವಿಯಾಗಿ ಆರಂಭವಾಗಿ ಮುಕ್ತಾಯವೂ ಆಗಿತ್ತು.

ಶ್ರೀಮಂತ ಕ್ರೀಡೆಯಾದ ಕಾರಣ ಕ್ರಿಕೆಟ್‌ಗೆ ಇಂತಹ ಅವಕಾಶ ಲಭ್ಯವಾಗಿತ್ತು. ಆದರೆ, ಎಲ್ಲ್ಲ ಕ್ರೀಡೆಗಳಿಗೂ ಈ ಅವಕಾಶ ಇಲ್ಲದಾಗಿದ್ದು ಮಾತ್ರ ದುರಂತ. ಅಸಲಿಗೆ ಏಪ್ರಿಲ್ ವೇಳೆಗೆ ಭಾರತದಲ್ಲಿ ಕ್ರಿಕೆಟ್‌ನಷ್ಟೇ ಜನಪ್ರಿಯವಾಗಿದ್ದ ಕಬಡ್ಡಿ ಪ್ರೀಮಿಯರ್ ಲೀಗ್ ಸಹ ಆರಂಭವಾಗಬೇಕಿತ್ತು. ಭಾರತದ ಹಾಕಿ ಟೀಮ್ ಎದುರು ಕೂಡ ಮಹತ್ವದ ಹಲವು ಟೂರ್ನಿಗಳಿದ್ದವು. ಆದರೆ, ಕೊರೊನಾ ಕಾರಣದಿಂದಾಗಿ ಈ ಎಲ್ಲಾ ಟೂರ್ನಿಗಳು ಈವರೆಗೆ ಆರಂಭವಾಗಿಲ್ಲ ಎಂಬುದು ವಿಷಾದನೀಯ.

ಇದನ್ನೂ ಓದಿ: ಹಿನ್ನೋಟ 2020; ಕೋವಿಡ್ ನಿಯಂತ್ರಣ ಮತ್ತು ಭಾರತದ ಪ್ರತಿಕ್ರಿಯೆ

ಪಾಕಿಸ್ತಾನದ ಕಥೆ ಇನ್ನೂ ಬಿನ್ನ!

ಭಾರತದ ಐಪಿಎಲ್ ಮಾದರಿಯನ್ನೇ ಅನುಸರಿಸಿ ವಿಶ್ವದಲ್ಲಿ ಅನೇಕ ರಾಷ್ಟ್ರಗಳ ಕ್ರಿಕೆಟ್ ಲೀಗ್ ಆಯೋಜಿಸುತ್ತಿವೆ. ಹಾಗೆಯೇ ಪಾಕಿಸ್ತಾನ ಸಹ 2015ರಿಂದ ಪಾಕಿಸ್ತಾನ ಪ್ರೀಮಿಯರ್ ಲೀಗ್ ಆಯೋಜಿಸುತ್ತಿದೆ. ಪಾಕಿಸ್ತಾನ ಪ್ರೀಮಿಯರ್ ಲೀಗ್ ಆರಂಭವಾಗುವುದು ಕೂಡ ಫೆಬ್ರವರಿಯಲ್ಲೇ. 6 ತಂಡಗಳು ಭಾಗವಹಿಸುವ ಈ ಟೂರ್ನಿ ಶುರುವಾಗಿ 20ಕ್ಕೂ ಹೆಚ್ಚು ಪಂದ್ಯಗಳು ನಡೆದ ನಂತರ, ಪಾಕಿಸ್ತಾನಕ್ಕೆ ಕೊರೊನಾ ದೊಡ್ಡ ಮಟ್ಟದಲ್ಲಿ ಲಗ್ಗೆಯಿಟ್ಟಿತು. ಹೀಗಾಗಿ ತೀವ್ರ ಸಂಕಷ್ಟಕ್ಕೆ ಗುರಿಯಾಗಿ ಇಡೀ ಟೂರ್ನಿಯನ್ನೇ ಮುಂದೂಡಲಾಗಿತ್ತು. ಕೊನೆಗೆ ಈ ಟೂರ್ನಿಯನ್ನು ಮತ್ತೆ ನವೆಂಬರ್‌ನಲ್ಲಿ ಮರು ಆಯೋಜಿಸಲಾಗಿತ್ತು.

PC : DNA india

ಫೈನಲ್ ಪಂದ್ಯದಲ್ಲಿ ಕರಾಚಿ ಕಿಂಗ್ಸ್ ಮೊದಲ ಬಾರಿಗೆ ಟ್ರೋಫಿಗೆ ಮುತ್ತಿಟ್ಟಿತ್ತು. ವಿಶ್ವ ಕ್ರಿಕೆಟ್ ಇತಿಹಾಸದಲ್ಲಿ ಹೀಗೆ ಮುಂದೂಡಲ್ಪಟ್ಟ ಏಕೈಕ ಪ್ರೀಮಿಯರ್ ಲೀಗ್ ಇದು ಎಂಬ ಅಪಕೀರ್ತಿಗೆ ಪಾಕಿಸ್ತಾನ ಪಾತ್ರವಾಗಿತ್ತು. ಅಲ್ಲದೆ, ಈ ಟೂರ್ನಿಯಿಂದಾಗಿ ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ಗೆ ನೂರಾರು ಕೋಟಿ ನಷ್ಟ ಉಂಟಾಗಿದೆ ಎಂದು ವರದಿಯಾಗಿದೆ.

ಈಗೇನಿದ್ದರೂ ಖಾಲಿ ಕ್ರೀಡಾಂಗಣ ಪರ್ವ

ಈ ನಡುವೆ ಅಕ್ಟೋಬರ್‌ನಿಂದ ವಿಶ್ವದಲ್ಲಿ ಅಲ್ಲಲ್ಲಿ ಕ್ರೀಡಾಕೂಟಗಳು, ಒಳಾಂಗಣ ಕ್ರೀಡೆಗಳು ಸಣ್ಣ ಮಟ್ಟದಲ್ಲಿ ಆಯೋಜನೆಗೊಳ್ಳುತ್ತಿವೆ. ಕೊರೊನಾ ಮುಂಜಾಗ್ರತೆಯ ಜೊತೆಗೆ ಪ್ರೇಕ್ಷಕರಿರದ ಖಾಲಿ ಕ್ರೀಡಾಂಗಣದಲ್ಲಿ ಕ್ರೀಡಾಕೂಟಗಳನ್ನು ಆಯೋಜಿಸಲು ಬಹುತೇಕ ರಾಷ್ಟ್ರಗಳು ಧೈರ್ಯ ಮಾಡುತ್ತಿವೆ. ಇಂಡಿಯನ್ ಪ್ರೀಮಿಯರ್ ಲೀಗ್ ಕೂಟ ಈ ರೀತಿಯಲ್ಲೇ ಯಶಸ್ವಿಯಾದದ್ದನ್ನು ಕಂಡು, ಈಗ ಬಾಂಗ್ಲಾದೇಶ ಹಾಗೂ ಶ್ರೀಲಂಕಾ ರಾಷ್ಟ್ರಗಳು ಸಹ ತಮ್ಮ ದೇಶದಲ್ಲೂ ಖಾಲಿ ಅಂಗಳದಲ್ಲಿ ಕ್ರಿಕೆಟ್ ಲೀಗ್ ಆಯೋಜಿಸಿ ಯಶಸ್ವಿಯಾಗಿವೆ.

ಇದರ ಬೆನ್ನಿಗೆ ಆಸ್ಟ್ರೇಲಿಯಾ, ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾದಂತಹ ರಾಷ್ಟ್ರಗಳು ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಲು ಮುಂದಾಗಿವೆ. ಆಸ್ಟ್ರೇಲಿಯಾ ಒಂದು ಹೆಜ್ಜೆ ಮುಂದೆ ಹೋಗಿ ತುಂಬು ಕ್ರೀಡಾಂಗಣದಲ್ಲೇ ಪಂದ್ಯಗಳನ್ನು ಆಯೋಜಿಸುತ್ತಿದೆ. ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ನಡುವಣ ಟಿ-20 ಮತ್ತು ಏಕದಿನ ಪಂದ್ಯಗಳಿಗೆ ಕ್ರೀಡಾಂಗಣದಲ್ಲಿ ಕ್ರಿಕೆಟ್ ಅಭಿಮಾನಿಗಳ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು. ಇದೀಗ ನಡೆಯುತ್ತಿರುವ ಟೆಸ್ಟ್ ಪಂದ್ಯಗಳಿಗೂ ಅಭಿಮಾನಿಗಳಿಗೆ ಅವಕಾಶ ನೀಡಲಾಗುತ್ತಿದೆ. ಮತ್ತೊಂದೆಡೆ ಬಿಗ್‌ಬ್ಯಾಶ್ (ಐಪಿಎಲ್ ಮಾದರಿಯ) ಕ್ರಿಕೆಟ್ ಟೂರ್ನಿಯೂ ಅದ್ದೂರಿಯಾಗಿ ನಡೆಯುತ್ತಿರುವುದು ಕ್ರಿಕೆಟ್ ಲೋಕಕ್ಕೆ ಆಶಾದಾಯಕ ಬೆಳವಣಿಗೆ.

ಈ ನಡುವೆ ಆಸ್ಟ್ರೇಲಿಯಾದಂತೆಯೇ ದಕ್ಷಿಣ ಆಫ್ರಿಕಾ ಸಹ ಖಾಲಿ ಅಂಗಳದಲ್ಲಿ ಕ್ರಿಕೆಟ್ ಟೂರ್ನಿ ಆಯೋಜಿಸಲು ಮುಂದಾಗಿತ್ತು. ದಕ್ಷಿಣ ಆಫ್ರಿಕಕ್ಕೆ ಆಗಮಿಸಿದ್ದ ಇಂಗ್ಲೆಂಡ್ ಪಡೆ ಮೂರು ಟಿ20 ಪಂದ್ಯಗಳನ್ನೂ ಗೆದ್ದು ಕ್ಲೀನ್‌ಸ್ವೀಪ್ ಸಾಧಿಸಿತ್ತು. ಆದರೆ, ಏಕದಿನ ಪಂದ್ಯದ ವೇಳೆಗೆ ಹಲವು ಆಫ್ರಿಕಾ ಆಟಗಾರರು ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಹೀಗಾಗಿ ಇಡೀ ಟೂರ್ನಿಯನ್ನೇ ರದ್ದು ಮಾಡಲಾಗಿ, ಇಂಗ್ಲೆಂಡ್ ತಂಡ ತವರಿಗೆ ಮರಳಿತ್ತು.

ಆದರೆ, ಇದೀಗ ಇಂಗ್ಲೆಂಡ್‌ನಲ್ಲೇ ರೂಪಾಂತರಿ (Mutant) ಕೊರೊನಾ ವೈರಸ್ ಪತ್ತೆಯಾಗಿದೆ. ಹೀಗಾಗಿ ಇಂಗ್ಲೆಂಡ್‌ನಲ್ಲಿ ಆಯೋಜನೆಗೊಳ್ಳಬೇಕಿದ್ದ ಎಲ್ಲ ಟೂರ್ನಿಗಳಿಗೂ ಅಪಾಯ ಎದುರಾಗಿದೆ. ಈ ನಡುವೆ ಇಂಗ್ಲೆಂಡ್ ಕ್ರಿಕೆಟ್ ತಂಡ ಐದು ಟಿ೨೦, ಮೂರು ಏಕದಿನ ಮತ್ತು ಮೂರು ಟೆಸ್ಟ್ ಪಂದ್ಯಗಳಿಗಾಗಿ ಫೆಬ್ರವರಿಯಲ್ಲಿ ಭಾರತಕ್ಕೆ ಆಗಮಿಸಲಿದೆ. ಈ ನಡುವೆ ಇಂಗ್ಲೆಂಡ್‌ನಲ್ಲಿ ಪತ್ತೆಯಾಗಿರುವ ಈ ಹೊಸ ರೂಪಾಂತರಿ ವೈರಸ್ ಇಡೀ ಟೂರ್ನಿಗೆ ಕಂಟಕವಾಗಿ ಪರಿಣಮಿಸಿದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.

ಇದನ್ನೂ ಓದಿ: 2020; ಕರ್ನಾಟಕ ತನ್ನನ್ನು ತಾನು ಕಳೆದುಕೊಂಡ ವರ್ಷ

ಇತರೆ ಕ್ರೀಡೆಗಳ ಕಥೆ ಏನು?

ಕ್ರಿಕೆಟ್ ಹೊರತಾಗಿ ಜನಪ್ರಿಯ ಕ್ರೀಡೆಗಳಾದ ಹಾಕಿ ಮತ್ತು ಫುಟ್‌ಬಾಲ್‌ಗೆ 2020 ಕರಾಳ ವರ್ಷ ಎಂದರೆ ತಪ್ಪಾಗಲಾರದು. ಕೊರೊನಾ ಕಾರಣದಿಂದಾಗಿ ಈ ಇಡೀ ವರ್ಷ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹತ್ವದ ಯಾವ ಹಾಕಿ ಟೂರ್ನಿಯನ್ನೂ ಆಯೋಜನೆ ಮಾಡಲು ಸಾಧ್ಯವಾಗಿಲ್ಲ.

ಇನ್ನೂ ಯೂರೋಪ್ ರಾಷ್ಟ್ರಗಳಲ್ಲಿ ಫುಟ್‌ಬಾಲ್, ರಗ್ಬಿ, ಬೇಸ್‌ಬಾಲ್ ಮತ್ತು ಬಾಸ್ಕೆಟ್‌ಬಾಲ್ ಜನಪ್ರಿಯ ಕ್ರೀಡೆಗಳು. ಹೀಗಾಗಿ ಯೂರೋಪ್‌ನಲ್ಲಿ ಈ ಕ್ರೀಡೆಗಳ ಪ್ರೀಮಿಯರ್ ಲೀಗ್‌ಗಳನ್ನು ಪ್ರತಿವರ್ಷ ಆಯೋಜಿಸುವುದು ವಾಡಿಕೆ. ಎನ್‌ಬಿಎ, ಲಾ-ಲೀಗಾ ಲೀಗ್‌ಗಳು ದಶಕಗಳ ಹಿಂದೆಯೇ ಜನಪ್ರಿಯ ಗಳಿಸಿದ್ದ ಟೂರ್ನಿಗಳು.

ಈ ಲೀಗ್‌ಗಳನ್ನು ಆಯೋಜನೆ ಮಾಡುವ ಏಕೈಕ ಉದ್ದೇಶವೇ ಅಭಿಮಾನಿಗಳು ನೇರ ಭಾಗಿಯಾಗಿ ಮನರಂಜನೆಗಳಿಸಲು! ಹೀಗಾಗಿ ಖಾಲಿ ಅಂಗಳದಲ್ಲಿ ಈ ಟೂರ್ನಿಯನ್ನು ಆಯೋಜಿಸುವುದಕ್ಕೆ ಯಾವುದೇ ಫ್ರಾಂಚೈಸಿಗಳು ಒಪ್ಪದ ಕಾರಣ ಇಡೀ ಯೂರೋಪ್‌ನಲ್ಲಿ ಈ ವರ್ಷ ಯಾವುದೇ ಕ್ರೀಡಾಕೂಟಗಳೂ ಜರುಗಿಲ್ಲ.

PC : Business Insider

ಇನ್ನೂ ಫುಟ್‌ಬಾಲ್ ಲೋಕದ ಜನಪ್ರಿಯ ಕ್ರೀಡಾಕೂಟವಾಗಿ ಬಿಂಬಿಸಲಾಗಿರುವ, ಮ್ಯಾಂಚೆಸ್ಟರ್ ನಗರದಲ್ಲಿ ಆಯೋಜಿಸಲಾಗುವ ಇಂಗ್ಲಿಷ್ ಫುಟ್‌ಬಾಲ್ ಪ್ರೀಮಿಯರ್ ಲೀಗ್‌ನ 29ನೇ ಆವೃತ್ತಿಯನ್ನು ಮುಂದಿನ ವರ್ಷ ಫೆಬ್ರವರಿಗೆ ಮುಂದೂಡಲಾಗಿದೆ ಎಂದರೆ ಕೊರೊನಾ ಯೂರೋಪ್ ರಾಷ್ಟ್ರಗಳಿಗೂ ನೀಡಿರುವ ಆಘಾತವನ್ನು ಊಹಿಸಿಕೊಳ್ಳಬಹುದು.

ಆದರೆ, ಈ ಎಲ್ಲಾ ಆಘಾತಗಳಿಂದಲೂ ಟೆನ್ನಿಸ್ ಸ್ವಲ್ಪಮಟ್ಟಿಗೆ ತಪ್ಪಿಸಿಕೊಂಡಿದೆ ಎಂದೇ ಹೇಳಬೇಕು. ಏಕೆಂದರೆ ಈ ವರ್ಷ ಕೊರೊನಾ ನಡುವೆಯೂ ಹೆಚ್ಚಿನ ಕ್ರೀಡಾಕೂಟಗಳನ್ನು ಯಶಸ್ವಿಯಾಗಿ ಆಯೋಜಿಸಿದ ಗರಿಮೆ ವಿಶ್ವ ಟೆನಿಸ್ ಫೆಡರೇಷನ್‌ಗೆ ಸಲ್ಲಬೇಕು. ಏಕೆಂದರೆ ಅಭಿಮಾನಿಗಳೇ ಇಲ್ಲದೆ ಒಳಾಂಗಣ ಕ್ರೀಡಾಂಗಣದಲ್ಲಿ US OPEN, Australia Open, Madrid Open ಸೇರಿದಂತೆ ಈ ವರ್ಷ ಒಟ್ಟು 69 ಜನಪ್ರಿಯ ಕ್ರೀಡಾಕೂಟಗಳನ್ನು ಆಯೋಜಿಸಲಾಗಿದೆ.


ಇದನ್ನೂ ಓದಿ: ಜಲ್ಲಿಕಟ್ಟು ಕ್ರೀಡೆಗೆ ಒಪ್ಪಿಗೆ: ಕೊರೊನಾ ಮಾರ್ಗಸೂಚಿ ಪಾಲಿಸಿ ಎಂದ ತಮಿಳುನಾಡು ಸರ್ಕಾರ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಬಿ ಎ ತೇಜಸ್ವಿ
+ posts

LEAVE A REPLY

Please enter your comment!
Please enter your name here