Homeಕರೋನಾ ತಲ್ಲಣಹಿನ್ನೋಟ 2020: ಕೋವಿಡ್ ನಿಯಂತ್ರಣ ಮತ್ತು ಭಾರತದ ಪ್ರತಿಕ್ರಿಯೆ

ಹಿನ್ನೋಟ 2020: ಕೋವಿಡ್ ನಿಯಂತ್ರಣ ಮತ್ತು ಭಾರತದ ಪ್ರತಿಕ್ರಿಯೆ

ಭಾರತದಲ್ಲೂ ಕ್ರಿಯಾಶೀಲವಾದ ದತ್ತಾಂಶ ಸಂಗ್ರಹಣೆ ಮತ್ತು ವಿಶ್ಲೇಷಣೆಯ ವ್ಯವಸ್ಥೆಯಿದೆ, ಅದರಲ್ಲಿ ಮುಖ್ಯವಾದುದು ಸಮಗ್ರ ರೋಗ ಸರ್ವೇಕ್ಷಣಾ ಕಾರ್ಯಕ್ರಮ. ಮುಂದುವರೆದ ಐಟಿ ಮತ್ತು ಜಿಯೋ-ಸ್ಪೇಟಿಯಲ್ ತಂತ್ರಜ್ಞಾನದ ವಾತಾವರಣವು ಭಾರತದ ದತ್ತಾಂಶ ವಿಜ್ಞಾನವನ್ನು ಇನ್ನಷ್ಟು ಸಶಕ್ತಗೊಳಿಸಿದೆ. ಆದರೂ, ಇವತ್ತಿನವರೆಗೂ ಕೋವಿಡ್-19ನ ಸಾಂಕ್ರಾಮಿಕತೆ ಮತ್ತು ಕ್ಲಿನಿಕಲ್ ಗುಣಲಕ್ಷಣಗಳ ಒಂದು ಯೋಗ್ಯ ಪ್ರಕಟಣೆಯೂ ಭಾರತದ ಯಾವ ರಾಜ್ಯದಿಂದಲೂ ಮೂಡಿಬಂದಿಲ್ಲ

- Advertisement -
- Advertisement -

2020 ಮುಗಿಯುವ ಹೊತ್ತಿಗೆ ಭಾರತವು ಸುಮಾರು ಒಂದು ಕೋಟಿ ಜನರಿಗೆ ಕೋವಿಡ್ ರೋಗನಿರ್ಣಯ ಮಾಡಿ ಚಿಕಿತ್ಸೆ ಒದಗಿಸಲು ಸಾಧ್ಯವಾಗಿದೆ ಮತ್ತು 1,50,000 ಕೋವಿಡ್ ಸಾವುಗಳು ಸಂಭವಿಸಿವೆ. ಪ್ರತಿ ರೋಗನಿರ್ಣಯಿತ ಪ್ರಕರಣಕ್ಕೆ ಪ್ರತಿಯಾಗಿ 20ಕ್ಕೂ ಹೆಚ್ಚು ರೋಗ ಪತ್ತೆ ಮಾಡಲಾಗದ ಪ್ರಕರಣಗಳ ಅನುಪಾತವಿದ್ದು, ಇನ್ನೂ ನಿಖರ ಅಂದಾಜು ಗೊತ್ತಾಗಿಲ್ಲ. ಕೋವಿಡ್-19 ಜನಸಂಖ್ಯೆಯ ಒಂದು ಅತಿಸಣ್ಣ ಭಾಗಕ್ಕೆ ಬಾಧಿಸುವುದಾದರೂ, ದೊಡ್ಡ ಪ್ರಮಾಣದಲ್ಲಿ ಸಮುದಾಯಗಳು ಸಮಾಜೋ-ಆರ್ಥಿಕ ಯಾತನೆಯನ್ನು ಅನುಭವಿಸುತ್ತವೆ. ಎಲ್ಲ ಸಾಂಕ್ರಾಮಿಕಗಳಿಗೆ ಈ ವಿದ್ಯಮಾನವು ಸಾಮಾನ್ಯವಾಗಿದ್ದು, ರೋಗ ಹರಡುವಿಕೆಯ ಪರೋಕ್ಷ ಪರಿಣಾಮವು, ರೋಗಕ್ಕಿಂತ ಹೆಚ್ಚು ದೊಡ್ಡದಾಗಿರುತ್ತದೆ ಮತ್ತು ದೀರ್ಘಕಾಲೀನವಾಗಿರುತ್ತದೆ.

ಸಾಂಕ್ರಾಮಿಕವು ಮನುಷ್ಯರ ಚಲನಶೀಲತೆಯನ್ನು ಸೀಮಿತಗೊಳಿಸುತ್ತದೆ ಮತ್ತು ಸಮುದಾಯಗಳ ಆರ್ಥಿಕ ಚಟುವಟಿಕೆಗಳನ್ನು ಕುಂಠಿತಗೊಳಿಸಿ ದುರ್ಬಲಗೊಳಿಸುತ್ತದೆ. ದತ್ತಾಂಶ ವಿಜ್ಞಾನದ ನೆರವಿನಿಂದ ಸಾಂಕ್ರಾಮಿಕ ರೋಗಶಾಸ್ತ್ರದಲ್ಲಾದ ಪ್ರಗತಿಯ ಕಾರಣದಿಂದಾಗಿ, ಸಾಂಕ್ರಾಮಿಕಕ್ಕೆ ಪ್ರತಿಕ್ರಿಯಿಸುವ ಮತ್ತು ಅದನ್ನು ನಿಯಂತ್ರಿಸುವ ಆರೋಗ್ಯ ವ್ಯವಸ್ಥೆಗಳ ಸಾಮರ್ಥ್ಯ ಹೆಚ್ಚಳಗೊಂಡಿದೆ. ವಿಶಾಲ ದತ್ತಾಂಶ ವಿಶ್ಲೇಷಣೆಯಲ್ಲಿ ಆಗಿರುವ ಮಹತ್ತರ ಬೆಳವಣಿಗೆಯ ಪರಿಣಾಮ, ಸಾರ್ವಜನಿಕ ಆರೋಗ್ಯದಲ್ಲಿ ಮಹತ್ತರ ಹಸ್ತಕ್ಷೇಪಕ್ಕಾಗಿ ರಿಯಲ್‌ಟೈಮ್ ಮುಂಜಾಗ್ರತೆ ಮತ್ತು ಮುನ್ನೆಚ್ಚರಿಕೆಯನ್ನು ಒದಗಿಸಲು ಸಾಧ್ಯವಾಗಿದೆ. ಇವುಗಳಿಂದ ಆಫ್ರಿಕಾದಂತಹ ಕಡಿಮೆ ಸಂಪನ್ಮೂಲದ ದೇಶಗಳಿಗೂ ಕೂಡ ಎಬೊಲಾ ಮತ್ತು ಮೀಸಲ್ಸ್‌ನಂತಹ ರೋಗಗಳನ್ನು ನಿಯಂತ್ರಿಸಲು ಸಾಧ್ಯವಾಗಿದೆ. ನಿಸ್ಸಂಶಯವಾಗಿ, ಪುರಾವೆ-ಆಧಾರ ಮತ್ತು ದತ್ತಾಂಶಗಳಿಂದ ಪ್ರೇರಿತವಾದ ಸರ್ಕಾರದ ಮಧ್ಯಸ್ಥಿಕೆಯು, ಸಾಂಕ್ರಾಮಿಕವನ್ನು ನಿಯಂತ್ರಿಸಲು ಸಾಧ್ಯವಾಗಿ, ಪರೋಕ್ಷವಾದ ಸಮಾಜೋ-ಆರ್ಥಿಕ ಪರಿಣಾಮಗಳನ್ನು ದೊಡ್ಡ ಪ್ರಮಾಣದಲ್ಲಿ ತಗ್ಗಿಸುತ್ತದೆ.

ಕೋವಿಡ್-19ಗೆ ಪ್ರತಿಕ್ರಿಯೆಯಾಗಿ ಸಂಶೋಧನಾ ಸಾಮರ್ಥ್ಯವಿರುವ ದೇಶಗಳು ಮೊದಲಿಗೆ, ರಾಜಕೀಯ ನಿರ್ಣಯಗಳಿಗೆ ವೈಜ್ಞಾನಿಕ ತಳಹದಿಯನ್ನು ಉಣಬಡಿಸುವ ಒಂದು ಪರಿಣಾಮಕಾರಿ ವ್ಯವಸ್ಥೆಯನ್ನು ರೂಪಿಸಿಕೊಂಡವು. ಇತರ ದೇಶಗಳಿಗೆ ಅಂತರಸರ್ಕಾರಗಳ ಏಜೆನ್ಸಿಯಾದ ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಗಳನ್ನು ಪಾಲಿಸುವ ಆಯ್ಕೆಯಿತ್ತು. ಇತರ ಅಭಿವೃದ್ಧಿಶೀಲ ದೇಶಗಳಲ್ಲಿ ಸಾಧ್ಯವಾಗದ, ವೈಜ್ಞಾನಿಕ ಪುರಾವೆಗಳ ಆಧಾರದಲ್ಲಿ ಹಸ್ತಕ್ಷೇಪ ಮಾಡುವ ಒಂದು ಅವಕಾಶ ಭಾರತದ ಸರ್ಕಾರಗಳಿಗಿತ್ತು. ಆದರೆ ಭಾರತದ ಸರ್ಕಾರಗಳು ಇಲ್ಲಿನ ವೈಜ್ಞಾನಿಕ ಸಮುದಾಯ ಮತ್ತು ವೈದ್ಯಕೀಯ ಸಂಶೋಧನೆ ವ್ಯವಸ್ಥೆಯನ್ನು ಉತ್ತಮವಾಗಿ ಬಳಸಿಕೊಳ್ಳುವಲ್ಲಿ ಹಿಂದೆ ಬಿದ್ದಿವೆ.

PC : Swarajya

ಚೀನಾದ ದತ್ತಾಂಶ ಮಾಹಿತಿ ಪ್ರಕಾರ, ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್‌ನ (ಐಸಿಎಂಆರ್) ಸಾಂಕ್ರಾಮಿಕ ರೋಗಶಾಸ್ತ್ರಜ್ಞರು, 2020ರ ಫೆಬ್ರುವರಿ ಮೂರನೇ ವಾರದಲ್ಲೇ ಭಾರತದ ನಗರಗಳಲ್ಲಿ ಕೋವಿಡ್ ಸ್ಪೋಟವನ್ನು ಅಂದಾಜಿಸಿದ್ದರು. ಸಾರ್ವಜನಿಕ ಬುದ್ಧಿಜೀವಿಗಳು ತಪ್ಪಿಸಿಕೊಳ್ಳಲಾಗದ ತೀವ್ರ ಸಮಾಜೋ-ಆರ್ಥಿಕ ಸಂಕಷ್ಟದ ಸಾಧ್ಯತೆಯನ್ನು ಲೆಕ್ಕ ಹಾಕಿ ಎಚ್ಚರಿಸಿದ್ದರು. ಇಷ್ಟಾದರೂ ಕೇಂದ್ರ ಸರ್ಕಾರವು ಮಾರ್ಚ್‌ನ ಮೊದಲರ್ಧದವರೆಗೂ ಸಾಂಕ್ರಾಮಿಕವನ್ನು ಅಲ್ಲಗಳೆಯುತ್ತ ಬಂದಿತು, ವಿಶ್ವ ಆರೋಗ್ಯ ಸಂಸ್ಥೆಯು ಕೋವಿಡ್‌ಅನ್ನು ಸಾಂಕ್ರಾಮಿಕ ಎಂದು ಘೋಷಿಸಿದ ಏಳು ದಿನಗಳ ನಂತರ 2020ರ ಮಾರ್ಚ್ 19ರಂದೇ ಕೇಂದ್ರ ಸರ್ಕಾರವು ಒಂದು ಟಾಸ್ಕ್‌ಫೋರ್ಸ್ ರಚಿಸಿದ್ದು. ಟಾಸ್ಕ್‌ಫೋರ್ಸ್ ರಚನೆಯ ಐದು ದಿನಗಳಲ್ಲೇ ಸಂಪೂರ್ಣ ಲಾಕ್‌ಡೌನ್ ಹೇರಿದ್ದು, ತಜ್ಞರು ಈ ಪ್ರಥಮ ಮಹತ್ತರ ಸರ್ಕಾರಿ ಹಸ್ತಕ್ಷೇಪದಲ್ಲಿ ಭಾಗವಾಗಿರಲಿಕ್ಕಿಲ್ಲ ಎಂಬುದನ್ನು ತಿಳಿಸುತ್ತದೆ. ಅದಕ್ಕೂ ಮುಖ್ಯವಾಗಿ ಈ ಟಾಸ್ಕ್‌ಫೋರ್ಸ್‌ಅನ್ನು ಒಬ್ಬ ಮಕ್ಕಳ ಆರೋಗ್ಯತಜ್ಞ (ಪೀಡ್ರಿಯಾಟಿಶಿಯನ್) ಮತ್ತು ಹೃದಯ ತಜ್ಞ ವೈದ್ಯರು ಜಂಟಿಯಾಗಿ ಮುನ್ನಡೆಸಿದ್ದರು. (ಈಗಲೂ ಅದು ಮುಂದುವರೆದಿದೆ). ಕರ್ನಾಟಕವೂ ಸೇರಿ ಹಲವಾರು ರಾಜ್ಯಗಳಲ್ಲಿ ಪ್ರಮುಖ ಕ್ಲಿನಿಶಿಯನ್ಸ್ ಮತ್ತು ಸರ್ಕಾರಿ ವೈದ್ಯಾಧಿಕಾರಿಗಳೇ ತಜ್ಞ ಸಮಿತಿಗಳ ನೇತೃತ್ವ ವಹಿಸಿದ್ದಾರೆ. ಮುಂದುವರೆದ ದೇಶಗಳಲ್ಲಿ ಕೋವಿಡ್ ಮಧ್ಯಸ್ಥಿಕೆಯ ವಿಚಾರದಲ್ಲಿ ಸರ್ಕಾರಗಳಿಗೆ ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಮತ್ತು ಸೋಂಕು ರೋಗಗಳ ಮತ್ತು ಸಾರ್ವಜನಿಕ ಆರೋಗ್ಯದ ಸ್ಪೆಷಲಿಸ್ಟ್ ತಜ್ಞರು ಸಲಹೆ ನೀಡುತ್ತಿದ್ದಾರೆ. ಮೊದಲಿಗೆ, ವೈಜ್ಞಾನಿಕ ಆಧಾರಗಳಿದ್ದರೂ ಸಾಂಕ್ರಾಮಿಕದ ಅಪಾಯವನ್ನು ಒಪ್ಪಕೊಳ್ಳಲು ಭಾರತದ ಸರ್ಕಾರಗಳು ತಡ ಮಾಡಿದವು ಮತ್ತು ಸೂಕ್ತ ತಜ್ಞ ಸಲಹೆಗಳನ್ನು ನಿರಾಕರಿಸುತ್ತ ಬಂದವು. (ಈಗಲೂ ಅದು ಮುಂದುವರೆದಿದೆ).

ಸಾಂಕ್ರಾಮಿಕ ಶುರುವಾದ ಮೂರು ತಿಂಗಳಲ್ಲಿ, 2020ರ ಮಾರ್ಚ್ ಮಧ್ಯಭಾಗದಲ್ಲಿ ಚೀನಾದ ಸಂಶೋಧಕರು ಕೋವಿಡ್-19ನ ಮೂಲ ಸಾಂಕ್ರಾಮಿಕ ಗುಣಲಕ್ಷಣಗಳನ್ನು ಪ್ರಕಟಿಸಿದರು. ಈ ದತ್ತಾಂಶಗಳು ಯುರೋಪ್ ಮತ್ತು ಅಮೆರಿಕದಲ್ಲಿ ನಿಯಂತ್ರಣಕಾರಿ (ಕಂಟೇನ್‌ಮೆಂಟ್) ಕ್ರಮಗಳಿಗೆ ಸೂಚಿಸಿದವು. ಅಪಾಯದ ಮುನ್ಸೂಚನೆ ನೀಡುವ ಮಾಡೆಲ್‌ಗಳ ಆಧಾರದಲ್ಲಿ, ಹೆಚ್ಚು ಬಾಧೆಗೊಳಬಹುದಾದ ಕಡಿಮೆ ಆದಾಯದ ದೇಶಗಳ ಸಮುದಾಯಗಳ ರಕ್ಷಣೆಗೆ ವಿಶ್ವ ಆರೋಗ್ಯ ಸಂಸ್ಥೆಯು ಕೂಡಲೇ ರಕ್ಷಣಾ ಯೋಜನೆಗಳನ್ನು ಸಿದ್ಧಪಡಿಸಿತು. ಇಂತಹ ಪ್ರದೇಶ ಮತ್ತು ಜನತೆಯನ್ನು ವಿಭಿನ್ನ ರೀತಿಯಲ್ಲಿ ಆರೈಕೆ ಮಾಡುವ ಮಾರ್ಗಸೂಚಿಗಳನ್ನು ಹೊರಡಿಸಲಾಯಿತು. ಭೌಗೋಳಿಕ-ಪ್ರಾದೇಶಿಕ (ಜಿಯೋ-ಸ್ಪೇಟಿಯಲ್) ಮ್ಯಾಪಿಂಗ್ ನೆರವಿನಿಂದ ತೀವ್ರ ಮತ್ತು ನಿಧಾನಗತಿಯ ಪ್ರಸರಣದ ಪ್ರದೇಶಗಳನ್ನು ಗುರುತಿಸಲಾಯಿತು. ಸಾರ್ವಜನಿಕ ಸ್ಥಳಗಳಲ್ಲಿ ಜನರ ಸುರಕ್ಷತೆ ಮತ್ತು ಸೂಕ್ತ ಕೋವಿಡ್ ವರ್ತನೆಗಳ ಪ್ರೊಟೊಕಾಲ್‌ಗಳನ್ನು ಜಾರಿಗೆ ತರಲಾಯಿತು.

ಯುರೋಪ್‌ನಿಂದ ದೊರೆತ ಪ್ರಸರಣದ ದತ್ತಾಂಶ (ಡೈನಮಿಕ್ಸ್ ಡೇಟಾ) ಆಧಾರದಲ್ಲಿ ಜರ್ಮನಿಯು ಒಂದು ವಿಶಿಷ್ಟ ಸವೇಕ್ಷಣಾ ಮತ್ತು ಮೈಕ್ರೊ-ಕಂಟೇನ್‌ಮೆಂಟ್ ಯೋಜನೆಯನ್ನು ಅಳವಡಿಸಿಕೊಂಡಿತು. ಇದರಿಂದಾಗಿ ಸಾಂಕ್ರಾಮಿಕ ಹರಡುವಿಕೆಯ ಗರಿಷ್ಠ ಮಟ್ಟವನ್ನು ಮತ್ತು ಮರಣ ಪ್ರಮಾಣವನ್ನು ತಡೆಯಲು ಸಾಧ್ಯವಾಯಿತು. ಈ ಎಲ್ಲ ದತ್ತಾಂಶ ಪ್ರೇರಿತ, ಆಧರಿತ ವಿಧಾನಗಳು ಕನಿಷ್ಠ ಆರ್ಥಿಕತೆ ಕಾರ್ಯಶೀಲವಾಗಿರುವಂತೆ ನೋಡಿಕೊಳ್ಳುವ ಮೂಲಕ, ಜೀವನೋಪಾಯಗಳ ರಕ್ಷಣೆ ಮಾಡಿದವು. ಚೀನಾ ಮತ್ತು ಇಟಲಿಯ ಸಾಂಕ್ರಾಮಿಕತೆಯ ದತ್ತಾಂಶದ ಆಧಾರದಲ್ಲಿ, ಏಪ್ರಿಲ್ ಹೊತ್ತಿಗೆ ಸ್ಪೇನ್, ಇಟಲಿ ಮತ್ತು ಫ್ರಾನ್ಸ್‌ಗಳು ಕೋವಿಡ್-19ಗೆ ಸಂಬಂಧಿಸಿದ ಕ್ಲಿನಿಕಲ್ ಕೋರ್ಸ್ ಮತ್ತು ನಿರ್ವಹಣೆಯ ದತ್ತಾಂಶಗಳನ್ನು ಪ್ರಕಟಿಸಿದವು. ಇದು ವಿವಿಧ ದೇಶಗಳು ಟೆಸ್ಟಿಂಗ್ ವಿಧಾನ ಮತ್ತು ಚಿಕಿತ್ಸಾ ವಿಧಾನಗಳನ್ನು ಪರಿಷ್ಕರಿಸಲು ನೆರವಾಯಿತು. ಈ ಹೊತ್ತಿಗೆ, ಬಹು ಆಯಾಮದ ಚಿಕಿತ್ಸಾ ಶಿಷ್ಟಾಚಾರಗಳನ್ನು ಅಳವಡಿಸಿಕೊಂಡಿದ್ದ ಆಸ್ಪತ್ರೆಗಳು ಕೋವಿಡ್-19 ಮತ್ತು ಕೋವಿಡ್ ಅಲ್ಲದ ರೋಗಗಳನ್ನು ನಿರ್ವಹಿಸಲು ಸುಸಜ್ಜಿತಗೊಂಡಿದ್ದವು.

PC : Times of India

ಭಾರತದಲ್ಲೂ ಕ್ರಿಯಾಶೀಲವಾದ ದತ್ತಾಂಶ ಸಂಗ್ರಹಣೆ ಮತ್ತು ವಿಶ್ಲೇಷಣೆಯ ವ್ಯವಸ್ಥೆಯಿದೆ, ಅದರಲ್ಲಿ ಮುಖ್ಯವಾದದು ಸಮಗ್ರ ರೋಗ ಸರ್ವೇಕ್ಷಣಾ ಕಾರ್ಯಕ್ರಮ. ಮುಂದುವರೆದ ಐಟಿ ಮತ್ತು ಜಿಯೋ-ಸ್ಪೇಟಿಯಲ್ ತಂತ್ರಜ್ಞಾನದ ವಾತಾವರಣವು ಭಾರತದ ದತ್ತಾಂಶ ವಿಜ್ಞಾನವನ್ನು ಇನ್ನಷ್ಟು ಸಶಕ್ತಗೊಳಿಸಿದೆ. ಆದರೂ, ಇವತ್ತಿನವರೆಗೂ ಕೋವಿಡ್-19ನ ಸಾಂಕ್ರಾಮಿಕತೆ ಮತ್ತು ಕ್ಲಿನಿಕಲ್ ಗುಣಲಕ್ಷಣಗಳ ಒಂದು ಯೋಗ್ಯ ಪ್ರಕಟಣೆಯೂ ಭಾರತದ ಯಾವ ರಾಜ್ಯದಿಂದಲೂ ಮೂಡಿಬಂದಿಲ್ಲ. ಜನಸಂಖ್ಯೆಗೆ ಅನುಗುಣವಾಗಿ ಹರಡುವಿಕೆಯ ಚಲನಶೀಲತೆಯನ್ನು ಪರಿಗಣನೆಗೆ ತೆಗೆದುಕೊಳ್ಳದೇ ಸರ್ಕಾರಗಳು ಕೇವಲ ಸಂಪೂರ್ಣ ಲಾಕ್‌ಡೌನ್ ಹೇರಿದವು, ಅದನ್ನು ಸಾಕಷ್ಟು ಸಲ ವಿಸ್ತರಣೆ ಮಾಡಿದವು. ಓತಪ್ರೇತವಾದ ಪಾಸಿಟಿವ್ ಕೇಸ್‌ಗಳ ಸಂಖ್ಯೆಯ ಆಧಾರದಲ್ಲಿ ಸ್ಥಳೀಯ ಕಂಟೇನ್‌ಮೆಂಟ್ ವಲಯ ಮತ್ತು ಅವುಗಳ ಸುತ್ತಳತೆಯನ್ನು ನಿರ್ಧರಿಸಲಾಯಿತು. ಸೂಕ್ತ ದತ್ತಾಂಶವಿಲ್ಲದೇ ಕೋವಿಡ್-19 ನಿರ್ವಹಿಸಲು ಅಗತ್ಯವಾದ ಸಂರಚನೆ ಮತ್ತು ಸಂಪನ್ಮೂಲಗಳನ್ನು ಮರು-ರೂಪಿಸಿಕೊಳ್ಳಲು ಆರೋಗ್ಯ ವ್ಯವಸ್ಥೆಗಳಿಗೆ ಸಾಧ್ಯವಾಗಲೇ ಇಲ್ಲ. ಅದಕ್ಕೂ ಮುಖ್ಯವಾಗಿ ಚಿಕಿತ್ಸಾ ವಿಧಾನಗಳು ವಿಶ್ವ ಆರೋಗ್ಯ ಸಂಸ್ಥೆಯ ಸಾಮಾನ್ಯ ಮಾರ್ಗಸೂಚಿಗಳ ಆಧಾರದಲ್ಲಿ ರೂಪಿತವಾಗಿದ್ದವು, ಅವು ಭಾರತದ ಸಾಂದರ್ಭಿಕ ಇಶ್ಯೂಗಳಿಗೆ ಅನುಗುಣವಾಗಿರಲಿಲ್ಲ.

ಟೆಸ್ಟಿಂಗ್ ಕಿಟ್‌ಗಳು ಮತ್ತು ಮಾನವ ಸಂಪನ್ಮೂಲದ ಲಭ್ಯತೆಯ ಆಧಾರದಲ್ಲಿ ಮಾತ್ರವೇ ಟೆಸ್ಟಿಂಗ್ ಸ್ಟ್ರಾಟಜಿಯನ್ನು ರೂಪಿಸಲಾಯಿತು. ನಂತರದಲ್ಲಿ ರ್‍ಯಾಪಿಡ್ ಟೆಸ್ಟ್‌ಗಳ ತಪ್ಪಾದ ನೆಗೆಟಿವ್ ಟೆಸ್ಟ್‌ಗಳ ಸಮಸ್ಯೆಯನ್ನು ಪರಿಗಣನೆಗೆ ತೆಗೆದುಕೊಳ್ಳದೇ ರ್‍ಯಾಪಿಡ್ ಟೆಸ್ಟ್ ಮೇಲೆಯೇ ಸರ್ಕಾರ ಹೆಚ್ಚು ಅವಲಂಬಿತವಾಗಿತು. ಸಾಂಕ್ರಾಮಿಕತೆಯು ತ್ವರಿತವಾಗಿ ಗರಿಷ್ಠ ಮಟ್ಟ ತಲುಪುವುದನ್ನು ತಡೆಯಲು ರ್‍ಯಾಪಿಡ್ ಟೆಸ್ಟ್‌ಗಳು ನೆರವಾಗಬಲ್ಲವೇ ಹೊರತು, ಅವು ದೈನಂದಿನ ರೊಟೀನ್ ಸರ್ವೇಕ್ಷಣೆಯಲ್ಲಿ ಹೆಚ್ಚು ಉಪಯೋಗಿಯಲ್ಲ. ಬದಲಾಗಿ ರ್‍ಯಾಪಿಡ್ ಟೆಸ್ಟ್‌ಗಳ ತಪ್ಪಾದ ನೆಗೆಟಿವ್ ಸಮಸ್ಯೆಯನ್ನು ಕಂಡು ಹಿಡಿಯಬಲ್ಲ, ಸುಧಾರಿತ ಟೆಸ್ಟಿಂಗ್ ಅಲ್ಗೊರಿದಮ್‌ಗಳನ್ನು ಹೊಂದಿದ ಸಾಂಕ್ರಾಮಿಕ ಸ್ಟ್ರಾಟಜಿಗಳನ್ನು ಅಳವಡಿಸಿಕೊಳ್ಳಬೇಕಿತ್ತು. ಈ ಒಂದು ಕಾರ್ಯವಿಧಾನವು (ಸ್ಟ್ರಾಟಜಿ) ಹೊಸ ಸ್ವರೂಪದ ವೈರಸ್‌ನ ಸಮೀಕ್ಷೆ ಮಾಡುವ ಸಾಮರ್ಥ್ಯವನ್ನೂ ಸಿಮೀತಗೊಳಿಸಿದೆ.

ಏನೇ ಇರಲಿ, ಭಾರತೀಯ ವಿಜ್ಞಾನಿಗಳ ತಂಡಗಳು ಕಾರ್ಯಸಾಧುವಾದ ದತ್ತಾಂಶಗಳನ್ನು ಸರ್ಕಾರಕ್ಕೆ ನೀಡಲು ಯತ್ನಿಸಿದವು. ಏಪ್ರಿಲ್ 2020ರಲ್ಲಿ ವ್ಯಾಪಕ ಟೆಸ್ಟಿಂಗ್ ಲಭ್ಯವಾಗುವುದಕ್ಕೂ ಮೊದಲು, ಐಸಿಎಂಆರ್ SARI ಸಮೀಕ್ಷೆ ನಡೆಸಿ ಅದರ ವಿವರಗಳನ್ನು ಪ್ರಕಟಿಸಿತ್ತು. ಸಮುದಾಯ ಆಧರಿತ ಮೈಕ್ರೋ-ಕಂಟೇನ್‌ಮೆಂಟ್ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಲಾಯಿತು. ಲಾಕ್‌ಡೌನ್ ಸಮಯದಲ್ಲಿ ಮುಚ್ಚಿದ ಸ್ಥಳಗಳಲ್ಲಿ (ಕ್ಲೋಸ್ಡ್ ಸ್ಪೇಸ್) ಕೋವಿಡ್ ಹರಡುವಿಕೆಯ ಮಾದರಿಗಳನ್ನು ಇನ್ನೆರಡು ಅಕಾಡೆಮಿಕ್ ತಂಡಗಳು ವಿಶ್ಲೇಷಣೆ ಮಾಡಿದವು. ಈ ಯಾವುದೇ ಆಧಾರಗಳು ಸರ್ಕಾರಗಳಿಗೆ ಹೊಸ ಮತ್ತು ಉತ್ತಮ ಕ್ರಮಗಳನ್ನು ತೆಗೆದುಕೊಳ್ಳಲು ಪ್ರೇರೇಪಿಸಲೇ ಇಲ್ಲ. ಇದರರ್ಥ ಸರ್ಕಾರಗಳಿಗೆ ದತ್ತಾಂಶ ಆಧಾರಗಳ ಬಗ್ಗೆ ತಿಳಿವು ಇರಲಿಲ್ಲ ಎಂದೇನೂ ಅಲ್ಲ. ತಮ್ಮ ರಾಜಕೀಯ ನಿರೂಪಣೆಗಳನ್ನು ಸಮರ್ಥಿಸಿಕೊಳ್ಳಲು ಅವು ಸೆರೊ-ಸಮೀಕ್ಷೆಯ ಸರಣಿಗಳ ಬಗ್ಗೆ (ಐಸಿಎಂಆರ್ ಮತ್ತು ರಾಜ್ಯ ಸರ್ಕಾರಗಳು ನಡೆಸಿದ ಸಮೀಕ್ಷೆಗಳು) ಸಾರ್ವಜನಿಕವಾಗಿ ಪ್ರಸ್ತಾಪಿಸಿ ಮಧ್ಯಸ್ಥಿಕೆ ವಹಿಸಿದವು. ಇದಕ್ಕೂ ಮೊದಲು ತಬ್ಲಿಕಿ ಜಮಾತ್‌ಗೆ ಹಾಜರಾದವರ ಅಂಕಿ-ಸಂಖ್ಯೆಯ ಮೇಲೆ ವಿಪುಲವಾಗಿ ಚರ್ಚೆ ನಡೆಯಲ್ಪಟ್ಟಿತು; ಇದು ಒಂದು ವ್ಯಾಪಕ ಕಳಂಕವನ್ನು ಜನರ ನಡುವೆ ಬಿತ್ತಲು ಶಕ್ತವಾಗಿತು. ಆಯ್ದ ಅನ್ವಯಿಕೆಗಳು ಮತ್ತು ದತ್ತಾಂಶ ಚರ್ಚೆಗಳು ಸಾಂಕ್ರಾಮಿಕ ನಿಯಂತ್ರಣದಲ್ಲಿ ಪ್ರತಿಕೂಲಕರವಾಗಿ ಸಂಭವಿಸಿದ್ದು ಸಾಬೀತಾಗಿದೆ.

PC : openDemocracy

ಸದೃಢ ತಳಪಾಯವಿದ್ದರೂ, ಮಾಧ್ಯಮಗಳ (ರಾಜಕೀಯವೂ ಸೇರಿಕೊಂಡು) ಒತ್ತಡಕ್ಕೆ ಈಡಾದ ವೈದ್ಯಕೀಯ ಸಮುದಾಯಗಳು ಸಾಕಷ್ಟು ಸಲ ಗಲಿಬಿಲಿಗೆ ಒಳಗಾದವು. ಯಾವುದೇ ಉಪಯೋಗದ ಬಗ್ಗೆ ಸಾಕ್ಷ್ಯ ಇಲ್ಲದಿದ್ದರೂ ಹೈಡ್ರಾಕ್ಸಿಕ್ಲೊರೊಕ್ವಿನ್, ರೆಮೆಡ್ಸೆವಿರ್ ಮತ್ತು ಚೀನಾದ ರ್‍ಯಾಪಿಡ್ ಟೆಸ್ಟಿಂಗ್ ಕಿಟ್‌ಗಳಿಗೆ ಅಂಗೀಕಾರ ನೀಡಿದಾಗ ಇದು ಸಾಬೀತಾಯಿತು. ಎರಡು ಡ್ರಗ್‌ಗಳ ಬಳಕೆಯು ಸಾಂಸ್ಥಿಕ ಸಂಪನ್ಮೂಲಗಳನ್ನು ವ್ಯಯ ಮಾಡಿತು ಹಾಗೂ ದೇಶದಾದ್ಯಂತ ಸುಳ್ಳು ಭರವಸೆಯನ್ನು ಮೂಡಿಸಿತು – ಆದರೆ ಯಾವುದೇ ಪ್ರಯೋಜನ ಒದಗಲಿಲ್ಲ. ಇದರ ಜೊತೆಗೆ ಪರ್ಯಾಯ ವೈದ್ಯಕೀಯ ವ್ಯವಸ್ಥೆಗಳು ಕೋವಿಡ್ ಗುಣಪಡಿಸುವ ವಿಚಾರದಲ್ಲಿ ಆಧಾರರಹಿತ (ಕೆಲವೊಮ್ಮೆ ಫೇಕ್ ಕೂಡ) ವಿಷಯಗಳನ್ನು ಸಮರ್ಥಿಸಿಕೊಳ್ಳಲು ಸರ್ಕಾರ ಅವಕಾಶ ನೀಡಿತು. ಅವೈಜ್ಞಾನಿಕ ಹಸ್ತಕ್ಷೇಪಗಳ ಉತ್ತೇಜನ ಮತ್ತು ವೈರುಧ್ಯಕರ ಬಹು ಕಾರ್ಯವಿಧಾನಗಳ ಬಳಕೆ ಸಾಂಕ್ರಾಮಿಕ ನಿಯಂತ್ರಣದಲ್ಲಿ ಪ್ರತಿಕೂಲಕರವಾಗುತ್ತದೆ.

ಯಾವುದೇ ಒಂದು ಸಮಾಜಕ್ಕೆ ಎದುರಾದ ಯಾವುದೇ ಸವಾಲನ್ನು ನಿರ್ವಹಿಸಲು ಪುರಾವೆ ಆಧರಿತ ನೀತಿಗಳು ಮತ್ತು ಹಸ್ತಕ್ಷೇಪಗಳು ಮೂಲಾಧಾರ. ಕಾರ್ಯಸಾಧು (ಕ್ರಿಯಾತ್ಮಕ) ಪುರಾವೆಗಳನ್ನು ಒದಗಿಸಬಲ್ಲ ಒಂದು ಪಳಗಿದ ಸಂಶೋಧನಾ ವ್ಯವಸ್ಥೆಯ ವಾತಾವರಣವನ್ನು ಹೊಂದಿರುವುದು ಭಾರತದ ಅದೃಷ್ಟ. ಆದರೆ ಭಾರತದಲ್ಲಿ ಕೋವಿಡ್-19 ನಿಯಂತ್ರಣ-ನಿರ್ವಹಣೆಯಲ್ಲಿ ಸಾರ್ವಜನಿಕ ಆರೋಗ್ಯ ಸಂಶೋಧನಾ ವ್ಯವಸ್ಥೆಯನ್ನು ಕನಿಷ್ಠ ಮಟ್ಟದಲ್ಲಿ ಬಳಸಿಕೊಳ್ಳಲಾಯಿತು. ಮುಂದುವರೆದ ದೇಶಗಳಿಗೆ ತದ್ವಿರುದ್ಧವಾಗಿ ಭಾರತದಲ್ಲಿ ಸಾರ್ವಜನಿಕ ಆರೋಗ್ಯ ಸಂಶೋಧಕರು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ನಾಯಕತ್ವದ ಭಾಗವಾಗಿರದೇ, ಪ್ರತ್ಯೇಕವಾಗಿಯೇ ಕಾರ್ಯ ನಿರ್ವಹಿಸುತ್ತಾರೆ. ಇನ್ನೊಂದು ಕಡೆ ಸರ್ಕಾರಗಳು ಸಂದರ್ಭಗಳಿಗೆ ಪ್ರತಿಕ್ರಿಯಾತ್ಮಕವಾಗಿರುತ್ತವೆ ಮತ್ತು ಸಮಸ್ಯೆಗಿಂತ ಗ್ರಹಿಕೆಗಳ ನಿರ್ವಹಣೆಗೇ ಹೆಚ್ಚು ಪ್ರಯತ್ನಿಸುತ್ತವೆ. ಇದೆಲ್ಲ ಇರಲಿ, ಕೋವಿಡ್ ಮತ್ತು ಅದರ ಹೊಸ ಸ್ವರೂಪಗಳು ಒಡ್ಡಲಿರುವ ಸವಾಲುಗಳನ್ನು ಎದುರಿಸಲು ಸರ್ಕಾರಗಳು, ಹೆಚ್ಚು ಕಾರ್ಯಶೀಲ ಪುರಾವೆಗಳನ್ನು ಸೃಷ್ಟಿಸುವ ತಮ್ಮ ಸಾಂಕ್ರಾಮಿಕ ನಿಯಂತ್ರಣ ವ್ಯವಸ್ಥೆಗಳನ್ನು ಉನ್ನತೀಕರಿಸಿಕೊಳ್ಳಬೇಕಿದೆ ಮತ್ತು ಅದನ್ನು ಜನರ ಒಳಿತಿಗೆ ಬಳಸಬೇಕಾಗಿದೆ.

(ಕನ್ನಡಕ್ಕೆ): ಮಲ್ಲನಗೌಡರ್

ಹಿಮಾಂಶು ಎಂ
ಆರೋಗ್ಯ ಯೋಜನೆಗಳನ್ನು ರೂಪಿಸುವ ಅನುಭವವಿರುವ ಹಿಮಾಂಶು ಅವರು ಜಾಗತಿಕ ಆರೋಗ್ಯ ವಿಷಯದಲ್ಲಿ ಸಂಶೋಧಕರು ಮತ್ತು ವೈದ್ಯರು. ನವದೆಹಲಿಯ ಅಂತಾರಾಷ್ಟ್ರೀಯ ವೈದ್ಯಕೀಯ ಸಂಸ್ಥೆಯ ಜೊತೆಗೆ ಅವರು ಪ್ರಸಕ್ತ ಕಾರ್ಯನಿರ್ವಹಿಸುತ್ತಿದ್ದಾರೆ.


ಇದನ್ನೂ ಓದಿ: ಹೊಸ ಕೊರೊನಾ ಆತಂಕ: ಬ್ರಿಟನ್‌ನಿಂದ ಬಂದ 16 ಪ್ರಯಾಣಿಕರಿಗೆ ಕೊರೊನಾ ಸೋಂಕು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...