ಹೊಸ ಕೊರೊನಾ ಆತಂಕ: ಬ್ರಿಟನ್‌ನಿಂದ ಬಂದ 16 ಜನರಿಗೆ ಕೊರೊನಾ ಸೋಂಕು
PC:Indian Express

ಬ್ರಿಟನ್‌ನಲ್ಲಿ ಕಂಡು ಬಂದಿರುವ ಹೊಸ ಸ್ವರೂಪದ ಕೊರೊನಾ ಭಾರತದಲ್ಲೂ ಆತಂಕ ಸೃಷ್ಟಿಸುತ್ತಿದೆ. ಕಳೆದ ಕೆಲವು ದಿನಗಳಲ್ಲಿ ಯುಕೆಯಿಂದ ಭಾರತಕ್ಕೆ ಬಂದಿರುವ 16 ಪ್ರಯಾಣಿಕರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ಹೊಸ ಸ್ವರೂಪದಲ್ಲಿ ಹರಡುತ್ತಿರುವ ಕೊರೊನಾ ಸೋಂಕು ಹೆಚ್ಚು ಸಾಂಕ್ರಾಮಿಕ ಎಂದು ನಂಬಲಾಗಿದೆ. ಮೂಲ ವೈರಸ್‌ಗಿಂತ 70 ರಷ್ಟು ಹೆಚ್ಚು ವೇಗವಾಗಿ ಹರಡುತ್ತಿರುವ ಕಾರಣ ಹಲವು ದೇಶಗಳು ಕೂಡ ಬ್ರಿಟನ್‌ಗೆ ವಿಮಾನಯಾನವನ್ನು ನಿರ್ಬಂಧಿಸಿವೆ.

ಅಮೃತಸರದಲ್ಲಿ ಯುಕೆಯಿಂದ ಬಂದ ಎಂಟು ಜನರು, ಐದು ಮಂದಿಗೆ ನವದೆಹಲಿಯಲ್ಲಿ, ಕೋಲ್ಕತ್ತಾದಲ್ಲಿ ಇಬ್ಬರಿಗೆ ಮತ್ತು ಚೆನ್ನೈನಲ್ಲಿ ಒಬ್ಬರಿಗೆ ಕೊರೊನಾ ಸೋಂಕು ಹೊಂದಿರುವುದು ವರದಿಯಲ್ಲಿ ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಬ್ರಿಟನ್‌ನಲ್ಲಿ ಹೊಸ ಕೊರೊನಾ ವೈರಸ್ ಪತ್ತೆ: ಯುಕೆ ವಿಮಾನಗಳನ್ನು ನಿರ್ಬಂಧಿಸಿದ ಭಾರತ

ಆದರೆ ಭಾರತದಲ್ಲಿ ಎಲ್ಲಿಯೂ ರೂಪಾಂತರ ಹೊಂದಿರುವ ಕೊರೊನಾ ಬಗ್ಗೆ ಯಾವುದೇ ಪ್ರಕರಣ ಇನ್ನು ದೃಢಪಟ್ಟಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

ಕಳೆದ ಎರಡು ದಿನಗಳಲ್ಲಿ, ಯುಕೆಯಿಂದ ಬಂದ ಪ್ರಯಾಣಿಕರಿಗೆ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗಿದೆ. ಕೊರೊನಾ ರಿಸಲ್ಟ್ ಬರುವವರೆಗೆ ವಿಮಾನ ನಿಲ್ದಾಣಗಳಲ್ಲಿ ಕಾಯುವಂತೆ ತಿಳಿಸಲಾಗಿತ್ತು. ಈಗ ಕೊರೊನಾ ಸೋಂಕು ಇರುವವರ ಪರೀಕ್ಷಾ ಮಾದರಿಗಳನ್ನು ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯಂತಹ ವಿಶೇಷ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ.

ಕೇರಳದಲ್ಲೂ ವೈರಸ್ ಬಗ್ಗೆ ಎಚ್ಚರ ವಹಿಸಲಾಗುತ್ತಿದ್ದು, ಇಲ್ಲಿಗೂ ಹೊಸ ಕೊರೊನಾ ಬರುವ ಆತಂಕ ಇದೆ ಎಂದು ಕೇರಳದ ಆರೋಗ್ಯ ಸಚಿವೆ ಶೈಲಜಾ ತಿಳಿಸಿದ್ದಾರೆ.

ಇದನ್ನೂ ಓದಿ: ಹೊಸ ಕೊರೊನಾ ಆತಂಕ: ಕಳೆದ 14 ದಿನದಲ್ಲಿ ಹೊರ ದೇಶಗಳಿಂದ ರಾಜ್ಯಕ್ಕೆ ಬಂದವರಿಗೆ ಟೆಸ್ಟ್

ಯುರೋಪ್, ಇಟಲಿ ಮತ್ತು ಯುಕೆಯಿಂದ ಬರುವ ಎಲ್ಲಾ ಪ್ರಯಾಣಿಕರನ್ನು ಕೇರಳ ವಿಮಾನ ನಿಲ್ದಾಣಗಳಲ್ಲಿ ಪರೀಕ್ಷೆ ನಡೆಸಲು ನಿರ್ಧರಿಸಿದ್ದೇವೆ. ಯುಕೆಯಿಂದ ಒಂದು ವಿಮಾನ ಬಂದಿದೆ. ಅವರಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ. ಇನ್ನೂ ಫಲಿತಾಂಶ ಬರಬೇಕಿದೆ ಎಂದು ಕೇರಳ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ತಿಳಿಸಿದ್ದಾರೆ.

ಕರ್ನಾಟಕದಲ್ಲಿಯೂ ನಾಳೆಯಿಂದ(ಡಿ.24) ರಾತ್ರಿ ಕರ್ಫ್ಯೂ ಜಾರಿ ಮಾಡಲಾಗಿದೆ. ಮಹಾರಾಷ್ಟ್ರ ಸರ್ಕಾರವು ಮುಂಬೈ ಮತ್ತು ಎಲ್ಲಾ ಪ್ರಮುಖ ನಗರಗಳಲ್ಲಿ ಜನವರಿ 5 ರ ವರೆಗೆ ರಾತ್ರಿ 11 ರಿಂದ ಬೆಳಿಗ್ಗೆ 6 ರವರೆಗೆ ರಾತ್ರಿ ಕರ್ಫ್ಯೂ ವಿಧಿಸಿದೆ.


ಇದನ್ನೂ ಓದಿ: ರೂಪಾಂತರಿ ಕೊರೊನಾ ವೈರಸ್ ಭೀತಿ: ರಾತ್ರಿ ಕರ್ಫ್ಯೂ ದಿನಾಂಕ ಬದಲಿಸಿದ ಮುಖ್ಯಮಂತ್ರಿ!

LEAVE A REPLY

Please enter your comment!
Please enter your name here