2008ರ ಮಾಲೆಂಗಾವ್ ಸ್ಫೋಟ ತಡೆಗಟ್ಟಲು ಗುಪ್ತಚರ ಇಲಾಖೆಯ ಕರ್ತವ್ಯದ ಭಾಗವಾಗಿ ಕೈಗೊಂಡ ಕ್ರಮಗೇಳನು? ಆ ಪಿತೂರಿ ಸಭೆಗಳಲ್ಲಿ ಭಾಗವಹಿಸಿದ್ದೇಕೆ ಎಂದು ಪ್ರಕರಣದ ಆರೋಪಿಗಳಲ್ಲೊಬ್ಬರಾದ ಲೆಫ್ಟಿನೆಂಟ್ ಕರ್ನಲ್ ಪುರೋಹಿತ್‌ಗೆ ಬಾಂಬೆ ಹೈಕೋರ್ಟ್ ಪ್ರಶ್ನೆ ಮಾಡಿದೆ.
ನ್ಯಾಯಮೂರ್ತಿಗಳಾದ ಎಸ್.ಎಸ್. ಶಿಂಧೆ ಮತ್ತು ಮನೀಶ್ ಪಿಟಾಲೆ ಅವರ ಪೀಠವು 2008 ರ ಜನವರಿ 26 ರಂದು ಭಾಗವಹಿಸಿದ್ದ ಸಭೆಯ ಬಗ್ಗೆ ಪುರೋಹಿತ್ ಅವರನ್ನು ಪ್ರಶ್ನೆ ಮಾಡಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಪ್ರಕಾರ, ಈ ಸಭೆಯನ್ನು ಮುಂಬೈನಲ್ಲಿ ಅಭಿನವ್ ಭಾರತ್ ಎಂಬ ಗುಂಪು ಆಯೋಜಿಸಿತ್ತು ಮತ್ತು ಸ್ಫೋಟದ ಪಿತೂರಿಯನ್ನು ನಡೆಸಲಾಯಿತು. ಸೆಪ್ಟೆಂಬರ್ 29, 2008 ರಂದು ಮಾಲೆಗಾಂವ್‌ನ ಮಸೀದಿಯ ಬಳಿ ನಡೆದ ಸ್ಫೋಟದಲ್ಲಿ ಆರು ಜನರು ಸಾವನ್ನಪ್ಪಿ, 100 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಮುಂದೆ ಏನಾಗಲಿದೆ ಎಂದು ಅವನಿಗೆ ತಿಳಿದಿದ್ದರೆ, ಅದನ್ನು ತಡೆಯಲು ಅವನು ಯಾವ ಕ್ರಮಗಳನ್ನು ತೆಗೆದುಕೊಂಡಿದ್ದಾರೆ? ಸಭೆ ಯಾವಾಗ ನಡೆಯಿತು ಮತ್ತು ಯಾವಾಗ ಸ್ಫೋಟ ಸಂಭವಿಸಿತು? ನಡುವಿನ ಅವಧಿಯಲ್ಲಿ ಏನು ಮಾಡುತ್ತಿದ್ದನು? ಎಂಬುದಾಗಿ ನ್ಯಾಯಪೀಠ ಪ್ರಶ್ನಿಸಿದೆ.
ಇದಕ್ಕೆ ಉತ್ತರಿಸಿದ ಪುರೋಹಿತ್ ಪರ ವಕೀಲ ಶ್ರೀಕಾಂತ್ ಶಿವಾಡೆ, “ಅದು ಕೇವಲ ಸಾಮಾಜಿಕ-ರಾಜಕೀಯ ಸಭೆಯಾಗಿತ್ತು.ಅಲ್ಲಿ ಸ್ಪೋಟದ ಬಗ್ಗೆ ತನ್ನ ಅಧಿಕಾರಿಗಳಿಗೆ ಗುಪ್ತಚರ ಮಾಹಿತಿ ನೀಡಲು ಪುರೋಹಿತ್ ಸಭೆಯಲ್ಲಿ ಭಾಗವಹಿಸಿದ್ದರು. ಅಲ್ಲಿ ಮಾಲೆಗಾಂವ್ ಸ್ಫೋಟದ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಪುರೋಹಿತ್ ವಿರುದ್ಧ ಸ್ಫೋಟ ನಡೆಸಿದ ಆರೋಪವಿಲ್ಲ. ಆ ಸಭೆಯು 2008ರ ಜನವರಿ 26-27 ರಂದು ನಡೆಯಿತು ಮತ್ತು 2008ರ ಸೆಪ್ಟೆಂಬರ್ 29 ರಂದು ಸ್ಫೋಟ ಸಂಭವಿಸಿದೆ” ಎಂದು ಉತ್ತರಿಸಿದರು.
ಪುರೋಹಿತ್ ತನ್ನ ಕರ್ತವ್ಯದ ಭಾಗವಾಗಿಯೇ ಸಭೆಯಲ್ಲಿ ಭಾಗವಹಿಸಿದ್ದರು ಎನ್ನುವುದಕ್ಕೆ ಯಾವುದಾದರೂ ಸಾಕ್ಷಿ ಇದೆಯೇ? ಇದಕ್ಕೆ ಯಾವುದೇ ಲಿಖಿತ ಪತ್ರ ಇಲ್ಲ ಎಂದ ಪುರೋಹಿತ್ ವಕೀಲರು ಮೂಲಗಳಿಂದ ಮಾಹಿತಿ ಆಧರಿಸಿ ಸಭೆಯಲ್ಲಿ ಭಾಗವಹಿಸಿದ್ದಾರೆ. ನಂತರ ಅದರ ವರದಿಯನ್ನು ಹಿರಿಯ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ ಎಂದು ತಿಳಿಸಿದ್ದಾರೆ.
ಪುರೋಹಿತ್ 2008 ರ ಮಾಲೆಗಾಂವ್ ಸ್ಫೋಟ ಪ್ರಕರಣದಿಂದ ತಮ್ಮನ್ನು ಕೈಬಿಡಬೇಕೆಂದು ಬಾಂಬೈ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅವರ ವಿಚಾರಣೆಗೆ ಸರ್ಕಾರದ ಕಾರ್ಯವಿಧಾನದ ಅನುಮತಿ ನೀಡಿಲ್ಲ ಎಂದು ಅವರು ವಾದಿಸಿದ್ದಾರೆ. ಇದೆಲ್ಲವೂ ವಿಚಾರಣೆಯ ವೇಳೆ ಪರಿಶೀಲನೆಗೊಳಪಡುತ್ತವೆ, ಇದನ್ನು ಹೈಕೋರ್ಟಿಗೆ ಏಕೆ ತಂದೀರಿ ಎಂದು ನ್ಯಾಯಾಲಯ ಪ್ರಶ್ನಿಸಿದೆ.
ಇದಕ್ಕೆ ಉತ್ತರಿಸಿದ ಪುರೋಹಿತ್ ವಕೀಲರು ಯಾವುದೇ ಸಾಕ್ಷಿಯು ಸಹ ಪುರೋಹಿತ್ ಹೆಸರನ್ನು ಉಲ್ಲೇಖಿಸಿಲ್ಲ. ನೂರಕ್ಕೂ ಹೆಚ್ಚು ಸಾಕ್ಷಿಗಳಿದ್ದರೂ ಯಾವುವು ಪುರೋಹಿತ್ ವಿರುದ್ಧವಿಲ್ಲ. ಅಲ್ಲದೆ ಅವರನ್ನು ಮತ್ತೆ ಸೇವೆಗೆ ಸೇರಿಸಿಕೊಳ್ಳಲಾಗಿದೆ. ಹಾಗಾಗಿ ವಿಚಾರಣಾ ನ್ಯಾಯಲಯದ ಧೀರ್ಘ ವಿಚಾರಣೆಯಿಂದ ಅವರು ಏಕೆ ಬಾಧಿತರಾಗಬೇಕು ಎಂದಿದ್ದಾರೆ.
ನಂತರ ನ್ಯಾಯಾಲಯವು ತನಿಖಾ ಸಂಸ್ಥೆ ಎನ್‌ಐಎಯನ್ನು ಪ್ರತಿನಿಧಿಸುತ್ತಿದ್ದ ವಕೀಲ ಸಂದೇಶ್ ಪಾಟೀಲ್ ಅವರನ್ನು ವಿಚಾರಣೆಯ ಹಂತದ ಬಗ್ಗೆ ಕೇಳಿತು. ವಿಚಾರಣಾ ನ್ಯಾಯಾಲಯದ ಮುಂದೆ 159 ಸಾಕ್ಷಿಗಳಿದ್ದು, ಇನ್ನೂ 495 ಮಂದಿಯನ್ನು ಪಟ್ಟಿ ಮಾಡಲಾಗಿದ್ದರೂ, ಇನ್ನೂ 300 ಮಂದಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪಾಟೀಲ್ ಹೇಳಿದ್ದಾರೆ. ವಿಚಾರಣೆಯನ್ನು ದಿನನಿತ್ಯದ ಆಧಾರದ ಮೇಲೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಫೆಬ್ರವರಿ 24ಕ್ಕೆ ಮುಂದೂಡಿತು.
ಸೆಪ್ಟೆಂಬರ್ 29, 2008 ರಂದು, ಮಹಾರಾಷ್ಟ್ರದ ನಾಸಿಕ್ ಬಳಿಯ ಮಾಲೆಗಾಂವ್‌ನಲ್ಲಿರುವ ಶಕೀಲ್ ಗೂಡ್ಸ್ ಟ್ರಾನ್ಸ್‌ಪೋರ್ಟ್ ಕಂಪನಿಯ ಎದುರು ಬಾಂಬ್ ಸ್ಫೋಟ ಸಂಭವಿಸಿದೆ. ಎಲ್ಎಂಎಲ್ ಫ್ರೀಡಮ್ ಮೋಟಾರ್ ಬೈಕ್‌ನಿಂದ ಸ್ಫೋಟಕಗಳನ್ನು ಮಸೀದಿಯೊಂದಕ್ಕೆ ನುಗ್ಗಿಸಲಾಯ್ತು. ಘಟನೆಯಲ್ಲಿ ಒಟ್ಟು ಆರು ಜನರು ಸಾವನ್ನಪ್ಪಿದ್ದಾರೆ ಮತ್ತು ಸ್ಫೋಟದಲ್ಲಿ 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಪ್ರಕರಣದ ವಿಚಾರಣೆ ಇನ್ನೂ ಮುಂಬೈ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಪ್ರಾಸಿಕ್ಯೂಷನ್ ಪ್ರಕಾರ, ಆರೋಪಿಗಳು ಸ್ಫೋಟಕ್ಕೆ ಸಂಚು ರೂಪಿಸಿದ ಅಭಿನವ್ ಭಾರತ್ ಸಂಘಟನೆಯವರಾಗಿದ್ದಾರೆ.
ಇದನ್ನೂ ಓದಿ: ಸಂಸತ್ತಿನಲ್ಲಿ ಮಹುವಾ ಮೊಯಿತ್ರ ಬಿರುಗಾಳಿ ಭಾಷಣ: ಯಾವುದೇ ಕ್ರಮವಿಲ್ಲವೆಂದ ಕೇಂದ್ರ


