ಭಾರತದ ಮಾಜಿ ಮುಖ್ಯ ನ್ಯಾಯಾಧೀಶರ ಕುರಿತು ಸಂಸತ್ತಿನಲ್ಲಿ ಟೀಕೆ ಮಾಡಿದ್ದ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರ ವಿರುದ್ಧ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಿದೆ.

ಸಂಸತ್ತಿನಲ್ಲಿ ಆಕ್ರೋಶದ ಮಾತುಗಳ ಮೂಲಕ ಗಮನ ಸೆಳೆದ ಮೊಹುವಾ ಮೊಯಿತ್ರ “ಭಾರತದ ಮಾಜಿ ಮುಖ್ಯ ನ್ಯಾಯಾಧೀಶರೊಬ್ಬರ ವಿರುದ್ಧ ಲೈಂಗಿಕ ಕಿರುಕುಳದ ಪ್ರಕರಣ ದಾಖಲಾಗುತ್ತದೆ. ಅದನ್ನು ಅವರೇ ವಿಚಾರಣೆ ನಡೆಸಿ ಕ್ಲಿನ್‌ಚಿಟ್ ಕೊಟ್ಟುಕೊಳ್ಳುತ್ತಾರೆ. ಅವರು ನಿವೃತ್ತರಾದ ಮೂರೇ ತಿಂಗಳಿಗೆ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ನೇಮಿಸಿ, ಝಡ್ ಪ್ಲಸ್ ಭದ್ರತೆಯನ್ನು ನೀಡಲಾಗುತ್ತದೆ. ಅಂದೇ ನ್ಯಾಯಾಂಗ ತನ್ನ ಪಾವಿತ್ರ್ಯತೆಯನ್ನು ಕಳೆದುಕೊಂಡಿತು” ಎಂದು ಆರೋಪಿಸಿದ್ದರು.

ನಮ್ಮ ಸಂವಿಧಾನದ ಮೂಲತತ್ವಗಳನ್ನು ರಕ್ಷಿಸಲು ನ್ಯಾಯಾಂಗ ಯಾವಾಗ ವಿಫಲವಾಯಿತೋ ಅಂದೇ ಅದು ತನ್ನ ಪಾವಿತ್ರ್ಯತೆಯನ್ನು ಕಳೆದುಕೊಂಡಿತು ಎಂದು ಮಹುವಾ ಗುಡುಗಿದ್ದರು.

ನರೇಂದ್ರ ಮೋದಿ ಸರ್ಕಾರವು ದ್ವೇಷ, ಸಣ್ಣತನ ಮತ್ತು ಧರ್ಮಾಂಧತೆಯನ್ನು ಅಪ್ಪಟ ಫ್ಯಾಸಿಸ್ಟ್ ಮಾದರಿಯಲ್ಲಿ ಅನುಸರಿಸುತ್ತಿದೆ. ಸುಳ್ಳು ಮತ್ತು ಅಪಪ್ರಚಾರವನ್ನೇ ತನ್ನ ಕಾಯಕವಾಗಿಸಿಕೊಂಡು ಹೇಡಿತನವನ್ನೇ ಧೈರ್ಯವೆಂಬಂತೆ ತೋರಿಸಲು ಯತ್ನಿಸುತ್ತಿದೆ ಎಂದು ಅವರು ಕಿಡಿಕಾರಿದ್ದರು.

ಸದನದ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಾರೆ ಎಂದು ಕೇಂದ್ರ ಸಂಸದೀಯ ಖಾತೆ ಸಚಿವ ಪ್ರಹ್ಲಾದ್ ಜೋಶಿ ಮಹುವಾ ಮೊಯಿತ್ರ ವಿರುದ್ಧ ಹಕ್ಕು ಚ್ಯುತಿ ಮಂಡಿಸುವುದಾಗಿ ಹೇಳಿದ್ದರು. ಅಯೋಧ್ಯೆ ತೀರ್ಪು ಮತ್ತು ರಾಮಮಂದಿರದ ಕುರಿತಾಗಿ ಮಹುವಾ ಮಾತನಾಡಿರುವುದು ಗಂಭೀರ ವಿಷಯ. ಹಾಗಾಗಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದ್ದರು.

ತದನಂತರ “ಭಾರತದ ಕರಾಳ ಸಮಯದಲ್ಲಿ ಸತ್ಯವನ್ನು ಮಾತನಾಡಿದ್ದಕ್ಕಾಗಿ ನನ್ನ ವಿರುದ್ಧ ಹಕ್ಕು ಚ್ಯುತಿ ಉಲ್ಲಂಘನೆಯನ್ನು ಪ್ರಾರಂಭಿಸಿದರೆ ಅದು ನಿಜಕ್ಕೂ ಒಂದು ಹಕ್ಕು” ಎಂದು ಮಹುವಾ ತಮ್ಮ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದರು.

ಆದರೆ ಕಾನೂನು ಅಭಿಪ್ರಾಯಗಳು ಮಹುವಾ ಮೊಯಿತ್ರ ಪರವಾಗಿದ್ದು, ಅವರು ಮಾಜಿ ಮುಖ್ಯ ನ್ಯಾಯಮೂರ್ತಿಯ ವಿರುದ್ಧ ಮಾತನಾಡಿದ್ದಾರೆಯೇ ಹೊರತು ಹಾಲಿ ನ್ಯಾಯಮೂರ್ತಿಗಳ ವಿರುದ್ಧವಲ್ಲ. ಹಾಗಾಗಿ ಮಾಜಿ ಸಿಜೆಐ ಅನ್ನು ಉನ್ನತ ಸ್ಥಾನದಲ್ಲಿ ಇಂದು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲವಾದ್ದರಿಂದ ಮಹುವಾ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.

ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹೋರಾಡುತ್ತಿರುವ ರೈತರ ಮೇಲಿನ ಕೇಂದ್ರ ಸರ್ಕಾರದ ದಬ್ಬಾಳಿಕೆಯನ್ನು ಖಂಡಿಸಿದ್ದ ತಮ್ಮ ಭಾಷಣದಲ್ಲಿ ಖಂಡಿಸಿದ್ದ ಮಹುವಾ, “ಭಾರತದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ನಿರ್ಮಾಣವಾಗಿದೆ. ಸುಳ್ಳುಗಳು ಮತ್ತು ಅಪಪ್ರಚಾರವನ್ನು ಸರ್ಕಾರ ತನ್ನ ಪ್ರೊಪಗಂಡಾವನ್ನಾಗಿ ಮಾಡಿಕೊಂಡಿದೆ. ಯಾವುದೇ ಚರ್ಚೆಯಿಲ್ಲದೆ ಕೃಷಿ ಕಾಯ್ದೆಗಳನ್ನು ಹೇರಲಾಗಿದೆ” ಎಂದು ಟೀಕಿಸಿದ್ದರು.

ತಮ್ಮ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂಬುದನ್ನು ಸಹ ಮಹುವಾ ಮೊಯಿತ್ರ ವ್ಯಂಗ್ಯವಾಡಿದ್ದಾರೆ. “ಏನು? ಯಾವುದೇ ಕ್ರಮವಿಲ್ಲವೇ? ಒಳ್ಳೆಯ ಹೋರಾಟವನ್ನು ಮಾಡಲು ನಾನು ಸಜ್ಜಾಗುತ್ತಿದ್ದಾಗ!” ಎಂದು ಅವರು ಟ್ವೀಟ್ ಮಾಡಿದ್ದಾರೆ.


ಇದನ್ನೂ ಓದಿ: ಸಂಸತ್ತಿನಲ್ಲಿ ಪ್ರಜ್ವಲಿಸಿದ ಮಹುವಾ ಮೊಯಿತ್ರಾ ರವರ ಭಾಷಣದ ಕನ್ನಡ ಅನುವಾದ ಓದಿ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

1 COMMENT

LEAVE A REPLY

Please enter your comment!
Please enter your name here