2018 ರಲ್ಲಿ ಭಾರಿ ಸದ್ದು ಮಾಡಿದ್ದ #MeToo ವಿವಾದದ ಸಮಯದಲ್ಲಿ, ಮಾಜಿ ಕೇಂದ್ರ ಸಚಿವ ಎಂ.ಜೆ. ಅಕ್ಬರ್ ವಿರುದ್ದ ಪತ್ರಕರ್ತೆ ಪ್ರಿಯಾ ರಮಣಿ ಕೂಡಾ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಆದರೆ ಪತ್ರಕರ್ತೆಯ ವಿರುದ್ಧ ಅಕ್ಬರ್ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಪ್ರಕರಣದ ಕುರಿತು ದೆಹಲಿ ಕೋರ್ಟ್ ವಿಚಾರಣೆ ನಡೆಸುತ್ತಿದ್ದು, ತೀರ್ಪನ್ನು ಫೆಬ್ರವರಿ 17ಕ್ಕೆ ಮುಂದೂಡಿದೆ.
ಪತ್ರಕರ್ತೆ ಪ್ರಿಯಾ ರಮಣಿ ತಮ್ಮ ಮೇಲೆ ಸುಳ್ಳು ಆರೋಪ ಮಾಡಿದ್ದಾರೆಂದು 2018 ರ ಅಕ್ಟೋಬರ್ 15 ರಂದು ಅಕ್ಬರ್ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದರು. 2021 ರ ಫೆಬ್ರವರಿ 1 ರಂದು ಎರಡು ಕಡೆಯ ವಾದಗಳನ್ನು ಆಲಿಸಿದ್ದ ಕೋರ್ಟ್ ತೀರ್ಪು ಕಾಯ್ದಿರಿಸಿತ್ತು. ಇಂದು ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ರವೀಂದ್ರ ಕುಮಾರ್ ಪಾಂಡೆ ಅವರು ತೀರ್ಪನ್ನು ಮುಂದೂಡಿದ್ದು, ಲಿಖಿತ ಸಲ್ಲಿಕೆಗಳನ್ನು ನಂತರ ಸಲ್ಲಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಪತ್ರಕರ್ತೆ ವಿರುದ್ದ ಮಾಜಿ ಸಚಿವ ಅಕ್ಬರ್ ದಾಖಲಿಸಿದ್ದ ಮಾನಹಾನಿ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶ ವರ್ಗಾವಣೆ!
2018 ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯರು ತಮ್ಮ ಮೇಲೆ ನಡೆದಿರುವ ಲೈಂಗಿಕ ಕಿರುಕುಳದ ಬಗ್ಗೆ ಬರೆಯಲು ಮೀಟೂ (MeToo) ಅಭಿಯಾನವನ್ನು ನಡೆಸಿದ್ದರು. ಈ ಸಂದರ್ಭದಲ್ಲಿ ಅನೇಕ ನಟಿಯರು ಸೇರಿದಂತೆ ಅನೇಕ ಮಹಿಳೆಯರು ತಮ್ಮ ಮೇಲೆ ನಡೆದಿರುವ ಲೈಂಗಿಕ ಕಿರುಕುಳದ ಬಗ್ಗೆ ಬರೆದಿದ್ದರು.
ಈ ಸಮಯದಲ್ಲೇ ಪತ್ರಕರ್ತೆ ಪ್ರಿಯಾ ರಮಣಿ, ಎಂ.ಜೆ. ಅಕ್ಬರ್ ಅವರು ಪತ್ರಕರ್ತನಾಗಿದ್ದ ಸಮಯದಲ್ಲಿ ತನಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಆರೋಪಿಸಿದ್ದರು. ಆದರೆ 2018 ರಲ್ಲಿ ಕೇಂದ್ರ ಮಂತ್ರಿಯಾಗಿದ್ದ ಅಕ್ಬರ್ ಪತ್ರಕರ್ತೆಯ ಆರೋಪವನ್ನು ನಿರಾಕರಿಸಿದ್ದರು. ಜೊತೆಗೆ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನೂ ನೀಡಿದ್ದರು.
ಇದನ್ನೂ ಓದಿ: ಬಾಲಿವುಡ್ ಅಂಗಳದ ಲೈಂಗಿಕ ಶೋಷಣೆ ಮತ್ತು #ಮಿಟೂ ಚಳವಳಿ


