ದೇಶವ್ಯಾಪಿ ರೈತ ಹೋರಾಟ ಮುಂದುವರೆಯುತ್ತಿರುವಾಗಲೇ ದೇಶದ್ರೋಹ ಮುಂತಾದ ಗಂಭೀರ ಆರೋಪಗಳ ಮೇಲೆ ದಿಶಾ ರವಿ ಎಂಬ ಬೆಂಗಳೂರಿನ ಇಪ್ಪತ್ತೊಂದು ವರ್ಷದ ಯುವ ಹೋರಾಟಗಾರ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ತಿಂಗಳುಗಟ್ಟಲೆಗಳಿಂದ ನಡೆಯುತ್ತ ಬಂದಿರುವ ರೈತ ಹೋರಾಟದ ಕುರಿತು ಹಾಗೂ ಹೋರಾಟವನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಬಳಸಿದ ಕೆಲವು ವಿಧಾನಗಳನ್ನು ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಒಂದು ಸಾರ್ವಜನಿಕ ಟೂಲ್‌ಕಿಟ್ ಚಾಲ್ತಿಯಲ್ಲಿದೆ. ಎಲ್ಲ ರೀತಿಯ ಚಳವಳಿ ಹಾಗೂ ವಿಶೇಷ ಸಂದರ್ಭಗಳಲ್ಲಿ ಹೆಚ್ಚು ಜನರ ಜೊತೆಗೆ ವಿಚಾರವಿನಿಮಯ ಮಾಡಲು ಇಂತಹ ಟೂಲ್‌ಕಿಟ್‌ಗಳನ್ನು ಬಳಸಲಾಗುತ್ತದೆ. ಇಂತಹದೊಂದು ಸಾರ್ವಜನಿಕವಾಗಿ ಲಭ್ಯವಿರುವ ಟೂಲ್‌ಕಿಟ್‌ಅನ್ನು ದೇಶದ ವಿರುದ್ಧ ನಡೆಯುತ್ತಿರುವ ಅಂತಾರಾಷ್ಟ್ರೀಯ ಷಡ್ಯಂತ್ರವೆಂದು ಬಿಂಬಿಸಿ, ಆ ದಾಖಲೆಯನ್ನು ಸಂಪಾದಿಸಿದವರಲ್ಲೊಬ್ಬರಾದ ಕಾರಣಕ್ಕೆ ದಿಶಾ ಅವರನ್ನು ಬಂಧಿಸಲಾಗಿದೆ.
ದೆಹಲಿ ಪೊಲೀಸರು ಇವರನ್ನು ಬಂಧಿಸಿದ ರೀತಿಯಲ್ಲಿ ಹಲವಾರು ತೊಂದರೆಗಳಿದ್ದವೆಂದು ಹಿರಿಯ ನ್ಯಾಯವಾದಿಗಳು ಅಭಿಪ್ರಾಯ ಪಟ್ಟಿದ್ದಾರೆ. ರಾತ್ರೋರಾತ್ರಿ ದೆಹಲಿ ಪೊಲೀಸರು ಬೆಂಗಳೂರಿಗೆ ಬಂದು, ಸ್ಥಳೀಯ ಪೊಲೀಸರಿಗೂ ತಿಳಿಸದೆ, ಸ್ಥಳೀಯ ಮ್ಯಾಜಿಸ್ಟ್ರೇಟ್ ನಾಯಾಲಯದ ಅನುಮತಿಯನ್ನೂ ಪಡೆಯದೆ, ದಿಶಾ ಅವರನ್ನು ದೆಹಲಿಗೆ ಕರೆದುಕೊಂಡು ಹೋಗಿ, ಅಲ್ಲಿ ಅವರ ಪರವಾಗಿ ವಕೀಲರೊಬ್ಬರು ಹಾಜರಾಗುವ ಮೊದಲೇ ಅವರ ಬಂಧನಕ್ಕೆ ಅನುಮತಿ ಪಡೆದ ವಿಧಾನದ ಬಗ್ಗೆ ಟೀಕೆಗಳನ್ನು ವ್ಯಕ್ತಪಡಿಸಿದ್ದಾರೆ.
ಒಂದೆಡೆ ದಿಶಾ ಅವರ ಬಂಧನದ ವಿರುದ್ಧ ವಿದ್ಯಾರ್ಥಿಗಳು, ಹೋರಾಟದ ಮುಂಚೂಣಿಯಲ್ಲಿರುವ ರೈತ ಸಂಘಟನೆಗಳು, ವಿರೋಧ ಪಕ್ಷಗಳು ಹಾಗೂ ನಾಗರಿಕ ಸಮಾಜ ಪ್ರತಿಭಟಿಸುತ್ತಿದ್ದರೆ, ಇನ್ನೊಂದೆಡೆ ಆಡಳಿತ ಪಕ್ಷದ ಬೆಂಬಲಿಗರು ಸಂಘಟಿತವಾಗಿ ದಿಶಾ ಅವರ ತೇಜೋವಧೆ ನಡೆಸುತ್ತಿದ್ದಾರೆ. ಬೆಂಗಳೂರಿನ ಸಂಸದರಾದ ಪಿ ಸಿ ಮೋಹನ್ ಅವರೂ ಸೇರಿದಂತೆ ಬಹಳಷ್ಟು ಜನ ದಿಶಾ ಅವರನ್ನು ಮೃತ ಭಯೋತ್ಪಾದಕರಾದ ಅಜ್ಮಲ್ ಕಸಬ್ ಹಾಗೂ ಬುರ್ಹಾನ್ ವಾನಿ ಮುಂತಾದವರೊಂದಿಗೆ ಹೋಲಿಸಿದ್ದಾರೆ. ಯಾವ ಅಪರಾಧವೂ ಸಾಬೀತಾಗಿರದ ದಿಶಾ ಅವರನ್ನು ಅಪರಾಧ ಸಾಬೀತಾದ ಭಯೋತ್ಪಾದಕರೊಂದಿಗೆ ಹೋಲಿಸಿ ಅವರಂತೆಯೇ ಬಿಂಬಿಸುವ ಸಂಘಟಿತ ಯೋಜನೆ ಇದಾಗಿದೆ.

ದಿಶಾ ಅವರ ಬಂಧನ ಹಾಗೂ ತೇಜೋವಧೆಯ ಹಿಂದೆ ಮೂರು ಮುಖ್ಯ ಉದ್ದೇಶಗಳಿವೆ:
1. ಅಂತಾರಾಷ್ಟ್ರೀಯ ಪರಿಸರ ಚಳವಳಿಯ ದೇಶದ ಆವೃತ್ತಿಯನ್ನು ಹತ್ತಿಕ್ಕುವುದು
ದಿಶಾ ಮುಖ್ಯವಾಗಿ ಪರಿಸರ ಹೋರಾಟಗಾರ್ತಿ. ಫ್ರೈಡೇಸ್ ಫಾರ್ ಫ್ಯೂಚರ್ ಎಂಬ ಹೆಸರಿನಡಿಯಲ್ಲಿ ಗ್ರೆಟಾ ಥನ್‌ಬರ್ಗ್ ಮುಂತಾದ ಯುವ ಹೋರಾಟಗಾರರು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಸುತ್ತಿರುವ ಪರಿಸರ ಚಳವಳಿಯ ರಾಷ್ಟ್ರೀಯ ಆವೃತ್ತಿಯ ಸಂಸ್ಥಾಪಕರಲ್ಲೊಬ್ಬರು. ಜವಾಬ್ದಾರಿಯುತ ಸ್ಥಾನಗಳಲ್ಲಿರುವ ದೇಶಗಳು ಹಾಗೂ ಸಂಸ್ಥೆಗಳು ಹವಾಮಾನ ಬದಲಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಅದನ್ನು ನಿಯಂತ್ರಿಸುವತ್ತ ತಕ್ಷಣವೇ ದಿಟ್ಟ ಹೆಜ್ಜೆಗಳನ್ನಿಡುವಂತೆ ಒತ್ತಡ ಹೇರುವುದು ಈ ಚಳವಳಿಯ ಮುಖ್ಯ ಧ್ಯೇಯ. ಇವರು ಕೇಂದ್ರ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿರುವುದು ಇದೇ ಮೊದಲಲ್ಲ.
ಹಿಂದಿನ ವರ್ಷ ಕೇಂದ್ರ ಸರ್ಕಾರ ಪರಿಸರ ಪರಿಣಾಮ ಮಾಪನ ಕಾಯ್ದೆಗೆ ತಿದ್ದುಪಡಿ ತಂದಾಗ ಅದರ ಲೋಪದೋಷಗಳನ್ನು ಕುರಿತು ಫ್ರೈಡೇಸ್ ಫಾರ್ ಫ್ಯೂಚರ್ ಸಂಫಟನೆ ತನ್ನ ಜಾಲತಾಣದ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಾಗೃತಿ ಮೂಡಿಸುತ್ತಿದ್ದುದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರ ಗಮನಕ್ಕೆ ಬಂದು, ಅವರು ದೆಹಲಿ ಪೊಲೀಸರಿಗೆ ಈ ಸಂಘಟನೆಯ ವಿರುದ್ಧ ಅನಧಿಕೃತ ಚಟುವಟಿಕೆಗಳ ತಡೆ (UAPA) ಕಾಯ್ದೆಯಡಿ ಮೊಕದ್ದಮೆ ಹೂಡುವಂತೆ ಆದೇಶಿಸಿದ್ದರು. ಹೀಗೆ ಒಂದರ ಹಿಂದೆ ಇನ್ನೊಂದು ವಿಚಾರಗಳಲ್ಲಿ ಕೇಂದ್ರ ಸರ್ಕಾರಕ್ಕೆ ಬರೀ ದೇಶದೊಳಗಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಮುಜುಗರ ಉಂಟುಮಾಡುತ್ತಿರುವ ಕಾರಣಕ್ಕೆ ದಿಶಾ ಹಾಗೂ ಆಕೆಯ ಸಂಘಟನೆಯ ವಿರುದ್ಧ ಕೇಂದ್ರ ಇಂತಹ ಕಠಿಣ ನಿಲುವು ತೆಗೆದುಕೊಳ್ಳುತ್ತಿದೆ.
2. ರೈತ ಹೋರಾಟವನ್ನು ದೇಶದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರದಂತೆ ಬಿಂಬಿಸಿ ಅದಕ್ಕೆ ಸಿಗುತ್ತಿರುವ ಜನಮನ್ನಣೆ ಕ್ಷೀಣಿಸುವಂತೆ ಮಾಡುವುದು
ಕಳೆದ ಎರಡು ಮೂರು ವರ್ಷಗಳಿಂದ ಆಡಳಿತ ಪಕ್ಷವು ತನ್ನ ಸರ್ಕಾರದ ವಿರುದ್ಧ ನಡೆಯುವ ಜನಾಂದೋಲನಗಳೆಲ್ಲವನ್ನೂ ದೇಶದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರಗಳೆಂದೇ ಬಿಂಬಿಸುತ್ತಾ ಬಂದಿದೆ. ಈ ಆಂದೋಲನಗಳ ಪರ ಜನಾಭಿಪ್ರಾಯ ವಾಲುತ್ತಿರುವ ಸುಳಿವು ಸಿಕ್ಕಕೂಡಲೆ ಅದನ್ನು ಸಂಪೂರ್ಣವಾಗಿ ಬದಲಿಸಿ, ಜನಾಭಿಪ್ರಾಯ ಅವುಗಳ ವಿರುದ್ಧ ತಿರುಗಿಬೀಳುವಂತೆ ಮಾಡುವುದೇ ಇದರ ಮುಖ್ಯ ಉದ್ದೇಶವಾಗಿದೆ.
ಸತತ ಎರಡು ಮೂರು ತಿಂಗಳು ತೀವ್ರ ಚಳಿಯ ಮಧ್ಯದಲ್ಲಿ, ಬೀದಿಯಲ್ಲೇ ನೆಲೆಸಿ ನಡೆಸಿದ ಶಾಂತಿಯುತ ಹೋರಾಟವನ್ನು ಲೆಕ್ಕಿಸದೆ, ಗಣರಾಜ್ಯೋತ್ಸವದ ದಿನ ನಡೆದ ಒಂದೆರಡು ಹಿಂಸಾಚಾರದ ಘಟನೆಗಳನ್ನು ಉಪಯೋಗಿಸಿಕೊಂಡು ಇಡೀ ರೈತ ಹೋರಾಟವನ್ನೇ ಅಪಖ್ಯಾತಿಗೆ ಒಳಪಡಿಸುವುದು ಮೂಲ ಉಪಾಯವಾಗಿತ್ತು. ಆದರೆ ಅವರು ಅಂದುಕೊಂಡಂತೆ ರೈತ ಹೋರಾಟ ಅಲ್ಲಿಗೆ ಕುಂದಲಿಲ್ಲ. ಅದರ ಬದಲಾಗಿ ಇನ್ನೂ ಹೆಚ್ಚು ರೈತರು ಬೀದಿಗಿಳಿದರು. ಹೋರಾಟ ತೀವ್ರವಾಗುವ ಲಕ್ಷಣಗಳು ಕಂಡುಬಂದವು. ಇದರ ಬೆನ್ನಲ್ಲೇ ರಿಹಾನ್ನ, ಮೀನಾ ಹ್ಯಾರಿಸ್, ಗ್ರೆಟಾ ಮುಂತಾದ ಅಂತಾರಾಷ್ಟ್ರೀಯ ತಾರೆಯರು ರೈತ ಹೋರಾಟಕ್ಕೆ ಬೆಂಬಲ ಸೂಚಿಸಿ ಆಡಳಿತ ಪಕ್ಷಕ್ಕೆ ಇರುಸುಮುರುಸಾಗುವಂತೆ ಮಾಡಿದರು.
ರೈತ ಹೋರಾಟದ ಪರವಾಗಿ ಸೃಷ್ಟಿಯಾಗುತ್ತಿರುವ ಇಂತಹ ಅಭೂತಪೂರ್ವ ಜನಾಭಿಪ್ರಾಯವನ್ನು ಹತ್ತಿಕ್ಕಲು ಅದನ್ನು ಅಂತಾರಾಷ್ಟ್ರೀಯ ಷಡ್ಯಂತ್ರವೆಂಬಂತೆ ಬಿಂಬಿಸಿವುದೊಂದೇ ದಾರಿಯಾಗಿತ್ತು. ಹಾಗಾಗಿ, ಮೊದಲು ಸರ್ಕಾರದ ಕೈಗೊಂಬೆಗಳಾಗಿರುವ ಕ್ರಿಕೆಟ್ ಹಾಗೂ ಬಾಲಿವುಡ್ ತಾರೆಯರು ಸರ್ಕಸ್ ಕುದುರೆಗಳಂತೆ ಬಂದು ದೇಶದ ವಿರುದ್ಧ ಅಂತಾರಾಷ್ಟ್ರೀಯ ಷಡ್ಯಂತ್ರ ನಡೆಯುತ್ತಿದೆಯೆಂದು ಒದರಿ, ಕುಣಿದು ಹೋದರು. ಈಗ, ಎಲ್ಲ ಹೋರಾಟಗಳಲ್ಲೂ ಸರ್ವೇಸಾಮಾನ್ಯವಾದ ಒಂದು ಟೂಲ್‌ಕಿಟ್‌ಅನ್ನು ದೇಶದ್ರೋಹದ ಕೃತ್ಯವೆಂಬಂತೆ ಬಿಂಬಿಸಿ ಅದನ್ನು ಸಂಪಾದಿಸಿದವರೆಲ್ಲರನ್ನು ಬಂಧಿಸಲು ಆಡಳಿತ ವ್ಯವಸ್ಥೆ ಹವಣಿಸುತ್ತಿದೆ.
3. ಕೇಂದ್ರ ಸರ್ಕಾರವನ್ನು ಟೀಕಿಸದಂತೆ ಜನರಲ್ಲಿ, ಅದರಲ್ಲೂ ಯುವಕರಲ್ಲಿ, ಭಯ ಹುಟ್ಟಿಸುವುದು
ದೇಶದ್ರೋಹದಂತಹ ಗಂಭೀರ ಆರೋಪದಡಿ ಬಂಧಿತರಾಗಿರುವವರಲ್ಲಿ ದಿಶಾ ಮೊದಲಿಗರಲ್ಲ. ಭೀಮಾ ಕೋರೆಗಾಂವ್, ಪೌರತ್ವ ತಿದ್ದುಪಡಿ ಕಾಯ್ದೆ, ಹತ್ರಸ್ ಅತ್ಯಾಚಾರ ಪ್ರಕರಣ, ರೈತ ಹೋರಾಟ ಮುಂತಾದ ಹಲವು ಸಂದರ್ಭಗಳಲ್ಲಿ ಸಾಲುಸಾಲಾಗಿ ಜನರನ್ನು ಇತ್ತೀಚಿನ ವರ್ಷಗಳಲ್ಲಿ ದೇಶದ್ರೋಹದ ಕಾಯ್ದೆಯಡಿ ಬಂಧಿಸಲಾಗಿದೆ. ಯುವಕರಿಂದ ಹಿಡಿದು ಗಂಭೀರ ಆರೋಗ್ಯ ಸಮಸ್ಯೆಗಳಿರುವ ಮುದುಕರವರೆಗೂ, ಬಸರಿ ಹೆಂಗಸರಿಂದ ಹಿಡಿದು ಶೋಷಿತ ಹಾಗೂ ಅಲ್ಪಸಂಖ್ಯಾತ ವರ್ಗಗಳ ಜನರವರೆಗೂ, ಎಲ್ಲರೂ ಸೆರೆಮನೆ ಸೇರಿದ್ದಾರೆ. ಆದರೂ ದಿಶಾ ಅವರ ಬಂಧನ ಹಾಗೂ ಅವರ ಮೇಲೆ ನಡೆಯುತ್ತಿರುವ ಸಂಘಟಿತ ತೇಜೋವಧೆ ಸಾರ್ವಜನಿಕರಲ್ಲಿ, ಅದರಲ್ಲೂ ಸರ್ಕಾರದ ನಿಲುವುಗಳನ್ನು ಒಪ್ಪದವರಲ್ಲಿ, ದಿಗಿಲು ಹುಟ್ಟಿಸುವಂತದ್ದು.
ಆಕೆ ಸಾವಿರಾರು ಜನ ಹಿಂಬಾಲಕರನ್ನು ಹೊಂದಿರುವ ಪಳಗಿದ ಹೋರಾಟಗಾರ್ತಿಯಾಗಿರಲಿಲ್ಲ, ಬೀದಿಗಿಳಿದು ಉಗ್ರ ಹೋರಾಟ ನಡೆಸುತ್ತಿದ್ದವಳಲ್ಲ. ಪರಿಸರದ ಮೇಲಿನ ಕಾಳಜಿಯಿಂದಾಗಿ ತನಗಾಗುವ ಮಟ್ಟದಲ್ಲಿ, ರೀತಿಯಲ್ಲಿ ಶಾಂತಿಯುತ ಹೋರಾಟ ನಡೆಸುತ್ತಾ ಬಂದಿದ್ದ ಇಪ್ಪತ್ತೊಂದು ವರ್ಷದ ಸಾಮಾನ್ಯ ಹುಡುಗಿ. ಕಂಪ್ಯೂಟರ್‌ನಲ್ಲಿ ಒಂದು ಸಾರ್ವಜನಿಕ ದಾಖಲೆಯನ್ನು ಸಂಪಾದಿಸಿದಕ್ಕಾಗಿ ದೇಶದ್ರೋಹದ ಆರೋಪ ಹೊರಿಸಿ ಪೊಲೀಸರು ಬಂದು ಕರೆದೊಯ್ದು ಬಂಧಿಸುತ್ತಾರೆಂದರೆ, ಯಾರನ್ನು ಬೇಕಾದರೂ ಯಾವಾಗಲಾದರೂ ಬಂಧಿಸಬಹುದೆಂಬ ಭಯ ಸಾಧಾರಣವಾಗಿಯೇ ಜನರಲ್ಲಿ ಮೂಡುತ್ತದೆ.
ಇದರಿಂದ ಜನರು ಸರ್ಕಾರವನ್ನು ಟೀಕಿಸುವ ಮೊದಲೂ ನೂರು ಬಾರಿ ಯೋಚಿಸುವಂತಾಗುತ್ತದೆ. ದಿಶಾಳ ಬಂಧನ ಹಾಗೂ ತೇಜೋವಧೆಯನ್ನು ಗಮನಿಸುವ ಪೋಷಕರು ಹೆದರಿ ತಮ್ಮ ಮಕ್ಕಳ ರಾಜಕೀಯ ಚಟುವಟಿಕೆಗಳಿಗೆ ಕಡಿವಾಣ ಹಾಕಿ, ಅವರ ಅಭಿಪ್ರಾಯಗಳನ್ನು ಎಲ್ಲೂ ಹೊರಹಾಕದಂತೆ ನಿಯಂತ್ರಿಸಲು ಶುರು ಮಾಡುತ್ತಾರೆ. ದೇಶದ ಭವಿಷ್ಯವಾದ ಯುವಕರು ತಮ್ಮ ರಾಜಕೀಯ ಅಭಿಪ್ರಾಯಗಳು ರೂಪುಗೊಳ್ಳುವ ಕಾಲಘಟ್ಟದಲ್ಲಿ ಸರ್ಕಾರದ ಹಾಗೂ ಪೋಷಕರ ಕಪಿಮುಷ್ಟಿಯಲ್ಲಿ ಸಿಲುಕಿ, ಒದ್ದಾಡಿ, ಕ್ರಮೇಣ ತಮ್ಮ ಸ್ವಂತ ಚಿಂತನೆಯ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ. ಸರ್ವಾಧಿಕಾರಿ ಯೋಜನೆಗಳಿಗೆ ಬೇಕಿರುವುದೇ ಇಂತಹದೊಂದು ಸಮಾಜದ ನಿರ್ಮಾಣ.
ಕೇಂದ್ರ ಸರ್ಕಾರವನ್ನು ಟೀಕಿಸುವುದು ದೇಶದ್ರೋಹಕ್ಕೆ ಸಮಾನವೆಂಬ ನಂಬಿಕೆ ಜನರಲ್ಲಿ ಬೆಳೆಯುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ. ಸರ್ಕಾರದ ನಿಲುವುಗಳ ವಿರುದ್ಧ ಶಾಂತಿಯುತ ಹೋರಾಟ ನಡೆಸುವುದನ್ನು ಪ್ರಜಾಪ್ರಭುತ್ವವನ್ನು ಪಾಲಿಸುವ ಎಲ್ಲ ದೇಶಗಳು ಹಾಗೂ ಸಮಾಜಗಳು ಒಪ್ಪುತ್ತವೆ. ಹೀಗಿರುವಾಗ, “ನಮ್ಮದು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವೆಂದು ಹೆಮ್ಮೆಯಿಂದ ಹೇಳಿಕೊಳ್ಳುವ ನಾವು, ಸರ್ಕಾರದ ವಿರುದ್ಧ ಹೋರಾಟ ನಡೆಸುವವರೆಲ್ಲ ದೇಶದ್ರೋಹದ ಆರೋಪದ ಮೇಲೆ ಜೈಲು ಸೇರುತ್ತಿರುವಾಗ ಸುಮ್ಮನಿದ್ದರೆ, ನಾಳೆ ಇಡೀ ವಿಶ್ವ ನೀವ್ಯಾವ ಸೀಮೆ ಪ್ರಜಾಪ್ರಭುತ್ವವೆಂದು ನಮ್ಮನ್ನು ಪ್ರಶ್ನಿಸುವ ಸಂದರ್ಭ ಒದಗಿ ಬರಬಹುದು.

ರಕ್ಷಿತ್ ಪೊನ್ನಾಥಪುರ
ಇಂಜಿನಿಯರಿಂಗ್ ಪದವಿ ಮುಗಿಸಿದ ನಂತರ ಸಾರ್ವಜನಿಕ ನೀತಿಯ ಬಗ್ಗೆ ಅಧ್ಯಯನದಲ್ಲಿ ತೊಡಗಿಸಿಕೊಂಡ ರಕ್ಷಿತ್ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಸಕ್ರಿಯವಾಗಿ ಪ್ರತಿಕ್ರಿಯಿಸುವ ಯುವ ಚಿಂತಕ


