ಕಾಸ್‌ಗಂಜ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯೊಬ್ಬ ಉತ್ತರ ಪ್ರದೇಶದ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮದ್ಯ ಮಾಫಿಯಾ ಮಾಡುತ್ತಿದ್ದ ಕಿಂಗ್‌ಪಿನ್ ಮೋತಿಗೆ ವಾರೆಂಟ್ ನೀಡಲು ಪೊಲೀಸರು ನಾಗ್ಲಾ ಧೀಮರ್ ಗ್ರಾಮಕ್ಕೆ ಹೋಗಿದ್ದರು. ಅಲ್ಲಿ ಆರೋಪಿ ಒಬ್ಬ ಕಾನ್‌ಸ್ಟೇಬಲ್ ನನ್ನು ಹತ್ಯೆ ಮಾಡಿದ್ದು, ಸಬ್ ಇನ್ಸ್‌ಪೆಕ್ಟರ್‌ಗೆ ಗಂಭೀರ ಗಾಯವಾಗಿತ್ತು. ಇದಾದ ನಂತರ ಮೋತಿ ಮತ್ತು ಅವನ ಸಹೋದರ ಎಲ್ಕರ್ ಮತ್ತು ಸಂಗಡಿಗರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಫೆಬ್ರವರಿ 9 ರಂದು ಪೊಲೀಸರು ನಡೆಸಿದ ಎನ್ಕೌಂಟರ್‌ನಲ್ಲಿ ಎಲ್ಕರ್ ಕೊಲ್ಲಲ್ಪಟ್ಟಿದ್ದಾನೆ. ಮೋತಿಯನ್ನು ಬಂಧಿಸಲು ಆರು ತಂಡಗಳನ್ನು ರಚಿಸಲಾಗಿತ್ತು ಎಂದು ಕಾಸ್‌ಗಂಜ್ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಸೋಂಕರ್ ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.
ಇದನ್ನೂ ಓದಿ: 2ಎ ಮೀಸಲಾತಿಗಾಗಿ ಬೃಹತ್ ರ‍್ಯಾಲಿ: ಪಂಚಮಸಾಲಿ ಸಮುದಾಯದ 10 ಲಕ್ಷ ಜನ ಸೇರುವ ನಿರೀಕ್ಷೆ
ಮೋತಿ ತನ್ನ ಸಹಾಯಕರೊಂದಿಗೆ ಕಾಳಿ ನದಿ ಬಳಿಯ ಕಾಡಿನಲ್ಲಿ ಅಡಗಿದ್ದಾನೆ ಎಂದು ಪೊಲೀಸರಿಗೆ ಸುಳಿವು ಸಿಕ್ಕಿತು. ಬೆಳಗಿನ ಜಾವ 2.30 ರ ಸುಮಾರಿಗೆ ಪೊಲೀಸ್ ತಂಡವು ಈ ಪ್ರದೇಶವನ್ನು ಸುತ್ತುವರಿಯಲು ಪ್ರಾರಂಭಿಸಿದಾಗ, ದುಷ್ಕರ್ಮಿಗಳು ಗುಂಡು ಹಾರಿಸಿದರು ಎಂದು ಎಸ್‌ಪಿ ಹೇಳಿದರು.
“ಆತ್ಮರಕ್ಷಣೆಗಾಗಿ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಆಗ ಮೋತಿ ಗಾಯಗೊಂಡಿದ್ದಾನೆ. ಆದರೆ ಇತರ ಅಪರಾಧಿಗಳು ತಪ್ಪಿಸಿಕೊಂಡರು. ನಂತರ ಮೋತಿಯನ್ನು ಸಿದ್ಧಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಅಲ್ಲಿಂದ ಕಾಸ್‌ಗಂಜ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ. ಪೊಲೀಸರು ಆರೋಪಿಗಳಿಂದ ಪಿಸ್ತೂಲು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ”ಎಂದು ಅವರು ಹೇಳಿದರು.
ಆರೋಪಿಗಳ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಸರ್ಕಾರದ ಈ ಕ್ರಮದಿಂದ ಧರ್ಮನಿರಪೇಕ್ಷತೆಗೆ ಕತ್ತರಿ – ಡಾ.ಬಿ.ಪಿ.ಮಹೇಶ್ ಚಂದ್ರ ಗುರು


