ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಸೋಮವಾರದಂದು ಮಂಗಳ ಗ್ರಹದಲ್ಲಿ ತಮ್ಮ ಬಾಹ್ಯಾಕಾಶ ನೌಕೆ ಇಳಿಯುವ ಮೊದಲ ಉತ್ತಮ-ಗುಣಮಟ್ಟದ ವೀಡಿಯೊವನ್ನು ಬಿಡುಗಡೆ ಮಾಡಿದೆ. ಮೂರು ನಿಮಿಷಗಳ ಈ ವಿಡಿಯೋದಲ್ಲಿ ನೌಕೆಯು ಬಿಳಿ-ಕಿತ್ತಳೆ ಬಣ್ಣದ ಪ್ಯಾರಾಚೂಟ್ ಸಹಾಯದಲ್ಲಿ ಇಳಿಯುತ್ತಿರುವುದು ಮತ್ತು ಇಳಿಯುತ್ತಿದ್ದಂತೆ ಮಂಗಳ ಗ್ರಹದ ಮೇಲ್ಮೈಯಲ್ಲಿನ ದೂಳಿನ ದೃಶ್ಯವನ್ನು ಕೂಡಾ ತೋರಿಸುತ್ತದೆ.
ದೃಶ್ಯವು ತುಂಬಾ ಚೆನ್ನಾಗಿದ್ದು, ನಾವು ಉಸಿರು ಬಿಗಿ ಹಿಡಿದು ನೋಡುತ್ತಾ, ನೌಕೆಯಲ್ಲಿ ನಾವೆ ಸವಾರಿ ಮಾಡುತ್ತಿದ್ದೇವೆ ಎಂಬ ಭಾವನೆಯಲ್ಲಿದ್ದೆವು ಎಂದು ನೌಕೆ ಉಡಾವಣಾ ತಂಡ ಹೇಳಿದೆ.
“ಅದು ಮೈನವಿರೇಳಿಸುವ ಅದ್ಭುತ ದೃಶ್ಯವಾಗಿತ್ತು” ಎಂದು ನೌಕೆಯ ಕ್ಯಾಮೆರಾ ತಂಡದ ಮುಖ್ಯಸ್ಥ ಡೇವ್ ಗ್ರುಯೆಲ್ ಹೇಳಿದ್ದಾರೆ.
ಇದನ್ನೂ ಓದಿ: ಹೊಸ ವರುಷದ ಸಂಕ್ರಮಣ; ಗವಿ ಗಂಗಾಧರೇಶ್ವರ ದೇವಸ್ಥಾನದ ಸೂರ್ಯ ಮಜ್ಜನದ ಹಿಂದಿನ ವಿಜ್ಞಾನ ಗೊತ್ತೆ?
ಪರ್ಸೆವೆರೆನ್ಸ್ ರೋವರ್ ಬಾಹ್ಯಾಕಾಶ ನೌಕೆಯು ಮಂಗಳ ಗ್ರಹದ ಮೇಲೆ ಕಳೆದ ಗುರುವಾರ ಗ್ರಹದ ಜೆಜೆರೊ ಕ್ರೇಟರ್ನ ಪುರಾತನ ನದಿ ಮುಖಜ ಭೂಮಿ ಬಳಿ ಇಳಿಯಿತು. ಉಡಾವಣ ತಂಡವು ಸುದ್ದಿಗೋಷ್ಠಿಯಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದೆ.
“ಈ ವೀಡಿಯೊಗಳು ಮತ್ತು ಈ ಚಿತ್ರಣಗಳು ನಮ್ಮ ಕನಸುಗಳಾಗಿದೆ” ಎಂದು ಲ್ಯಾಂಡಿಂಗ್ ತಂಡದ ಉಸ್ತುವಾರಿ ವಹಿಸಿಕೊಂಡಿದ್ದ ಅಲ್ ಚೆನ್ ಹೇಳಿದ್ದಾರೆ.
ಆರು ಕ್ಯಾಮೆರಾಗಳನ್ನು ಪ್ರವೇಶ, ಇಳಿಯುವಿಕೆ ಮತ್ತು ಲ್ಯಾಂಡಿಂಗ್‌ಗೆ ಮೀಸಲಿಡಲಾಗಿತ್ತು, ಇವುಗಳ ಮೂಲಕ ವಿಭಿನ್ನ ದೃಷ್ಟಿಕೋನಗಳಿಂದ ಮೇಲಕ್ಕೆ ಮತ್ತು ಕೆಳಕ್ಕೆ ನೋಡಲಾಯಿತು. ಇವುಗಳಲ್ಲಿ ಒಂದು ಕ್ಯಾಮೆರಾ ಹೊರತುಪಡಿಸಿ ಎಲ್ಲವೂ ಕೆಲಸ ಮಾಡಿದೆ. ಲ್ಯಾಂಡಿಂಗ್‌ಗಾಗಿ ಆನ್ ಮಾಡಿದ ಏಕೈಕ ಮೈಕ್ರೊಫೋನ್ ವಿಫಲವಾಗಿತ್ತಾದರೂ, ನೌಕೆಯು ಇಳಿದ ನಂತರ ನಾಸಾಗೆ ಕೆಲವು ಧ್ವನಿ ತುಣುಕುಗಳು ಸಿಕ್ಕಿದೆ.
ಸಾವಿರಾರು ಚಿತ್ರಗಳನ್ನು ಕಳುಹಿಸಿರುವ ನಾಸಾದ ಅತಿದೊಡ್ಡ ಮತ್ತು ಅತ್ಯಂತ ಸಮರ್ಥ ಉತ್ತಮ ಸ್ಥಿತಿಯ ಬಾಹ್ಯಾಕಾಶ ನೌಕೆ ಇದಾಗಿದೆ. ಇದು ಮುಂದಿನ ಎರಡು ವರ್ಷಗಳನ್ನು ಮಂಗಳ ಗ್ರಹದ ಒಣ ನದಿಯ ಮುಖಜ ಭೂಮಿಯಲ್ಲಿ ಕಳೆಯಲಿದ್ದು, ಅಲ್ಲಿನ ಬಂಡೆಗಳನ್ನು ಕೊರೆದು 3-4 ಶತಕೋಟಿ ವರ್ಷಗಳ ಹಿಂದೆ ಅಲ್ಲಿ ಜೀವಿಗಳಿದ್ದವೆ ಎಂಬ ಪುರಾವೆಗಳನ್ನು ಅನ್ವೇಷಿಸಲಿದೆ.
ಇದನ್ನೂ ಓದಿ: ಹೊಸ ವರುಷದ ಆವಿಷ್ಕಾರಗಳ ನಿರೀಕ್ಷೆಯಲ್ಲಿ, ಹಳೆ ವರುಷದ ವಿಜ್ಞಾನ ಕಸುವಿನ ನೆನಪುಗಳು


