“ಸರಿಯಾದ ಪ್ರಮಾಣಪತ್ರ ಇಲ್ಲದೆ ಪತಂಜಲಿಯ ಕೊರೊನಿಲ್ ಮಾತ್ರೆಗಳನ್ನು ರಾಜ್ಯದಲ್ಲಿ ಮಾರಾಟ ಮಾಡಲು ಅನುಮತಿಸುವುದಿಲ್ಲ” ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಹೇಳಿದ್ದಾರೆ.
ಕೊರೊನಿಲ್ ಮಾತ್ರೆಗಳಿಗೆ WHO ಪ್ರಮಾಣೀಕರಣ ನೀಡಿದೆ ಎಂಬುದು ಸುಳ್ಳು ಎಂದಿರುವ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಆಘಾತ ವ್ಯಕ್ತಪಡಿಸಿದೆ. ಇದಾದ ಒಂದು ದಿನದ ನಂತರ ಅನಿಲ್ ದೇಶ್ಮುಖ್ ಈ ಹೇಳಿಕೆ ನೀಡಿದ್ದಾರೆ.
ಕೊರೊನಾ ವಿರುದ್ಧ ಹೋರಾಡುವಲ್ಲಿ ಇದು ಪರಿಣಾಮಕಾರಿ ಎಂದು ಬಾಬಾ ರಾಮ್‌ದೇವ್ ಹೇಳಿದ್ದಾರೆ. ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಅವರ ಉಪಸ್ಥಿತಿಯಲ್ಲಿ ಈ ಔಷಧಿಯನ್ನು ಬಿಡುಗಡೆ ಮಾಡಲಾಯಿತು.
ಶುಕ್ರವಾರ, ರಾಮದೇವ್ ಅವರು ಪತಂಜಲಿ ಉತ್ಪನ್ನ ಕೊರೊನಿಲ್ ಅನ್ನು ಆರೋಗ್ಯ ಸಚಿವ ಹಷ್‌ವರ್ಧನ್ ಮತ್ತು ಮತ್ತೊಬ್ಬ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಸಮ್ಮುಖದಲ್ಲಿ ಬಿಡುಗಡೆ ಮಾಡಿದ್ದರು. ಈ ಮೂವರ ಹಿಂದಿರುವ ದೊಡ್ಡ ಪೋಸ್ಟರ್‌ನಲ್ಲಿ “ಔಷಧಿಯು CoPP ಮತ್ತು WHO- ಜಿಎಂಪಿ ಪ್ರಮಾಣೀಕರಿಸಲ್ಪಟ್ಟಿದೆ ಎಂದು ಬರೆಯಲ್ಪಟ್ಟಿತ್ತು. ಅಂದರೆ ಇದು ಔಷಧೀಯ ಉತ್ಪನ್ನದ ಪ್ರಮಾಣಪತ್ರವನ್ನು (CoPP) ಹೊಂದಿದೆ ಮತ್ತು ಇದನ್ನು ವಿಶ್ವ ಆರೋಗ್ಯ ಸಂಸ್ಥೆಯ ಉತ್ತಮ ಉತ್ಪಾದನಾ ಪ್ರಾಕ್ಟೀಸಸ್ (ಜಿಎಂಪಿ) ಗುರುತಿಸಿದೆ ಎಂದರ್ಥ.
ಈ ಎರಡೂ ಮಾನದಂಡಗಳು ಔಷಧೀಯ ಉತ್ಪನ್ನಗಳಲ್ಲಿ ಗುಣಮಟ್ಟದ ಭರವಸೆಯನ್ನು ಬಹುಪಾಲು ವ್ಯಾಖ್ಯಾನಿಸುತ್ತವೆ.
ಇದನ್ನೂ ಓದಿ: ಸುಳ್ಳು ಹೇಳಿದ ಬಾಬಾ ರಾಮ್‌ದೇವ್! – ಪತಂಜಲಿ ಕೊರೊನಿಲ್ ಕುರಿತು ಐಎಂಎ ಆಕ್ರೋಶ
ಈ ಕುರಿತು ಟ್ವೀಟ್ ಮಾಡಿರುವ ದೇಶ್ಮುಖ್ ಯಾರನ್ನೂ ಹೆಸರಿಸದೆ, ‘ಹಿರಿಯ ಕೇಂದ್ರ ಸಚಿವರು ಔಷಧಿಯನ್ನು ಅನುಮೋದಿಸಿದ್ದಾರೆ’ ಎಂದು ಕಾಲೆಳೆದಿದ್ದಾರೆ.
ಆದರೆ, ಕೊವಿಡ್-19 ಗೆ ಚಿಕಿತ್ಸೆ ನೀಡಲು ಅಥವಾ ತಡೆಗಟ್ಟಲು ಯಾವುದೇ ಸಾಂಪ್ರದಾಯಿಕ ಔಷಧಿಯನ್ನು ಪರಿಶೀಲಿಸಿಲ್ಲ ಅಥವಾ ಪ್ರಮಾಣೀಕರಿಸಿಲ್ಲ ಎಂದು ಡಬ್ಲೂಎಚ್‌ಒ ಟ್ವೀಟ್‌ನಲ್ಲಿ ಸ್ಪಷ್ಟಪಡಿಸಿದೆ. #COVID19 ಚಿಕಿತ್ಸೆಗಾಗಿ ಯಾವುದೇ ಸಾಂಪ್ರದಾಯಿಕ ಔಷಧದ ಪರಿಣಾಮಕಾರಿತ್ವವನ್ನು WHO ಪರಿಶೀಲಿಸಿಲ್ಲ ಅಥವಾ ಪ್ರಮಾಣೀಕರಿಸಿಲ್ಲ” ಎಂದು WHO ಆಗ್ನೇಯ ಏಷ್ಯ ಟ್ವೀಟ್ ಮಾಡಿದೆ.
ಕಳೆದ ವರ್ಷ, ವೈರಸ್ ಪ್ರಕರಣಗಳು ಹೆಚ್ಚಾಗುತ್ತಿದ್ದ ಸಂದರ್ಭದಲ್ಲಿ ಲಸಿಕೆಗಳು ಇನ್ನೂ ಪ್ರಯೋಗದ ಹಂತದಲ್ಲಿದ್ದವು, ಕೊರೊನಿಲ್ ಕೊರೊನಾವೈರಸ್ ವಿರುದ್ಧ ಬಲವಾದ ರಕ್ಷಣೆ ನೀಡಬಹುದೆಂದು ಪತಂಜಲಿ ಆಯುರ್ವೇದ ಹೇಳಿಕೊಂಡಿತ್ತು. ಅದರ ಸಮರ್ಥನೆಗಳ ಬಗ್ಗೆ ದೊಡ್ಡ ವಿವಾದದ ನಂತರ, ಆಯುಷ್ ಸಚಿವಾಲಯವು ಕೊರೊನಿಲ್ ಅನ್ನು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಾಧನವಾಗಿ ಮಾತ್ರ ಮಾರಾಟ ಮಾಡಬಹುದೆಂದು ಹೇಳಿತ್ತು.
ಪತಂಜಲಿ ಆಯುರ್ವೇದ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರು WHO ಟ್ವೀಟ್‌ಗೆ ಸ್ವಲ್ಪ ಮೊದಲು ಸ್ಪಷ್ಟನೆ ನೀಡಿದ್ದರು.
“ಕೊರೊನಿಲ್‌ಗೆ WHO ಜಿಎಂಪಿ ಕಂಪ್ಲೈಂಟ್ CoPP ಪ್ರಮಾಣಪತ್ರವನ್ನು ಭಾರತ ಸರ್ಕಾರದ ಡಿಸಿಜಿಐ ನೀಡಿದೆ. WHO ಯಾವುದೇ ಔಷಧಿಗಳನ್ನು ಅನುಮೋದಿಸುವುದಿಲ್ಲ ಅಥವಾ ನಿರಾಕರಿಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಜನರಿಗೆ ಉತ್ತಮ, ಆರೋಗ್ಯಕರ ಭವಿಷ್ಯವನ್ನು ನಿರ್ಮಿಸಲು WHO ಕೆಲಸ ಮಾಡುತ್ತದೆ ಎಂದು ಬಾಲಕೃಷ್ಣ ಟ್ವೀಟ್ ಮಾಡಿದ್ದರು.
ಇದನ್ನೂ ಓದಿ: ಜನರ ಭಯದ ದುರುಪಯೋಗ: ರಾಮ್‌ದೇವ್ ಪತಂಜಲಿಗೆ 10 ಲಕ್ಷ ರೂ ದಂಡ


