ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಮತ್ತು ಎಂಎಸ್‌ಪಿ ಖಾತ್ರಿಗಾಗಿ ಹೊಸ ಕಾಯ್ದೆ ತರಬೇಕು ಎಂದು ಆಗ್ರಹಿಸಿ ದೆಹಲಿಯ ಗಡಿಗಳಲ್ಲಿ ನಡೆಯುತ್ತಿರು ರೈತ ಹೋರಾಟ 91ನೇ ದಿನಕ್ಕೆ ಕಾಲಿಟ್ಟಿದೆ. ಈ ರೈತ ಹೋರಾಟ ಬೆಂಬಲಿಸಿ ದಕ್ಷಿಣ ಭಾರತದ ನೂರಾರು ಕಾರ್ಯಕರ್ತರು ದೆಹಲಿಯ ಟಿಕ್ರಿ ಗಡಿಯಲ್ಲಿ ಮೆರವಣಿಗೆ ನಡೆಸಿದ್ದಾರೆ. ಕರ್ನಾಟಕ ಜನಶಕ್ತಿಯ ನೇತೃತ್ವದಲ್ಲಿ 60 ಕ್ಕೂ ಹೆಚ್ಚು ಕಾರ್ಯಕರ್ತರು, ಆಂಧ್ರ ಪ್ರದೇಶದ ವಿವಿಧ ಸಂಘ ಸಂಸ್ಥೆಗಳಿಂದ 40 ಸದಸ್ಯರು, ತೆಲಂಗಾಣದಿಂದ 30 ಮತ್ತು ತಮಿಳುನಾಡಿನ ಸಂಸ್ಥೆಗಳಿಂದ 8 ಸದಸ್ಯರು ಮತ್ತು ಕೇರಳದ ಹಲವು ಸದಸ್ಯರು ದೆಹಲಿ ಹೋರಾಟದ ಭಾಗವಾಗಿದ್ದಾರೆ.

ಇಂದು ಮಧ್ಯಾಹ್ನ ಟಿಕ್ರಿ ಗಡಿಯುದ್ದಕ್ಕೂ ಮೆರವಣಿಗೆ ನಡೆಸಿದ ಕಾರ್ಯಕರ್ತರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು, ರೈತರ ಹೋರಾಟಕ್ಕೆ ಜಯವಾಗಲಿ ಸೇರಿದಂತೆ ಕನ್ನಡದಲ್ಲಿ ಘೋಷಣೆ ಕೂಗಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ಜನಶಕ್ತಿಯ ಪ್ರಧಾನ ಕಾರ್ಯದರ್ಶಿ ಮಲ್ಲಿಗೆ ಸಿರಿಮನೆ ಮಾತನಾಡಿ “ನಾವು ದಕ್ಷಿಣ ಭಾರತದ 5 ರಾಜ್ಯಗಳಿಂದ 130 ಕ್ಕೂ ಹೆಚ್ಚು ಪ್ರತಿನಿಧಿಗಳು ನಿಮ್ಮೊಂದಿಗೆ ಸೇರಿ ಹೋರಾಡಲು ಬಂದಿದ್ದೇವೆ. ಇದು ಕೇವಲ ಪಂಜಾಬ್, ಹರಿಯಾಣ ರೈತರ ಹೋರಾಟ, ಒಂದು ಧರ್ಮದ ಹೋರಾಟ, ಖಲಿಸ್ತಾನಿಗಳ, ಅರ್ಬನ್ ನಕ್ಸಲರ ಹೋರಾಟ ಎಂದು ಬ್ರಾಂಡ್‌ ಮಾಡಿರುವುದು ಸುಳ್ಳು ಎಂದು ಸಾರಿ ಹೇಳಲು ನಾವು ಬಂದಿದ್ದೇವೆ. ಇದು ಇಡೀ ದೇಶದ ಹೋರಾಟ ಎಂಬುದನ್ನು ಸರ್ಕಾರಕ್ಕೆ ಎಚ್ಚರಿಕೆ ನೀಡಲು ಬಂದಿದ್ದೇವೆ. ದೇಶದ ಎಲ್ಲಾ ರೈತರು ಮತ್ತು ಕಾರ್ಮಿಕರು ಒಂದಾಗಿದ್ದರು, ಈಗಲೂ ಒಂದಾಗಿದ್ದೇವೆ ಮತ್ತು ಮುಂದೆಯೂ ಒಂದಾಗಿರುತ್ತೇವೆ. ಸರ್ಕಾರ ಈ ಕರಾಳ ಕಾನೂನುಗಳನ್ನು ಹಿಂಪಡೆಯುವವರೆಗೂ, ಎಂಎಸ್‌ಪಿ ಜಾರಿಗೊಳಿಸುವವರೆಗೂ ಹೋರಾಡುತ್ತೇವೆ ಎಂದು ಸಾರಿ ಹೇಳಲು ಬಂದಿದ್ದೇವೆ” ಎಂದರು.

ಕಾರ್ಮಿಕ ಸಂಘಟನೆಯ ವರದರಾಜೇಂದ್ರ ಮಾತನಾಡಿ “ನಾವು ಕರ್ನಾಟಕದಲ್ಲಿ ರೈತ-ಕಾರ್ಮಿಕ-ದಲಿತ ಸಂಘಟನೆಗಳು ಒಟ್ಟು ಸೇರಿ ಐಕ್ಯ ಹೋರಾಟ ವೇದಿಕೆಯಡಿ ಕಳೆದ ಆಗಸ್ಟ್ ತಿಂಗಳಿನಿಂದಲೂ ಹೋರಾಟ ನಡೆಸುತ್ತಿದ್ದೇವೆ. ಕರ್ನಾಟಕ ಬಂದ್ ನಡೆಸಿದ್ದೇವೆ. ಆದರೆ ಗೋದಿ ಮಾಧ್ಯಮಗಳು ಅದನ್ನು ಪ್ರಸಾರ ಮಾಡುತ್ತಿಲ್ಲ. ಕರ್ನಾಟಕ ಸರ್ಕಾರ ಕೂಡ ಅತಿ ವೇಗದಲ್ಲಿ ಸುಗ್ರೀವಾಜ್ಞೆಗಳ ಮೂಲಕ ಎಪಿಎಂಸಿ ಕಾನೂನಿಗೆ ತಿದ್ದುಪಡಿ ತಂದಿದೆ. ಕೇಂದ್ರದ ಕಾನೂನುಗಳನ್ನು ಜಾರಿಗೊಳಿಸಿದೆ. ನವೆಂಬರ್ ತಿಂಗಳಿನಿಂದ ಸಂಯುಕ್ತ ಕಿಸಾನ್ ಮೋರ್ಚಾದ ಕರೆ ಮೇರೆಗೆ ಸತತ ಹೋರಾಟ ನಡೆಸುತ್ತಿದ್ದೇವೆ. ಜನವರಿ 26ರ ಟ್ರ್ಯಾಕ್ಟರ್ ರ್ಯಾಲಿ ನಡೆಸಿದ್ದೇವೆ. ಇದು ರೈತರ – ಕಾರ್ಮಿಕರ ಹೋರಾಟವಾಗಿದ್ದು ಗೆಲ್ಲುವವರೆಗೂ ನಿಲ್ಲುವುದಿಲ್ಲ” ಎಂದರು.

ಆಂಧ್ರಪ್ರದೇಶದ AIKMS ಉಪಾಧ್ಯಕ್ಷರಾದ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ದುರ್ಗಾ ಪ್ರಸಾದ್, ತೆಲಂಗಾನದ ಹನುಮೇಶ್, ತಮಿಳುನಾಡು ರೈತ ಸಂಘಟನೆಯ ಅರುಣ್ ಚೌರಿ ಸೇರಿದಂತೆ ಹಲವು ಮುಖಂಡರು ಮಾತನಾಡಿದರು.

ರೈತ ಹೋರಾಟದ ಸ್ಫೂರ್ತಿಗಳಾದ ಸಹಜಾನಂದ್‌ ಸರಸ್ವತಿ ಮತ್ತು ಸರ್ದಾರ್‌ ಅಜಿತ್‌ ಸಿಂಗ್‌ರ ನೆನಪಿನಲ್ಲಿ ದೆಹಲಿ ಗಡಿಗಳಲ್ಲಿ ನಡೆದ ಪಗಡಿ ಸಂಭಾಲ್‌ ದಿನದ ಆಚರಣೆಯಲ್ಲಿ ದಕ್ಷಿಣ ಭಾರತದ ತಂಡ ಭಾಗವಹಿಸಿತ್ತು.


ಇದನ್ನೂ ಓದಿ: ಪಗಡಿ ಸಂಭಲ್ ದಿನ: ಸಿಂಘು ಗಡಿಗೆ ಹುತಾತ್ಮ ಭಗತ್ ಸಿಂಗ್ ಸಂಬಂಧಿಕರ ಭೇಟಿ, ರೈತ ಹೋರಾಟಕ್ಕೆ ಬೆಂಬಲ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here