ಬೈಕಿನಲ್ಲಿ ಬಂದ ದುಷ್ಕರ್ಮಿಗಳು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಬಾಂಬ್ ಮತ್ತು ಗುಂಡುಗಳ ದಾಳಿ ನಡೆಸಿದ ಪರಿಣಾಮ ಒಬ್ಬ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡ ಘಟನೆ ಪಶ್ಚಿಮ ಬಂಗಾಳದ ಪಶ್ಚಿಮ ಮೇದಿನಿಪುರ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾತ್ರಿ 9 ಗಂಟೆ ಸುಮಾರಿಗೆ ನಾರಾಯಣಗಡ್ ಪೊಲೀಸ್ ಠಾಣೆ ವ್ಯಾಪ್ತಿಯ ಅಭಿರಾಂಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ದುಷ್ಕರ್ಮಿಗಳು ಬೈಕಿನಲ್ಲಿ ಬಂದು ಶೌಭಿಕ್ ದೋಲುಯಿ ಮತ್ತು ಇತರ ಇಬ್ಬರ ಮೇಲೆ ಬಾಂಬ್ ಎಸೆದಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಪ.ಬಂಗಾಳಕ್ಕೆ ಸ್ವಂತ ಮಗಳು ಬೇಕು: ಟಿಎಂಸಿಯ ಚುನಾವಣಾ ಘೋಷವಾಕ್ಯ
ಅಷ್ಟೇ ಅಲ್ಲದೆ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗುವ ಮೊದಲು 24 ವರ್ಷದ ಶೌಭಿಕ್ ಮೇಲೆ ಗುಂಡು ಕೂಡಾ ಹಾರಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆಂದು ಬ್ಯುಸಿನೆಸ್ ಸ್ಟಾಂಡರ್ಡ್ ಪತ್ರಿಕೆ ವರದಿ ಮಾಡಿದೆ.
ಮೂವರನ್ನು ಖರಗ್‌ಪುರದ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಶೌಭಿಕ್ ಅದಾಗಲೆ ಮೃತಪಟ್ಟಿದ್ದರೆಂದು ತಿಳಿದು ಬಂದಿದ್ದು, ಇನ್ನಿಬ್ಬರ ಸ್ಥಿತಿಯು ಗಂಭೀರವಾಗಿದೆ. ಅವರನ್ನು ಮೇದಿನಿಪುರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಟಿಎಂಸಿ ನಾಯಕರು ಈ ದಾಳಿಯಲ್ಲಿ ಬಿಜೆಪಿಯ ಕೈವಾಡ ಇದೆ ಎಂದು ಆರೋಪಿಸಿದ್ದಾರೆ. ಆದರೆ ಬಿಜೆಪಿ ಇದನ್ನು ತಳ್ಳಿಹಾಕಿದ್ದು, ಘಟನೆಯು ಟಿಎಂಸಿಯ ಒಳಜಗಳದ ಪರಿಣಾಮದಿಂದಾಗಿ ಆಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಎಪ್ರಿಲ್-ಮೆ ತಿಂಗಳಲ್ಲಿ ಚುನಾವಣೆ ನಡೆಯಲಿದೆ.
ಇದನ್ನೂ ಓದಿ: ಕಾರಿನಲ್ಲಿ ಕೊಕೇನ್ ಸಾಗಾಟ – ಪಶ್ಚಿಮ ಬಂಗಾಳದ ಬಿಜೆಪಿ ನಾಯಕಿಯ ಬಂಧನ


