Homeಕರ್ನಾಟಕಶಿವಮೊಗ್ಗ, ಚಿಕ್ಕಬಳ್ಳಾಪುರ ಸ್ಫೋಟಗಳ ಸಾಲಿಗೆ ಸೇರಬಾರದು ಬ್ರಹ್ಮಾವರ ತಾಲೂಕಿನ ಗಣಿ

ಶಿವಮೊಗ್ಗ, ಚಿಕ್ಕಬಳ್ಳಾಪುರ ಸ್ಫೋಟಗಳ ಸಾಲಿಗೆ ಸೇರಬಾರದು ಬ್ರಹ್ಮಾವರ ತಾಲೂಕಿನ ಗಣಿ

- Advertisement -
- Advertisement -

ಅಕ್ರಮವಾಗಿ ಹಣ ಹರಿದು ಬರುವಲ್ಲಿ ಅನಾಹುತ-ಅನಾಚಾರ ಆಗಿಯೇ ಆಗುತ್ತದೆ. ಇದು ಪ್ರಕೃತಿ ನಿಯಮ. ರಾಜ್ಯದಲ್ಲಿ ಕಾನೂನು ಬಾಹಿರವಾಗಿ ನಡೆಯುತ್ತಿರುವ ಕಲ್ಲು ಮತ್ತು ಮರಳು ಗಣಿಗಳಲ್ಲಿ ಪ್ರತಿದಿನ ಒಂದಲ್ಲ ಒಂದು ಭಾನಗಡಿ ಇದ್ದದ್ದೇ! ಹತ್ತು-ಹನ್ನೆರಡು ಜಿಲ್ಲೆಗಳಲ್ಲಿ ನಿರಂತರ-ನಿರಾತಂಕವಾಗಿ ನಡೆಯುತ್ತಿರುವ ಕಳ್ಳ ಕಲ್ಲು ಗಣಿಗಾರಿಕೆಗೆ ಅಧಿಕಾರಸ್ಥರ ಪುಢಾರಿಗಳೇ ಪಿತಾಮಹರು. ಹೀಗಾಗಿ ಕಲ್ಲು ಕ್ವಾರಿಗಳಲ್ಲಿ ನರಬಲಿ, ರಕ್ತದೋಕುಳಿ ನಡೆಯುತ್ತಲೇ ಇದೆ. ಶಿವಮೊಗ್ಗದ ಹುಣಸೋಡು ಅಕ್ರಮ ಗಣಿಯಲ್ಲಿ ಘನಘೋರ ಸ್ಫೋಟ ಸಂಭವಿಸಿ ಆರು ಬಡ ಜೀವಗಳು ಆಹುತಿಯಾಗಿ ತಿಂಗಳಿನ್ನೂ ಕಳೆದಿಲ್ಲ; ಅದಾಗಲೇ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಹಿರೇನಾಗವೇಲಿ ಜಿಲೆಟಿನ್ ಸಿಡಿತಕ್ಕೆ ಆರು ಮಂದಿ ಬಲಿಯಾಗಿದ್ದಾರೆ!!

ರಾಜ್ಯದ ಸುಮಾರು 10-15 ಸಾವಿರ ಎಕರೆ ಪ್ರದೇಶದಲ್ಲಿ ಸಾವಿರಾರು “ಅಧಿಕೃತ” ಕಲ್ಲುಕ್ವಾರಿ ಮತ್ತು ಕ್ರಶರ್‌ಗಳಿವೆ ಎಂಬುದೊಂದು ಅಂದಾಜು. ಆದರೆ ಇದಕ್ಕೆ ದುಪ್ಪಟ್ಟು ಜಾಗದಲ್ಲಿ ದುಪ್ಪಟ್ಟು ಕಲ್ಲುಗಣಿ-ಕ್ರಶರ್‌ಗಳ “ಅನಧಿಕೃತ” ದಂಧೆ ರಾಜಾರೋಷವಾಗಿ ಸಾಗಿದೆ! ಇದು ಸರ್ಕಾರ ನಡೆಸುವವರಿಗೆ ಮತ್ತವರ ಅಧಿಕಾರಿ ಗಣಕ್ಕೆ ಗೊತ್ತಿರುವ ಸತ್ಯವೇ. ಕಳ್ಳ ಮಾರ್ಗದಲ್ಲಿ ಕೋಟಿ-ಕೋಟಿ ಲೂಟಿಯಾಗುತ್ತಿದ್ದರೂ ಕಡಿವಾಣ ಹಾಕುವುದಕ್ಕಾಗುತ್ತಿಲ್ಲ. ಸರ್ಕಾರವನ್ನೇ ಉರುಳಿಸುವಷ್ಟು ಮತ್ತು ಎಂಪಿ-ಎಮ್ಮೆಲ್ಲೆಗಳ ಗೆಲ್ಲಿಸುವ-ಸೋಲಿಸುವಷ್ಟು ಕೊಬ್ಬಿರುವ ಕ್ವಾರಿ ಲಾಬಿ ಮಟ್ಟಹಾಕುವ ತಾಕತ್ತು ಯಾರಿಗೂ ಇಲ್ಲವಾಗಿದೆ.

ಕಲ್ಲು ಕ್ವಾರಿಗಳಲ್ಲಿ ಸ್ಥಳೀಯ ಅಮಾಯಕ ಕೂಲಿಗಳ ಜತೆ ಆಂಧ್ರ, ಬಿಹಾರ, ಜಾರ್ಖಂಡ್ ಮುಂತಾದ ಹೊರ ರಾಜ್ಯಗಳ ಕಾರ್ಮಿಕರು ದುಡಿಯುತ್ತಿದ್ದಾರೆ. ಇದೊಂಥರಾ ಜೀತ!! ಜೀವ ಪಣಕ್ಕಿಟ್ಟು ಬೆವರಿಳಿಸಬೇಕಾದ ಬರ್ಬರ-ಭೀಕರ ಪದ್ಧತಿ!! ಕೆಲವು ಕಡೆ ಟನ್‌ಗಟ್ಟಲೆ ಸ್ಫೋಟಕ ಸಂಗ್ರಹಿಸಿಡಲಾಗಿದೆ. ಆಂಧ್ರ-ತಮಿಳುನಾಡು ಮತ್ತಿತರ ರಾಜ್ಯಗಳಿಂದ ಜಿಲೆಟಿನ್, ಅಮೋನಿಯಮ್ ನೈಟ್ರೇಟ್, ಡಿಟೋನೇಟರ್ ಮತ್ತು ಫ್ಯೂಸ್ ಪೂರೈಕೆಯಾಗುತ್ತಿದೆ. ಈ ಸ್ಫೋಟಕಗಳನ್ನು ಒಂದೇ ಕಡೆ ಸಂಗ್ರಹಿಸಿಡುವುದು ಗಂಡಾಂತರಕಾರಿ. ಯಾವ ಸುರಕ್ಷಾ ಕ್ರಮಗಳು ಇಲ್ಲದೆ ಸ್ಫೋಟಕ ದಾಸ್ತಾನು ಮಾಡುವ ಗಣಿ ಧಣಿಗಳು ಮಾರಣಹೋಮ ಮಾಡುತ್ತಿದ್ದಾರೆ. ಬೃಹತ್ ಬಂಡೆ ಒಡೆಯುವಾಗ ಪರವಾನಗಿ ಹೊಂದಿರುವ ಪರಿಣಿತರಿಂದಲೇ ಸ್ಫೋಟ ನಡೆಸಬೇಕೆಂಬ ನಿಯಮವಿದೆ. ಇದ್ಯಾವುದೂ ಯಾವ ಗಣಿಯಲ್ಲೂ ಪಾಲನೆಯಾಗುತ್ತಿಲ್ಲ.

ಕಲ್ಲುಕ್ವಾರಿ ಹಾಗೂ ಕ್ರಶರ್ ಪರವಾನಗಿ ಕಟ್ಟುನಿಟ್ಟಿನ ನಿಯಮವೇನೋ ಇದೆ. ಅರಣ್ಯ ಸಂರಕ್ಷಣಾ ಕಾಯ್ದೆ 198 2(1) ಮತ್ತು 2(3) ಮತ್ತು ಅರಣ್ಯ ಸಂರಕ್ಷಣಾ ಕಾನೂನು 2003(6) ಹಾಗೂ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಅನುಮತಿ ಸಿಕ್ಕ ಬಳಿಕ 20 ಅಥವಾ 30 ವರ್ಷದ ಲೀಸ್ ನೀಡಬೇಕಾಗುತ್ತದೆ. ಇದೆಲ್ಲವನ್ನೂ ಪ್ರಜ್ಞಾಪೂರ್ವಕವಾಗೇ ಧಿಕ್ಕರಿಸಿ ಕಳ್ಳಕ್ವಾರಿಗೆ ಅವಕಾಶ ನೀಡಿ ತಮ್ಮ ಪಾಲು ಪಡೆಯುವ ಅಧಿಕಾರಿಗಳು ಏನೂ ಆಗಿಲ್ಲವೆಂಬಂತೆ ಇದ್ದು ಬಿಡುತ್ತಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಂತೂ ಲೇವಾದೇವಿ ಅಡ್ಡೆಯಂತಾಗಿ ಹೋಗಿದೆ! ಹೀಗಾಗಿ ಕಾಯ್ದಿಟ್ಟ ಅರಣ್ಯ, ಅಭಯಾರಣ್ಯ, ಪರಿಸರ ಸೂಕ್ಷ್ಮ ಪ್ರದೇಶದಲ್ಲೂ ನಾಯಿಕೊಡೆಗಳಂತೆ ಭೀಭತ್ಸ ಕ್ವಾರಿಗಳು ತಲೆಯೆತ್ತಿವೆ. ಕ್ರಶರ್‌ಗಳಿಗಷ್ಟೇ ಪರವಾನಗಿ ಪಡೆದು ಕಣ್ಕಟ್ಟು ನಡೆಸುವ ಕ್ವಾರಿ ಕುಳಗಳಿಗೆ ಕಳ್ಳ ಕ್ವಾರಿ ನಡೆಸಲು ಅಧಿಕಾರಿ ಬಳಗ ಅನುಕೂಲ ಮಾಡಿಕೊಡುತ್ತಿದೆ!

ಕಳ್ಳಕ್ವಾರಿಗಳಿಂದ ಪರಿಸರ ಶಬ್ದಮಾಲಿನ್ಯ ಆಗುತ್ತಿದೆ. ಯಂತ್ರಗಳ ಸದ್ದು ಮತ್ತು ಸ್ಫೋಟದಿಂದ ವನ್ಯ ಪ್ರಾಣಿಗಳು ದಿಕ್ಕೆಟ್ಟು ನಾಡಿಗೆ ನುಗ್ಗುತ್ತಿವೆ. ಕಲ್ಲುಸಾಗಾಟಕ್ಕೆ ರಸ್ತೆ, ಕಾರ್ಮಿಕರ ಗುಡಿಸಲು, ಯಂತ್ರಗಳ ಸ್ಥಾಪನೆ ಎಂದೆಲ್ಲ ಅರಣ್ಯ ನಾಶವಾಗುತ್ತಿದೆ. ಗಣಿಗಾರಿಕೆಯಿಂದ ನದಿಗಳು ಬತ್ತಿಹೋಗುತ್ತಿವೆ. ರೈತರ ಬೆಳೆಗೆ ಹಾನಿಯಾಗುತ್ತಿದೆ. ಮಣ್ಣಿನ ಸಾರಾಂಶ ಕಡಿಮೆಯಾಗುತ್ತಿದೆ. ಉಸಿರಾಟದ ತೊಂದರೆ, ಶ್ವಾಸಕೋಶ, ಶ್ರವಣ ಸಮಸ್ಯೆ, ಕೆಮ್ಮುಗಳಂಥ ರೋಗ ಜನರಿಗೆ ಬಾಧಿಸುತ್ತಿದೆ. ಸ್ಥಳೀಯ ಪ್ರಭಾವಿ ಮರಿ ಪುಢಾರಿಗಳ ಸಚಿವ-ಸಂಸದ-ಶಾಸಕರ ನಿಕಟವರ್ತಿಗಳೇ ಗಣಿಗಾರಿಕೆ ಯಜಮಾನರಾಗಿರುವುದರಿಂದ ನಿಷ್ಠಾವಂತ ಅಧಿಕಾರಿಗಳ ಕೈಕಟ್ಟಿಹಾಕಿದಂತಾಗಿದೆ. ಅಕ್ರಮಕ್ಕೆ ಅಂಕುಶವಿಡಲು ಪ್ರಯತ್ನಿಸುವ ಅಧಿಕಾರಿಗಳನ್ನು ಸತಾಯಿಸಿ ಪಳಗಿಸಲು ಹವಣಿಸುವುದು ಮಾಮೂಲಿ ಎಂಬಂತಾಗಿದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರಕನ್ನಡ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ಕೊಪ್ಪಳ, ಚಾಮರಾಜನಗರ, ಮಂಡ್ಯ, ಬೀದರ್ ಮತ್ತು ಶಿವಮೊಗ್ಗಗಳಲ್ಲಿ ಕಲ್ಲುಕ್ವಾರಿ ಹಾವಳಿ ಜೋರಾಗಿದೆ! ಮೊನ್ನೆ ನಡೆದ ಗ್ರಾಪಂ ಇಲೆಕ್ಷನ್‌ನಲ್ಲೂ ಈ ಕ್ವಾರಿ ಕಪ್ಪು ಕಾಸು ನಿರ್ಣಾಯಕ ಆಟ ಆಡಿದೆ.

ಕಾಯ್ದೆ ಉಲ್ಲಂಘಿಸುವ ಕಲ್ಲು ಗಣಗಾರಿಕೆಯವರಿಗೆ 2 ವರ್ಷ ಶಿಕ್ಷೆ ಮತ್ತು 5 ಲಕ್ಷ ರೂ ದಂಡ ವಿಧಿಸುವ ಕಾನೂನಿದೆ. ಇದು ಬರೀ ಹೆಸರಿಗಷ್ಟೇ. ಕಳೆದ 5 ವರ್ಷದಲ್ಲಿ ಕದ್ದು ಕಲ್ಲು ಸಾಗಿಸಿದ ಸುಮಾರು 800 ಪ್ರಕರಣಗಳಲ್ಲಿ ಗಣಿ ಇಲಾಖೆ ವಾಹನಗಳ ಜಪ್ತಿ ಮಾಡಿ 9 ಕೋಟಿ ದಂಡ ವಸೂಲಿ ಮಾಡಿದೆ ಎಂಬುದು ಸರ್ಕಾರಿ ಅಂಕಿ-ಅಂಶ. ಆದರೆ ಕಳ್ಳ ಗಣಿ ದೊರೆಗಳು-ಅಧಿಕಾರಿಗಳು-ಅಧಿಕಾರಸ್ಥ ರಾಜಕಾರಣಿಗಳ ಒಳ ಒಪ್ಪಂದದಲ್ಲಿ ಸಾವಿರಾರು ಕೋಟಿ ರೂ ಕಲ್ಲು ಕಳ್ಳ ಸಾಗಾಣಿಕೆ ಆಗಿದೆ; ರಾಜಧನ ತಪ್ಪಿಸಿ ಹಗಲು ದರೋಡೆ ಮಾಡಲಾಗುತ್ತಿದೆ. ಕಳೆದ 5 ವರ್ಷದಲ್ಲಿ ಅಕ್ರಮ ಗಣಿಗಾರಿಕೆಯ 1,126 ಕೇಸ್ ದಾಖಲಾಗಿದೆ. ಇದಕ್ಕೆ ಎರಡು ಪಟ್ಟು ಮುಚ್ಚಿಹೋಗಿದೆ. ಗಣಿ ಇಲಾಖೆ ಇತಿಹಾಸದಲ್ಲಿ ಒಂದಿಷ್ಟು ತೋರಿಕೆಗೆ ದಂಡ ಹಾಕುವ ಕಾರ್ಯಾಚರಣೆ ನಡೆದಿದೆಯೇ ಹೊರತು ಯಾವ ಕಲ್ಲು ಕಳ್ಳನಿಗೂ ಶಿಕ್ಷೆಯಾದ ದಾಖಲೆಯಿಲ್ಲ!! ಹಗಲಿರುಳೆನ್ನದೆ ಸ್ಫೋಟಕ ಜಿಲೆಟಿನ್ ಲಾರಿಗಟ್ಟಲೆ ಸಾಗಾಟವಾಗುತ್ತಿದ್ದರೂ ಅಧಿಕಾರಿಗಳು ಸುಮ್ಮನಿದ್ದಾರೆ. ಕೇಂದ್ರ ಗಣಿ ಮತ್ತು ಭೂವಿಜ್ಞಾನ ಮಂತ್ರಿ ಪ್ರಹ್ಲಾದ್ ಜೋಶಿಯೇ ಶಿವಮೊಗ್ಗದಲ್ಲಿ ಸ್ಫೋಟ ಆದಾಗ- “ಅಕ್ರಮ ಗಣಿಗಾರಿಕೆ ಮತ್ತು ಅಧಿಕಾರಿಗಳ ಮಧ್ಯೆ ಹೊಂದಾಣಿಕೆಯಿದೆ” ಎಂದು ಬಹಿರಂಗವಾಗೇ ಹೇಳಿದ್ದು ಕಪ್ಪು ಕ್ವಾರಿ ದಂಧೆ ಅಸಲಿಯತ್ತು ಸಾಬೀತು ಪಡಿಸುವಂತಿದೆ!!

ರಾಜ್ಯದಲ್ಲಿ ನಡೆಯುತ್ತಿರುವ ಅಷ್ಟೂ ಅಪಾಯಕಾರಿ ಅನಧಿಕೃತ ಮತ್ತು ಅಧಿಕೃತ ಕಲ್ಲು ಗಣಿಗಳ ಭೀಭತ್ಸತೆಯ ಸ್ಯಾಂಪಲ್‌ನಂತಿದೆ ಉಡುಪಿ ಜಿಲ್ಲೆ ಬ್ರಹ್ಮಾವರ ತಾಲ್ಲೂಕಿನ ನಾಲ್ಕೂರು ಗ್ರಾಮದಲ್ಲಿ ಬಿಜೆಪಿ ಪ್ರಭಾವಿ ಶಾಸಕರೊಬ್ಬರ ಪರಮಾಪ್ತ ಬಂಟ ಅಕ್ರಮವಾಗಿ ನಡೆಸುತ್ತಿರುವ ಕಲ್ಲುಕ್ವಾರಿ ಕರ್ಮಕಾಂಡ! ಮಂದರ್ತಿ ಜಿಪಂ ಸದಸ್ಯ ಪ್ರತಾಪ್ ಹೆಗ್ಡೆ ಮತ್ತಾತನ ಸಹೋದರ ಪ್ರವೀಣ್ ಹೆಗಡೆ ಉಡುಪಿ ಶಾಸಕ ರಘುಪತಿ ಭಟ್ಟರ ಅಚ್ಚುಮೆಚ್ಚಿನ ಗೆಣೆಕಾರರು. ಪ್ರವೀಣ್ ಹೆಗಡೆ ಯುನಿಟಿ ರಾಕ್ ಇಂಡಸ್ಟ್ರೀಸ್ ಹೆಸರಿನ ಜಲ್ಲಿ ಕ್ರಶರ್ ಮತ್ತು ಕಲ್ಲುಕ್ವಾರಿ ಉದ್ಯಮ ಸಂಸ್ಥೆ ಸುಮಾರು 15 ಕೋಟಿ ರೂ ಬಂಡವಾಳದಲ್ಲಿ ಶುರು ಮಾಡಿದ್ದಾರೆ. ಇದನ್ನು ಮೊದಲು ರೆಸಾರ್ಟ್ ಉದ್ಯಮಿ ಜಾಯ್ ಆರಂಭಿಸಿದ್ದರು. ಅದಕ್ಕೆ ಹೆಗ್ಡೆ ಸಹೋದರರು ಸ್ಲೀಪಿಂಗ್ ಪಾರ್ಟ್‌ನರ್‌ಗಳಾಗಿದ್ದರು. ಈಚೆಗೆ ನಿಧನರಾದ ಅಂಡರ್ ವರ್ಲ್ಡ್ ಡಾನ್ ಒಬ್ಬನಿಂದ ಜಾಯ್‌ಗೆ ಬೆದರಿಕೆ ಬಂತೆಂದು ಹೇಳಲಾಗುತ್ತದೆ.

ಯುನಿಟಿ ರಾಕ್ ಇಂಡಸ್ಟ್ರೀಸ್‌ಗೆ ಲೀಸ್‌ನಲ್ಲಿ ಕೊಡಲಾಗಿರುವ ನಾಲ್ಕೂರು ಗ್ರಾಮದ ಸರ್ವೆ ನಂಬರ್ 27/7, 24/2, 24/8, 24/9ರಲ್ಲಿನ 1.97 ಎಕರೆ ಇಕೋ ಸೆನ್ಸಿಟಿವ್ ಝೋನ್‌ನಲ್ಲಿದೆ. ಈ ಬಗ್ಗೆ ದೂರು ಬಂದಾಗ ಅಂದಿನ ಹೆಬ್ರಿ ವಲಯದ ಅರಣ್ಯಾಧಿಕಾರಿ ಮುನಿರಾಜು ನಿಷ್ಠುರ ತನಿಖೆ ನಡೆಸಿ ಹೆಗ್ಡೆ ಬಂಧುಗಳ ರಾಕ್ ಇಂಡಸ್ಟ್ರಿಸ್ ಪರವಾನಗಿ ರದ್ದು ಮಾಡುವಂತೆ ವರದಿ ಕೊಟ್ಟಿದ್ದರು! ಅಷ್ಟೇ ಅಲ್ಲ, ಸರ್ವೆ ನಂಬರ್ 219/1ಪಿ1ರಲ್ಲೂ ಕ್ವಾರಿ ವ್ಯಾಪಿಸಿಕೊಂಡಿದ್ದು ಇದು ಡೀಮ್ಡ್ ಫಾರೆಸ್ಟ್‌ನಲ್ಲಿದೆ ಎಂದು ಆಕ್ಷೇಪಿಸಿದ್ದರು. ಸೋಮೇಶ್ವರ ವನ್ಯಜೀವಿ ವಲಯದ ತೆಂಕಹೊಲ ಮೀಸಲು ಅರಣ್ಯಕ್ಕೆ ಕೇವಲ 4.9 ಕಿ.ಮೀ ಅಂತರದಲ್ಲಿ ಕ್ವಾರಿಯಿರುವುದರಿಂದ ಹೆಗ್ಡೆಗಳು ನಡೆಸುತ್ತಿರುವ ಅಕ್ರಮ ಕ್ವಾರಿ ಸ್ಥಗಿತಗೊಳಿಸುವಂತೆ ವರದಿಯಲ್ಲಿ ಹೇಳಿದ್ದರು.

ಕ್ವಾರಿ ಧಣಿ ಅಧಿಕಾರಸ್ಥರ ಹತ್ತಿರದವನೆಂಬ ಕಾರಣಕ್ಕೆ ಖಡಕ್ ಮುನಿರಾಜು ನಂತರ ಬಂದ ಆರ್‌ಎಫ್‌ಓ ಸದ್ರಿ ಕಲ್ಲು ಗಣಿಗಾರಿಕೆಗೆ ಅವಕಾಶ ಕೊಟ್ಟು ಸುಮ್ಮನಿದ್ದಾರೆ. ಎರಡು ವರ್ಷದ ಹಿಂದೆ ಈ ಗಣಿಗಾರಿಕೆಯಲ್ಲಿ ಉತ್ತರ ಭಾರತದ ಕೂಲಿಯೊಬ್ಬ ನಿಗೂಢವಾಗಿ ಸತ್ತು ಬಿದ್ದಿದ್ದ. ಅದನ್ನು ಸಿಡಿಲು ಹೊಡೆತದಿಂದಾದ ಸಾವೆಂದು ಸಾರಲಾಗಿತ್ತು. ಮುಚ್ಚಿರುವ ಮಜುಬೂತ್ ಗೇಟಿನ ಒಳಗಿರುವ ಈ ಕ್ವಾರಿಯಲ್ಲಿ ನಿರಂತರವಾಗಿ ಜಿಲೆಟಿನ್ ಆಸ್ಫೋಟ ಆಗುತ್ತಿರುತ್ತದೆ. ಅಪಾರ ಸ್ಫೋಟಕ ಸಂಗ್ರಹ ಇಲ್ಲಿದೆಯೆನ್ನಲಾಗಿದೆ. ಪ್ರತಿದಿನ ಕಮ್ಮಿಯೆಂದರೂ 250 ಲಾರಿ ಲೋಡ್ ಜಲ್ಲಿಕಲ್ಲು ಈ ಕ್ವಾರಿಯಿಂದ ಆಚೀಚೆಯ ಜಿಲ್ಲೆಗಳಿಗೆ ಹೋಗುತ್ತದೆ! ಒಂದು ದಿನಕ್ಕೆ ಹತ್ತಿರಹತ್ತಿರ ಮುಕ್ಕಾಲು ಕೋಟಿ ಲೂಟಿಯಿದು!!

ಹೇಳೋರಿಲ್ಲ; ಕೇಳೋರಿಲ್ಲ! ನಿತ್ಯವೂ ಕಳ್ಳ ಕಲ್ಲುಗಣಿ ದೊರೆ ಬಳಗಕ್ಕೆ ಸುಗ್ಗಿಯೇ ಸುಗ್ಗಿ!!


ಇದನ್ನೂ ಓದಿ: ಇನ್ನಾದರು ಈ ಪ್ರಕೃತಿ ಸಂಪತ್ತುಗಳ ಲೂಟಿಗೆ ಕಡಿವಾಣ ಹಾಕಬೇಕು: ಎಚ್ ಎಸ್ ದೊರೆಸ್ವಾಮಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಳುವ ಕಂದಮ್ಮಗಳನ್ನು ವಾಷಿಂಗ್ ಮೆಷಿನ್‌ನಲ್ಲಿ ಕೂಡಿಹಾಕ್ತಿದ್ದ ಇಬ್ಬರು ಕೇರ್‌ಟೇಕರ್ ಅರೆಸ್ಟ್

ಸಿಲಿಕಾನ್ ಸಿಟಿಯ ಬ್ರೂಕ್‌ಫೀಲ್ಡ್‌ನಲ್ಲಿರುವ ಪ್ರಮುಖ ಐಟಿ ಸಂಸ್ಥೆ 'ಕ್ಯಾಪ್‌ಜೆಮಿನಿ' ಕ್ಯಾಂಪಸ್‌ನ ಡೇ-ಕೇರ್ ಸೆಂಟರ್‌ನಲ್ಲಿ ಪುಟ್ಟ ಕಂದಮ್ಮಗಳನ್ನು ಬಾತ್‌ರೂಮ್ ಹಾಗೂ ವಾಷಿಂಗ್ ಮೆಷಿನ್‌ಗಳಲ್ಲಿ ಕೂಡಿಹಾಕಿ ವಿಕೃತಿ ಮೆರೆದಿದ್ದ ಪ್ರಕರಣದಲ್ಲಿ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಪ್ರಕರಣದ...

“ನಾಗರಿಕರು ಸರ್ಕಾರದ ಗುಲಾಮರಲ್ಲ”: ಸಿಎಎ, ಜ್ಞಾನವಾಪಿ ವಿರೋಧಿ ಪ್ರತಿಭಟನೆ ಸಂಬಂಧ ಎಸ್‌ಡಿಪಿಐ ನಾಯಕನ ಗಡಿಪಾರು ಪ್ರಶ್ನಿಸಿದ ಬಾಂಬೆ ಹೈಕೋರ್ಟ್

“ದೇಶದ ನಾಗರಿಕರು ಸರ್ಕಾರದ ಗುಲಾಮರಲ್ಲ. ಕೇವಲ ಸರ್ಕಾರದ ನಿರ್ಧಾರಗಳನ್ನು ವಿರೋಧಿಸುವುದು ಅಥವಾ ಆಡಳಿತ ವ್ಯವಸ್ಥೆಯ ವಿರುದ್ಧ ಘೋಷಣೆಗಳನ್ನು ಕೂಗುವುದು ಒಬ್ಬ ನಾಗರಿಕನನ್ನು ಗಡಿಪಾರು ಮಾಡಲು ಕಾನೂನಾತ್ಮಕ ಕಾರಣವಾಗಲಾರದು,” ಎಂದು ಬಾಂಬೆ ಹೈಕೋರ್ಟ್‌ ಐತಿಹಾಸಿಕ...

ಗೌರಿಯಕ್ಕ, ಸುರೇಶ್ ಭಟ್ರ ಬಗ್ಗೆ ತಿಳಿಯಲು ಎಕ್ಸ್ ಆರೆಸ್ಸೆಸ್‌ನವರ ಪ್ರಮಾಣ ಪತ್ರ ಬೇಕಿಲ್ಲ

ಕರ್ನಾಟಕ ಕೋಮು ಸೌಹಾರ್ದ ವೇದಿಕೆಯಲ್ಲಿ ನಮ್ಮ ಒಡನಾಡಿಯಾಗಿದ್ದ ಎ‌ಐಸಿಸಿ ಕಾರ್ಯದರ್ಶಿಯೂ ಆಗಿರುವ ಪಿ.ವಿ.ಮೋಹನ್‌ರಿಗೆ ವಿಧಾನ ಪರಿಷತ್ ಸದಸ್ಯತ್ವ ಸಿಕ್ಕಿದ್ದು ಸಹಜವಾಗಿಯೇ ನಮಗೆ ಖುಷಿಯಾಗಿತ್ತು. ಈ ನಿಟ್ಟಿನಲ್ಲಿ ಮಂಗಳೂರಿನ ವುಡ್‌ಲ್ಯಾಂಡ್ಸ್ ಹೋಟೆಲಲ್ಲಿ ಕೋಮು ಸೌಹಾರ್ದ...

ಡ್ರಗ್ಸ್ ಮುಕ್ತ ಕರ್ನಾಟಕ ನಮ್ಮ ಗುರಿ: ‘ಆಪರೇಷನ್ RISE’ ಮತ್ತು ‘ಬೇಡ BRO’ ಅಭಿಯಾನಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಕರೆ

ಬೆಂಗಳೂರು: ಮಾದಕ ದ್ರವ್ಯ ಮುಕ್ತ ಕರ್ನಾಟಕವನ್ನು ನಿರ್ಮಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಮಾದಕ ವ್ಯಸನದ ವಿರುದ್ಧ ಯುವಜನತೆ ಮತ್ತು ಸಾರ್ವಜನಿಕರು ಕೈಜೋಡಿಸಬೇಕು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ...

ಬೆಂಗಳೂರಿನ 3 ಪ್ರಮುಖ ಮಾರ್ಗಗಳಲ್ಲಿ ಟೋಲ್ ದರ ಭಾರಿ ಹೆಚ್ಚಳ: ಇಂದಿನಿಂದಲೇ ಜಾರಿ 

ಬೆಂಗಳೂರು: ಸಿಲಿಕಾನ್ ಸಿಟಿಯ ವಾಹನ ಸವಾರರಿಗೆ ಜುಲೈ ಒಂದರಿಂದಲೇ ಅನ್ವಯವಾಗುವಂತೆ ಬೆಲೆ ಏರಿಕೆಯ ಭಾರಿ ಬಿಸಿ ತಟ್ಟಿದೆ. ಬೆಂಗಳೂರಿನ ಪ್ರಮುಖ ಸಂಪರ್ಕ ರಸ್ತೆಗಳಾದ ನೈಸ್ ರಸ್ತೆ (NICE Road), ಎಲೆಕ್ಟ್ರಾನಿಕ್ಸ್ ಸಿಟಿ ಎಲಿವೇಟೆಡ್...

ಕೊಪ್ಪಳದ ಬೋಚನಹಳ್ಳಿಯಲ್ಲಿ ದಲಿತರ ಮೇಲೆ ಹಲ್ಲೆ: ದೂರು-ಪ್ರತಿದೂರು; ಹೋರಾಟಕ್ಕೆ ಸಂಘಟನೆಗಳ ನಿರ್ಧಾರ

ಮೊಹರಂ ಮೆರವಣಿಗೆ ವೇಳೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ದಲಿತರ ಮನೆಗಳಿಗೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಕೊಪ್ಪಳ ತಾಲೂಕಿನ ಅಳವಂಡಿ ಬಳಿಯ ಬೋಚನಹಳ್ಳಿ ಗ್ರಾಮದಲ್ಲಿ ನಡೆದಿದೆ. ಜೂನ್ 25ರಂದು ಗ್ರಾಮದಲ್ಲಿ ಮೊಹರಂ ಮೆರವಣಿಗೆ...

ಎನ್ಯೂಮರೇಷನ್ ಫಾರಂ ಭರ್ತಿ ಮಾಡುವ ಮೂಲಕ SIR ಗೆ ಚಾಲನೆ ನೀಡಿದ ಸಿಎಂ ಡಿ.ಕೆ ಶಿವಕುಮಾರ್

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು (ಜೂನ್ 30) ಮಂಗಳವಾರ ತಮ್ಮ ಸದಾಶಿವನಗರ ನಿವಾಸದಲ್ಲಿ ದಾಖಲಾತಿ ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸುವ ಮೂಲಕ ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ' (SIR) ಅಭಿಯಾನಕ್ಕೆ ಅಧಿಕೃತವಾಗಿ...

‘ಆಪರೇಷನ್ ಸಿಂಧೂರ್‌’ ಕುರಿತು ಸಂಸತ್ತಿಗೆ ಸುಳ್ಳು ಮಾಹಿತಿ: ರಾಜನಾಥ್ ಸಿಂಗ್ ವಿರುದ್ಧ ಕಾಂಗ್ರೆಸ್‌ನಿಂದ ಹಕ್ಕುಚ್ಯುತಿ ನೋಟಿಸ್

ಕೇಂದ್ರ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ವಿರುದ್ಧ ಕಾಂಗ್ರೆಸ್ ಪಕ್ಷ ಲೋಕಸಭೆಯಲ್ಲಿ ಹಕ್ಕುಚ್ಯುತಿ ನೋಟಿಸ್ ನೀಡಿದೆ. ಕಾಂಗ್ರೆಸ್ ಸಂಸದ ಕೆ. ಸಿ. ವೇಣುಗೋಪಾಲ್ ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಈ ಕುರಿತು ಪತ್ರ ಬರೆದಿದ್ದು,...

SIR | ಮತದಾರರ ಪಟ್ಟಿಯಲ್ಲಿ ಹೆಸರಿದ್ದರೆ ಮಾತ್ರ ಸರ್ಕಾರಿ ಸೌಲಭ್ಯ: ಸಿಎಂ

ರಾಜ್ಯ ಸರ್ಕಾರದ ಐದು ಪ್ರಮುಖ ಗ್ಯಾರಂಟಿ ಯೋಜನೆಗಳು ಹಾಗೂ ಇತರ ಸರ್ಕಾರಿ ಸವಲತ್ತುಗಳನ್ನು ಪಡೆಯುತ್ತಿರುವ ಫಲಾನುಭವಿಗಳಿಗೆ ಮುಖ್ಯಮಂತ್ರಿಗಳು ಗಂಭೀರ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಪ್ರತಿಯೊಬ್ಬ ಫಲಾನುಭವಿಯೂ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದನ್ನು ಕಡ್ಡಾಯವಾಗಿ...

SIR, ಚುನಾವಣಾ ಆಯೋಗದ ಕಾರ್ಯನಿರ್ವಹಣೆ ಕುರಿತು 23 ವಿಪಕ್ಷಗಳಿಂದ ಸಿಜೆಐಗೆ ಜಂಟಿ ಪತ್ರ

ಭಾರತೀಯ ಚುನಾವಣಾ ಆಯೋಗವು (ಇಸಿಐ) ನಡೆಸುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಹಾಗೂ ಇತರ ಚುನಾವಣೆ ಸಂಬಂಧಿತ ವಿಷಯಗಳ ವಿರುದ್ಧ ಇಂಡಿಯಾ ಮೈತ್ರಿಕೂಟದ ಹೊರಗಿರುವ ದ್ರಾವಿಡ ಮುನ್ನೇತ್ರ ಕಳಗಂ...