ರಮೇಶ್ ಜಾರಕಿಹೋಳಿಯವರದ್ದು ಎಂದು ಹೇಳಲಾಗುತ್ತಿರುವ ವೀಡಿಯೋ ಕುರಿತು ಸಿಐಡಿ ಅಥವಾ ಸಿಬಿಐ ತನಿಖೆ ನಡೆಸಬೇಕು ಎಂದು ಯಡಿಯೂರಪ್ಪ ಅವರನ್ನು ಬಾಲಚಂದರ್ ಜಾರಕಿಹೋಳಿ ಒತ್ತಾಯಿಸಿದ್ದಾರೆ. ಬಾಲಚಂದರ್ ಜಾರಕಿಹೋಳಿ ಕರ್ನಾಟಕ ಹಾಲು ಒಕ್ಕೂಟದ (ಕೆಎಂಎಫ್) ಅಧ್ಯಕ್ಷರಾಗಿದ್ದು, ರಮೇಶ್ ಜಾರಕಿಹೋಳಿಯವರ ಸಹೋದರರಾಗಿದ್ದಾರೆ.
ಬಾಲಚಂದ್ರ ಜಾರಕಿಹೋಳಿ ಯಡಿಯೂರಪ್ಪನನ್ನು ಭೇಟಿಯಾಗಿ ರಮೇಶ್ ಜಾರಕಿಹೋಳಿಯವರನ್ನು ಸಮರ್ಥಿಸಿಕೊಂಡಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
“ಈ ಬಗ್ಗೆ ಸಿಐಡಿ ಅಥವಾ ಸಿಬಿಐ ತನಿಖೆ ನಡೆಸಬೇಕು ಎಂದು ನಾನು ಸಿಎಂ ಅವರಲ್ಲಿ ವಿನಂತಿಸಿದ್ದೇನೆ. ಸಿಡಿ ತಯಾರಿಸಿದವರು ಯಾರು, ಆ ಮಹಿಳೆ ಯಾರು ಮತ್ತು ಇದರ ಹಿಂದಿನ ರಾಜಕಾರಣಿಗಳು ಯಾರು ಎಂದು ರಾಜ್ಯದ ಜನರು ತಿಳಿದುಕೊಳ್ಳಬೇಕು. ರಮೇಶ್ ಅವರದ್ದು ತಪ್ಪಾಗಿದ್ದರೆ, ರಾಜ್ಯದ ಜನರಲ್ಲಿ ಕ್ಷಮೆಯಾಚಿಸಲು ಮತ್ತು ರಾಜಕೀಯವನ್ನು ತೊರೆಯುವಂತೆ ಕೇಳುತ್ತೇನೆ” ಎಂದು ಬಾಲಚಂದ್ರ ಹೇಳಿದರು.
ಇದನ್ನೂ ಓದಿ: ಬಿಜೆಪಿ ಸಚಿವನ ವಿರುದ್ದ ಲೈಂಗಿಕ ದೌರ್ಜನ್ಯದ ಆರೋಪ: ರಾಜೀನಾಮೆಗೆ ಹೆಚ್ಚಿದ ಒತ್ತಡ
ಈ ಆರೋಪದಲ್ಲಿ ಏನೋ ಸಂಶಯ ಮೂಡುತ್ತಿದೆ ಎಂದ ಬಾಲಚಂದ್ರ, “ಮೊದಲನೆಯದಾಗಿ, (ಪೊಲೀಸ್) ದೂರನ್ನು ತೆಗೆದುಕೊಂಡಿರುವುದು ತಪ್ಪು. ಏಕೆಂದರೆ ಅದು ಬಲಿಪಶುವಿನಿಂದ ಸಲ್ಲಿಸಲ್ಪಡಬೇಕು. ಆದರೆ ದೂರುದಾರ ಬಲಿಪಶುವಿನ ಗುರುತು ಅಥವಾ ಅವಳ ಹಿನ್ನೆಲೆಯನ್ನು ಬಹಿರಂಗಪಡಿಸಿಲ್ಲ. ಜೊತೆಗೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ವೀಡಿಯೋ ಯೂಟ್ಯೂಬ್ ಮೂಲದ್ದು ಎಂದು ಹೇಳಲಾಗುತ್ತಿದೆ. ಇದನ್ನು ತೆಗೆದುಕೊಂಡು ಸಿಡಿ ತಯಾರಿಸಲಾಗಿದೆ ಎಂದು ಸಂಶಯ ಮೂಡುತ್ತಿದೆ” ಎಂದು ಹೇಳಿದರು.
ರಾಜ್ಯದ ಬೃಹತ್ ನೀರಾವರಿ ಸಚಿವ ರಮೇಶ್ ಜಾರಕಿಹೊಳಿ ಕೆಲಸದ ಆಮಿಷ ಒಡ್ಡಿ ಯುವತಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಗಳು ಕೇಳಿಬರುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದೆ ಎನ್ನಲಾಗಿರುವ ಆಡಿಯೋ ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವ್ಯಾಪಕ ಆಕ್ರೋಶ ಹುಟ್ಟು ಹಾಕಿದೆ.
ಕೆಲಸ ಕೇಳಿಕೊಂಡು ಬಂದಿರುವ ಯುವತಿಯ ಮೇಲೆ ಸಚಿವ ರಮೇಶ ಜಾರಕಿಹೊಳಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಕರಣದ ವಿಡಿಯೊ ಮತ್ತು ಆಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ನೆಟ್ಟಿಗರು ಸಚಿವ ಅಧಿಕಾರವನ್ನು ಬಳಸಿಕೊಂಡು ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಕಿಡಿಕಾರಿದ್ದಾರೆ.
ಇದನ್ನೂ ಓದಿ: ‘ಕಣಕಣದಲ್ಲೂ ಕೇಸರಿ’ ಖ್ಯಾತಿಯ ಅಜಯ್ ದೇವ್‌ಗನ್ ಕಾರಿಗೆ ಮುತ್ತಿಗೆ ಹಾಕಿದ ಸಿಖ್ಖರು!


