ಭತ್ತದ ಮಹಾದೇವಪ್ಪ ಅಥವಾ ರೈಸ್ ಮಹಾದೇವಪ್ಪ ಎಂದೇ ಖ್ಯಾತರಾಗಿದ್ದ ಕೃಷಿ ವಿಜ್ಞಾನಿ ಎಂ.ಮಹದೇವಪ್ಪ (ಜನನ 4 ಆಗಸ್ಟ್ 1937) ಅವರು ವಯೋಸಹಜ ಕಾಯಿಲೆಗಳಿಂದ ಶನಿವಾರ ಮೈಸೂರಿನ ತಮ್ಮ ನಿವಾಸದಲ್ಲಿ ನಿಧನರಾದರು. ಅವರಿಗೆ 83 ವರ್ಷ ವಯಸ್ಸಾಗಿತ್ತು.
ಹೆಚ್ಚಿನ ಇಳುವರಿ ನೀಡುವ ಅನೇಕ ಹೈಬ್ರಿಡ್ ಭತ್ತದ ತಳಿಗಳನ್ನು ಅವರು ಆವಿಷ್ಕರಿಸಿದ್ದಾರೆ. ಎರಡು ಅವಧಿಗೆ ಅವರು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಉಪ ಕುಲಪತಿಯಾಗಿದ್ದರು. ತಮ್ಮ ಸಂಶೋಧನೆಗಳಿಗಾಗಿ ಹಲವು ಪ್ರಶಸ್ತಿ ಪಡೆದಿರುವ ಅವರು, ಪದ್ಮಭೂಷಣ ಪ್ರಶಸ್ತಿಗೂ ಭಾಜನರಾಗಿದ್ದಾರೆ.
ಭಾರತೀಯ ಕೃಷಿ ಸಂಶೋಧನಾ ಮಂಡಳಿಯಡಿಯಲ್ಲಿ ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅದರಲ್ಲಿ ಅವರು ಪ್ರಸ್ತುತ ಆಡಳಿತ ಮಂಡಳಿಯ ಸದಸ್ಯರಾಗಿದ್ದರು.
ಕೊಡುಗೆಗಳು
ನ್ಯಾಷನಲ್ ಅಕಾಡೆಮಿ ಆಫ್ ಅಗ್ರಿಕಲ್ಚರಲ್ ಸೈನ್ಸಸ್‌ನ ಚುನಾಯಿತ ಸದಸ್ಯರಾಗಿದ್ದ ಮಹಾದೇವಪ್ಪ, ಒಂಬತ್ತು ವಿಧದ ಹೆಚ್ಚಿನ ಇಳುವರಿ ನೀಡುವ ಹೈಬ್ರಿಡ್ ಭತ್ತ ಪ್ರಭೇದಗಳನ್ನು ಅಭಿವೃದ್ಧಿ ಮಾಡುವ ಮೂಲಕ ಭತ್ತದ ಬೆಳೆಗಾರರ ಆದಾಯ ವೃದ್ಧಿಗೆ ನೆರವಾಗಿದ್ದರು. ವಿವಿಧ ನವೀನ ಅನ್ವಯಿಕೆಗಳು ಮತ್ತು ಸಂಶೋಧನಾ ಉಪಕ್ರಮಗಳ ಮೂಲಕ ಭಾರತೀಯ ಕೃಷಿ ಸಮುದಾಯಕ್ಕೆ ವ್ಯಾಪಕ ಕೊಡುಗೆ ನೀಡಿದ್ದಾರೆ.
ಆಕ್ರಮಣಕಾರಿ ಪಾರ್ಥೇನಿಯಂ ವಿರುದ್ಧ ವೈಜ್ಞಾನಿಕ ಮತ್ತು ಪರಿಣಾಮಕಾರಿ ಕಳೆ ನಿರ್ವಹಣಾ ತಂತ್ರವಾದ ಇಂಟಿಗ್ರೇಟೆಡ್ ಪಾರ್ಥೇನಿಯಮ್ ವೀಡ್ ಮ್ಯಾನೇಜ್‌ಮೆಂಟ್ ಅನ್ನು ಮಹಾದೇವಪ್ಪ ಅಭಿವೃದ್ಧಿಪಡಿಸಿದ್ದರು.
ಸುತ್ತೂರು ಸ್ವಾಮಿ ಮತ್ತು ವಿಜಯಪುರದ ಸಿದ್ದೇಶ್ವರ ಸ್ವಾಮಿಗಳು ಮುಂಜಾನೆ ಅಂತಿಮ ದರ್ಶನ ಪಡೆದರು. ಮಹಾದೇವಪ್ಪ ಅವರ ಅಂತ್ಯಕ್ರಿಯೆ ನಾಳೆ ಚಾಮರಾಜನಗರದ ಅವರ ಸ್ವಗ್ರಾಮ ಮಾದಾಪುರದಲ್ಲಿ ನಡೆಯಲಿದೆ.
ಇದನ್ನೂ ಓದಿ: ಕನ್ನಡದ ಹಿರಿಯ ಕವಿ ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ (84) ನಿಧನ


