“ನಮಗೆ ಮಹಿಳೆಯರ ಬಗ್ಗೆ ಹೆಚ್ಚು ಗೌರವವಿದೆ” ಎಂದು ಸಿಜೆಐ ಎ ಎಸ್ ಬೋಬಡೆ ನೇತೃತ್ವದ ಸುಪ್ರೀಂ ಕೋರ್ಟ್ ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ. ಇತ್ತೀಚೆಗೆ ಅತ್ಯಾಚಾರ ಸಂತ್ರಸ್ತೆಯ ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ದೇಶದಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.
ಈ ಕುರಿತು ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಎಸ್ ಎ ಬೋಬಡೆ, “ಕಳೆದ ವಾರ ಅತ್ಯಾಚಾರ ಪ್ರಕರಣವೊಂದರ ವಿಚಾರಣೆ ವೇಳೆ ನಾನು ಆಡಿದ ಮಾತುಗಳು ಮಹಿಳೆಯರಿಗೆ ಅಗೌರವ ಸೂಚಿಸುತ್ತಿರುವ ರೀತಿಯಲ್ಲಿದೆ ಎಂದು ಸಂಪೂರ್ಣವಾಗಿ ತಪ್ಪಾಗಿ ವರದಿ ಮಾಡಲಾಗಿದೆ” ಎಂದು ಹೇಳಿದ್ದಾರೆ.
“ನಾವು ಆತನಿಗೆ (ಅತ್ಯಾಚಾರ ಆರೋಪಿಗೆ) ವಿವಾಹವಾಗಲು ಹೇಳಿಲ್ಲ. ನೀನು ಮದುವೆಯಾಗುತ್ತೀಯ? ಎಂದು ಕೇಳಿದೆವು. ʼಮದುವೆಯಾಗು’ ಎಂದು ಹೇಳಿಲ್ಲ” ಎಂದು ಸಿಜೆಐ ಬೋಬಡೆ ಹೇಳಿದರು. ಈ ಸಂಸ್ಥೆಗೆ ಅದರಲ್ಲೂ ಪ್ರಮುಖವಾಗಿ ಈ ಪೀಠ ಮಹಿಳೆಯರ ಬಗ್ಗೆ ಅತ್ಯುನ್ನತ ಗೌರವ ಹೊಂದಿದೆ” ಎಂದೂ ಅವರು ಹೇಳಿದರು.
ಇದನ್ನೂ ಓದಿ: ಅತ್ಯಾಚಾರ ಆರೋಪಿಗೆ ಸಂತ್ರಸ್ತೆಯನ್ನು ಮದುವೆಯಾಗಲು ಸಲಹೆ: ಸುಪ್ರೀಂ ನಡೆಗೆ ತೀವ್ರ ಖಂಡನೆ
ಮಹಾರಾಷ್ಟ್ರ ರಾಜ್ಯ ವಿದ್ಯುತ್ ಉತ್ಪಾದನಾ ಕಂಪನಿಯಲ್ಲಿ ತಂತ್ರಜ್ಞನಾಗಿ ಕಾರ್ಯನಿರ್ವಹಿಸುತ್ತಿರುವ ಮೋಹಿತ್ ಸುಭಾಷ್ ಚೌವಾಣ್ ಜಾಮೀನು ಅರ್ಜಿ ವಿಚಾರಣೆ ವೇಳೆ ಸುಪ್ರೀಂಕೋರ್ಟ್, “ಆಕೆಯನ್ನು ಮದುವೆಯಾಗುತ್ತೀರಾ..? ನೀವು ಮದುವೆಯಾಗುವುದಾದರೆ ನಾವು ಸಹಾಯ ಮಾಡಬಲ್ಲೆವು. ಇಲ್ಲದೇ ಇದ್ದರೆ ನೀವು ನೌಕರಿ ಕಳೆದುಕೊಂಡು ಜೈಲಿಗೆ ಹೋಗಬೇಕಾಗುತ್ತದೆ. ನೀವು ಬಾಲಕಿಗೆ ಆಮಿಷವೊಡ್ಡಿ ಅತ್ಯಾಚಾರವೆಸಗಿದ್ದೀರ. ನಾನು ಬಲವಂತ ಪಡಿಸುವುದಿಲ್ಲ” ಎಂದು ಹೇಳಿತ್ತು.
ಮೋಹಿತ್ ಸುಭಾಷ್ ಚೌವಾಣ್ ಮೇಲೆ ಶಾಲಾ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪವಿದ್ದು, ಆತನ ಮೇಲೆ ಫೋಕ್ಸೋ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾನೂನಿನಡಿಯಲ್ಲಿ ದೂರು ದಾಖಲಾಗಿದೆ.
ಆದರೆ ಅತ್ಯಾಚಾರಕ್ಕೆ ವಿವಾಹವೇ ಪರಿಹಾರ ಎಂದು ಸುಪ್ರೀಂ ಕೋರ್ಟ್ ತೀರ್ಮಾನಿಸಲು ಹೊರಟಂತಿದೆ ಎಂಬ ಅಭಿಪ್ರಾಯದೊಂದಿಗೆ ವ್ಯಾಪಕ ಟೀಕೆಗಳು ಹರಿದು ಬಂದಿದ್ದವು.
ಸಂತ್ರಸ್ತೆಗೆ 18 ವರ್ಷ ಪೂರೈಸಿದ ನಂತರ ಆಕೆಯನ್ನು ವಿವಾಹವಾಗುವುದಾಗಿ ಆರೋಪಿ ಒಪ್ಪಿರುವ ಕುರಿತ ದಾಖಲೆಗಳ ಆಧಾರದಲ್ಲಿ ಸುಪ್ರೀಂ ಕೋರ್ಟ್ ಹಾಗೆ ಪ್ರಶ್ನಿಸಿತ್ತು ಎಂದು ಕೋರ್ಟ್ ಅಧಿಕಾರಿಗಳು ನಂತರ ಸ್ಪಷ್ಟೀಕರಣ ನೀಡಿದ್ದರು.
ಹಲವಾರು ಮಹಿಳಾ ಹಕ್ಕುಗಳ ಕಾರ್ಯಕರ್ತರು, ಪ್ರಖ್ಯಾತ ನಾಗರಿಕರು, ಬುದ್ಧಿಜೀವಿಗಳು, ಬರಹಗಾರರು ಮತ್ತು ಕಲಾವಿದರು ಮುಖ್ಯ ನ್ಯಾಯಾಧೀಶರಿಗೆ ಕ್ಷಮೆಯಾಚಿಸಬೇಕು ಮತ್ತು ಟೀಕೆಗಳನ್ನು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಮುಕ್ತ ಪತ್ರ ಬರೆದಿದ್ದಾರೆ.
ಇನ್ನು ವಕೀಲರ ಸಂಘಟನೆಯಾದ ಆಲ್ ಇಂಡಿಯಾ ಲಾಯರ್ಸ್ ಅಸೋಷಿಯೇಷನ್ ಫಾರ್ ಜಸ್ಟಿಸ್ (AILAJ) ಕೂಡ ನ್ಯಾಯಮೂರ್ತಿಗಳ ನಡೆಯನ್ನು ಖಂಡಿಸಿದ್ದು, ನ್ಯಾಯಾಲಯದ ಘನತೆ ಉಳಿಸಿರಿ ಎಂದಿದ್ದಾರೆ.
2015ರ ಮಧ್ಯಪ್ರದೇಶ ವರ್ಸಸ್ ಮದನ್‌ಲಾಲ್ (7 SCC 681) ಪ್ರಕರಣವನ್ನು ಉಲ್ಲೇಖಿಸಿರುವ ಸಂಘವು “ಅತ್ಯಾಚಾರ ಅಥವಾ ಅತ್ಯಾಚಾರದ ಪ್ರಯತ್ನದಲ್ಲಿ, ಯಾವುದೇ ಸಂದರ್ಭದಲ್ಲೂ ರಾಜಿ ಮಾಡಿಕೊಳ್ಳುವ ಕಲ್ಪನೆಯನ್ನು ನಿಜವಾಗಿಯೂ ಯೋಚಿಸಲಾಗುವುದಿಲ್ಲ” ಎಂಬ ಸುಪ್ರೀಂಕೋರ್ಟ್ ತೀರ್ಪನ್ನು ಮತ್ತೆ ನೆನಪಿಸಿದೆ. ನ್ಯಾಯಾಲಯಗಳು ಸಂಪೂರ್ಣವಾಗಿ ಉಳಿಯಬೇಕು ಎಂದು ನಾವು ಒತ್ತು ನೀಡುತ್ತೇವೆ” ಎಂದಿದೆ.
“ಸಿಜೆಐ ಹೇಳಿಕೆಗಳು ಸಮಾನತೆಯ ಸಾಂವಿಧಾನಿಕ ಖಾತರಿಗೆ ಧಕ್ಕೆ ತರುವಂತಿದೆ. ಮಹಿಳೆಯರನ್ನು ಕಡಿಮೆ ನಾಗರಿಕರ ಸ್ಥಾನಮಾನಕ್ಕೆ ಇಳಿಸಿದೆ. ಇದು ಮಹಿಳೆಯ ಹಕ್ಕಿನ ಸಮಗ್ರ ಉಲ್ಲಂಘನೆಯಾಗಿದೆ. ನಾವು ಸಮಾಜವಾಗಿ, ಅದರ ರೂಪಗಳು ಮತ್ತು ಅನ್ಯಾಯದ ಪ್ರಶ್ನೆಗಳಿಗೆ ಉತ್ತರ ಹುಡುಕಬೇಕು. ನಾವು ಅದನ್ನು ಮಾಡದಿದ್ದಲ್ಲಿ, ನಾವು ಸಮಾಜದ ಅನ್ಯಾಯಗಳಿಗೆ ಕಾರಣವಾಗುತ್ತೇವೆ. ಈ ಹೇಳಿಕೆಗಳಿಂದ, ಸುಪ್ರೀಂ ಕೋರ್ಟ್ ಈ ನಿಖರವಾದ ಅಪಾಯವನ್ನು ಎದುರಿಸುತ್ತಿದೆ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮಹಿಳೆಯರ ಗೌರವದ ಬದುಕಿಗಾಗಿ ಜಾಗೃತಿ ಮೂಡಿಸುವ ರಾಯಚೂರಿನ ಚಿನ್ನಮ್ಮ


