ಹರಿಯಾಣವು ರಾಜ್ಯದ ನಿವಾಸಗಳಿಗೆ ಖಾಸಗಿ ವಲಯದ ಕೈಗಾರಿಕೆಗಳಲ್ಲಿ 75% ರಷ್ಟು ಮೀಸಲಾತಿ ನೀಡುವ ನೀತಿಯನ್ನು ಅಂಗೀಕರಿಸಿದ ಕೆಲವೆ ದಿನಗಳ ಅಂತರದಲ್ಲಿ, ಜಾರ್ಖಂಡ್ ಸಚಿವ ಸಂಪುಟ ಕೂಡಾ 30 ಸಾವಿರ ವೇತನದವರೆಗಿನ ಖಾಸಗಿ ವಲಯದ 75% ಉದ್ಯೋಗಗಳು ಸ್ಥಳೀಯ ಅಭ್ಯರ್ಥಿಗಳಿಗೆ ಮಾತ್ರ ನೀಡಬೇಕು ಎಂಬ ನೀತಿಯನ್ನು ಶುಕ್ರವಾರ ಅಂಗೀಕರಿಸಿದೆ.
ಮುಖ್ಯಮಂತ್ರಿ ಕಚೇರಿಯ ಮೂಲಗಳ ಪ್ರಕಾರ ಜಾರ್ಖಂಡ್ ಅಸೆಂಬ್ಲಿಯಲ್ಲಿ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ಇದನ್ನು ಘೋಷಿಸುವ ಸಾಧ್ಯತೆಯಿದೆ ಎಂದು ಎನ್ನಲಾಗಿದೆ.
“ಕ್ಯಾಬಿನೆಟ್‌ನಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಭಾವಿಸಲಾಗಿದೆ, ಕೆಲವು ವಿಧಾನಗಳನ್ನು ಇನ್ನೂ ನಿರ್ಧರಿಸಲಾಗಿಲ್ಲ. ಮಾರ್ಚ್ 17 ರಂದು ನಡೆಯಲಿರುವ ವಿಧಾನಸಭಾ ಅಧಿವೇಶನದಲ್ಲಿ ಮುಖ್ಯಮಂತ್ರಿ ಈ ನಿರ್ಧಾರವನ್ನು ಪ್ರಕಟಿಸುವ ಸಾಧ್ಯತೆಯಿದೆ” ಎಂದು ಮುಖ್ಯಮಂತ್ರಿ ಕಚೇರಿಯ ಹಿರಿಯ ಅಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ TNIE ಪತ್ರಿಕೆ ವರದಿ ಮಾಡಿದೆ.
ಇದನ್ನೂ ಓದಿ: ಉದ್ಯೋಗ ಕೊಡದಿದ್ದರೆ ಮೋದಿಜಿಯನ್ನು ಮನೆಗೆ ಕಳಿಸುತ್ತೇವೆ: ನೋ ಜಾಬ್, ನೋ ವೋಟ್ ಟ್ವಿಟರ್ ಟ್ರೆಂಡಿಂಗ್
ಖಾಸಗಿ ವಲಯದಲ್ಲಿ ಸ್ಥಳೀಯರಿಗೆ ಉದ್ಯೋಗ ಖಾತರಿಪಡಿಸುವ ನೀತಿಯನ್ನು ತಮ್ಮ ಸರ್ಕಾರ ಚಿಂತಿಸುತ್ತಿದೆ ಎಂದು ಮುಖ್ಯಮಂತ್ರಿ ಹಲವಾರು ಸಂದರ್ಭಗಳಲ್ಲಿ ಇದರ ಬಗ್ಗೆ ಸುಳಿವು ನೀಡಿದ್ದರು. ವಿಶೇಷವೆಂದರೆ, ಖಾಸಗಿ ಉದ್ಯೋಗಗಳಲ್ಲಿ ಸ್ಥಳೀಯ ಯುವಕರಿಗೆ ಆದ್ಯತೆ ನೀಡುವ ಪ್ರಸ್ತಾಪವು 2019 ರ ವಿಧಾನಸಭಾ ಚುನಾವಣೆಯಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ದ ಪ್ರಣಾಳಿಕೆಯ ಒಂದು ಭಾಗವಾಗಿತ್ತು. ಇದೀಗ ಜೆಎಂಎಂ ನೇತೃತ್ವದ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಈ ನೀತಿಯನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದೆ.
ಲಾಕ್‌ಡೌನ್ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಯುವ ವಲಸೆ ಕಾರ್ಮಿಕರು ತಮ್ಮ ಮನೆಗಳಿಗೆ ಹಿಂತಿರುಗಿದ್ದರು. ಈ ಸಮಯದಲ್ಲೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ. ಮೇ 2020 ರಲ್ಲಿ ಕೊರೊನಾ ಸಾಂಕ್ರಾಮಿಕದ ಸಮಯದಲ್ಲಿ ರಾಜ್ಯದ ನಿರುದ್ಯೋಗ ದರವು 59.2 ಕ್ಕೆ ಏರಿತ್ತು. ಈ ದರವು 2021 ರ ಜನವರಿಯಲ್ಲಿ 11.3% ಕ್ಕೆ ಇಳಿದಿದೆ ಎಂದು ಆರ್ಥಿಕ ಸಮೀಕ್ಷೆ ಬಹಿರಂಗಪಡಿಸಿದೆ. ಜನವರಿ 2020 ರಲ್ಲಿ ರಾಜ್ಯದ ನಿರುದ್ಯೋಗ ದರವು 10.6% ಆಗಿತ್ತು.
ಇದನ್ನೂ ಓದಿ: 75% ಖಾಸಗಿ ಉದ್ಯೋಗಗಳು ಸ್ಥಳೀಯರಿಗೆ ಮೀಸಲು – ಹರಿಯಾಣ ಸರ್ಕಾರ ಅನುಮೋದನೆ



ಕರ್ನಾಟಕ ಸರ್ಕಾರವು ಸಹ ಇಂತಹ ನಿರ್ಣಯ ಕೈಗೊಳ್ಳಬೇಕು.