ನಾಡಿನ ಖ್ಯಾತ ಉರ್ದು ಸಾಹಿತಿ ಶಿಕಾರಿಪುರದ ಡಾ. ಹಫೀಜ್ ಕರ್ನಾಟಕಿ ಅವರು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗೆ ಭಾಜನರಾಗಿದ್ದು ಶಿವಮೊಗ್ಗ ಜಿಲ್ಲೆಗೆ ಸಾಹಿತ್ಯ ಶ್ರೇಷ್ಠತೆಯ ಗರಿಯೊಂದು ಮೂಡಿದೆ.
ಡಾ. ಹಫೀಜ್ ಕರ್ನಾಟಕಿ ಅವರು ಬರೆದಿರುವ ‘ಫಕ್ರ್-ಇ-ವತನ್’ ಸಣ್ಣಕತೆಗಳ ಸಂಕಲನವು ಉರ್ದು ಸಾಹಿತ್ಯ ವಿಭಾಗದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿದೆ.
ಶಿಕಾರಿಪುರದ ಶಿಕ್ಷಕ ದಂಪತಿಗಳಾದ ನಜೀರ್ ಪಾಶಾ, ಬಸೀರ್ ಉನ್ನಿಸಾ ದಂಪತಿಗಳ ಮಗನಾಗಿ ಹುಟ್ಟಿದ ಹಫೀಜ್ ಅವರು ಎಂ.ಎ ಪದವೀಧರರಾಗಿದ್ದು, ಶಿಕ್ಷಣ, ಸಾಹಿತ್ಯದಲ್ಲಿ ಅಪಾರ ಜ್ಞಾನವನ್ನು ಹೊಂದಿದ್ದಾರೆ. ಉರ್ದು ಸಾಹಿತ್ಯದಲ್ಲಿ ಪಾಂಡಿತ್ಯವನ್ನು ಸಾಧಿಸಿದ್ದಾರೆ. ಇದುವರೆಗೂ 94 ಕೃತಿಗಳನ್ನು ರಚಿಸಿ ಸಾಹಿತ್ಯ ಕ್ಷೇತ್ರಕ್ಕೆ ಅಮೂಲ್ಯವಾದ ಕೃತಿಗಳನ್ನು ಕೊಟ್ಟಿದ್ದಾರೆ.
ನೈತಿಕ ಮೌಲ್ಯ, ಆಧ್ಯಾತ್ಮಿಕ ಅರಿವು, ಮಾನವತೆ, ಸೌಹಾರ್ದತೆ, ದೇಶಪ್ರೇಮ ಹಫೀಜ್ ಅವರ ಸಾಹಿತ್ಯದ ಜೀವಜಲವಾಗಿದೆ. ಸಾಹಿತ್ಯ ಸಂವೇದನೆಯ ಇವರ ಸಾಧನೆಯನ್ನು ಗುರುತಿಸಿ ಗುಲ್ಬರ್ಗಾ ವಿಶ್ವವಿದ್ಯಾಲಯ ಹಫೀಜ್ ಅವರಿಗೆ ಗೌರವ ಡಾಕ್ಟರೇಟ್ ನೀಡಿದ್ದರೆ, ಇವರ ಸಾಹಿತ್ಯ ಸೇವೆ ಮತ್ತು ಸಾಧನೆಯನ್ನು ಪರಿಗಣಿಸಿ ಈ ಹಿಂದಿನ ಅವಧಿಯ ಬಿ.ಎಸ್ ಯಡಿಯೂರಪ್ಪ ಅವರ ಸರ್ಕಾರದಲ್ಲಿ ಕರ್ನಾಟಕ ಉರ್ದು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ನೇಮಕಗೊಂಡು ಅಕಾಡೆಮಿಯ ಘನತೆಯನ್ನು ಹೆಚ್ಚಿಸುವ ಕೆಲಸ ಮಾಡಿದರು.
ಕೇವಲ ಸಾಹಿತ್ಯ ಕ್ಷೇತ್ರದಲ್ಲಿ ಅಷ್ಟೆ ಅಲ್ಲದ ಸಾಮಾಜಿಕವಾಗಿ ಡಾ. ಹಫೀಜ್ ಕರ್ನಾಟಕಿ ಅವರ ಅವರ ಸಾಧನೆ -ಸೇವೆಗಳು ಮಾದರಿಯಾಗಬಲ್ಲವು. ಶಿಕಾರಿಪುರದ ಜಯನಗರ ಬಡಾವಣೆಯಲ್ಲಿ ಮದೀನತ್ ಉಲ್ ಉಲೂಮ್ ಎಜುಕೇಷನಲ್ ಅಂಡ್ ಚಾರಿಟಬಲ್ ಟ್ರಸ್ಟ್ ಸ್ಥಾಪಿಸಿ ಸಮಾಜದ ಸಾವಿರಾರು ಬಡಮಕ್ಕಳಿಗೆ ವಿದ್ಯೆ, ಅನ್ನ ,ಆಶ್ರಯ ನೀಡುತ್ತ ಪ್ರಬುದ್ದ ಪ್ರಜೆಗಳನ್ನಾಗಿ ರೂಪಿಸುವಲ್ಲಿ ತೊಡಗಿದ್ದಾರೆ. ಜಾತಿ, ಧರ್ಮ ಬೇಧವಿಲ್ಲದೆ ವಿಧವೆಯರಿಗೆ ಹಾಗು ವಿಧವೆಯರ ಮಕ್ಕಳಿಗೆ ಮಾಸಿಕ ವೇತನವನ್ನು ಟ್ರಸ್ಟ್ ವತಿಯಿಂದ ನೀಡುತ್ತಿದ್ದಾರೆ. ವಿಶೇಷವಾಗಿ ಎಲ್ಲಾ ಧರ್ಮದ, ಜಾತಿಯ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಿರುವ ಹಫೀಝ್ ನೇತೃತ್ವದ ಟ್ರಸ್ಟ್ ಡಿ.ಎಡ್ ಶಿಕ್ಷಣದ ಜೊತೆಗೆ ವೃತ್ತಿಪರ ಶಿಕ್ಷಣವನ್ನು ಕೊಟ್ಟು ಸ್ವಾವಲಂಬಿ ಬದುಕಿಗೆ ನೆರವಾಗುತ್ತಿದೆ.
ಸಾಮಾಜಿಕ ಸಾಮರಸ್ಯ, ಸಹಬಾಳ್ವೆ ಮತ್ತು ಮಾನವತೆಯೇ ದೇವರನ್ನು ತಲುಪುವ ದಿವ್ಯಮಾರ್ಗ ಎಂದೆ ನಿರಂತರ ಕಾಯಕದಲ್ಲಿ ತೊಡಗಿರುವ ಡಾ. ಹಫೀಜ್ ಕರ್ನಾಟಕಿ ಶರಣರ ತಪೋಭೂಮಿ ಶಿಕಾರಿಪುರದ ಮಹಾಶರಣರಂತೆ ಸಮಾಜದ ಒಳಿತಿಗಾಗಿ ದುಡಿಯುತ್ತಿದ್ದಾರೆ.
- ಎನ್ ರವಿಕುಮಾರ್ ಟೆಲೆಕ್ಸ್
ಇದನ್ನೂ ಓದಿ: ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಘೋಷಣೆ
