ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಮ್ಮ ವಿರುದ್ಧದ ಪ್ರಕರಣಗಳನ್ನು ತಾವೇ ಹಿಂಪಡೆಯುತ್ತಿದ್ದಾರೆ ಎಂದು ಗಾಜಿಪುರ ಬಿಎಸ್ಪಿ ಸಂಸದ ಅಪ್ಜಲ್ ಅನ್ಸಾರಿ ಆರೋಪಿಸಿದ್ದಾರೆ.
ಶುಕ್ರವಾರ ಸಂಜೆ ಬಲಿಯಾ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮೇಲೆ ಹೊಡಿರುವ ಪ್ರಕರಣಗಳನ್ನು ಹಿಂತೆಗೆದುಕೊಳ್ಳುವ ಮೂಲಕ ಅವರು “ಮಿಸ್ಟರ್ ಕ್ಲೀನ್” ಆಗಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದ್ದಾರೆ.
“ಯೋಗಿಜಿಯವರು ತಮ್ಮ ಸರ್ಕಾರ ಮಾಫಿಯಾದ ಮೇಲೆ ಬುಲ್ಡೋಜರ್‌ಗಳನ್ನು ಉರುಳಿಸುತ್ತಿದೆ ಎಂದು ಹೇಳುತ್ತಾರೆ. ಆದರೆ ಅವರು ತಮ್ಮ ಮತ್ತು ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ವಿರುದ್ಧ ದಾಖಲಾದ ಪ್ರಕರಣಗಳನ್ನು ಹಿಂತೆಗೆದುಕೊಳ್ಳುತ್ತಿದ್ದಾರೆ. ಇದು ಸಂವಿಧಾನಕ್ಕೆ ವಿರುದ್ಧವಾಗಿದೆ” ಎಂದು ಅನ್ಸಾರಿ ಹೇಳಿದ್ದಾರೆ.
ಭಾರತವು ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ಸರ್ವಾಧಿಕಾರದತ್ತ ಸರಿಯುತ್ತಿದೆ. ಐದು ರಾಜ್ಯಗಳಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಗಳು ಮುಗಿದ ನಂತರ ಬಿಜೆಪಿ ಸರ್ಕಾರ ಉತ್ತರ ಪ್ರದೇಶವನ್ನು ನಾಲ್ಕು ಭಾಗಗಳಾಗಿ ವಿಭಜಿಸುತ್ತದೆ ಎಂದು ಅನ್ಸಾರಿ ಹೇಳಿದ್ದಾರೆ.
“ಮೋದಿ ಸರ್ಕಾರದ ತಪ್ಪು ನೀತಿಗಳಿಂದಾಗಿ, ವಿಶ್ವದಾದ್ಯಂತ ಉದ್ಯೋಗ ಕಳೆದುಕೊಳ್ಳುವ ರಾಷ್ಟ್ರಗಳಲ್ಲಿ ಭಾರತ ಮೊದಲ ಸ್ಥಾನವನ್ನು ತಲುಪಿದೆ. ದೇಶದ ಆರ್ಥಿಕತೆಯೂ ವೇಗವಾಗಿ ಕ್ಷೀಣಿಸುತ್ತಿದೆ ಮತ್ತು ಭಾರತವು 164 ನೇ ಸ್ಥಾನದಲ್ಲಿದೆ ”ಎಂದು ಅವರು ಹೇಳಿದ್ದಾಗಿ ದಿ ಟ್ರಿಬ್ಯೂನ್ ವರದಿ ಮಾಡಿದೆ.
ಪಶ್ಚಿಮ ಬಂಗಾಳದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯನ್ನು ಉಲ್ಲೇಖಿಸಿದ ಅವರು, ಬಿಜೆಪಿಯ ಎಲ್ಲಾ ಪ್ರಯತ್ನಗಳ ಹೊರತಾಗಿಯೂ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅದ್ಭುತ ಗೆಲುವಿಗೆ ಸಾಕ್ಷಿಯಾಗಲಿದ್ದಾರೆ ಎಂದು ಅವರು ಹೇಳಿದರು.
ಬಿಜೆಪಿಯು ದ್ವೇಷದ ರಾಜಕೀಯದಲ್ಲಿ ತೊಡಗಿದೆ ಮತ್ತು ಸಾಮಾಜಿಕ ಸಾಮರಸ್ಯವನ್ನು “ನಾಶಪಡಿಸುವ” ಮೂಲಕ ದೇಶವನ್ನು 50 ವರ್ಷಗಳಷ್ಟು ಹಿಂದಕ್ಕೆ ತಳ್ಳಲು ಯತ್ನಿಸುತ್ತಿದೆ ಎಂದು ಸಂಸದ ಅಫ್ಜಲ್ ಅನ್ಸಾರಿ ಆರೋಪಿಸಿದ್ದಾರೆ.
ಇದನ್ನೂ ಓದಿ: ಉತ್ತರಪ್ರದೇಶ: ದೇವಾಲಯದಲ್ಲಿ ನೀರು ಕುಡಿದ ಮುಸ್ಲಿಂ ಬಾಲಕನ ಮೇಲೆ ಕ್ರೂರ ಹಲ್ಲೆ- ಆರೋಪಿಯ ಬಂಧನ


