ಮಾರ್ಚ್ 15 ಅನ್ನು ಖಾಸಗೀಕರಣ ವಿರೋಧಿ ಮತ್ತು ಕಾರ್ಪೊರೇಟ್ ವಿರೋಧಿ ದಿನವನ್ನಾಗಿ ಆಚರಿಸಲಾಗುತ್ತದೆ ಎಂದು ಕೃಷಿ ಕಾನೂನುಗಳ ವಿರುದ್ಧ ಹೋರಾಡುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾ ಹೇಳಿದೆ.
“ತೈಲ ಬೆಲೆ ಏರಿಕೆಯನ್ನು ಈ ಕೂಡಲೇ ಇಳಿಸಬೇಕು, ಕೃಷಿ ಕಾನೂನುಗಳನ್ನು ಹಿಂಪಡೆಯಬೇಕು ಮತ್ತು ಕನಿಷ್ಠ ಬೆಂಬಲ ಬೆಲೆಯ ಭರವಸೆ ನೀಡಬೇಕು” ಎಂದು ಒತ್ತಾಯಿಸಿ ಪ್ರತಿ ಜಿಲ್ಲೆಗಳಲ್ಲೂ ಈ ಕುರಿತು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಪ್ರಧಾನಿ ಮೋದಿಯವರಿಗೆ ಪತ್ರ ಬರೆಯಲಾಗಿದೆ.
ಸರ್ಕಾರಿ ಸ್ವಾಮ್ಯದ ಉದ್ಯಮಗಳನ್ನು ಖಾಸಗೀಕರಣಗೊಳಿಸುತ್ತಿರುವುದನ್ನು ಮತ್ತು ಭಾರತದ ಕೃಷಿಯನ್ನು ಕಾರ್ಪೊರೇಟೀಕರಣ ಗೊಳಿಸುತ್ತಿರುವುದನ್ನು ಈ ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಲಾಗಿದೆ.
ಇದನ್ನೂ ಓದಿ: ಸಿಂಘು ಗಡಿಯಲ್ಲಿ ಎರಡು ಅಂತಸ್ತಿನ ಮನೆ ನಿರ್ಮಿಸುತ್ತಿರುವ ರೈತರು!
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ರೈತ ಮುಖಂಡ ದರ್ಶನ್ ಪಾಲ್, “ಮಾರ್ಚ್ 15 ಅನ್ನು ಖಾಸಗೀಕರಣ ವಿರೋಧಿ ಮತ್ತು ಕಾರ್ಪೊರೇಟೀಕರಣ ವಿರೋಧಿ ದಿನವನ್ನಾಗಿ ಆಚರಿಸಲು ಭಾರತದ ನಾಗರಿಕರಿಗೆ ಕರೆ ನೀಡಲಾಗಿದೆ” ಎಂದು ಹೇಳಿದ್ದಾರೆ.
“ಎಲ್ಲರಿಗೂ ತಿಳಿದಿರುವಂತೆ, ಸಾರ್ವಜನಿಕ ವಲಯದ ಉದ್ಯಮಗಳನ್ನು ಖಾಸಗೀ ಲಾಭಕ್ಕಾಗಿ ಹಸ್ತಾಂತರಿಸಲಾಗುತ್ತಿದೆ. ಹಾಗೆಯೇ ಲಕ್ಷಾಂತರ ಸಣ್ಣ ಸಣ್ಣ ಉದ್ಯಮಗಳನ್ನು ಕಾರ್ಪೊರೇಟ್‌ಗಳಿಗೆ ವಹಿಸಲಾಗುತ್ತಿದೆ. ಹಾಗಾಗಿ ಮಾರ್ಚ್ 15, 2021 ಅನ್ನು ಖಾಸಗೀಕರಣ ವಿರೋಧಿ, ಕಾರ್ಪೊರೇಟೈಸೇಶನ್ ವಿರೋಧಿ ದಿನವೆಂದು ಪ್ರತಿಭಟಿಸಲು ಎಸ್‌ಕೆಎಂ ನಿರ್ಧರಿಸಿದೆ” ಎಂದು ಹೇಳಿದ್ದಾರೆ.
“ಈ ದಿನದಂದು, ಭಾರತದಾದ್ಯಂತ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, ಡೀಸೆಲ್, ಪೆಟ್ರೋಲ್ ಮತ್ತು ಎಲ್‌ಪಿಜಿ ಸಿಲಿಂಡರ್‌ಗಳ ಏರುತ್ತಿರುವ ಬೆಲೆಗಳನ್ನು ನಿಯಂತ್ರಿಸಿ ಕಡಿಮೆ ಮಾಡುವಂತೆ ಜಿಲ್ಲಾಧಿಕಾರಿಗಳು/ಉಪ ವಿಭಾಗೀಯ ಅಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲು ಕೋರಲಾಗಿದೆ. ಅದೇ ದಿನ, ಭಾರತದ ವಿವಿಧ ಕಾರ್ಮಿಕ ಸಂಘಟನೆಗಳು ಭಾರತದಾದ್ಯಂತ ರೈಲ್ವೆ ನಿಲ್ದಾಣಗಳಲ್ಲಿ ಪ್ರತಿಭಟನೆ ನಡೆಸುತ್ತಿವೆ. ಈ ಪ್ರತಿಭಟನೆಗಳನ್ನು ಭಾರತದ ಕಾರ್ಮಿಕರು, ನೌಕರರು, ರೈತರು ಮತ್ತು ದುಡಿಯುವ ಜನರು ಜಂಟಿಯಾಗಿ ಆಯೋಜಿಸಲು ನಿರ್ಧರಿಸಲಾಗಿದೆ. ಈ ಪ್ರತಿಭಟನೆಗಳಿಗೆ ಬೆಂಬಲ ನೀಡಬೆಕೆಂದು ಎಸ್‌ಕೆಎಂ ನಿಮ್ಮಲ್ಲಿ ಮನವಿ ಮಾಡುತ್ತಿದೆ” ಎಂದು ವಿನಂತಿಸಿದ್ದಾರೆ.
ಇದನ್ನೂ ಓದಿ: ಹತ್ರಾಸ್ ಪ್ರಕರಣ: ಸಿಎಎ ವಿರೋಧಿ ಮಹಿಳಾ ನಾಯಕಿಯರಿಗೆ ನೋಟಿಸ್!