ರಾಷ್ಟ್ರೀಯ ಹೆದ್ದಾರಿ-44 ರಲ್ಲಿ ಕಾಂಕ್ರೀಟ್ ರಚನೆಗಳನ್ನು ನಿರ್ಮಿಸಿದ್ದಾರೆ ಮತ್ತು ಸಿಂಗು ಬಳಿಯ ಕುಂಡ್ಲಿಯಲ್ಲಿ ಬೋರ್‌ವೆಲ್ ಕೊರೆದಿದ್ದಾರೆ ಎಂದು ಆರೋಪಿಸಿ ಹರಿಯಾಣ ಪೊಲೀಸರು ರೈತರ ವಿರುದ್ಧ ಎರಡು ಪ್ರಕರಣಗಳನ್ನು ದಾಖಲಿಸಿದ್ದಾರೆ. ದೆಹಲಿ ಬಳಿಯ ಸಿಂಘು ಗಡಿಯು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನಗಳ ವಿರುದ್ದ ಪ್ರತಿಭಟನೆ ನಡೆಸುತ್ತಿರುವ ರೈತರು ಇರುವ ಸ್ಥಳವಾಗಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಆನಂದ್ ಶರ್ಮಾ ಅವರ ದೂರಿನ ಮೇರೆಗೆ ರಾಷ್ಟ್ರೀಯ ಹೆದ್ದಾರಿ ಕಾಯ್ದೆ ಮತ್ತು ಐಪಿಸಿಯ ಸೆಕ್ಷನ್ 283 ಮತ್ತು 431 ರ ಅಡಿಯಲ್ಲಿ ಮೊದಲನೆಯ ದೂರನ್ನು ದಾಖಲಿಸಲಾಗಿದೆ.
ಇದನ್ನೂ ಓದಿ: ಸಿಂಘು ಗಡಿಯಲ್ಲಿ ಎರಡು ಅಂತಸ್ತಿನ ಮನೆ ನಿರ್ಮಿಸುತ್ತಿರುವ ರೈತರು!
“ಕೆಲವು ಅಪರಿಚಿತ ಜನರು” ಮಾಲ್ವಾ ಮೋಟಾರ್ಸ್ ಮುಂದಿನ ರಾಷ್ಟ್ರೀಯ ಹೆದ್ದಾರಿ-44 ರಲ್ಲಿ ಅಕ್ರಮ ರಚನೆಗಳನ್ನು ನಿರ್ಮಿಸಿ, ರಾಷ್ಟ್ರೀಯ ಹೆದ್ದಾರಿ – 44 ಕ್ಕೆ ತಡೆ ಒಡ್ಡುತ್ತಿದ್ದಾರೆ ಎಂದು ಶರ್ಮಾ ದೂರಿನಲ್ಲಿ ಹೇಳಿದ್ದಾರೆ. ಅವರು ಅಕ್ರಮ ನಿರ್ಮಾಣದ ಚಿತ್ರಗಳನ್ನು ಪೊಲೀಸರಿಗೆ ಕಳುಹಿಸಿದ್ದಾರೆ ಎನ್ನಲಾಗಿದೆ.
ಕುಂಡ್ಲಿಯ ಮುನ್ಸಿಪಲ್ ಕಮಿಟಿ ಕಾರ್ಯದರ್ಶಿ ಪವನ್ ಕುಮಾರ್ ಅವರ ದೂರಿನ ಮೇರೆಗೆ ರಾಷ್ಟ್ರೀಯ ಹೆದ್ದಾರಿ ಕಾಯ್ದೆ ಮತ್ತು ಐಪಿಸಿಯ ಸೆಕ್ಷನ್ 188 ರ ಅಡಿಯಲ್ಲಿ ಎರಡನೇ ಪ್ರಕರಣ ದಾಖಲಿಸಲಾಗಿದೆ.
ನಿಷೇಧದ ಆದೇಶದ ಹೊರತಾಗಿಯೂ, ಬಟಿಂಡಾದ ರೈತ ಕರಮ್ ಸಿಂಗ್ ರಾಷ್ಟ್ರೀಯ ಹೆದ್ದಾರಿ – 44 ಬಳಿಯ ಕೆಎಫ್‌ಸಿ ಮಾಲ್ ಬಳಿಯ ಹೊಲವೊಂದರಲ್ಲಿ ಬೋರ್‌ವೆಲ್ ಕೊರೆದಿದ್ದಾರೆ. ಪುರಸಭೆಯ ಎಂಜಿನಿಯರ್ ಬೋರ್‌ವೆಲ್ ಕೊರೆಯುವುದನ್ನು ನಿಲ್ಲಿಸಬೇಕೆಂದು ಹೇಳಿದರೂ ಅವರು ಅದನ್ನು ನಿಲ್ಲಿಸಲಿಲ್ಲ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.
ಇದನ್ನೂ ಓದಿ: ಮೋದಿ ಸರ್ಕಾರದ ಅವಧಿ ಮುಗಿಯುವವರೆಗೂ ರೈತ ಹೋರಾಟ ಮುಂದುವರಿಯಲಿದೆ: ನರೇಂದ್ರ ಟಿಕಾಯತ್
ಬಿಕೆಯು (ಲಾಖೋವಾಲ್) ಪ್ರಧಾನ ಕಾರ್ಯದರ್ಶಿ ಹರಿಂದರ್ ಸಿಂಗ್ ಲಾಖೋವಾಲ್, “ನಾವು ಯಾವುದೇ ಶಾಶ್ವತ ರಚನೆಯನ್ನು ನಿರ್ಮಿಸುತ್ತಿಲ್ಲ. ಬಿಸಿಲಿನಿಂದ ರೈತರನ್ನು ರಕ್ಷಿಸಲು ಸೌರ ಫಲಕಗಳನ್ನು ಅಳವಡಿಸಲು ನಾವು ಯೋಜಿಸಿದ್ದೇವೆ” ಎಂದು ಹೇಳಿದ್ದಾರೆ.
“ಸಿಂಘು ಗಡಿಯ ವಿವಿಧ ಸ್ಥಳಗಳ ರಸ್ತೆಬದಿಯಲ್ಲಿ ಕಟ್ಟಡಗಳನ್ನು ನಿರ್ಮಿಸುತ್ತಿರುವ ಕಾರ್ಮಿಕರನ್ನು ಕಾಣಬಹುದು. ಗಡಿಯಲ್ಲಿ ನಾಲ್ಕು ಎರಡು ಅಂತಸ್ತಿನ ಮನೆಗಳು ಈಗಾಗಲೇ ರಚೆನೆಯಾಗಿದ್ದು, ಇದಕ್ಕೆ ಇಟ್ಟಿಗೆಗಳು ಪಂಜಾಬ್‌ನಿಂದ ತರಿಸಲಾಗಿದೆ. ಸಿಂಘು, ಟಿಕ್ರಿ ಮತ್ತು ಗಾಜಿಪುರದ ಪ್ರತಿಭಟನಾ ಸ್ಥಳಗಳಲ್ಲಿ ಪ್ರತಿಭಟನಾಕಾರರು ಕಡಿಮೆ ಸಂಖ್ಯೆಯಲ್ಲಿದ್ದಾರೆ, ಯಾಕೆಂದರೆ ರೈತರು ಕೊಯ್ಲಿಗಾಗಿ ತಮ್ಮ ಗ್ರಾಮಗಳಿಗೆ ತೆರಳಿದ್ದಾರೆ” ಎಂದು TNIE ವರದಿ ಮಾಡಿದೆ.
ಇದನ್ನೂ ಓದಿ: ಅಂತರಾಷ್ಟ್ರೀಯ ಮಹಿಳಾ ದಿನ: ಕೃಷಿ ಕಾಯ್ದೆಗಳ ವಿರುದ್ಧ ಬೀದಿಗಿಳಿದ ಲಕ್ಷಾಂತರ ಮಹಿಳೆಯರು!


