ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಲಾಭವನ್ನು ಖಾಸಗೀಕರಿಸಿ, ನಷ್ಟವನ್ನು ರಾಷ್ಟ್ರೀಕರಣ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
ಬ್ಯಾಂಕುಗಳ ಖಾಸಗೀಕರಣ ವಿರೋಧಿಸಿ ನಡೆಯುತ್ತಿರುವ ಅಖಿಲ ಭಾರತ ಬ್ಯಾಂಕ್ ನೌಕರರ ಮುಷ್ಕರ ಬೆಂಬಲಿಸಿ ಟ್ವೀಟ್ ಮಾಡಿರುವ ಅವರು, “ಭಾರತದ ಸಾರ್ವಜನಿಕ ಉದ್ದಿಮೆಗಳನ್ನು ಮೋದಿಕ್ರೋನಿಗಳಿಗೆ (ನರೇಂದ್ರ ಮೋದಿಯವರ ಕ್ರೋನಿ ಬಂಡವಾಳಶಾಹಿ ಗೆಳಯರು) ಮಾರಾಟ ಮಾಡುವ ಮೂಲಕ ಭಾರತದ ಆರ್ಥಿಕ ರಕ್ಷಣೆಯ ವಿಷಯದಲ್ಲಿ ತೀವ್ರ ರಾಜಿ ಮಾಡಿಕೊಳ್ಳಲಾಗುತ್ತಿದೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
GOI is privatising profit & nationalising loss.
Selling PSBs to Modicronies gravely compromises India’s financial security.
I stand in solidarity with the striking bank employees.#BankStrike
— Rahul Gandhi (@RahulGandhi) March 16, 2021
ಅಂದರೆ ಸರ್ಕಾರಕ್ಕೆ ಲಾಭವಾಗಬಹುದಿದ್ದ ಕ್ಷೇತ್ರಗಳನ್ನು ಖಾಸಗಿಯವರಿಗೆ ಬಿಟ್ಟುಕೊಡುವ ಮೂಲಕ ಅವರು ಲಾಭ ಮಾಡಿಕೊಳ್ಳಲು ಸಹಾಯ ಮಾಡಲಾಗುತ್ತಿದೆ. ಅದೇ ಸಮಯದಲ್ಲಿ ನಷ್ಟವನ್ನು ಮಾತ್ರ ದೇಶದ ಪ್ರತಿಯೊಬ್ಬರ ಮೇಲೆ ಹೇರುವ ಮೂಲಕ ರಾಷ್ಟ್ರೀಕರಣ ಮಾಡಲಾಗುತ್ತಿದೆ ಎಂದು ರಾಹುಲ್ ಟೀಕಿಸಿದ್ದಾರೆ.
ಬ್ಯಾಂಕುಗಳ ಖಾಸಗೀಕರಣ ವಿರೋಧಿಸಿ ದೇಶಾದ್ಯಂತ ಹೋರಾಟ ನಡೆಸುತ್ತಿರುವ ಬ್ಯಾಂಕ್ ಉದ್ಯೋಗಿಗಳ ಪರ ನಿಲ್ಲುತ್ತೇನೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ನಿನ್ನೆ ಕೂಡ ಅದಾನಿ ಆಸ್ತಿಯಲ್ಲಾದ ಬೃಹತ್ ಹೆಚ್ಚಳವನ್ನು ಟೀಕಿಸಿ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು. “2020ರಲ್ಲಿ ನಿಮ್ಮ ಸಂಪತ್ತು ಎಷ್ಟು ಹೆಚ್ಚಾಗಿದೆ? ಶೂನ್ಯ. ನೀವು ಬದುಕಲು ಹೆಣಗಾಡುತ್ತಿದ್ದೀರಿ; ಆದರೆ ಅವರು (ಅದಾನಿ) ₹12 ಲಕ್ಷ ಕೋಟಿ ರೂ. ಗಳಿಸಿ ತಮ್ಮ ಸಂಪತನ್ನು ಶೇಕಡಾ 50ರಷ್ಟು ಹೆಚ್ಚಿಸಿಕೊಂಡಿದ್ದಾರೆ. ಇದು ಏಕೆ ಎಂದು ಹೇಳಬಲ್ಲೀರಾ?” ಎಂದು ಬ್ಲೂಮ್‌ಬರ್ಗ್ ವರದಿಯೊಂದನ್ನು ಉಲ್ಲೇಖಿಸಿ ಪ್ರಶ್ನಿಸಿದ್ದರು.
ಬ್ಯಾಂಕ್ ನೌಕರರ ಮುಷ್ಕರ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ. ನಾಳೆ ಮಾರ್ಚ್ 17 ರಂದು ಎಲ್‌ಐಸಿ ನೌಕರರು ರಾಷ್ಟ್ರಾದ್ಯಂತ ಮುಷ್ಕರ ನಡೆಸುವುದಾಗಿ ಘೋಷಿಸಿದ್ದಾರೆ.
ಇದನ್ನೂ ಓದಿ: ನೀವು ಬದುಕುಳಿಯಲು ಹೆಣಗುತ್ತಿರುವಾಗ ಅದಾನಿ 12 ಲಕ್ಷ ಕೋಟಿ ಗಳಿಸಿದ್ದು ಹೇಗೆ? – ರಾಹುಲ್ ಗಾಂಧಿ ಪ್ರಶ್ನೆ


