Homeಕರ್ನಾಟಕʼಕರ್ನಾಟಕದ ಮಾದರಿʼಯ ರೈತ ಚಳವಳಿಯನ್ನು ಕಟ್ಟಬೇಕಾದ ಸಂದರ್ಭ!

ʼಕರ್ನಾಟಕದ ಮಾದರಿʼಯ ರೈತ ಚಳವಳಿಯನ್ನು ಕಟ್ಟಬೇಕಾದ ಸಂದರ್ಭ!

ಪಂಜಾಬ್‌ ರೈತರಿಂದ ಶುರುವಾದ ದೆಹಲಿ ಗಡಿಗಳಲ್ಲಿನ ಚಾರಿತ್ರಿಕ ಹೋರಾಟವು ದೆಹಲಿ ಸುತ್ತಲಿನ ರಾಜ್ಯಗಳಲ್ಲಿ ಪ್ರಬಲವಾಗಿದ್ದಷ್ಟು ದಕ್ಷಿಣದ ರಾಜ್ಯಗಳಲ್ಲಿ ಇಲ್ಲ. ಕರ್ನಾಟಕವು ದಕ್ಷಿಣ ಭಾರತದಲ್ಲೇ ಹೆಚ್ಚಿನ ರೈತ ಚಳವಳಿಯನ್ನು ಕಂಡಿರುವುದಾದರೂ, ದೊಡ್ಡ ಆಂದೋಲನವಾಗಿಲ್ಲ. ಹೀಗೇಕೆ ಎಂಬ ಪ್ರಶ್ನೆಯು ಆಗಿಂದಾಗ್ಗೆ ಬರುತ್ತಲೇ ಇರುತ್ತದೆ. ಸಾಮಾಜಿಕ ಕಾರ್ಯಕರ್ತ ಹಾಗೂ ಮಾಧ್ಯಮ ಕಾರ್ಯಕರ್ತರಾದ ಡಾ.ವಾಸು.ಎಚ್‌.ವಿ ಅವರು ಆ ಕುರಿತ ಅನಿಸಿಕೆಗಳನ್ನು ಇಲ್ಲಿ ಮಂಡಿಸಿದ್ದಾರೆ.

- Advertisement -
- Advertisement -

ಕರ್ನಾಟಕದಲ್ಲಿ ಕಳೆದ 9 ತಿಂಗಳಿಂದ ಹಲವಾರು ರೈತ ಮತ್ತು ರೈತಪರ ಸಂಘಟನೆಗಳು ಜೊತೆಗೂಡಿ ನಡೆಸುತ್ತಿರುವ ಕಾಯ್ದೆ ವಿರೋಧಿ ಚಳವಳಿಗೆ ಒಂದು ಮಹತ್ವವಿದೆ. ರೈತರು ಹಾಗೂ ಇನ್ನಿತರ ಜನಸಮುದಾಯಗಳು ತಾವಾಗಿಯೇ ಮೇಲೆದ್ದು ಬರುವ ವಾತಾವರಣದಲ್ಲಿ ಈ ಸಂಘಟನೆಗಳೆಲ್ಲವೂ ಸೇರಿ ಚಳವಳಿಯ ಬೆಂಕಿ ಕಾಪಿಟ್ಟುಕೊಂಡಿವೆ. ಪ್ರತಿಕೂಲ ಸಂದರ್ಭ, ಪ್ರತಿಕೂಲ ಮಾಧ್ಯಮಗಳು ಹಾಗೂ ಸಂವೇದನಾರಹಿತ ಆಡಳಿತ ವ್ಯವಸ್ಥೆ ಇದ್ದಾಗಲೂ, ಇದನ್ನು ಮಾಡುವುದಕ್ಕೆ ಸಾಕಷ್ಟು ಸಮಯ ಹಾಗೂ ಬದ್ಧತೆಯನ್ನು ಕೇಳುತ್ತದೆ. ಬದಲಾವಣೆ ಬಯಸುವ ಎಲ್ಲರೂ ಅದಕ್ಕಾಗಿ ಅವರೆಲ್ಲರಿಗೂ ಕೃತಜ್ಞರಾಗಿರಬೇಕು.

ಏಕೆಂದರೆ ದೆಹಲಿ ಸುತ್ತಲಿನ ರಾಜ್ಯಗಳ ಪರಿಸ್ಥಿತಿ ಬೇರೆ ಇದ್ದು, ಅಲ್ಲಿಯೂ ಹಲವಾರು ಸಂಘಟನೆಗಳು ದೀರ್ಘ ಕಾಲ ಶ್ರಮ ಹಾಕಿ ಅರಿವನ್ನು ಮೂಡಿಸಿದ್ದವಾದರೂ, ಈಗಿನ ಕಾಯ್ದೆಗಳ ವಿರುದ್ಧ ರೈತರು ಸ್ವಯಂಪ್ರೇರಿತರಾಗಿ ಹೋರಾಟಕ್ಕಿಳಿಯಲು ಹಲವು ತಕ್ಷಣದ ಕಾರಣಗಳೂ ಇದ್ದಿವೆ. ಆದರೆ ಕರ್ನಾಟಕದಲ್ಲಿ ಪರಿಸ್ಥಿತಿ ಭಿನ್ನ. ಸದರಿ ಕಾಯ್ದೆಗಳ ದೂರಗಾಮಿ ಪರಿಣಾಮಗಳು ಚಳವಳಿಯ ಕಾರ್ಯಕರ್ತರು ಹಾಗೂ ಮುಖಂಡರಿಗೆ ಕಂಡಂತೆ ಜನಸಾಮಾನ್ಯರಿಗೆ ಕಂಡಿಲ್ಲ. ಹಾಗಾಗಿ ಅದನ್ನು ಮನಗಂಡವರು ಮಿಕ್ಕವರನ್ನು ಎಚ್ಚರಿಸುವ ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಿರುವುದು ಶ್ಲಾಘನೀಯ.

ಆದರೆ, ಅದರಾಚೆಗೆ ಕೆಲವು ಪ್ರಶ್ನೆಗಳನ್ನು ನಮಗೆ ನಾವೇ ಹಾಕಿಕೊಳ್ಳಬೇಕಾದ ಸಂದರ್ಭವೂ ಇದಾಗಿದೆ. ದೆಹಲಿಯ ಸುತ್ತ ನಡೆಯುತ್ತಿರುವ ಹೋರಾಟವು ಅಲ್ಲಿನ ನಿರ್ದಿಷ್ಟ ಸಂದರ್ಭದಲ್ಲಿ ರೂಪುಗೊಂಡಿರುವ ಚಳವಳಿಯಾಗಿದೆ. ಅದನ್ನು ನಾವಿಲ್ಲಿ ಯಥಾವತ್ತಾಗಿ ಭಟ್ಟಿ ಇಳಿಸುವುದು ಸಾಧ್ಯವಿಲ್ಲ. ಅಲ್ಲಿಂದ ನಮಗೆ ಕೆಲವು ಜನರಲ್ ಆದ ಸೂತ್ರಗಳಷ್ಟೇ ಸಿಗಬಹುದು. ಅಂತಿಮವಾಗಿ ನಮ್ಮ ಕಾಲ-ದೇಶಕ್ಕೆ ಸೂಕ್ತವಾದ ಮಾದರಿಯನ್ನು ನಾವೇ ಕಟ್ಟಿಕೊಳ್ಳಬೇಕು.

ಮೊದಲಿಗೆ ಪಂಜಾಬಿನ ರೈತರ ಹೋರಾಟದ ಯಶಸ್ಸಿನಲ್ಲಿ ನಾವು ಗುರುತಿಸಬಹುದಾದ ಸೂತ್ರಗಳೇನು ಎಂಬುದನ್ನು ನೋಡೋಣ. ಒಂದು, ಈ ಕಾಯ್ದೆಗಳ ಪರಿಣಾಮಗಳೇನಾಗಬಹುದು ಎಂಬುದು ಗೊತ್ತಾಗುವಷ್ಟು ಅದು ’ಅವರದ್ದೇ ಆದ ಸ್ಥಳೀಯ’ ಸಮಸ್ಯೆಯಾಗಿತ್ತು. ಎರಡು, ವಿವಿಧ ಸಂಘಟನೆಗಳು ಒಟ್ಟುಗೂಡಿದಾಗ 1+1+1+1= 4 ಆಗದೇ, 1.5 ಆಗುತ್ತವೆ. ಆ ಸಮಸ್ಯೆಯನ್ನು ಅಲ್ಲಿನ ಸಂಘಟನೆಗಳು ಬಗೆಹರಿಸಿಕೊಂಡಿದ್ದವು. ಮೂರು, ಇದ್ದಕ್ಕಿದ್ದಂತೆ ನವೆಂಬರ್ 25ರಂದು ದೆಹಲಿಗೆ ಲಕ್ಷಾಂತರ ರೈತರು ಹೊರಟು ಉದ್ಭವಿಸಿದ ಹೋರಾಟ ಇದಾಗಿರಲಿಲ್ಲ. ಜೂನ್‌ನಿಂದ ನಿರಂತರವಾಗಿ ತಳಮಟ್ಟದಲ್ಲಿ ಆರಂಭವಾದ ಚಳವಳಿ ಇದು. ನಾಲ್ಕು, ಪಂಜಾಬಿನ ಪ್ರತಿಯೊಂದು ರೈತ ಕುಟುಂಬಕ್ಕೂ ಒಂದಲ್ಲಾ ಹಲವು ಬಾರಿ ಕರಪತ್ರಗಳನ್ನು ತಲುಪಿಸಲಾಗಿತ್ತು.

ರೈತ
ಕೃಪೆ: ಸ್ಕ್ರೋಲ್

ಮನೆ ಮನೆ ತಲುಪುವ ಕಾರ್ಯಕ್ರಮಗಳು ನಡೆದು ಗಟ್ಟಿ ತಳಹದಿ ನಿರ್ಮಾಣವಾಗಿತ್ತು. ಐದು, ತಮ್ಮ ಬೇಡಿಕೆಗಳು ಮೂರೇ ಎಂದು ಅವರು ಸ್ಪಷ್ಟಪಡಿಸಿದ್ದರು. ತಂದಿರುವ ಹೊಸ ಕಾಯ್ದೆಗಳನ್ನು ಹಿಂಪಡೆಯಿರಿ, ತರಬೇಕೆಂದಿರುವ ಒಂದು ಕಾಯ್ದೆಯನ್ನು ತರಬೇಡಿ, ತರಲೇಬೇಕಿರುವ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾಯ್ದೆಯನ್ನು ತನ್ನಿ. ಪಂಜಾಬಿನ ರೈತರ ಸಮಸ್ತ ಸಮಸ್ಯೆಗಳನ್ನೂ ಇದರೊಂದಿಗೇ ಬೆಸೆಯಲಾಗಿತ್ತು. ಈ ಹೋರಾಟದಲ್ಲಿ ಭೂ ಒಡೆಯರಿಗೆ ಮಾತ್ರವಲ್ಲದೇ ಭೂಹೀನ ಕೃಷಿ ಕಾರ್ಮಿಕರಿಗೂ ಸಹಾ ಈ ಬೇಡಿಕೆಗಳು ತಮಗೆ ಸಂಬಂಧಿಸಿದ್ದವು ಎಂದು ಮನವರಿಕೆಯಾಗಿತ್ತು. ಇದು ಕೇವಲ ಮನವರಿಕೆಯಾಗಿರದೇ, ದೀರ್ಘಕಾಲ ಕಿಸಾನ್ ಯೂನಿಯನ್‌ಗಳು ಕಿಸಾನ್ ಮಜ್ದೂರ್‌ಗಳ ಪರವಾಗಿ ಗಟ್ಟಿಯಾಗಿ ನಿಂತು ಹೋರಾಟ ಮಾಡಿದ್ದರಿಂದ ಬೆಳೆದು ಬಂದಿದ್ದ ’ಸಾಲಿಡಾರಿಟಿ’ ಅದಾಗಿತ್ತು. (ಈ ಕುರಿತು ಒಂದು ದೊಡ್ಡ ಲೇಖನ ಈಗಾಗಲೇ ಪ್ರಕಟವಾಗಿದ್ದು, ಆಸಕ್ತರು ಓದಬಹುದು). ಪಂಜಾಬಿನ ಕೃಷಿಯ ಜೊತೆಗೆ, ಹಳ್ಳಿಗಳ ಜೊತೆಗೆ ಬೆಂಬಲಿಸಿ ನಿಲ್ಲುವ ಇತರ ಸಮುದಾಯಗಳು (ಅಂದರೆ ನಗರ ಪ್ರದೇಶದವರು) ಇರುವುದೂ ಅಲ್ಲಿನ ಆರನೆಯ ಸಕಾರಾತ್ಮಕ ಅಂಶ. ಇದು ಅಲ್ಲಿ ತನ್ನಂತಾನೇ ಆದರೆ, ನಮ್ಮಲ್ಲಿ ಪ್ರಜ್ಞಾಪೂರ್ವಕವಾಗಿ ಮಾಡಬೇಕಾಗುತ್ತದೆ.

ಈ ಆರು ಅಂಶಗಳನ್ನೇ ಗಮನದಲ್ಲಿಟ್ಟುಕೊಂಡು ಅವನ್ನು ಕರ್ನಾಟಕದಲ್ಲಿ ಅಳವಡಿಸಲಾಗಿದೆಯೇ ಎಂದು ನೋಡಿದರೂ ನಮಗೆ ಇಲ್ಲಿನ ಸವಾಲು ಅರ್ಥವಾಗುತ್ತದೆ.

ಒಂದು

ಕರ್ನಾಟಕದ ರೈತರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ತಂದಿರುವ ಕಾಯ್ದೆಗಳು ತಮಗೆ ನೇರವಾಗಿ ತೊಂದರೆ ಕೊಡಲಿವೆ ಎಂದೆನಿಸಿಲ್ಲ. ಈ ಅಪಾಯವನ್ನು ಮುನಗಂಡಿರುವ ಸಂಘಟನೆಗಳ ಹೋರಾಟವು ಜನಾಂದೋಲನವಾಗದಿರಲು ಇದು ಪ್ರಮುಖ ಕಾರಣ. ಆದರೆ ಇಲ್ಲಿನ ರೈತರದ್ದೇ ಆದ ಸಮಸ್ಯೆಗಳನ್ನು ಕಾಯ್ದೆಗಳ ಜೊತೆಗೆ ಬೆಸೆಯುವ ಕೆಲಸವು ಪರಿಣಾಮಕಾರಿಯಾಗಿ ಆಗಿದೆಯೇ ಎಂಬ ಪ್ರಶ್ನೆ ಹಾಕಿಕೊಂಡರೆ ಅದೂ ಆಗಿಲ್ಲ. ಉದಾಹರಣೆಗೆ, ಎಂಎಸ್‌ಪಿ ಖಾತರಿ ಕಾಯ್ದೆ ಬರಬೇಕೆಂದರೆ ಸರ್ಕಾರದ ಆಮದು-ರಫ್ತು ನೀತಿ ಬದಲಾಗಬೇಕಾಗುತ್ತದೆ. ಆಗ ಕಬ್ಬು, ರೇಷ್ಮೆ, ಮೆಣಸು, ಬೇಳೆ ಕಾಳುಗಳು, ಎಣ್ಣೆ ಕಾಳುಗಳು ಇವೆಲ್ಲವೂ ಒಂದು ಸ್ಥಿರ ಲಾಭದಾಯಕ ಬೆಲೆಯನ್ನು ಪಡೆದುಕೊಳ್ಳಲು ಸಾಧ್ಯ. ಕೆಲವನ್ನು ಸರ್ಕಾರವೇ ಕೊಳ್ಳಬೇಕಾಗುತ್ತದೆ. ಆಗ ಭತ್ತ, ರಾಗಿ, ಜೋಳ, ಬೇಳೆ ಕಾಳುಗಳನ್ನು ಬೆಳೆಯುವವರು ಲಾಭ ಪಡೆಯುತ್ತಾರೆ.

ಕೆಲವು ಬೆಳೆಗಳ ವಿಚಾರದಲ್ಲಿ ಸರ್ಕಾರವು ತನ್ನ ನೀತಿಗಳಲ್ಲಿ ಬದಲಾವಣೆ ತರಬೇಕಾಗುತ್ತದೆ. ಆಗ ಹತ್ತಿ, ಅಡಿಕೆ, ಮೊಟ್ಟೆ, ಮಾಂಸ ಇತ್ಯಾದಿಗಳು ಬೆಲೆ ಪಡೆದುಕೊಳ್ಳುತ್ತವೆ. ಕೆಲವು ಆಹಾರ ಪದಾರ್ಥಗಳ ಸಂಸ್ಕರಣೆಗೆ ಪ್ರೋತ್ಸಾಹವನ್ನು ನೀಡಬೇಕಾಗುತ್ತದೆ. ಆಗ ಹಣ್ಣು, ತರಕಾರಿ, ಸಿರಿಧಾನ್ಯಗಳು ಇತ್ಯಾದಿಗಳಿಗೆ ಬೆಲೆ ಹಾಗೂ ಲಾಭ ಹೆಚ್ಚಾಗುತ್ತದೆ. ಇಷ್ಟಾದರೆ, ಉಳಿದ ಬೆಳೆಗಳನ್ನು ಬೆಳೆಯುವವರೂ ಅದಾಗಿಯೇ ತಮ್ಮ ಬೆಳೆಗಳಿಗೆ ಬೆಲೆ ಕಾಣುತ್ತಾರೆ. ಈಗಿನ ಸಮಸ್ಯೆ ಎಂದರೆ ಒಂದರಲ್ಲಿ ನಷ್ಟ ಕಂಡರೆ, ಲಾಭ ಬರುತ್ತಿರುವ ಬೆಳೆಗಳಿಗೆ ಶೇ.10ರಷ್ಟು ರೈತರು ತಾತ್ಕಾಲಿಕವಾಗಿ ಹೊರಳಿಕೊಂಡರೂ ಉತ್ಪಾದನೆ ಹೆಚ್ಚಾಗಿ ಬೆಲೆ ಕುಸಿದು ಬೀದಿಗೆ ಸುರಿಯುವ ಪರಿಸ್ಥಿತಿ ಬರುತ್ತದೆ.

ಅಂದರೆ ರಾಜ್ಯದ ಪ್ರತಿಯೊಂದು ಬೆಳೆಗಾರರಿಗೂ ಎಂಎಸ್‌ಪಿಯ ಜೊತೆಗೆ ನೇರ ಸಂಬಂಧವಿದೆ. ಕ್ವಿಂಟಾಲ್ ಭತ್ತಕ್ಕೆ 2429 ರೂ, ರಾಗಿಗೆ 4008 ರೂ, ಜೋಳಕ್ಕೆ 3486 ರೂ ಸಿಗುವುದಕ್ಕಾಗಿ ನಡೆಯುತ್ತಿರುವ ಹೋರಾಟ ಇದು ಎಂದು ರೈತರಿಗೆ ಗೊತ್ತಾಗಿಲ್ಲ. ಗೊತ್ತಾದರೂ ಯುಪಿಎ ಸರ್ಕಾರ ನೇಮಿಸಿದ್ದ ರಾಷ್ಟ್ರೀಯ ರೈತ ಆಯೋಗದ ಶಿಫಾರಸ್ಸು ಮತ್ತು ಸ್ವತಃ ನರೇಂದ್ರ ಮೋದಿಯವರ 2014ರ ಪ್ರಣಾಳಿಕೆಯೇ ನೀಡಿದ್ದ ಭರವಸೆ ಎಂದೂ ಗೊತ್ತಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಅದು ಅತ್ಯಂತ ನ್ಯಾಯಯುತವಾದ ಬೇಡಿಕೆ ಹಾಗೂ ಯಾರ ಮನೆ ಆಸ್ತಿಯನ್ನೂ ಕೇಳುತ್ತಿಲ್ಲ ಎಂಬ ಹಕ್ಕಿನ ಪ್ರಜ್ಞೆಯೂ ಇಲ್ಲ. ಅಂದರೆ ಸರ್ಕಾರವು ಜಾರಿ ಮಾಡಲು ಸಾಧ್ಯವಿರುವ, ಅವರೇ ಭರವಸೆ ನೀಡಿದ್ದ, ಸರ್ಕಾರದ ಆಯೋಗಗಳೇ ಶಿಫಾರಸ್ಸು ಮಾಡಿದ್ದನ್ನು ಜಾರಿ ಮಾಡಿ ಎಂದಷ್ಟೇ ಕೇಳುತ್ತಿದ್ದೇವೆ ಎಂಬುದೂ ಎಲ್ಲರಿಗೆ ತಿಳಿದಿಲ್ಲ.

ಅಂತಹದೊಂದು ಕಾಯ್ದೆ ಜಾರಿಗೆ ಬಂದಲ್ಲಿ ಅದನ್ನು ಜಾರಿ ಮಾಡಲು ಕೆಲವು ನಿಯಮಗಳಿಗೊಳಪಟ್ಟು ಕೆಲಸ ಮಾಡುವ ಮಾರುಕಟ್ಟೆ ಇರಬೇಕು. ಹಾಗಾಗಿ ಎಪಿಎಂಸಿ ಅತ್ಯಗತ್ಯ. ಅದು ಇಂದು ಎಷ್ಟೇ ದುರ್ಬಲವಾಗಿದ್ದರೂ, ಬೆಲೆ ಖಾತರಿಯ ದೀರ್ಘಕಾಲದ ಒತ್ತಾಯದ ಈಡೇರಿಕೆಗೆ ಅಗತ್ಯವಿರುವ ಯಂತ್ರಾಂಗವದು ಎಂಬುದನ್ನು ಕರ್ನಾಟಕದ ರೈತರ ಸಾಮಾನ್ಯ ಪ್ರಜ್ಞೆಯ ಭಾಗವಾಗಿಸುವ ಕೆಲಸವಾಗಬೇಕಿದೆ; ಅದು ಇದುವರೆಗೆ ಆಗಿಲ್ಲ. ಮೇಲಿನ ಒತ್ತಾಯದಂತೆ ಬೆಲೆ ಸಿಗದೇ ಇದ್ದುದರಿಂದ, ಕಳೆದ 20 ವರ್ಷಗಳಿಂದ ಕರ್ನಾಟಕದ ರೈತ ಸಮುದಾಯಕ್ಕಾಗಿರುವ ಬೆಲೆ ನಷ್ಟದ ಪ್ರಮಾಣವು 4 ಲಕ್ಷ ಕೋಟಿಗಳಾಗುತ್ತವೆ. ಅಂದರೆ ಅತ್ಯಂತ ಸ್ಥಳೀಯವಾದ ಬೇಡಿಕೆಗಳಿಗೂ ಹಾಗೂ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಅಖಿಲ ಭಾರತ ರೈತ ಹೋರಾಟ ಸಮನ್ವಯ ಸಮಿತಿಯ ಬೇಡಿಕೆಗಳಿಗೂ ನೇರಾನೇರ ಸಂಬಂಧವಿದೆ.

ಹಾಗೆಯೇ ಬೆಳೆ ವಿಮೆ ಮೋಸವು ಬಹಳಷ್ಟು ಭಾಗದ ರೈತರ ದೊಡ್ಡ ಸಮಸ್ಯೆಯಾಗಿದೆ. ಬೆಳೆ ನಷ್ಟವು ಕಳೆದ 20 ವರ್ಷಗಳಿಂದ ಈ ರಾಜ್ಯದ ರೈತರ ಪಾಲಿಗೆ ಅಂಟಿರುವ ದೊಡ್ಡ ಪಿಡುಗಾಗಿದೆ. ಸರ್ಕಾರದ್ದೇ ಅಂಕಿ-ಅಂಶಗಳು ಹೇಳುವಂತೆ ಇದು ಕನಿಷ್ಠ 4 ಲಕ್ಷ ಕೋಟಿಯಾಗಿದೆ. 14 ವರ್ಷಗಳ ಬರ, 4-5 ವರ್ಷಗಳ ಪ್ರವಾಹವು ಮಾಡಿರುವ ನಷ್ಟವಿದು. ಕರ್ನಾಟಕದ ಮಟ್ಟಿಗೆ ಬೆಳೆ ನಷ್ಟ ಪರಿಹಾರಕ್ಕೆ ವಿಶೇಷ ಪ್ಯಾಕೇಜ್ ಕೇಳುವುದು, ಅದರಲ್ಲಿ ಸಾಲಮನ್ನಾ, ಅಂತರ್ಜಲ ವೃದ್ಧಿ, ನದಿ ನೀರು ನಿರ್ವಹಣೆಯ ಅಂಶಗಳು ಒಳಗೊಂಡಿರಬೇಕು. ಇದು ಕರ್ನಾಟಕದ ರೈತ ಹೋರಾಟದ ಭಾಗವಾಗಿ ಸೇರಿಕೊಳ್ಳಲೇಬೇಕಾದ ಸ್ಥಳೀಯ ಸಮಸ್ಯೆಯಾಗಿದೆ.

ಎರಡು

ಏನೇ ಮಿತಿಗಳಿದ್ದರೂ ಕರ್ನಾಟಕದಲ್ಲಿ ಹಲವು ಸಂಘಟನೆಗಳು ಒಟ್ಟುಗೂಡಿ ಮೊದಲು ಐಕ್ಯ ಹೋರಾಟ ಸಮಿತಿ ಹೆಸರಿನಲ್ಲಿ, ನಂತರ ಸಂಯುಕ್ತ ಹೋರಾಟ – ಕರ್ನಾಟಕದ ಅಡಿಯಲ್ಲಿ ಈ ಹೋರಾಟವನ್ನು ಮುನ್ನಡೆಸುತ್ತಿವೆ. ಈಗ ಶಿವಮೊಗ್ಗದಲ್ಲಿ ನಡೆಯಲಿರುವ ಮಹಾಪಂಚಾಯಿತಿಯ ಆಯೋಜನೆಯ ವಿಚಾರದಲ್ಲಿ ಕೆಲವು ವ್ಯತ್ಯಾಸಗಳು ಉಂಟಾಗಿವೆಯಾದರೂ, ಆ ಜಿಲ್ಲೆಯ ಮಟ್ಟಿಗೆ ಅದು ಎಲ್ಲರ ಕಾರ್ಯಕ್ರಮವಾಗಿರುವುದೊಂದು ವಿಶೇಷ. ಆದರೆ ರಾಜ್ಯಮಟ್ಟದಲ್ಲಿ ಜೊತೆಯಾಗಿರುವ ಸಂಘಟನೆಗಳು ಒಂದೇ ರೀತಿಯ ಪ್ರತಿಭಟನಾ ಕಾರ್ಯಕ್ರಮಗಳನ್ನು ಪದೇಪದೇ ಹಮ್ಮಿಕೊಂಡು ಸುಸ್ತಾಗಿರುವಂತೆ ಕಾಣುತ್ತವೆ. ಏಕೆಂದರೆ ಹಲವು ಸಂಘಟನೆಗಳು ಜೊತೆಗೂಡಿದಾಗ ಅದನ್ನು ನಿಭಾಯಿಸುವುದಕ್ಕೇ ಗಣನೀಯ ಸಮಯ ಹೋಗುತ್ತದೆ. ಮೇಲೆ ಹೇಳಿದ ಹಾಗೆ ಎಲ್ಲ ಶಕ್ತಿಗಳು ಒಟ್ಟುಗೂಡುವುದಿಲ್ಲ. ಇದುವರೆಗೆ ಇದನ್ನು ನಿಭಾಯಿಸುವ ಮಾರ್ಗವನ್ನು ಇಲ್ಲಿ ಕಂಡುಕೊಳ್ಳಲಾಗಿಲ್ಲ. ಪಂಜಾಬಿನಲ್ಲಿ ಸೈದ್ಧಾಂತಿಕವಾಗಿಯೂ ಸಹಮತ ಹೊಂದಿರುವ 7-8 ಸಂಘಟನೆಗಳಲ್ಲದೇ, ಸಂಪೂರ್ಣ ವಿರುದ್ಧ ದಿಕ್ಕಿನಲ್ಲಿದ್ದವೂ ಸೇರಿ 30ಕ್ಕೂ ಹೆಚ್ಚು ಸಂಘಟನೆಗಳು ಒಟ್ಟಾಗಿ ನಡೆಯುತ್ತಿರುವುದು ಅಧ್ಯಯನ ಯೋಗ್ಯ ವಿಚಾರ.

ಮೂರು

ಮೇ – ಜೂನ್‌ನಿಂದ ಕರ್ನಾಟಕದಲ್ಲಿ ಆರಂಭವಾಗಿರುವ ಪ್ರತಿಭಟನೆಗಳ ಸ್ವರೂಪವು ಒಂದು ಹಂತದಿಂದ ಇನ್ನೊಂದು ಹಂತಕ್ಕೆ ನಿಜ ಅರ್ಥದಲ್ಲಿ ಮುಂದುವರೆದಂತೆ ಕಾಣುವುದಿಲ್ಲ. ಹೆಚ್ಚು ಕಡಿಮೆ ಒಂದೇ ಬಗೆಯ – ಅಂದರೆ, ಬೆಂಗಳೂರಿಗೆ ಬಂದು ಕೇಂದ್ರ ಭಾಗದಲ್ಲಿ ಮೆರವಣಿಗೆ, ಧರಣಿ ಅಥವಾ ವೇದಿಕೆ ಕಾರ್ಯಕ್ರಮವನ್ನು ನಡೆಸಿ ವಾಪಸ್ಸು ಹೋಗುವುದಕ್ಕೆ ಸೀಮಿತವಾಗಿದೆ. ನಿರಂತರವಾಗಿ ಹಲವು ದಿನಗಳ ಕಾಲ ಮುಂದುವರೆದಾಗಲೂ ಅದು ಅಗತ್ಯವಿರುವ ಒತ್ತಡವನ್ನು ನಿರ್ಮಿಸುವ ದಿಕ್ಕಿಗೆ ಹೋಗಲು ಸಾಧ್ಯವಿರಲಿಲ್ಲ.

ನಾಲ್ಕು

ಕರ್ನಾಟಕದಲ್ಲಿ 27,000 ಹಳ್ಳಿಗಳಿದ್ದು, ಅದರಲ್ಲಿ ಐದನೇ ಒಂದು ಭಾಗದ ಹಳ್ಳಿಗಳಲ್ಲಿ ತಲಾ 10 ಜನ ರೈತ ಸತ್ಯಾಗ್ರಹಿಗಳನ್ನು ತಯಾರು ಮಾಡಿಕೊಳ್ಳಲು 8-9 ತಿಂಗಳಲ್ಲಿ ಪ್ರಯತ್ನ ಹಾಕಿದ್ದರೆ, ಸಾಧ್ಯವಿತ್ತೇ ಇಲ್ಲವೇ? ಆ ನಿಟ್ಟಿನಲ್ಲಿ ಯೋಜನೆ ಹಾಗೂ ಪ್ರಯತ್ನ ನಡೆದಿದ್ದರೆ ಈಗ ಊಹಿಸಲು ಸಾಧ್ಯವಿರದ ಸಮಸ್ಯೆಗಳು ಬರಬಹುದಾದರೂ, ಅತ್ಯಂತ ವಿಶಿಷ್ಟವಾದ ಶಕ್ತಿ ಹೋರಾಟಕ್ಕೆ ಬಂದೊದಗುತ್ತಿತ್ತು. ಅದರ ಜೊತೆಗೆ ಪ್ರತಿ ಕುಟುಂಬಕ್ಕೆ ಒಂದು ಬಾರಿಯಾದರೂ ಕರಪತ್ರವನ್ನು ತಲುಪಿಸಿ ನಾಲ್ಕು ಸಂಗತಿಗಳನ್ನು ಹೇಳಲು ಬೇಕಾದ ಕಾರ್ಯಪಡೆಯೂ ತಯಾರಾಗುತ್ತಿತ್ತು.

ಐದು

ಸಂಯುಕ್ತ ಕಿಸಾನ್ ಮೋರ್ಚಾವು ಮುಂದಿಟ್ಟಿರುವ ಬೇಡಿಕೆಗಳು ಮೂರು ಮತ್ತು ಅವುಗಳಿಗೂ ಸ್ಥಳೀಯ ಸಮಸ್ಯೆಗಳಿಗೂ ಇರುವ ಸಂಬಂಧವನ್ನು ಇನ್ನೂ ಸ್ಥಳೀಯವಾದ ರೀತಿಯಲ್ಲಿ ಜನರಿಗೆ ಮನವರಿಕೆ ಮಾಡಿಕೊಡಲಾಗಿದೆ. ನಿರ್ದಿಷ್ಟವಾದ ಹೋರಾಟವೊಂದನ್ನು ಬೆಂಬಲಿಸಿ ಬರುವ ವಿವಿಧ ಸಂಘಟನೆಗಳ ಬೇಡಿಕೆಗಳನ್ನೆಲ್ಲಾ ಒಂದರಲ್ಲೇ ಸೇರಿಸಿ ಅದನ್ನೇ ಐಕ್ಯ ಹೋರಾಟ ಎನ್ನುವ ಪರಿಕಲ್ಪನೆಯೊಂದು ನಮ್ಮಲ್ಲಿ ಜಾರಿಯಲ್ಲಿದೆ.

ಕರ್ನಾಟಕದ ವಿಶೇಷವೆಂದರೆ ಪ್ರಧಾನವಾಗಿ ರೈತರ ಹೋರಾಟವಾಗಿರುವ ಈ ಚಳವಳಿಗೆ ಕಾರ್ಮಿಕರು, ದಲಿತ ಸಂಘಟನೆಗಳ ನಾಯಕರು ಬಂದಿರುವುದಲ್ಲದೇ, ಹಲವು ಪ್ರತಿಭಟನೆಗಳಿಗೆ ಒಂದಷ್ಟು ಸಂಖ್ಯೆ ಮೊಬಿಲೈಸ್ ಸಹಾ ಆಗಿದ್ದಾರೆ. ಒಂದು ಸಮುದಾಯದ ಹಕ್ಕಿನ ಹೋರಾಟದ ಪರವಾಗಿ ಇನ್ನಿತರರು ನಿಲ್ಲುವುದು ಐಕ್ಯತೆ. ಎಲ್ಲಾ ಸಮುದಾಯಗಳ ಎಲ್ಲಾ ಬೇಡಿಕೆಗಳನ್ನೂ ಒಂದೇ ಹೋರಾಟದಲ್ಲಿ ಬೆರೆಸಿ ಅದಕ್ಕಾಗಿ ಎಲ್ಲರೂ ಒಟ್ಟಿಗೇ ಸೇರಿ ಪ್ರತಿಭಟನೆ ಮಾಡುವುದರಿಂದ ಫೋಕಸ್ ಹೋಗುತ್ತದೆ ಅಷ್ಟೇ. ಜೊತೆಗೆ ರೈತ ಹೋರಾಟದಲ್ಲಿ ಅದೇ ಪ್ರಧಾನವಾಗಿರುತ್ತದಾದ್ದರಿಂದ ಉಳಿದವರಿಗೆ ಇದನ್ನು ಕಾಟಾಚಾರಕ್ಕೆ ಸೇರಿಸಿದ್ದಾರೆ ಎಂದೆನಿಸಿ ಅದಕ್ಕೂ ನ್ಯಾಯ ಸಲ್ಲಿಸಿದಂತಾಗುವುದಿಲ್ಲ. ನಿಜಕ್ಕೂ ಮಾಡಬೇಕಾದ್ದೇನೆಂದರೆ, ಕಾರ್ಮಿಕ-ದಲಿತ ಹಾಗೂ ಇನ್ನಿತರ ಸಮುದಾಯಗಳ ಹೋರಾಟ ಸಂದರ್ಭದಲ್ಲಿ ರೈತರೂ ಹೋಗಿ ಜೊತೆಗೂಡಬೇಕು.

ಮಾರ್ಚ್ 22ರ ಬೆಂಗಳೂರು ಪ್ರತಿಭಟನೆಯ ಕರಪತ್ರ ನೋಡಿದರೆ ಈ ವಿಚಾರದಲ್ಲಿ ಆಗಿರುವ ಎಡವಟ್ಟು ಎದ್ದು ಕಾಣುತ್ತದೆ. ’ಐಕ್ಯತೆ’ಯು ಅವಕಾಶವೂ ಹೌದು, ಮಿತಿಯೂ ಹೌದು ಎನಿಸುವುದು ಇಂತಹ ಸಂದರ್ಭಗಳಲ್ಲಿ. ಐಕ್ಯ ಹೋರಾಟ ಆರಂಭವಾದಾಗ ಸಂದರ್ಭ ಬೇರೆ ಇತ್ತು. ಕರ್ನಾಟಕ ಸರ್ಕಾರ ತಂದಿದ್ದ ಭೂಸುಧಾರಣಾ ಕಾಯ್ದೆ ತಿದ್ದುಪಡಿಯು ಪ್ರಧಾನವಾದ ಗುರಿಯಾಗಿತ್ತು. ಅದಕ್ಕೆ ಕೈ ಜೋಡಿಸಿದಾಗ ರೈತ ಹಾಗೂ ದಲಿತ ಸಮುದಾಯಗಳೆರಡೂ ಅದರಿಂದ ತೊಂದರೆಗೊಳಗಾಗುತ್ತಿದ್ದವು. ಆದರೆ ಈಗಿನ ಸಂದರ್ಭ ಬೇರೆ ಇದೆ.

ಹೀಗೆ ಮಾಡದೇ ರೈತ ಸಮುದಾಯಕ್ಕೆ ಮಾತ್ರ ಸಂಬಂಧಿಸಿದ ಎರಡು ಅಥವಾ ಮೂರು ಬೇಡಿಕೆಗಳನ್ನು ಮಾತ್ರ ಮುಂದಿಡುವುದು ಸಾಧ್ಯವೇ ಎಂದು ಪರಿಶೀಲಿಸಬೇಕು. ಉಳಿದೆಲ್ಲವನ್ನೂ ಈ 2-3 ಬೇಡಿಕೆಗಳೊಂದಿಗೇ ಬೆಸೆಯಬೇಕು. ಇದೇನೂ ಅಸಾಧ್ಯವಲ್ಲ. ರೈತರಿಗೆ ಹಾಗೂ ಉಳಿದ ಸಮುದಾಯಗಳಿಗೂ ಇವು ಹೇಗೆ ನ್ಯಾಯಯುತ ಎಂಬುದನ್ನು ಮನಸ್ಸಿನೊಳಗಿಳಿಸುವ ಬಲವಾದ ಪ್ರಚಾರ ನಡೆಯಬೇಕು. ಸರ್ಕಾರವನ್ನೂ ಅದು ಇಕ್ಕಟ್ಟಿಗೆ ದೂಡುತ್ತದೆ.

ಆರು

ಈ ಹೋರಾಟದ ಜೊತೆಯಲ್ಲಿ ಕಾರ್ಮಿಕ ಹಾಗೂ ದಲಿತ ಸಂಘಟನೆಗಳು ಇರುವುದು ಸಕಾರಾತ್ಮಕವಾದ ವಿಷಯ. ಅದೇ ಸಂದರ್ಭದಲ್ಲಿ ನಗರ ಪ್ರದೇಶದ ಮಧ್ಯಮವರ್ಗದ ಬೆಂಬಲವನ್ನು ಗೆದ್ದುಕೊಳ್ಳುವುದು ಆಗಲೇಬೇಕಾದ ಒಂದು ಸಂಗತಿ. ಮೆದುಳನ್ನು ತೆಗೆದು ಸಗಣಿ ತುಂಬಿಕೊಂಡಿರುವ ಒಂದು ವಿಭಾಗ ಈ ವರ್ಗದಲ್ಲಿದೆ. ಅದನ್ನು ತೆಗಳುವ ಬೀಸಿನಲ್ಲಿ ಸಾರಾಸಗಟು ಎಸೆದುಬಿಡಲಾಗುವುದಿಲ್ಲ. 1980ಕ್ಕೆ ಹೋಲಿಸಿದರೆ ಇಂದು ನಗರ ಪ್ರದೇಶದಲ್ಲಿರುವ ಮೆಜಾರಿಟಿಯು ಈ 40 ವರ್ಷಗಳಲ್ಲಿ ಹಳ್ಳಿಗಳಿಂದಲೇ ವಲಸೆ ಬಂದಿರುವವರು. ಅವರಿಗೆ ಹಳ್ಳಿಯ ಸಮಸ್ಯೆಗಳನ್ನು ಕನೆಕ್ಟ್ ಮಾಡಿಕೊಳ್ಳುವುದು ಕಷ್ಟವಲ್ಲ. ಗ್ರಾಹಕರಾಗಿಯೂ ಇರುವ ಅವರಿಗೆ ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆಯು ಅವರ ಬದುಕನ್ನು ಹೇಗೆ ಹೈರಾಣಾಗಿಸಲಿದೆ ಎಂಬುದನ್ನು ತಿಳಿಸಲು ಪ್ರಯತ್ನವೇ ನಡೆಯದೇ, ಅವರು ಅರ್ಥ ಮಾಡಿಕೊಂಡಿಲ್ಲ ಎಂದು ದೂರುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಹಾಗೆ ನೋಡಿದರೆ ಗ್ರಾಮೀಣ ಭಾಗದ ಜನರು ಸಮಸ್ಯೆಯನ್ನು ಅರ್ಥ ಮಾಡಿಕೊಂಡಿದ್ದಾರೆಯೇ?

ಇವೆಲ್ಲವನ್ನೂ ಒಂದಲ್ಲಾ ಒಂದು ರೀತಿಯಲ್ಲಿ ಮಾಡಲು ಪಂಜಾಬಿಗೆ ಸಾಧ್ಯವಾಯಿತು. ಅವರಿಗೆ ಕಾಲವೂ ಕೂಡಿ ಬಂದಿರಬಹುದು. ನಮಗೆ ಎಲ್ಲವೂ ಅನುಕೂಲಕರವಾಗಿರದೇ ಇರುವುದರಿಂದಲೇ ಈ ಕಸರತ್ತನ್ನು ನಾವು ಇನ್ನೂ ಹೆಚ್ಚು ಪ್ರಜ್ಞಾಪೂರ್ವಕವಾಗಿ ಮಾಡಬೇಕಿದೆ.

ಇನ್ನು ಹೋರಾಟದ ರೂಪದ ವಿಚಾರಕ್ಕೆ ಬರುವುದಾದರೆ ಅಲ್ಲೂ ತಲೆ ಕೆಡಿಸಿಕೊಳ್ಳಲೇಬೇಕಾದ ಕೆಲವು ಅಂಶಗಳಿವೆ. ಧರಣಿ, ಸತ್ಯಾಗ್ರಹ, ಸಮಾವೇಶಗಳು ಸಾಮಾಜಿಕ ಪರಿಣಾಮವನ್ನು ಹಿಂದಿನಷ್ಟು ಹೊಂದಿಲ್ಲ ಎಂಬುದರಲ್ಲಿ ಯಾರಿಗೂ ಸಂಶಯವಿರಲಾರದು. ಕೆಲವೊಂದು ಸಂದರ್ಭಗಳು ಈ ಹಿಂದಿನ ಚಳವಳಿಯ ರೂಪಗಳಿಗೂ ಮಹತ್ವವನ್ನು ತಂದುಕೊಡುತ್ತವೆಯಾದರೂ, ಇಂದಿನ ಹೋರಾಟದ ರೂಪವೂ ಬದಲಾಗಬೇಕಿದೆ. ಹಾಗೆಂದು ದೆಹಲಿ ಸುತ್ತಲು ನಡೆಯುತ್ತಿರುವ ರೂಪದಲ್ಲೇ ಅದು ನಡೆಯಬೇಕೆಂದಲ್ಲ. ಒಂದು ರೀತಿಯಲ್ಲಿ ದೆಹಲಿಯ ಸುತ್ತಲಿನ ಗಡಿಗಳಲ್ಲಿ ನಡೆಯುತ್ತಿರುವುದು ಆಕ್ಯುಪೈ ವಾಲ್‌ಸ್ಟ್ರೀಟ್ ಮಾದರಿಯ ಚಳವಳಿ. ಅಂದರೆ ಸಾವಿರಾರು (ಇಲ್ಲಿ ಲಕ್ಷಾಂತರ) ಜನರು ತಿಂಗಳುಗಟ್ಟಲೇ ಒಂದೆಡೆ ಕೂತು ಒತ್ತಡ ಹೇರುವ ಮಾದರಿಯದ್ದು. ಅಮೆರಿಕಾದಲ್ಲೂ ಅದು ಸಂಚಲನ ಮೂಡಿಸಿತಾದರೂ, ಯಶಸ್ವಿಯಾಗಲಿಲ್ಲ. ಅಷ್ಟು ದೊಡ್ಡ ಜನಸಂಖ್ಯೆಯಿರದ ಕೆಲವು ದೇಶಗಳಲ್ಲಿ ಈ ಮಾದರಿಯು ಸರ್ಕಾರಗಳನ್ನೇ ಉರುಳಿಸಿಬಿಟ್ಟಿತು. ಆದರೆ 130 ಕೋಟಿ ಜನರಿರುವ ಭಾರತದ, ಘಾತುಕ ಬಹುಮತ ಹೊಂದಿರುವ ಪಕ್ಷದ ಸರ್ಕಾರವು ಇದನ್ನು ನೋಡುತ್ತಾ ಸುಮ್ಮನಿರಬಲ್ಲದು. ಹಾಗಾಗಿಯೇ ಇದು ಬಹಳ ಕಾಲ ಹೀಗೆಯೇ ನಡೆಯದು ಎನಿಸಿದಾಗ ಸಂಯುಕ್ತ ಕಿಸಾನ್ ಮೋರ್ಚಾದ ನಾಯಕರು ಜಿಲ್ಲಾಮಟ್ಟದ ಮಹಾಪಂಚಾಯಿತಿಗಳ ಮೇಲೆ ಕೇಂದ್ರೀಕರಿಸಿದ್ದಾರೆ.

ಕರ್ನಾಟಕದ ಸಂದರ್ಭದಲ್ಲಿ ಏಕಕಾಲದಲ್ಲಿ ರೈತರಲ್ಲಿ ಜಾಗೃತಿಯನ್ನೂ, ನಗರ ಪ್ರದೇಶದವರಲ್ಲಿ ನ್ಯಾಯಪ್ರಜ್ಞೆಯನ್ನೂ, ಸರ್ಕಾರದ ಮೇಲೆ ಒತ್ತಡವನ್ನೂ ಸೃಷ್ಟಿಸುವ ಬೇರೆ ಮಾದರಿಯನ್ನು ಹುಡುಕಿಕೊಳ್ಳಬೇಕಿದೆ. ಒಂದು ವೇಳೆ ಆ ಮಾದರಿಯನ್ನು ಈಗಿಂದೀಗಲೇ ಅನುಷ್ಠಾನಕ್ಕೆ ತರುವುದು ಸಾಧ್ಯವಿಲ್ಲವಾದರೆ ಅದಕ್ಕೆ ಮೂರ್‍ನಾಲ್ಕು ತಿಂಗಳ ತಯಾರಿಗೂ ಸಿದ್ಧರಾಗಬೇಕು.

ಹಾಗಾಗುತ್ತಿಲ್ಲ; ಬದಲಿಗೆ ಒಂದಾದ ಮೇಲೆ ಒಂದು ಪ್ರತಿಭಟನೆಗಳು ನಡೆಯುತ್ತಿವೆ. ಜನರು ತಮ್ಮಂತೆ ತಾವೇ ಬೀದಿಗಿಳಿಯದ ಸಂದರ್ಭದಲ್ಲಿ ಇವು ಸಂಘಟನೆಗಳ ಕಾರ್ಯಕರ್ತರನ್ನು ಸುಸ್ತಾಗಿಸುತ್ತವೆ. ಏಕೆಂದರೆ ಹಲವು ಸಂಘಟನೆಗಳ ಒಕ್ಕೂಟದಡಿ ಕೆಲಸ ಮಾಡುವಾಗ ಒಂದೊಂದು ಕಾರ್ಯಕ್ರಮಕ್ಕೂ ಮಧ್ಯೆ ಹಲವು ಸುತ್ತಿನ ಮೀಟಿಂಗ್‌ಗಳೂ ನಡೆಯಬೇಕಾಗುತ್ತದೆ. ಇದರಿಂದ ಅಸಾಧ್ಯ ಟೈಂಟೇಬಲ್‌ಗಳು ತಯಾರಾಗಿ, ನಿಧಾನಕ್ಕೆ ಹೋರಾಟಗಳು ರಿಚ್ಯುಯಲ್‌ಗಳಾಗಿಬಿಟ್ಟು ಸಾಮಾಜಿಕ ಪರಿಣಾಮ ಕಳೆದುಕೊಳ್ಳುತ್ತವೆ. ದೆಹಲಿಯಿಂದ ಕೊಡುವ ಎಲ್ಲಾ ಕರೆಗಳಿಗೆ ಇಲ್ಲಿ ಓಗೊಡಬೇಕಿರುವುದಿಲ್ಲ. ತಮ್ಮಂತೆ ತಾವೇ ನಿರಂತರವಾಗಿ ಚಳವಳಿಯಲ್ಲಿರುವವರಿಗೆ ಇಂತಹ ಪ್ರೋಗ್ರಾಂ ಕೊಡುವ ಅಗತ್ಯವಿರಬಹುದು. ಆದರೆ, ಇನ್ನೂ ಜಾಗೃತಿಯ ಹಂತದಲ್ಲೇ ಇರುವ ಪ್ರದೇಶದಲ್ಲೂ ಅದನ್ನು ಮಾಡಲು ಹೊರಟರೆ ದುಸ್ಸಾಧ್ಯದ ಸಂಗತಿ. ಜಾಗೃತಿ ಮೂಡಿಸುವುದು ಎಂದಾಗಲೂ ಅದು ಜಿಲ್ಲಾ ಅಥವಾ ತಾಲೂಕು ಮಟ್ಟದ ಕಾರ್ಯಕ್ರಮಗಳಲ್ಲ. ಏಕೆಂದರೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ಕಾರ್ಯಕರ್ತರಿಗೆ ಸಾಕಷ್ಟು ಸಮಯ ಹಿಡಿಯುತ್ತದೆ. ಜೊತೆಗೆ ಕಾರ್ಯಕರ್ತರೇ ಹೆಚ್ಚು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಅಂದರೆ ಈಗಾಗಲೇ ಅರಿವಿರುವವರು, ಸಂಘಟನೆಗಳ ಜೊತೆಗಿರುವವರು ಬರುತ್ತಾರೆ. ಆದರೆ ಈಗಲೂ ಯಾರಿಗೆ ಮನವರಿಕೆ ಆಗಿಲ್ಲವೋ ಅವರುಗಳು ಅಥವಾ ಬೇಲಿಯ ಮೇಲೆ ಕೂತಿರುವವರನ್ನು ಜೊತೆಗೆ ಕರೆತರಬೇಕೆಂದರೆ ಇನ್ನೂ ತಳಮಟ್ಟದ ಪ್ರಯತ್ನ ಕೇಳುತ್ತದೆ. ಅದಕ್ಕೆ ಸಮಯವಿಲ್ಲದಂತೆ ಆಗುತ್ತದೆ.

ಪಂಜಾಬಿನ ಹೋರಾಟವು ಈ ಪ್ರಮಾಣದಲ್ಲಿ ಬೆಳೆಯಲು ಇನ್ನೂ ಒಂದು ಕಾರಣವಿದೆ. ಅದು ಪಂಜಾಬಿನ ರೈತರ ಹೋರಾಟವಾಗಿಲ್ಲ. ಇಡೀ ಪಂಜಾಬಿನ ಹೋರಾಟವಾಗಿದೆ. ಅಲ್ಲಿನ ಆತ್ಮವಾಗಿರುವ ಕೃಷಿಯನ್ನು ನಾಶಗೈಯ್ಯುವ ನೀತಿಗಳನ್ನು ಪಾಲಿಸುತ್ತಿರುವ ಸರ್ಕಾರವು ಇಬ್ಬರು ಉದ್ದಿಮೆಪತಿಗಳ ಹಿತಾಸಕ್ತಿಯನ್ನು ಕಾಪಾಡಲೆಂದೇ ಅದನ್ನು ಮಾಡುತ್ತಿದೆ ಎಂದು ಪಂಜಾಬಿಗಳು ಭಾವಿಸಿದ್ದಾರೆ. ಹಾಗಾಗಿಯೇ ಇಡೀ ಪಂಜಾಬಿನ ಅಂಬಾನಿ ಮತ್ತು ಅದಾನಿಗೆ ಸಂಬಂಧಿಸಿದ ಶೋರೂಮುಗಳು, ಪೆಟ್ರೋಲ್ ಬಂಕ್‌ಗಳ ಮುಂದೆ ಅದೆಷ್ಟೋ ಸಾವಿರ ಪ್ರತಿಭಟನೆಗಳು ನಡೆದಿವೆ. ಒಕ್ಕೂಟ ಸರ್ಕಾರವು ಪಂಜಾಬಿಗೆ ಅನ್ಯಾಯ ಮಾಡುತ್ತಿದೆ ಎಂದು ಅಲ್ಲಿನ ಎಲ್ಲಾ ಜನವಿಭಾಗಗಳಲ್ಲೂ ಅಸಮಾಧಾನ ಹೆಚ್ಚುತ್ತಿದೆ. ಸಿಖ್ ಸಮುದಾಯವು ಒಂದು ಸಮುದಾಯವಾಗಿ ಅನ್ಯಾಯ, ತಾರತಮ್ಯದ ವಿರುದ್ಧದ ಸಿಟ್ಟನ್ನು ಪ್ರದರ್ಶಿಸುತ್ತಿರುವುದೂ ಸಹಾ ಚಳವಳಿಗೆ ಬೆಂಬಲವನ್ನು ಅಗಾಧವಾಗಿಸಿದೆ. ಒಕ್ಕೂಟ ಸರ್ಕಾರವು ಕೆಲವು ಉದ್ದಿಮೆಪತಿಗಳ ಏಜೆಂಟಾಗಿ ದೇಶದ ವಿವಿಧ ಪ್ರದೇಶಗಳ ಜನರನ್ನು ಹಿಂಡುತ್ತಿರುವ ಈ ಸಂದರ್ಭದಲ್ಲಿ ಕರ್ನಾಟಕವು ಮಾತ್ರ ಅದರಿಂದ ಹೊರತಾಗಿದೆಯೇನು? ಹಾಗಾಗಿ ಸಮಸ್ತ ಕರ್ನಾಟಕದ ಆಂದೋಲನವಾಗಲು ಅಗತ್ಯವಿರುವ ಕಥನ, ಚೌಕಟ್ಟನ್ನು ಕಟ್ಟುವ ಹೊಣೆಗಾರಿಕೆಯೂ ಮುಂಚೂಣಿ ತಂಡದ ಮೇಲಿದೆ.

ಸಾರಾಂಶದಲ್ಲಿ ಕರ್ನಾಟಕದ್ದೇ ಮಾದರಿಯ ಈ ಸಂದರ್ಭಕ್ಕೆ ಹೊಂದಿಕೊಳ್ಳುವ ಹಕ್ಕೊತ್ತಾಯಗಳು, ಜಾಗೃತಿ ಕಾರ್ಯಕ್ರಮಗಳು ಮತ್ತು ಹೋರಾಟದ ಸ್ವರೂಪವನ್ನು ನಿರ್ಧರಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ. ಇವೆಲ್ಲವೂ ಆತ್ಮಾವಲೋಕನದ ಭಾಗವೇ ಹೊರತು, ಯಾವುದಾದರೂ ನಿರ್ದಿಷ್ಟ ಗುಂಪು, ಸಂಘಟನೆ ಅಥವಾ ವ್ಯಕ್ತಿಗಳ ಕುರಿತ ವಿಮರ್ಶೆ ಅಲ್ಲ ಎಂಬುದನ್ನು ಹೇಳಬಯಸುತ್ತೇನೆ.


ಇದನ್ನೂ ಓದಿ: ಖಾಸಗೀಕರಣ ವಿರೋಧಿ ದಿನಕ್ಕೆ ರೈತರು, ಕಾರ್ಮಿಕರು ಒಂದಾಗಿದ್ದಾರೆ- ಸಂಯುಕ್ತ ಕಿಸಾನ್ ಮೋರ್ಚಾ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...