eಶಿವಮೊಗ್ಗ ಬಿಜೆಪಿ ಪಕ್ಷದ ಭದ್ರಕೋಟೆ. ರಾಜ್ಯದ ಅಧಿಕಾರದ ಕೇಂದ್ರ. ಆದರೆ, ಭದ್ರಾವತಿ ತಾಲೂಕು ಮಾತ್ರ ಇದಕ್ಕೆ ಅಪವಾದ. ರಾಜ್ಯದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ತವರು ಜಿಲ್ಲೆಯಲ್ಲಾದರೂ, ಯಡಿಯೂರಪ್ಪನವರೇ ಬಂದು ಭರ್ಜರಿ ಪ್ರಚಾರ ಮಾಡಿದರೂ ಸಹ ವಿಧಾನಸಭಾ ಚುನಾವಣೆಯಲ್ಲಿ ಇಲ್ಲಿನ ಬಿಜೆಪಿ ಅಭ್ಯರ್ಥಿಯ ಮತ ಈವರೆಗೆ 15 ಸಾವಿರವನ್ನೂ ಮೀರಿದ ಇತಿಹಾಸವಿಲ್ಲ. ಆ ಮಟ್ಟಿಗೆ ಭದ್ರಾವತಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಇಲ್ಲಿ ಏನಿದ್ದರೂ ಸಂಗಮೇಶ್ ವರ್ಸಸ್ ಅಪ್ಪಾಜಿ ಗೌಡ ನಡುವೆಯೇ ನೇರಾ ನೇರ ಸ್ಫರ್ಧೆಯಿತ್ತು.
ಆದರೆ, ಇದೀಗ ಜೆಡಿಎಸ್ ಪಕ್ಷದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನರಾಗಿದ್ದಾರೆ. ಹೀಗಾಗಿ ಈಗ ಭದ್ರಾವತಿ ಮಟ್ಟಿಗೆ ಜೆಡಿಎಸ್ ನಾವಿಕನಿಲ್ಲದ ಹಡಗಿನಂತಾಗಿದ್ದು, ಜೆಡಿಎಸ್ ಕಾರ್ಯಕರ್ತರು ಕಂಗಾಲಾಗಿದ್ದಾರೆ. ಹಾಲಿ ಕಾಂಗ್ರೆಸ್ ಶಾಸಕ ಸಂಗಮೇಶ್ ಪಾಲಿಗೆ ರಾಜಕೀಯ ಎದುರಾಳಿಯೇ ಇಲ್ಲದಂತಾಗಿದೆ. ಈ ಪರಿಸ್ಥಿಯ ಲಾಭ ಪಡೆಯಲು ಮುಂದಾಗಿರುವ ಬಿಜೆಪಿ ಭದ್ರಾವತಿಯಲ್ಲಿ ತನ್ನ ಮಾಮೂಲಿ ತಂತ್ರಗಾರಿಕೆ ಹೂಡುವ ಮೂಲಕ ಸಂಗಮೇಶ್‌ಗೆ ಪರ್ಯಾಯವಾಗಿ ಬಿಂಬಿಸಿಕೊಳ್ಳುವ ಯತ್ನದಲ್ಲಿದೆ.
ಇಂತಹ ಯತ್ನಗಳಲ್ಲೊಂದೆ ಭದ್ರಾವತಿಯಲ್ಲಿ ಇತ್ತೀಚೆಗೆ ಕಬಡ್ಡಿ ಅಂಗಳದಲ್ಲಿ ನಡೆದ ಗಲಾಟೆ. ಬಿ.ವೈ ವಿಜಯೇಂದ್ರ ಭದ್ರಾವತಿ ಪಕ್ಷ ಸಂಘಟನೆಯ ಕಾರಣಕ್ಕಾಗಿ ಭದ್ರಾವತಿ ನಗರದಲ್ಲಿ ಕಾಲಿಡುತ್ತಿದ್ದಂತೆ, ಇಂತಹದ್ದೊಂದು ಗಲಾಟೆ ನಡೆದಿರುವುದು ಸಹ ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಈ ನಡುವೆ ಭದ್ರಾವತಿ ಶಾಸಕ ಇದೇ ವಿಚಾರವಾಗಿ ಸದನದಲ್ಲಿ ಶರ್ಟ್ ಬಿಚ್ಚಿ ಪ್ರತಿಭಟನೆ ನಡೆಸಿದ್ದು, ಸದನದಿಂದ ಅಮಾನತುಗೊಂಡಿದ್ದು ಇಡೀ ರಾಜ್ಯದ ಗಮನ ಸೆಳೆದಿತ್ತು. ಹಾಗಾದರೆ ಏನಿದು ಗಲಾಟೆ?
ಭದ್ರಾವತಿ ಕಬಡ್ಡಿ ಅಂಗಳದಲ್ಲಿ ನಡೆದದ್ದೇನು?
ಭದ್ರಾವತಿಯಲ್ಲಿ ಪ್ರತಿ ವರ್ಷ ಮಾಜಿ ಶಾಸಕ ಅಪ್ಪಾಜಿ ಗೌಡ ಕ್ರಿಕೆಟ್ ಟೂರ್ನಮೆಂಟ್ ಆಯೋಜನೆ ಮಾಡಿದರೆ, ಹಾಲಿ ಶಾಸಕ ಸಂಗಮೇಶ್ ಕಬಡ್ಡಿ ಟೂರ್ನಮೆಂಟ್ ಆಯೋಜನೆ ಮಾಡುವುದು ವಾಡಿಕೆ. ರಾಜ್ಯ ಮಟ್ಟದ ಈ ಟೂರ್ನಿಗಳಲ್ಲಿ ಭಾಗವಹಿಸಲು ರಾಜ್ಯದ ನಾನಾ ಮೂಲೆಗಳಿಂದ ಕ್ರೀಡಾಪಟುಗಳು ಭದ್ರಾವತಿಗೆ ಆಗಮಿಸುತ್ತಾರೆ. ಗೆದ್ದವರಿಗೆ ಆಕರ್ಷಕ ಬಹುಮಾನಗಳೂ ಉಂಟು.
ಅದಂರತೆ ನಗರದ ಕನಕ ಮಂಟಪ ಆಟದ ಮೈದಾನದಲ್ಲಿ ಈ ಭಾರಿ ಫೆಬ್ರವರಿ 28ರಂದು ಶಾಸಕ ಸಂಗಮೇಶ್ ನೇತೃತ್ವದಲ್ಲಿ ಕಬಡ್ಡಿ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಈ ಕ್ರೀಡಾಕೂಟದಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಧರ್ಮಪ್ರಸಾದ್ ಅವರ ತಂಡವೂ ಭಾಗವಹಿಸಿತ್ತು. ಗಲಭೆಗೆ ಇಷ್ಟು ಮಾತ್ರದ ಕಾರಣ ಸಾಕಾಗಿತ್ತು.
ಶಾಸಕ ಸಂಗಮೇಶ್ ಅವರ ತಂಡ ಲೀಗ್ ಹಂತದಲ್ಲೇ ಸೋಲನುಭವಿಸಿ ಕೂಟದಿಂದ ಹೊರನಡೆದಿತ್ತು. ಫೈನಲ್ ಪಂದ್ಯದಲ್ಲಿ ಸ್ಥಳೀಯ ವ್ಯಕ್ತಿ ಉಮೇಶ್ ನೇತೃತ್ವದ ತಂಡ ಹಾಗೂ ಧರ್ಮಪ್ರಸಾದ್ ನೇತೃತ್ವದ ತಂಡ ಸೆಣಸಿದ್ದರೂ ಗೆದ್ದದ್ದು ಮಾತ್ರ ಉಮೇಶ್ ತಂಡ. ಆದರೆ, ರನ್ನರ್ ಅಪ್ ಪ್ರಶಸ್ತಿ ಪಡೆದಿದ್ದ ಧರ್ಮಪ್ರಸಾದ್ ತಂಡ ಆಟದ ಮೈದಾನದಲ್ಲೆ ಪಟಾಕಿ ಹಚ್ಚಿ ಸಂಭ್ರಮಿಸಲು ಮುಂದಾಗಿತ್ತು.
ಅಸಲಿಗೆ ಕಬಡ್ಡಿ ಕೂಟಕ್ಕಾಗಿ 10 ಲಕ್ಷ ಖರ್ಚು ಮಾಡಿ ಸಿಂಥೆಟಿಕ್ ಮ್ಯಾಟ್ ಹಾಕಲಾಗಿತ್ತು. ಹೀಗಾಗಿ ಇಲ್ಲಿ ಪಟಾಕಿ ಸಿಡಿಸಬೇಡಿ ಎಂದು ಶಾಸಕ ಸಂಗಮೇಶ್ ಮಗ ಬಸವೇಶ್ ತಾಕೀತು ಮಾಡಿದ್ದಾರೆ. ಆದರೆ, ಗೆದ್ದ ಹುಮ್ಮಸ್ಸಿನಲ್ಲಿದ್ದ ಧರ್ಮಪ್ರಸಾದ್ ತಂಡ ಈ ಮಾತನ್ನು ಕೇಳುವ ಗೋಜಿಗೆ ಹೋಗಿಲ್ಲ. ಪರಿಣಾಮ ಸ್ಥಳದಲ್ಲಿ ಮಾತಿಗೆ ಮಾತು ಬೆಳೆದಿದೆ. ಕೊನೆಗೆ ತಾಳ್ಮೆ ಕಳೆದುಕೊಂಡ ಶಾಸಕರ ಮಗ ಬಸವೇಶ್ ಬಿಜೆಪಿ ಬೆಂಬಲಿತರ ಮೇಲೆ ಕೈ ಮಾಡಿದ್ದು ನಿಜ. ಸಂಗಮೇಶ್ ಹಾಗೂ ಧರ್ಮಪ್ರಸಾದ್ ಬಣಗಳ ನಡುವೆ ತಳ್ಳಾಟ ನೂಕಾಟವಾಗಿ, ಅದು ಕೈಕೈ ಮಿಲಾಯಿಸುವ ಹಂತಕ್ಕೂ ತಲುಪಿತು.
ಈ ವೇಳೆ ಬಿಜೆಪಿ ಬೆಂಬಲಿತರೂ ಸಹ ಪ್ರತಿ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಗಲಾಟೆಯಾಗುತ್ತಿದ್ದಂತೆ ಸ್ಥಳದಲ್ಲಿ ಜೈ ಶ್ರೀರಾಮ್, ಭಾರತ್ ಮಾತಾಕಿ ಜೈ ಎಂಬ ಘೋಷಣೆಗಳನ್ನು ಕೂಗಿದ್ದಾರೆ. ಹೀಗೆ ಪಟಾಕಿ ಸಿಡಿಸುವ ವಿಚಾರಕ್ಕೆ ಆರಂಭವಾದ ಜಗಳ ಕೊನೆಗೆ ಜೈ ಶ್ರೀರಾಮ್ ಘೋಷಣೆ ಕೂಗಿದ್ದಕ್ಕೆ ಶಾಸಕರ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂಬಲ್ಲಿಗೆ ಬಂದು ನಿಂತಿದೆ. ಅಥವಾ ವಿಷಯವನ್ನು ತಿರುಚುವಲ್ಲಿ ಬಿಜೆಪಿ ಯಶಸ್ವಿಯಾಗಿದೆ ಎಂದರೆ ತಪ್ಪಾಗಲಾರದು.
ಗಲಾಟೆ ನಡೆಯುತ್ತಿದ್ದಂತೆ ಹಳೆ ನಗರ ಪೊಲೀಸ್ ಠಾಣೆಗೆ ತೆರಳಿದ್ದ ಧರ್ಮಪ್ರಸಾದ್ ಬಣ, ಶಾಸಕರ ಮಗ ಬಸವ ಹಾಗೂ ಆತನ ಬೆಂಬಲಿಗರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡದ್ದಾರೆ. ಸಂಗಮೇಶ್ ಬಣದವರೂ ಸಹ ಪ್ರತಿದೂರು ನೀಡಿದ್ದಾರೆ. ಕಾಂಗ್ರೆಸ್ ಮೇಲೆ 3 ಹಾಗೂ ಬಿಜೆಪಿ ವಿರುದ್ಧ 2 ಪ್ರಕರಣಗಳು ದಾಖಲಾಗಿವೆ. ಈ ನಡುವೆ ಶಾಸಕರ ಮಗ ಬಸವ ಆಟಗಾರರ ಮೇಲೆ ಕೈ ಮಾಡುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದ್ದು ಜಿಲ್ಲೆಯಾದ್ಯಂತ ವೈರಲ್ ಆಗಿದೆ. ಇದನ್ನು ಆಧಾರವಾಗಿಟ್ಟುಕೊಂಡು ಆತನ ವಿರುದ್ಧ ಸೆಕ್ಷನ್ 307 ಕೊಲೆ ಯತ್ನ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಗಿದೆ. ಇದಲ್ಲದೆ, 15 ಜನ ಸಂಗಮೇಶ್ ಬೆಂಬಲಿಗರನ್ನು ಬಂಧಿಸಲಾಗಿದೆ.
ಸದನದಲ್ಲಿ ಶಾಸಕ ಸಂಗಮೇಶ್ ಹೈ ಡ್ರಾಮಾ
ತಮ್ಮ ಮಗ ಬಸವನ ಮೇಲೆ ನಾನ್ ಬೇಲಬಲ್ ಕೇಸ್ ಹಾಕಿ ಜೈಲಿಗೆ ಕಳುಹಿಸುತ್ತಿದ್ದಂತೆ ಶಾಸಕ ಸಂಗಮೇಶ್ ವ್ಯಗ್ರರಾಗಿದ್ದಾರೆ. ಮುಂದಿನ 30 ದಿನ ಆತನಿಗೆ ಬೇಲ್ ಸಿಗುವುದು ಅಸಾಧ್ಯವಾಗಿದ್ದು, ಇದೀಗ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಈ ವಿಚಾರ ಸಾಮಾನ್ಯವಾಗಿ ಸಂಗಮೇಶ್ ಆಕ್ರೋಶಕ್ಕೆ ಕಾರಣವಾಗಿದೆ.
ಏಕೆಂದರೆ ಭದ್ರಾವತಿ ಯಾವಾಗಲೂ ಸೂಕ್ಷ್ಮ ಪ್ರದೇಶಗಳಲ್ಲೊಂದು. ಅಪ್ಪಾಜಿ-ಸಂಗಮೇಶ್ ಬೆಂಬಲಿಗರ ನಡುವೆ ಆಗಾಗ್ಗೆ ಇಂತಹ ಗಲಾಟೆಗಳಾಗುವುದು ಮಾಮೂಲಿ. ಆದರೆ, ಅದಕ್ಕೊಂದು ನಿಯಂತ್ರಣವಿತ್ತು. ಯಾವ ಗಲಾಟೆಯೂ ತೀರಾ ವೀಪರೀತಕ್ಕೆ ಹೋದ ಇತಿಹಾಸವೇ ಇಲ್ಲ. ಇನ್ನು ಧರ್ಮವನ್ನು ಮುಂದಿಟ್ಟು ಜನರನ್ನು ಎತ್ತಿಕಟ್ಟುವ ಕೆಲಸಕ್ಕೆ ಇಬ್ಬರೂ ಮುಂದಾಗಿರಲಿಲ್ಲ. ಏಕೆಂದರೆ ಭದ್ರಾವತಿ ಎಲ್ಲಾ ಧರ್ಮ ಹಾಗೂ ಹಲವು ಜಾತಿಗಳ ಜನ ಒಟ್ಟಿಗೆ ವಾಸಿಸುವ ನಗರ.

ಆದರೆ, ಇದೇ ಮೊದಲ ಬಾರಿಗೆ ಬಿಜೆಪಿ ಜೈ ಶ್ರೀರಾಮ್ ಘೋಷಣೆ ಕೂಗಿದ್ದಕ್ಕೆ ಹಲ್ಲೆ ಮಾಡಲಾಗಿದೆ ಎಂದು ದೂರಿದೆ. ಅಲ್ಲದೆ, ಶಾಸಕರ ಮಗನನ್ನು ಜೈಲಿಗೆ ಕಳುಹಿಸಲಾಗಿದೆ. ಪರಿಣಾಮ ಈ ವಿಚಾರ ರಾಜಕೀಯವಾಗಿ ದೊಡ್ಡ ತಿರುವು ಪಡೆದುಕೊಳ್ಳುತ್ತಿದೆ. ಇಡೀ ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿಯೇತರ ಶಾಸಕ ಇರುವುದು ಭದ್ರಾವತಿಯಲ್ಲೇ. ಹೀಗಾಗಿ ಭದ್ರಾವತಿಯಲ್ಲೂ ಬಿಜೆಪಿ ಜಂಡಾ ಹಾರಿಸಲು ಕುತಂತ್ರ ನಡೆಸಲಾಗುತ್ತಿದೆ, ನಮ್ಮ ಮೇಲೆ ವಿನಾಃಕಾರಣ ಕೇಸು ದಾಖಲಿಸಲಾಗುತ್ತಿದೆ ಎಂಬುದು ಶಾಸಕ ಸಂಗಮೇಶ್ ಆರೋಪ.
ಇದೇ ಕಾರಣಕ್ಕೆ ಅವರು ಇತ್ತೀಚೆಗೆ ಸದನದಲ್ಲೂ ಶರ್ಟ್ ಬಿಚ್ಚಿ ಪ್ರತಿಭಟಿಸಿದ್ದರು. ಅದೇ ಕಾರಣಕ್ಕೆ ಅವರನ್ನು ಇದೀಗ ಸದನದಿಂದಲೇ ಅಮಾನತು ಮಾಡಲಾಗಿದೆ. ಅಲ್ಲದೆ, ಎಲ್ಲಾ ಪ್ರಮುಖ ಕಾಂಗ್ರೆಸ್ ನಾಯಕರು ಶಿವಮೊಗ್ಗಕ್ಕೆ ತೆರಳಿ ಕಾಂಗ್ರೆಸ್ ಚಲೋ ಚಳುವಳಿಯನ್ನೂ ನಡೆಸಿದ್ದರು. ಬಿಜೆಪಿ ವಿರುದ್ಧ ಹರಿಹಾಯ್ದಿದ್ದರು. ಆದರೆ, ಈ ಬಗ್ಗೆ ಸರ್ಕಾರ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಹೀಗಾಗಿ ಈ ಪ್ರಕರಣ ಮುಂದೆ ಯಾವ ತಿರುವನ್ನು ಪಡೆಯಲಿದೆ? ಎಂಬುದನ್ನು ಕಾದು ನೋಡಬೇಕಿದೆ.
ಫೈನಲ್ ಪಂದ್ಯದ ಹಿಂದಿನ ದಿನವೇ ನಡೆದಿತ್ತು ಸಣ್ಣ ಕಿರಿಕ್
ಇದಿಷ್ಟು ಘಟನೆಗೆ ಸಂಬಂಧಿಸಿದ್ದಾದರೆ, ಇನ್ನೂ ಘಟನೆಯ ಹಿಂದಿನ ದಿನವೇ ಕಬ್ಬಡಿ ಆಟದ ಮೈದಾನದಲ್ಲಿ ಎರಡು ಗುಂಪುಗಳ ನಡುವೆ ಸಣ್ಣಪುಟ್ಟ ಗಲಾಟೆಗಳಾಗಿದ್ದವು. ಈ ಮಾಹಿತಿ ಪೊಲೀಸ್ ಇಲಾಖೆಗೂ ಗೊತ್ತು. ಹೀಗಾಗಿ ಭದ್ರಾವತಿ ನ್ಯೂ ಟೌನ್ ಸರ್ಕಲ್ ಇನ್ಸ್ಪೆಕ್ಟರ್ ಈ ವಿಚಾರವನ್ನು ಸೂಕ್ಷ್ಮವಾಗಿ ಗಮನಿಸಿ ಆಟದ ಮೈದಾನದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಬೇಕಾಗಿತ್ತು. ಆದರೆ, ಅವರು ಸಿಎಂ ಯಡಿಯೂರಪ್ಪನವರ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕಾರಣ ಈ ವಿಚಾರವನ್ನು ಗಮನಿಸುವಲ್ಲಿ ಎಡವಿದ್ದಾರೆ ಎನ್ನಲಾಗಿದೆ.


