ಸೈನ್ಯದಲ್ಲಿ ಶಾಶ್ವತ ಹುದ್ದೆ (ಪರ್ಮನೆಂಟ್ ಕಮಿಷನ್-ಅಂದರೆ ನಿವೃತ್ತಿ ವಯಸ್ಸಿನವರೆಗೂ ಸೈನ್ಯದಲ್ಲಿ ಸೇವೆ ಮಾಡುವ ಅವಕಾಶ) ಪಡೆಯಲು ಮಹಿಳೆಯರಿಗೆ ಅನುಸರಿಸುತ್ತಿರುವ ವೈದ್ಯಕೀಯ ಫಿಟ್‌ನೆಸ್ ಅವಶ್ಯಕತೆ “ಅನಿಯಂತ್ರಿತ”ವಾಗಿದೆ ಎಂದು ಸುಪ್ರೀಂ ಕೋರ್ಟ್ ಇಂದು ಹೇಳಿದೆ.
ಸೈನ್ಯದಲ್ಲಿ ಶಾಶ್ವತ ಹುದ್ದೆಗಾಗಿ ಸುಮಾರು 80 ಮಹಿಳಾ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿಗಳ ಬಗ್ಗೆ ಇಂದು ತೀರ್ಪು ಪ್ರಕಟಿಸಿದೆ.
“ನಮ್ಮ ಸಮಾಜದ ರಚನೆಯನ್ನು ಪುರುಷರಿಂದ, ಪುರುಷರಿಗಾಗಿ ರಚಿಸಲಾಗಿದೆ ಎಂದು ನಾವು ಇಲ್ಲಿ ಗುರುತಿಸಬೇಕು” ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸೈನ್ಯದ ಆಯ್ದ ವಾರ್ಷಿಕ ಗೌಪ್ಯ ವರದಿ (ಎಸಿಆರ್) ಮೌಲ್ಯಮಾಪನ ಮತ್ತು ವೈದ್ಯಕೀಯ ಫಿಟ್‌ನೆಸ್ ಮಾನದಂಡವನ್ನು ತಡವಾಗಿ ಅನುಷ್ಠಾನಗೊಳಿಸುವುದರಿಂದ ಮಹಿಳಾ ಅಧಿಕಾರಿಗಳ ವಿರುದ್ಧ ತಾರತಮ್ಯ ಕಂಡು ಬಂದಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: ತ್ರಿವಳಿ ಕೊಲೆ ಪ್ರಕರಣ: ಹೆಂಡತಿ, ಮಕ್ಕಳನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಬಂಧನ
“ಮೌಲ್ಯಮಾಪನದ ಮಾದರಿಯು ಎಸ್‌ಎಸ್‌ಸಿ (ಕಿರು ಸೇವಾ ಅವಧಿ) ಮಹಿಳಾ ಅಧಿಕಾರಿಗಳಿಗೆ ಆರ್ಥಿಕ ಮತ್ತು ಮಾನಸಿಕ ಹಾನಿಯನ್ನುಂಟು ಮಾಡುತ್ತದೆ” ಎಂದು ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಎಂ.ಆರ್. ಶಾ ಅವರಿದ್ದ ಪೀಠ ಹೇಳಿದೆ.
ಈ ತಾರತಮ್ಯವನ್ನು ಹೋಗಲಾಡಿಸಬೇಕು ಎಂದು ತೀರ್ಪು ಆದೇಶಿಸಿದೆ ಎಂಬುದಾಗಿ ಎನ್‌ಡಿಟಿವಿ ವರದಿ ಮಾಡಿದೆ.
ನ್ಯಾಯಾಲಯದ ಹಿಂದಿನ ತೀರ್ಪನ್ನು ಪಾಲಿಸಲಿಲ್ಲ ಎಂದು ಆರೋಪಕ್ಕೆ ಒಳಗಾದವರ ವಿರುದ್ಧ ಕಂಟೆಂಪ್ಟ್ ಕ್ರಮ ಕೈಗೊಳ್ಳಬೇಕೆಂದು ಮಹಿಳಾ ಅಧಿಕಾರಿಗಳು ಬಯಸಿದ್ದರು.
“ನ್ಯಾಯಾಲಯದ ಎದುರು ಬಂದಿರುವ ಹಲವಾರು ಮಹಿಳಾ ಅಧಿಕಾರಿಗಳು ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಹಲವಾರು ಸಾಗರೋತ್ತರ ಕಾರ್ಯಯೋಜನೆಗಳನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ” ಎಂದು ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದರು.
“ಕ್ರೀಡಾಕೂಟಗಳಲ್ಲಿ ಉತ್ತಮ ಸಾಧನೆ ತೋರಿದವರನ್ನು ನಿರ್ಲಕ್ಷಿಸಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ಮಹಿಳೆಯರ ಸಾಧನೆಗಳ ವಿವರವಾದ ಪಟ್ಟಿಯನ್ನು ತೀರ್ಪಿನಲ್ಲಿ ನೀಡಲಾಗಿದೆ. ಆಯ್ಕೆಗಿಂತ ಮಂಡಳಿಯು ನಿರಾಕರಣೆಗಾಗಿ ಕುಳಿತಿದೆ ಎಂದು ತೋರುತ್ತಿದೆ” ಎಂದು ಪೀಠ ಅಭಿಪ್ರಾಯ ಪಟ್ಟಿದೆ.
ಇದನ್ನೂ ಓದಿ: ಹೊರರಾಜ್ಯ ಪ್ರಯಾಣಿಕರಿಗೆ ಆರ್‌ಟಿ-ಪಿಸಿಆರ್ ಪರೀಕ್ಷೆ ಕಡ್ಡಾಯ: ಸಚಿವ ಸುಧಾಕರ್
ಸುಪ್ರೀಂ ಕೋರ್ಟ್ 2020 ರ ಫೆಬ್ರವರಿಯ ಮಹತ್ವದ ತೀರ್ಪಿನಲ್ಲಿ, ಸೈನ್ಯದ ಮಹಿಳಾ ಅಧಿಕಾರಿಗಳಿಗೆ ಪುರುಷ ಅಧಿಕಾರಿಗಳಿಗೆ ಸಮನಾಗಿ ಕಮಾಂಡ್ ಹುದ್ದೆಗಳಿಗೆ ಅರ್ಹತೆ ಪಡೆಯಲು ಅವಕಾಶ ನೀಡಿತು. ಇದರ ವಿರುದ್ಧ ಸರ್ಕಾರದ ವಾದಗಳು “ತಾರತಮ್ಯ”, “ಗೊಂದಲ” ಮತ್ತು ಸ್ಟೀರಿಯೊಟೈಪ್ ಗ್ರಹಿಕೆಗಳನ್ನು ಆಧರಿಸಿದೆ ಎಂದು ಸರ್ಕಾರವನ್ನು ಟೀಕಿಸಿತ್ತು. ಅವರ ಸೇವೆಯ ವರ್ಷಗಳನ್ನು ಲೆಕ್ಕಿಸದೆ ಎಲ್ಲಾ ಮಹಿಳೆಯರಿಗೆ ಶಾಶ್ವತ ಹುದ್ದೆ ಲಭ್ಯವಿರುತ್ತದೆ ಎಂದು ನ್ಯಾಯಾಲಯ ಹೇಳಿತ್ತು.
2020ರ ಫೆಬ್ರುವರಿಯಲ್ಲಿ ನೀಡಿದ ತೀರ್ಪನ್ನು ಪಾಲಿಸುವ ಮೂಲಕ ಮಹಿಳಾ ಅಧಿಕಾರಿಗಳಿಗೆ ನ್ಯಾಯ ಒದಗಿಸಬೇಕು ಇಂದು ಸುಪ್ರೀಂಕೋರ್ಟ್ ಹೇಳಿದೆ.
ಭಾರತೀಯ ವಾಯುಪಡೆ ಮತ್ತು ಭಾರತೀಯ ನೌಕಾಪಡೆ ಈಗಾಗಲೇ ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಹುದ್ದೆಯನ್ನು ನೀಡಿವೆ, ಏಕೆಂದರೆ ಎರಡೂ ವಿಭಾಗಗಳು, ಮಹಿಳೆಯರಿಗಾಗಿ ಕೆಲವು ಯುದ್ಧ ಪಾತ್ರಗಳನ್ನು ಮುಕ್ತವಾಗಿರಿಸಿದೆ. ಐಎಎಫ್ ಮಹಿಳೆಯರಿಗೆ ವಾಯು ಮತ್ತು ಭೂ ಸೇನೆಗಳಲ್ಲಿ ಅಧಿಕಾರಿಗಳಾಗಿ ಸೇವೆ ಸಲ್ಲಿಸಲು ಅವಕಾಶ ನೀಡುತ್ತದೆ. ಮಹಿಳಾ ಐಎಎಫ್ ಶಾರ್ಟ್ ಸರ್ವಿಸ್ ಕಮಿಷನ್ ಅಧಿಕಾರಿಗಳು ಹೆಲಿಕಾಪ್ಟರ್, ಸಾರಿಗೆ ವಿಮಾನ ಮತ್ತು ಈಗ ಫೈಟರ್ ಜೆಟ್‌ಗಳನ್ನು ಚಾಲನೆ ಮಾಡುತ್ತಿದ್ದಾರೆ.
ನೌಕಾಪಡೆಯ, ಎಸ್‌ಎಸ್‌ಸಿ ಮೂಲಕ ಸೇರ್ಪಡೆಗೊಂಡ ಮಹಿಳಾ ಅಧಿಕಾರಿಗಳಿಗೆ ಲಾಜಿಸ್ಟಿಕ್ಸ್, ಕಾನೂನು, ವಾಯು ಸಂಚಾರ ನಿಯಂತ್ರಣ, ಕಡಲ ವಿಚಕ್ಷಣ ಪೈಲಟ್‌ಗಳು ಮತ್ತು ನೌಕಾ ಶಸ್ತ್ರಾಸ್ತ್ರ ಇನ್ಸ್ಪೆಕ್ಟರೇಟ್ ಕೇಡರ್‌ನಲ್ಲಿ ಅವಕಾಶ ನೀಡಲಾಗಿದೆ.
ಇದನ್ನೂ ಓದಿ: ಹೆಲಿಕಾಪ್ಟರ್, ಚಂದ್ರಯಾನ, ಐಪೋನ್, ಕೋಟಿ ಹಣ-ತಮಿಳುನಾಡು ಚುನಾವಣಾ ಅಭ್ಯರ್ಥಿಯ ಪ್ರಣಾಳಿಕೆ!


