“ನಾನು ವಿಜ್ಞಾನದ ಬರಹಗಾರ ಆಗಬೇಕೆಂದುಕೊಂಡಿದ್ದೆ, ವಿಜ್ಞಾನ ಲೇಖಕ ಕಾರ್ಲ್ ಸಗಾನನ ಹಾಗೆ. ಆದರೆ ಕೊನೆಗೆ, ಇದೊಂದು ಪತ್ರವನ್ನಷ್ಟೇ ಬರೆಯಲು ನನ್ನಿಂದಾದದ್ದು”… ಕ್ಯಾಂಪಸ್‌ಗಳಲ್ಲಿನ ಜಾತಿವಾದಿ ಮನಸ್ಥಿತಿ ವಿರೋಧಿಸಿ ಆತ್ಮಹತ್ಯೆ ಪತ್ರ ಬರೆದು ಜನವರಿ 16, 2016ರಂದು ಅಂದರೆ ಐದು ವರ್ಷಗಳ ಹಿಂದೆ ನಮ್ಮನ್ನಗಲಿದ ವಿದ್ಯಾರ್ಥಿ ಹೋರಾಟದ ಧೃವತಾರೆ ರೋಹಿತ್ ವೇಮುಲಾ ಬದುಕನ್ನಾಧರಿಸಿದ ‘ನಕ್ಷತ್ರದ ಧೂಳು’ ನಾಟಕ ಮತ್ತೆ ಪ್ರದರ್ಶನಕ್ಕೆ ಅಣಿಯಾಗಿದೆ.
ಸಾಮಾಜಿಕ ಕಾರ್ಯಕರ್ತರಾದ ಹರ್ಷಕುಮಾರ್ ಕುಗ್ವೆಯವರು ರಚಿಸಿರುವ ‘ನಕ್ಷತ್ರದ ಧೂಳು’ ಮಾರ್ಚ್ 27 ರ ಸಂಜೆ 6:30ಕ್ಕೆ ರಾಯಚೂರಿನ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿದೆ. ಇದು ಜಿಲ್ಲೆಯಲ್ಲಿನ ಮೊದಲ ಏಕವ್ಯಕ್ತಿ ರಂಗಪ್ರಯೋಗವಾಗಿದ್ದು ರಂಗಕಲಾವಿದ ಮತ್ತು ಸಾಮಾಜಿಕ ಹೋರಾಟಗಾರ ಲಕ್ಷ್ಮಣ್ ಮಂಡಲಗೇರ ಪ್ರಸ್ತುತಿಪಡಿಸಲಿದ್ದು, ಪ್ರವೀಣ್ ರೆಡ್ಡಿ ಗುಂಜಹಳ್ಳಿಯವರು ನಿರ್ದೇಶಿಸಿದ್ದಾರೆ. ‘ಸಮುದಾಯ ರಾಯಚೂರು’ ನಾಟಕ ಪ್ರದರ್ಶನ ಆಯೋಜಿಸುತ್ತಿದೆ.
ಅಂಬೇಡ್ಕರ್ ಸ್ಟೂಡೆಂಟ್ಸ್ ಅಸೋಷಿಯೆಷನ್ ಸಂಘಟನೆ ಮೂಲಕ ರೋಹಿತ್ ವೇಮುಲಾ ಯಾರೆಂದು ಪ್ರಪಂಚಕ್ಕೆ ಗೊತ್ತಾಗುವ ಮೊದಲೇ ಆತ ಕಾಶ್ಮೀರದ ಪ್ರಜೆಗಳ ಮೇಲಿನ ಹಲ್ಲೆಯನ್ನು ವಿರೋಧಿಸಿದ್ದ.. “ಕೆಲವರಿಗೆ ಬದುಕೇ ಶಾಪ. ನನಗೆ, ನನ್ನ ಹುಟ್ಟೇ ಮಾರಣಾಂತಿಕ ಆಘಾತ” ಎಂದು ಬರೆದುಕೊಂಡಿದ್ದ ರೋಹಿತ್ ವೇಮುಲಾ ಜಾತಿಯನ್ನು ಕಿತ್ತುಹಾಕಲು ಬಯಸಿದ್ದ. ಏಕೆಂದರೆ ಹುಟ್ಟಿನಿಂದಲೇ ಅವನ್ನನ್ನು ತೀವ್ರವಾಗಿ ಅದು ಕಾಡಿತ್ತು. ಜಾತಿವಿರುದ್ಧ ದನಿಯೆತ್ತಿದಾಗ ಆತನೊಂದಿಗೆ ಇದ್ದದ್ದು ಸಾವಿತ್ರಿಬಾಯಿ ಫುಲೆ ಮತ್ತು ಬಾಬಾಸಾಹೇಬರ ಚಿತ್ರ ಮಾತ್ರ..

ಅಂದು ರೋಹಿತ್ ವೇಮುಲಾನನ್ನು ಜಾತಿ ತೀವ್ರವಾಗಿ ಕಾಡಿತ್ತು. ಆತ ಪಿಎಚ್‌ಡಿ ಮಾಡುತ್ತಿದ್ದಾಗ ಎಬಿವಿಪಿ ಗೂಂಡಾಗಳು ಕಾಡಿದರು. ಬ್ರಾಹ್ಮಣವಾದಿ ವಿವಿಯ ಆಡಳಿತ ಮಂಡಳಿ 7 ತಿಂಗಳು ಆತನಿಗೆ ಫೆಲೋಶಿಪ್ ತಡೆ ಹಿಡಿದಿದ್ದಲ್ಲದೇ ಆತನನ್ನು ಕಾಲೇಜು ಮತ್ತು ಹಾಸ್ಟೆಲ್‌ನಿಂದ ಹೊರಹಾಕಿತ್ತು. ಆತ ಆತ ಅಂಬೇಡ್ಕರ್, ಸಾವಿತ್ರಿ ಬಾಫುಲೆ ಫೋಟೊ ಹಿಡಿದು ಕ್ಯಾಂಪಸ್ಸಿನ ’ವೆಲಿವಾಡ’ದಲ್ಲಿ ಹೋರಾಟ ಆರಂಭಿಸಿದ್ದ. ಆಗ ಬಹುತೇಕರು ಆತನ ಬೆಂಬಲಕ್ಕೆ ನಿಲ್ಲಲಿಲ್ಲ. ಕಾರಣ ಏನೇ ಇರಬಹುದು ಆತ ಒಂಟಿಯಾದ. ಕೊನೆಗೂ ಪ್ರಭುತ್ವ ಆತನನ್ನು ಬಲಿ ತೆಗೆದುಕೊಂಡಿತು.
ತನ್ನ ಕ್ಯಾಂಪಸ್‌ನಲ್ಲಿನ ಡೆಮಾಕ್ರಸಿಯನ್ನಷ್ಟೇ ಬಯಸದ ರೋಹಿತ್ ಇಡೀ ಸಮಾಜದಲ್ಲಿ ಡೆಮಾಕ್ರಸಿಯನ್ನು ಹಂಬಲಿಸಿದ್ದರು. ಅದಕ್ಕಾಗಿಯೇ “ಆಕ್ಟಿವಿಸಂ, ಈ ಗ್ರಹದ ಮೇಲೆ ವಾಸಿಸಲು ನಾನು ಕೊಡುವ ಬಾಡಿಗೆ” ಎಂಬ ಆಲಿಸ್ ವಾಕರ್‌ರವರ ನುಡಿಗಳನ್ನು ತನ್ನ ಫೇಸ್ಬುಕ್ ನಲ್ಲಿ ಹಂಚಿಕೊಂಡಿದ್ದರು. ಸಫ್ದಾರ್ ಹಶ್ಮಿ ಅವರು 1989 ರ ಜನವರಿ 2 ರಂದು ನಾಟಕವನ್ನು ಪ್ರದರ್ಶಿಸುತ್ತಿದ್ದಾಗಲೇ ಅಸಷ್ಣುತೆಯ ಪ್ರತಿಪಾದಕರಿಂದ ಕೊಲ್ಲಲ್ಪಟ್ಟರು. ಈ ಕುರಿತು “ಅಸಹಿಷ್ಣುತೆಯ ಕೋರೆಹಲ್ಲುಗಳಿಗೆ ನಾವು ಸುಂದರ ಕಲಾವಿದ ಮತ್ತು ಧೈರ್ಯಶಾಲಿ ಆತ್ಮವನ್ನು ಕಳೆದುಕೊಂಡಿದ್ದೇವೆ” ಎಂದು ಬರೆದುಕೊಂಡಿದ್ದ ರೋಹಿತ್‌ನನ್ನು ನಾವೀಗ ಕಳೆದುಕೊಂಡಿದ್ದೇವೆ.
ರೋಹಿತ್ ವೇಮುಲಾ ದೈಹಿಕವಾಗಿ ನಮ್ಮಿಂದ ದೂರವಾಗಿದ್ದರೂ ಆತನ ಚೈತನ್ಯವನ್ನು ನಾವು ಉಸಿರಾಡುತ್ತಿದ್ದೇವೆ. ಹಾಗಾಗಿಯೇ ಇಂದು ಅವರ ನಕ್ಷತ್ರದ ಧೂಳು ನಾಟಕ ಮತ್ತೆ ಸದ್ದು ಮಾಡುತ್ತಿದೆ. ಆತನ ವಿಚಾರಗಳೇನು? ಆತನ ಬದುಕಿನ ಗುರಿಯೇನು? ಆತ ವಿಜ್ಞಾನವನ್ನು ಅಷ್ಟರ ಮಟ್ಟಿಗೆ ಹಚ್ಚಿಕೊಂಡಿತ್ತಾದರೂ ಹೇಗೆ? ಈ ಕುರಿತು ತಿಳಿಯಲು ನೀವು ಸಹ ಈ ನಾಟಕ ನೋಡಿ. ರಾಯಚೂರು ಜಿಲ್ಲೆಯ ಪ್ರದರ್ಶನದ ನಂತರ ನಿಮ್ಮ ಜಿಲ್ಲೆ-ತಾಲ್ಲೂಕುಗಳಲ್ಲಿ ನಾಟಕ ಆಯೋಜಿಸಲು ಕಲಾವಿದರಾದ ಲಕ್ಷ್ಮಣ್ ಮಂಡಲಗೇರರವನ್ನು (8762718341) ಸಂಪರ್ಕಿಸಿ.
ಇದನ್ನೂ ಓದಿ: ‘ರೋಹಿತ್ ವೇಮುಲ ಇಂದು ಬದುಕಿದ್ದರೆ……’ : ಅಗಲಿದ ಯುವಚೈತನ್ಯದ ಸ್ಮರಣೆ


