ಕೇಂದ್ರ ಮಾಹಿತಿ ಆಯೋಗದ ವಾರ್ಷಿಕ ವರದಿಯ ಪ್ರಕಾರ, 2019-20ರಲ್ಲಿ ಕೋರಲಾದ ಎಲ್ಲಾ ಮಾಹಿತಿ ಹಕ್ಕು (ಆರ್‌ಟಿಐ) ಮನವಿಗಳಲ್ಲಿ 4.3% ರಷ್ಟು ಮನವಿಗಳಿಗೆ ಕೇಂದ್ರವು ಮಾಹಿತಿ ನೀಡಲು ನಿರಾಕರಿಸಿದೆ. ವರದಿಯ ಮಾಹಿತಿಯ ವಿಶ್ಲೇಷಣೆಯ ಪ್ರಕಾರ, ಈ ನಿರಾಕರಣೆಗಳಲ್ಲಿ ಸುಮಾರು 40% ರಷ್ಟು ಯಾವುದೇ ಮಾನ್ಯ ಕಾರಣವನ್ನು ಒಳಗೊಂಡಿಲ್ಲ. ಇವುಗಳಲ್ಲಿ 90% ರಷ್ಟು ನಿರಾಕರಣೆಗಳು ಪ್ರಧಾನಮಂತ್ರಿಯ ಕಛೇರಿಯಿಂದಲೆ ಆಗಿದೆ.
ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಾರ್ವಜನಿಕ ಅಧಿಕಾರಿಗಳು 2019-20ರಲ್ಲಿ 13.7 ಲಕ್ಷ ಆರ್‌ಟಿಐ ವಿನಂತಿಗಳನ್ನು ಸ್ವೀಕರಿಸಿದ್ದು, ಅದರಲ್ಲಿ 58,634 ವಿನಂತಿಗಳು ವಿವಿಧ ಕಾರಣಗಳಿಗಾಗಿ ತಿರಸ್ಕರಿಸಲ್ಪಟ್ಟಿದೆ. 2005-06ರಲ್ಲಿ 13.9% ವಿನಂತಿಗಳು ತಿರಸ್ಕರಿಸಲ್ಪಟ್ಟಿತ್ತು. 2014-15ರಲ್ಲಿ 8.4% ವಿನಂತಿಗಳು ತಿರಸ್ಕರಿಸಲ್ಪಟ್ಟಿದ್ದವು. 2019-20ರಲ್ಲಿ 4.3% ರಷ್ಟು ತಿರಸ್ಕಾರವಾಗಿವೆ. ಈ ದತ್ತಾಂಶಗಳನ್ನು ಗಮನಿಸಿದಾಗ ತಿರಸ್ಕರಿಸುವ ಪ್ರಮಾಣ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಾ ಬಂದಿದೆ.
ಸಿಐಸಿಯ ವಾರ್ಷಿಕ ವರದಿಯ ಪ್ರಕಾರ ಕೇಂದ್ರ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 2,000 ಕ್ಕೂ ಹೆಚ್ಚು ಸಾರ್ವಜನಿಕ ಅಧಿಕಾರಿಗಳನ್ನು ಒಳಗೊಂಡಿದೆ. ಆರ್‌ಟಿಐ ಕಾರ್ಯಕರ್ತ ವೆಂಕಟೇಶ್ ನಾಯಕ್ ಅವರ ವಿಶ್ಲೇಷಣೆಯ ಪ್ರಕಾರ, “ಕೇಂದ್ರ ಸಚಿವಾಲಯಗಳಿಂದ ಸಿಐಸಿ ಮ್ಯಾಕ್ರೋ-ಡೇಟಾದ ವಿಶ್ಲೇಷಣೆಯು ಗೃಹ ಸಚಿವಾಲಯವು ಅತಿ ಹೆಚ್ಚು ನಿರಾಕರಣೆಗಳನ್ನು ಹೊಂದಿದೆ ಎಂದು ತೋರಿಸುತ್ತದೆ. ಏಕೆಂದರೆ ಅದು ಪಡೆದ ಎಲ್ಲಾ ಆರ್‌ಟಿಐ ಮನವಿಗಳಲ್ಲಿ 20% ಅನ್ನು ತಿರಸ್ಕರಿಸಿದೆ. ಕೃಷಿ ಸಚಿವಾಲಯದ ನಿರಾಕರಣೆ ದರವು 2018-19ರಲ್ಲಿ 2% ರಿಂದ 2019-20ರಲ್ಲಿ 4% ಕ್ಕೆ ಏರಿದೆ. ದೆಹಲಿ ಪೊಲೀಸರು ಮತ್ತು ಸೇನಾ ಇಲಾಖೆಯ ನಿರಾಕರಣೆಯ ದರದಲ್ಲಿ ಹೆಚ್ಚಳ ಕಂಡಿದೆ” ಎಂದು ದಿ ಹಿಂದು ವರದಿ ಮಾಡಿದೆ.
ಇದನ್ನೂ ಓದಿ: #LieLikeModi ಟ್ವಿಟರ್ ಟ್ರೆಂಡಿಂಗ್: ನಕ್ಕು ಹೊಟ್ಟೆ ಹುಣ್ಣಾದರೆ ನಾವು ಜವಾಬ್ದಾರರಲ್ಲ
ಆರ್‌ಟಿಐ ಕಾಯ್ದೆಯು ಸಾರ್ವಜನಿಕ ಅಧಿಕಾರಿಗಳಿಗೆ ಆರ್‌ಟಿಐ ವಿನಂತಿಗಳನ್ನು ತಿರಸ್ಕರಿಸಲು ಅನುವು ಮಾಡಿಕೊಡುತ್ತದೆ. ಜೀವನ ಮತ್ತು ಸುರಕ್ಷತೆಗೆ ಅಪಾಯವನ್ನುಂಟು ಮಾಡುವ, ಅಪ್ರಸ್ತುತವಾದ ವೈಯಕ್ತಿಕ ಮಾಹಿತಿ, ಕ್ಯಾಬಿನೆಟ್ ಪತ್ರಿಕೆಗಳು, ವಿದೇಶಿ ಸರ್ಕಾರಗಳು, ಹಕ್ಕುಸ್ವಾಮ್ಯಗಳು ಅಥವಾ ಸಾರ್ವಭೌಮತ್ವ, ಭದ್ರತೆ ಮತ್ತು ಗುಪ್ತಚರ ವಿಷಯಗಳನ್ನು ಆರ್‌ಟಿಐ ಅಡಿಯಲ್ಲಿ ನೀಡಲಾಗುವುದಿಲ್ಲ. ಇದರಿಂದ ವಿನಾಯಿತಿ ಪಡೆಯಲು ಸಾರ್ವಜನಿಕ ಅಧಿಕಾರಿಗಳು ಕಾಯಿದೆಯ ಸಂಬಂಧಿತ ಷರತ್ತುಗಳನ್ನು ಉಲ್ಲೇಖಿಸುತ್ತಾರೆ.
ಆದರೂ, 2019-20ರಲ್ಲಿ ನಿರಾಕರಿಸಲ್ಪಟ್ಟ 38.7% ವಿನಂತಿಗಳಲ್ಲಿ, ಸಾರ್ವಜನಿಕ ಅಧಿಕಾರಿಗಳು ಈ ವಿನಾಯಿತಿಯ ಷರತ್ತುಗಳನ್ನು ಉಲ್ಲೇಖಿಸುವಲ್ಲಿ ವಿಫಲರಾಗಿದ್ದಾರೆ. ಇದು ಹಿಂದಿನ ವರ್ಷ 33% ರಷ್ಟು ಇತ್ತು. ಹಣಕಾಸು ಸಚಿವಾಲಯ ಮಾತ್ರ 10,000 ಕ್ಕೂ ಹೆಚ್ಚು ವಿನಂತಿಗಳನ್ನು (ಅದರ ಒಟ್ಟು ಆರ್‌ಟಿಐ ನಿರಾಕರಣೆಯ 40%) ಆರ್‌ಟಿಐ ಕಾಯಿದೆಯಡಿ ಮಾನ್ಯ ಕಾರಣವನ್ನು ನೀಡದೆ ತಿರಸ್ಕರಿಸಿದೆ. ಪ್ರಧಾನ ಮಂತ್ರಿಗಳ ಕಚೇರಿ, ದೆಹಲಿ ಹೈಕೋರ್ಟ್, ಸಿಎಜಿ, ರೈಲ್ವೆ, ರಸ್ತೆ ಸಾರಿಗೆ, ಆಹಾರ ಸಂಸ್ಕರಣೆ ಮತ್ತು ಪಂಚಾಯತಿ ರಾಜ್ ಸಚಿವಾಲಯಗಳು ಸೇರಿದಂತೆ ಹಲವು ಇಲಾಖೆಗಳು 90% ಕ್ಕಿಂತ ಹೆಚ್ಚು ವಿನಂತಿಗಳನ್ನು ತಿರಸ್ಕರಿಸಿವೆ ಎಂದು ವೆಂಕಟೇಶ್ ನಾಯಕ್ ಅವರ ವಿಶ್ಲೇಷಣೆ ತಿಳಿಸಿದೆ.
ಇದನ್ನೂ ಓದಿ: ‘ಸಾಕ್ಷಿಯಿಲ್ಲ’ – ಅತ್ಯಾಚಾರ ಆರೋಪದಲ್ಲಿ ಬಂಧನವಾಗಿದ್ದ ಬಿಜೆಪಿ ಮುಖಂಡನ ಪ್ರಕರಣ ಖುಲಾಸೆ


